ADVERTISEMENT

ಜಪಾನ್: ಕೊರೊನಾ ಸೋಂಕು ದಿಢೀರ್ ಕುಸಿತ

ಲಸಿಕೆ ಮತ್ತು ಮಾಸ್ಕ್‌ನಿಂದ ಕೋವಿಡ್ ಪ್ರಕರಣಗಳಿಗೆ ಹಿನ್ನಡೆ?

ಏಜೆನ್ಸೀಸ್
Published 18 ಅಕ್ಟೋಬರ್ 2021, 10:57 IST
Last Updated 18 ಅಕ್ಟೋಬರ್ 2021, 10:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ಆಗಸ್ಟ್‌ ತಿಂಗಳ ಮಧ್ಯಭಾಗದಲ್ಲಿ ಸುಮಾರು 6 ಸಾವಿರದಷ್ಟಿದ್ದ ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ 100ಕ್ಕಿಂತ ಕಡಿಮೆಯಾಗಿದ್ದು, ಲಸಿಕೆ ಅಭಿಯಾನವೇ ಇದಕ್ಕೆಲ್ಲ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇ 70ರಷ್ಟು ಜನರು ಎರಡು ಡೋಸ್‌ನ ಲಸಿಕೆ ಪಡೆದಿದ್ದಾರೆ.

‘ಸೋಂಕು ಕುಸಿತದ ಹಿಂದೆ ಲಸಿಕೆಯ ಪರಿಣಾಮವಿದೆ. ಇದು ಅತ್ಯಂತ ದೊಡ್ಡಮಟ್ಟದಲ್ಲಿ ಪಾತ್ರ ವಹಿಸಿದೆ. ಅಲ್ಲದೇ ಜನರಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು’ ಎಂದು ಟೋಕಿಯೊದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ನಿರ್ದೇಶಕ ನೊರಿಯೊ ಓಮಗರಿ ಹೇಳಿದ್ದಾರೆ.

ADVERTISEMENT

ಲಾಕ್‌ಡೌನ್ ಹೊರತಾಗಿ ಕ್ಷಿಪ್ರ ಲಸಿಕಾ ಅಭಿಯಾನ, ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಕಾಣುತ್ತಿದ್ದಂತೆಯೇ ರಾತ್ರಿ ಕರ್ಫ್ಯೂ, ಮಾಸ್ಕ್ ಧರಿಸುವುದು ಹಾಗೂ ಆಗಸ್ಟ್‌ನಲ್ಲಿ ಕೆಟ್ಟ ಹವಾಮಾನದ ಕಾರಣ ಜನರು ಮನೆಯಿಂದ ಹೊರಗೆ ಹೋಗದಿರುವುದು ಕೂಡಾ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.