ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಸಿಖ್ ಉಗ್ರ ಹ್ಯಾಪಿ ಪಾಸಿಯಾ USನಲ್ಲಿ ಬಂಧನ
ನ್ಯೂಯಾರ್ಕ್ ಹಾಗೂ ಚಂಡೀಗಢ: ಪಂಜಾಬ್ ಪೊಲೀಸರಿಗೆ ಬೇಕಾಗಿರುವ ಹಾಗೂ ಅಮೆರಿಕದಲ್ಲಿ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಖಲಿಸ್ತಾನಿ ಉಗ್ರ, ಗ್ಯಾಂಗ್‌ಸ್ಟರ್ ಹರಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಅಮೆರಿಕದ ಎಫ್‌ಬಿಐ ಪೊಲೀಸರು ಬಂಧಿಸಿದ್ದಾರೆ.
ಖಲಿಸ್ತಾನಿ ಉಗ್ರರ ಜೊತೆ ಹಾಗೂ ಪಾಕ್ ಐಎಸ್‌ಐ ಜೊತೆ ನಂಟು ಹೊಂದಿ ವಿವಿಧ ಕಡೆಗೆ ಉಗ್ರ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಹ್ಯಾಪಿ ಪಾಸಿಯಾನನ್ನು ಅಮೆರಿಕದ ಸ್ಯಾಕ್ರಮೆಂಟೊದಲ್ಲಿ ಬಂಧಿಸಲಾಗಿದೆ ಎಂದು ಎಫ್‌ಬಿಐ ಪೊಲೀಸರು ತಿಳಿಸಿದ್ದಾರೆ.
ಹ್ಯಾಪಿ ಪಾಸಿಯಾ ಪಂಜಾಬ್‌ನ ಹಲವು ಕಡೆ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸಿದ್ದ. ಈತನ ಮೇಲೆ ಪಂಜಾಬ್‌ನಲ್ಲಿ 16 ಉಗ್ರ ಕೃತ್ಯದ ಪ್ರಕರಣಗಳು ಹಾಗೂ ವಿದೇಶಗಳಲ್ಲೂ ಹಲವು ಉಗ್ರಗಾಮಿ ಚಟುವಟಿಕೆಯ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.
ಈತನ ಬಂಧನವನ್ನು ಪಂಜಾಬ್ ಪೊಲೀಸರೂ ಖಚಿತಪಡಿದ್ದಾರೆ. ಪಾಸಿಯಾನನ್ನು ವಶಕ್ಕೆ ಪಡೆಯುವ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿಜಿಪಿ ಪಿಟಿಐಗೆ ತಿಳಿಸಿದ್ದಾರೆ.
ಕಳೆದ ವರ್ಷ ಪಂಜಾಬ್‌ನಲ್ಲಿ ‘ಚಂಡೀಗಢ ಹೌಸ್’ ಮೇಲೆ ಗ್ರೇನೆಡ್ ದಾಳಿ ನಡೆಸಿದ ಪ್ರಕರಣ ಸೇರಿದಂತೆ ಪಾಸಿಯಾ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಈತನ ಸುಳಿವು ನೀಡಿದವರಿಗೆ ಎನ್‌ಐಎ ₹5 ಲಕ್ಷ ಬಹುಮಾನ ಘೋಷಿಸಿತ್ತು.
ಹ್ಯಾಪಿ ಪಾಸಿಯಾ ನಿಷೇಧಿತ ಬಾಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (BKI) ಎಂಬ ಸಿಖ್ ಉಗ್ರಗಾಮಿ ಸಂಘಟನೆಯ ಸದಸ್ಯನೂ ಹೌದು ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.