ADVERTISEMENT

ಯುದ್ಧ: ಉಕ್ರೇನ್‌ಗೆ ನ್ಯಾಟೊ ಬೆಂಬಲ

ಶಸ್ತ್ರಾಸ್ತ್ರ ಪೂರೈಕೆ ಯುರೋಪ್‌ ಖಂಡದ ಭದ್ರತೆಗೂ ಅಪಾಯ: ರಷ್ಯಾ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 18:30 IST
Last Updated 28 ಏಪ್ರಿಲ್ 2022, 18:30 IST

ಬ್ರಸೆಲ್ಸ್‌ (ರಾಯಿಟರ್ಸ್‌): ‘ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ದೀರ್ಘಾವಧಿಯ ಬೆಂಬಲ ನೀಡಲು ಸಿದ್ಧ’ ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಗುರುವಾರ ಹೇಳಿದ್ದಾರೆ.

ಭಾರಿ ಶಸ್ತ್ರಾಸ್ತ್ರ ಒಳಗೊಂಡಂತೆ ಉಕ್ರೇನ್‌ಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪಾಶ್ಚಾತ್ಯ ರಾಷ್ಟ್ರಗಳು ಪೂರೈಸುವುದು ಯುರೋಪ್‌ ಖಂಡದ ಭದ್ರತೆಗೂ ಅಪಾಯ ಮತ್ತು ಅಸ್ಥಿರತೆಯನ್ನೂ ಪ್ರಚೋದಿಸಲಿದೆ ಎಂದು ಪುಟಿನ್‌ ಆಡಳಿತ ಕಚೇರಿ ಕ್ರೆಮ್ಲಿನ್‌ ವಕ್ತಾರ ಡೆಮಿಟ್ರಿ ಪೆಸ್ಕೊವ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇಸ್ಟೋಲ್ಟೆನ್‌ಬರ್ಗ್ ಈ ಹೇಳಿಕೆ ನೀಡಿದ್ದಾರೆ.

ಬ್ರಸೆಲ್ಸ್‌ನಲ್ಲಿ ನಡೆದ ಯುವ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ಈ ಯುದ್ಧವು ಹಲವು ತಿಂಗಳು ಅಥವಾ ವರ್ಷಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ನಾವು ದೀರ್ಘಾವಧಿಗೆ ಸಿದ್ಧರಾಗಿರಬೇಕು’ ಎಂದು ಹೇಳಿದರು.

ADVERTISEMENT

‘ರಷ್ಯಾ ವಿರುದ್ಧದ ಹೋರಾಟಕ್ಕೆ ಉಕ್ರೇನ್‌ಗೆ ನ್ಯಾಟೊ ಮಿತ್ರರಾಷ್ಟ್ರಗಳು ದೀರ್ಘಾವಧಿಯ ಬೆಂಬಲ ನೀಡಲು ತಯಾರಿ ನಡೆಸುತ್ತಿವೆ. ಉಕ್ರೇನ್‌ ಸೇನೆಗೆ ಹಳೆಯ ಸೋವಿಯತ್‌ ಯುಗದ ಯುದ್ಧೋಪಕರಣಗಳ ಅವಲಂಬನೆ ತಪ್ಪಿಸಿ, ಹೆಚ್ಚು ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವುದು, ಸೇನಾಪಡೆಗಳಿಗೆ ಅಗತ್ಯ ತರಬೇತಿ ನೀಡುವುದು,ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಕೊನೆಗೊಳಿಸಲು,ಮತ್ತಷ್ಟು ಆರ್ಥಿಕನಿರ್ಬಂಧಗಳನ್ನು ಹೇರುವ ಮೂಲಕ ಪುಟಿನ್ ಮೇಲೆ ಗರಿಷ್ಠ ಒತ್ತಡ ಹೇರುವುದನ್ನು ಪಶ್ಚಿಮ ರಾಷ್ಟ್ರಗಳು ಮುಂದುವರಿಸುತ್ತವೆ’ ಎಂದು ಸ್ಟೋಲ್ಟೆನ್‌ ಬರ್ಗ್ ಹೇಳಿದರು.

ಅಮೆರಿಕ ತನ್ನದೇ ಆದ ಅಥವಾ ನ್ಯಾಟೊ ಪಡೆಗಳನ್ನು ಉಕ್ರೇನ್‌ಗೆ ಕಳುಹಿಸುವುದಿಲ್ಲ ಎಂದು ಆರಂಭದಿಂದಲೂ ಹೇಳಿಕೊಂಡು ಬಂದಿದೆ. ನ್ಯಾಟೊ ದೇಶ
ಗಳು ಉಕ್ರೇನ್‌ಗೆ ಈವರೆಗೆ ಕಳುಹಿಸಿದ ಹೆಚ್ಚಿನ ಭಾರಿ ಶಸ್ತ್ರಾಸ್ತ್ರಗಳು ಸೋವಿಯತ್‌ ನಿರ್ಮಿತ ಶಸ್ತ್ರಾಸ್ತ್ರಗಳಾಗಿವೆ. ಅಮೆರಿಕ ಮತ್ತು ಇತರ ಕೆಲವು ಮಿತ್ರರಾಷ್ಟ್ರಗಳು ಉಕ್ರೇನ್‌ಗೆ ಅತ್ಯಾಧುನಿಕಡ್ರೋನ್‌ಗಳು, ಹೊವಿಟ್ಜರ್ ಫಿರಂಗಿ, ವಿಮಾನ ನಿಗ್ರಹ ಸ್ಟಿಂಗರ್ ಮತ್ತು ಟ್ಯಾಂಕ್ ನಿಗ್ರಹ ಜಾವೆಲಿನ್ ಕ್ಷಿಪಣಿಗಳಂತಹ ಶಸ್ತ್ರಾಸ್ತ್ರಗಳನ್ನು ಪೂರೈಸಿವೆ.ಜರ್ಮನಿ ಕೂಡ ವಿಮಾನ ನಿಗ್ರಹದ ಗೆಪರ್ಡ್ ಟ್ಯಾಂಕ್‌ಗಳನ್ನು ಉಕ್ರೇನ್‌ಗೆ ಕಳುಹಿಸುವುದಾಗಿ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.