ADVERTISEMENT

ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಭಾರತದ ಅಧಿಕಾರಿಗಳಿಂದ ಬೆಂಬಲ: ಅಮೆರಿಕ

ಏಜೆನ್ಸೀಸ್
Published 3 ಜೂನ್ 2022, 5:48 IST
Last Updated 3 ಜೂನ್ 2022, 5:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌:ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಲ್ಲೆ ಪ್ರಕರಣಗಳಿಗೆ ಭಾರತದ ಕೆಲವು ಅಧಿಕಾರಿಗಳು ಬೆಂಬಲ ನೀಡುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.

ಅಮೆರಿಕ ರಾಜ್ಯ ಕಾರ್ಯದರ್ಶಿ ಅಂಟೊನಿ ಬ್ಲಿಂಕೆನ್‌ ಅವರು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತಾದ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ್ದಾರೆ. ಚೀನಾ, ಇರಾನ್‌ ಮತ್ತು ಮ್ಯಾನ್ಮಾರ್‌ ಸೇರಿದಂತೆ ಇನ್ನೂ ಕೆಲವು ಅಮೆರಿಕದ ವಿರೋಧಿ ರಾಷ್ಟ್ರಗಳ ಕುರಿತು ವಿಶ್ಲೇಷಿಸಿದ್ದಾರೆ. 'ವಿಶ್ವದಾದ್ಯಂತ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರ ಹಕ್ಕುಗಳು ಅಪಾಯದಲ್ಲಿವೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

'ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಹಾಗೂ ವೈವಿದ್ಯಮಯ ನಂಬಿಕೆಗಳಿಗೆ ನೆಲೆಯಾಗಿರುವ ಭಾರತದಲ್ಲಿನ ಪೂಜಾ ಸ್ಥಳಗಳಲ್ಲಿ ಜನರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿದ್ದೇವೆ' ಎಂದುಬ್ಲಿಂಕೆನ್‌ ಹೇಳಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಅಮೆರಿಕ ರಾಯಭಾರಿಯಾಗಿರುವ ರಶದ್ ಹುಸ್ಸೇನ್‌ ಅವರು, 'ಭಾರತದಲ್ಲಿ ಕೆಲವು ಅಧಿಕಾರಿಗಳು ಪೂಜಾಸ್ಥಳಗಳಲ್ಲಿ ಜನರ ಮೇಲೆ ನಡೆಯುತ್ತಿರುವ ಆಕ್ರಮಣಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಅಥವಾ ಅವುಗಳಿಗೆ ಬೆಂಬಲ ನೀಡುತ್ತಿದ್ದಾರೆ' ಎಂದಿದ್ದಾರೆ.

ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ವಿರುದ್ಧ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ವರದಿಯಲ್ಲಿ ದೂರಲಾಗಿದ್ದು, ಮತಾಂತರವನ್ನು ನಿರ್ಬಂಧಿಸುವ ಕಾನೂನುಗಳ ಬಗ್ಗೆ ಉಲ್ಲೇಖಿಸಲಾಗಿದೆ. ರಾಜಕಾರಣಿಗಳು ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಸಾರ್ವಜನಿಕವಾಗಿ ನೀಡುವ ಹೇಳಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ ಪೋಸ್ಟ್‌ಗಳ ಬಗ್ಗೆಯೂ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.