ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೇಯರ್ ಮತ್ತು ಗವರ್ನರ್ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷ ದೊಡ್ಡ ಗೆಲುವನ್ನು ಸಾಧಿಸಿದೆ.
ಈ ಸಂಬಂಧ ವಿಡಿಯೊ ಸಂದೇಶ ಹಂಚಿಕೊಂಡಿರುವ ರಿಪಬ್ಲಿಕನ್ ನಾಯಕ ವಿವೇಕ್ ರಾಮಸ್ವಾಮಿ, ಈ ಚುನಾವಣೆಯ ಫಲಿತಾಂಶವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ರಿಪಬ್ಲಿಕನ್ನರಿಗೆ ತಿಳಿಸಿದ್ದಾರೆ.
‘ನ್ಯೂಜೆರ್ಸಿ, ವರ್ಜೀನಿಯಾ ಮತ್ತು ನ್ಯೂಯಾರ್ಕ್ ನಗರ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಈ ಮೂರರಲ್ಲಿ ಡೆಮಾಕ್ರೆಟಿಕ್‌ಗಳು ಗೆದ್ದಿದ್ದಾರೆ.ಇದರಲ್ಲಿ ರಿಪಬ್ಲಿಕನ್ನರಿಗೆ ಎರಡು ಪ್ರಮುಖ ಪಾಠಗಳಿವೆ. ಎಚ್ಚರಿಕೆಯಿಂದ ಆಲಿಸಿ’ ಎಂದಿದ್ದಾರೆ.
‘ಮೊದಲನೇ ಪಾಠ ಏನೆಂದರೆ... ನಾವು ಬೆಲೆ ಕಡಿತಗೊಳಿಸುವ ಬಗ್ಗೆ ಯೋಚಿಸಬೇಕಿದೆ. ವಿದ್ಯುತ್, ದಿನಸಿ, ಆರೋಗ್ಯ, ವಸತಿ ಹೀಗೆ ಎಲ್ಲವೂ ಅಮೆರಿಕನ್ನರ ಕೈಗೆಟುಕುವಂತೆ ಮಾಡಬೇಕಿದೆ. ಇದನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಲಕ್ಷ್ಯವಹಿಸಬೇಕು’ ಎಂದು ಹೇಳಿದ್ದಾರೆ.
‘ಎರಡನೇ ಪಾಠ.... ನಾವು ಐಡೆಂಟಿಟಿ ರಾಜಕಾರಣವನ್ನು ತ್ಯಜಿಸಬೇಕು. ಅದು ರಿಪಬ್ಲಿಕನ್ನರಿಗೆ ಸರಿಹೊಂದುವುದಿಲ್ಲ. ಅದು ಎಡಪಂಥೀಯರ ಆಟವಾಗಿದೆ, ನಮ್ಮದಲ್ಲ. ಚರ್ಮದ ಬಣ್ಣ ಮತ್ತು ಧರ್ಮ ನೋಡಿ ರಾಜಕೀಯ ಮಾಡುವವರು ನಾವಲ್ಲ... ನಾವು ವ್ಯಕ್ತಿಯ ಪ್ರಾಮುಖ್ಯತೆಯನ್ನು ನೋಡಬೇಕು...’ ಎಂದು ತಿಳಿಸಿದ್ದಾರೆ.
ವಿವೇಕ್ ರಾಮಸ್ವಾಮಿ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಡಿಯೊ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದೆ.
ನ್ಯೂಯಾರ್ಕ್ ನಗರ ಮೇಯರ್ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಮುಸ್ಲಿಂ ಅಭ್ಯರ್ಥಿ ಜೊಹ್ರಾನ್ ಮಮ್ದಾನಿ ಗೆಲವು ಸಾಧಿಸಿದ್ದಾರೆ. ನ್ಯೂಜೆರ್ಸಿ ಮತ್ತು ವರ್ಜಿನಿಯಾದಲ್ಲಿ ಗವರ್ನರ್ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲೂ ಡೆಮಾಕ್ರೆಟಿಕ್ ಅಭ್ಯರ್ಥಿಗಳಿಗೆ ಗೆಲುವು ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.