ADVERTISEMENT

ವೆನೆಜುವೆಲಾದಿಂದ 3–5 ಕೋಟಿ ಬ್ಯಾರೆಲ್‌ ತೈಲ ಖರೀದಿ: ಟ್ರಂಪ್‌

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 14:00 IST
Last Updated 7 ಜನವರಿ 2026, 14:00 IST
ಡೊನಾಲ್ಡ್ ಟ್ರಂಪ್‌
ಡೊನಾಲ್ಡ್ ಟ್ರಂಪ್‌   

ಎಪಿ

ಕರಾಕಸ್: ವೆನೆಜುವೆಲಾದ ‘ಮಧ್ಯಂತರ ಆಡಳಿತ’ವು ಉತ್ತಮ ಗುಣಮಟ್ಟದ 3 ಕೋಟಿಯಿಂದ 5 ಕೋಟಿ ಬ್ಯಾರೆಲ್‌ ಕಚ್ಚಾ ತೈಲವನ್ನು ಮಾರುಕಟ್ಟೆ ದರಕ್ಕೆ ಅಮೆರಿಕಕ್ಕೆ ಪೂರೈಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.

ಅಮೆರಿಕದ ಸೇನಾ ಕಾರ್ಯಾಚರಣೆಯಲ್ಲಿ ಕನಿಷ್ಠ 24 ಮಂದಿ ಭದ್ರತಾ ಅಧಿಕಾರಿಗಳು ಹತ್ಯೆಗೀಡಾಗಿದ್ದಾರೆ ಎಂದು ವೆನೆಜುವೆಲಾ ತಿಳಿಸಿದ ಬೆನ್ನಲ್ಲೇ ಟ್ರಂಪ್‌ ಈ ಘೋಷಣೆ ಮಾಡಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ ‘ಟ್ರುಥ್‌’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ನೇರವಾಗಿ ಸ್ಟೋರೇಜ್ ಹಡಗುಗಳ ಮೂಲಕ ತೈಲವು ಅಮೆರಿಕದ ಬಂದರನ್ನು ತಲುಪಲಿದೆ. ಇದರಿಂದ ಬರುವ ಹಣವನ್ನು ವೆನೆಜುವೆಲಾ ಮತ್ತು ಅಮೆರಿಕ ಜನರ ಅನುಕೂಲಕ್ಕಾಗಿ ಬಳಕೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ಈ ಮಧ್ಯೆ, ತೈಲ ಕಂಪನಿಗಳ ಅಧಿಕಾರಿಗಳೊಂದಿಗೆ ಚರ್ಚಿಸಲು ಶ್ವೇತಭವನವು ಶುಕ್ರವಾರ ಓವಲ್‌ ಕಚೇರಿಯಲ್ಲಿ ಸಭೆ ಕರೆದಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

24 ಭದ್ರತಾ ಅಧಿಕಾರಿಗಳ ಹತ್ಯೆ: ವೆನೆಜುವೆಲಾ ವಾಷಿಂಗ್ಟನ್‌ (ಎಪಿ): ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ವೆನೆಜುವೆಲಾದ ಕನಿಷ್ಠ 24 ಮಂದಿ ಭದ್ರತಾ ಅಧಿಕಾರಿಗಳು ಹತ್ಯೆಗೀಡಾಗಿದ್ದಾರೆ ಎಂದು ವೆನೆಜುವೆಲಾ ಸೇನೆ ತಿಳಿಸಿದೆ. ಇದರೊಂದಿಗೆ ಕಾರ್ಯಾಚರಣೆಯಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 56ಕ್ಕೆ ಏರಿಕೆಯಾಗಿದೆ. ವೆನೆಜುವೆಲಾ ಅಟಾರ್ನಿ ಜನರಲ್ ತಾರೆಕ್‌ ವಿಲಿಯಮ್‌ ಸಾಬ್‌ ಅವರು ‘ಹತ್ತಾರು ಅಧಿಕಾರಿಗಳು ಮತ್ತು ನಾಗರಿಕರು ಹತ್ಯೆಗೀಡಾಗಿದ್ದಾರೆ. ಇದೊಂದು ‘ಯುದ್ಧಾಪರಾಧ’ವಾಗಿದ್ದು ಈ ಬಗ್ಗೆ ಪ್ರಾಸಿಕ್ಯೂಟರ್‌ ತನಿಖೆ ನಡೆಸಲಿದ್ದಾರೆ’ ಎಂದು ಹೇಳಿದರು. ವೆನೆಜುವೆಲಾದಲ್ಲಿ ಕೆಲಸ ಮಾಡುತ್ತಿದ್ದ ಕ್ಯೂಬಾ ದೇಶದ 32 ಮಂದಿ ಸೇನೆ ಮತ್ತು ಪೊಲೀಸ್‌ ಅಧಿಕಾರಿಗಳು ಹತ್ಯೆಗೀಡಾಗಿದ್ದಾರೆ ಎಂದು ಕ್ಯೂಬಾ ಸರ್ಕಾರ ಭಾನುವಾರ ಘೋಷಿಸಿದೆ. ವೆನೆಜುವೆಲಾದ ರಾಜಧಾನಿ ಕರಾಕಸ್ ಮೇಲೆ ಶನಿವಾರ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಿದ್ದ ಅಮೆರಿಕ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಸೆರೆ ಹಿಡಿದಿದೆ.

ರುಬಿಯೊ ಜತೆ ಮಾತುಕತೆಗೆ ಡೆನ್ಮಾರ್ಕ್‌ ಗ್ರೀನ್‌ಲ್ಯಾಂಡ್‌ ಇಂಗಿತ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಇಂಗಿತವನ್ನು ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್ ದೇಶಗಳು ವ್ಯಕ್ತಪಡಿಸಿವೆ. ಖನಿಜ ಸಂಪದ್ಭರಿತ ಆರ್ಕ್‌ಟಿಕ್‌ ದ್ವೀಪವಾದ ‘ಗ್ರೀನ್‌ಲ್ಯಾಂಡ್‌’ ಅನ್ನು ವಶಕ್ಕೆ ಪಡೆಯುವ ಕುರಿತಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಮಾತುಕತೆಗೆ ಮುಂದಾಗಿವೆ.

‘ಗ್ರೀನ್‌ಲ್ಯಾಂಡ್‌ ವಶಕ್ಕೆ ಪಡೆಯುವುದು ನ್ಯಾಟೊ ಸೇನಾ ಒಕ್ಕೂಟದ ಅಂತ್ಯಕ್ಕೆ ಸಮವಾಗಿರುತ್ತದೆ’ ಎಂದು ಡೆನ್ಮಾರ್ಕ್‌ ಪ್ರಧಾನಿ ಮಟ್ಟೆ ಫ್ರೆಡೆರಿಕ್ಸೆನ್‌ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ‘ಉತ್ತರ ಯುರೋಪ್‌ ಇಂಥ ಹಗುರವಾದ ಹೇಳಿಕೆಯನ್ನು ನೀಡಬಾರದು’ ಎಂದು ಯುರೋಪಿಯನ್‌ ನೀತಿ ಕೇಂದ್ರದ ಚಿಂತಕರ ಚಾವಡಿಯ ರಕ್ಷಣಾ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.