ADVERTISEMENT

ವಾಷಿಂಗ್ಟನ್‌ನಲ್ಲಿ ಗಾಂಧೀಜಿ ಪ್ರತಿಮೆ ಮರಳಿ ಸ್ಥಾಪನೆ

ಪಿಟಿಐ
Published 3 ಜುಲೈ 2020, 2:54 IST
Last Updated 3 ಜುಲೈ 2020, 2:54 IST
   

ವಾಷಿಂಗ್ಟನ್‌: ಕಳೆದ ತಿಂಗಳು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಗುರುವಾರ ವಾಷಿಂಗ್ಟನ್‌ನಲ್ಲಿ ಮರಳಿ ಸ್ಥಾಪಿಸಲಾಗಿದೆ.

ವಾಷಿಂಗ್ಟನ್‌ನ ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಐತಿಹಾಸಿಕ ಪ್ರತಿಮೆಯನ್ನು ಸರಳ ಕಾರ್ಯಕ್ರಮದಲ್ಲಿ ಮರಳಿ ಸ್ಥಾಪಿಸಲಾಯಿತು. ಅಲ್ಲಿನ ಸಾರ್ವಜನಿಕ ಉಪ ಕಾರ್ಯದರ್ಶಿ ಸ್ಟೀಫನ್ ಎಡ್ವರ್ಡ್ ಬೀಗುನ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಾಷಿಂಗ್ಟನ್‌ನ ಡೌನ್‌ಟೌನ್‌ನಲ್ಲಿರುವ ಮಹಾತ್ಮಾ ಗಾಂಧಿ ಪ್ಲಾಜಾದಲ್ಲಿ ನಡೆದ ಪ್ರತಿಮೆಯನ್ನು ಮರಳಿ ಸ್ಥಾಪಿಸುವ ಕಾರ್ಯಕ್ರಮದಲ್ಲಿ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರೊಂದಿಗೆ ಬೀಗುನ್‌ ಅವರೂ ಭಾಗವಹಿಸಿದ್ದರು ಎಂದು ರಾಯಭಾರ ಕಚೇರಿಯು ಟ್ವೀಟ್‌ ಮಾಡಿದೆ.

ADVERTISEMENT

‘ಮಹಾತ್ಮ ಗಾಂಧೀಜಿ ಅವರ ಸತ್ಯ, ಅಹಿಂಸೆ, ಶಾಂತಿ ಮತ್ತು ಸಾಮರಸ್ಯದ ಸಂದೇಶವು ಭಾರತ ಮತ್ತು ಅಮೆರಿಕ ಅಷ್ಟೇ ಅಲ್ಲದೇ, ಪ್ರಪಂಚದಾದ್ಯಂತ ಜನರಿಗೆ ಸ್ಫೂರ್ತಿ ನೀಡುವಂಥದ್ದು’ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.

ಆಫ್ರಿಕನ್‌–ಅಮೆರಿಕನ್ ಜಾರ್ಜ್ ಫ್ಲಾಯ್ಡ್‌ ಎಂಬುವವರು ಕಳೆದ ತಿಂಗಳು ಅಮೆರಿಕದ ಪೊಲೀಸರ ವಶದಲ್ಲಿದ್ದಾಗಲೇ ಸಾವೀಗೀಡಾಗಿದ್ದರು. ಇದನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳ ವೇಳೆ ದುಷ್ಕರ್ಮಿಗಳು ಭಾರತೀಯ ರಾಯಭಾರ ಕಚೇರಿ ಎದುರಿನ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ್ದರು. ಈ ಘಟನೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‌, ಮೆರಿಕ ರಾಯಭಾರಿ ಕೆನ್‌ ಜಸ್ಟರ್‌ ಭಾರತದ ಕ್ಷಮೆ ಯಾಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.