ADVERTISEMENT

ಕಾಶ್ಮೀರ ಸೇರಿ ಎಲ್ಲ ಭಾಗದ ಮುಸ್ಲಿಮರ ಬಗ್ಗೆ ಧ್ವನಿ ಎತ್ತುವ ಹಕ್ಕಿದೆ: ತಾಲಿಬಾನ್

ಪಿಟಿಐ
Published 3 ಸೆಪ್ಟೆಂಬರ್ 2021, 20:19 IST
Last Updated 3 ಸೆಪ್ಟೆಂಬರ್ 2021, 20:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್: ‘ಕಾಶ್ಮೀರವೂ ಸೇರಿದಂತೆ ಜಗತ್ತಿನ ಎಲ್ಲೆಡೆ ಇರುವ ಮುಸ್ಲಿಮರ ಪರವಾಗಿ ಧ್ವನಿ ಎತ್ತುವ ಹಕ್ಕನ್ನು ನಾವು ಹೊಂದಿದ್ದೇವೆ’ ಎಂದು ತಾಲಿಬಾನ್ ಹೇಳಿದೆ. ತಾಲಿಬಾನ್ ಮುಂದಾಳತ್ವದ ಅಫ್ಗಾನಿಸ್ತಾನದ ನೆಲವನ್ನು ಉಗ್ರರು ಭಾರತದ ವಿರುದ್ಧ ಬಳಕೆ ಮಾಡಿಕೊಳ್ಳಬಹುದು ಎಂಬ ಕಳವಳ ಹೆಚ್ಚುತ್ತಿರುವ ಸಂದರ್ಭದಲ್ಲೇ ತಾಲಿಬಾನ್ ಈ ಮಾತು ಹೇಳಿದೆ.

ಬಿಬಿಸಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಾಲಿಬಾನ್ ವಕ್ತಾರ ಸುಹೇಲ್ ಶಹೀನ್ ಅವರು ಇದನ್ನು ಪ್ರತಿ
ಪಾದಿಸಿದ್ದಾರೆ.

‘ನಾವು ಎಲ್ಲೆಡೆಯ ಮುಸ್ಲಿಮರ ಪರವಾಗಿ ಧ್ವನಿ ಎತ್ತುತ್ತೇವೆ. ಮುಸ್ಲಿಮರೂ ನಿಮ್ಮವರು, ನಿಮ್ಮ ನಾಗರಿಕರು ಮತ್ತು ಅವರೂ ಸಮಾನ ಹಕ್ಕುಗಳನ್ನು ಹೊಂದಲು ಅರ್ಹರಾಗಿದ್ದಾರೆ ಎಂಬುದನ್ನು ಒತ್ತಿ ಹೇಳುತ್ತೇವೆ’ ಎಂದು ಶಹೀನ್ ಹೇಳಿದ್ದಾರೆ.

ADVERTISEMENT

‘ತಾಲಿಬಾನ್ ಒಂದು ಮುಸ್ಲಿಂ ಸಂಘಟನೆಯಾಗಿ, ಕಾಶ್ಮೀರ ಮಾತ್ರವಲ್ಲ ಜಗತ್ತಿನ ಎಲ್ಲೆಡೆಯ ಮುಸ್ಲಿಮರ ಪರವಾಗಿ ಮಾತನಾಡುವ ಹಕ್ಕನ್ನು ಹೊಂದಿದೆ. ಆದರೆ ಬೇರೆ ಯಾವುದೇ ದೇಶದ ಮೇಲೆ ಸಶಸ್ತ್ರ ಹೋರಾಟ ನಡೆಸುವ ನೀತಿ ನಮ್ಮಲಿಲ್ಲ’ ಎಂದು ಶಹೀನ್ ಸ್ಪಷ್ಟಪಡಿಸಿದ್ದಾರೆ.

ಕತಾರ್‌ನಲ್ಲಿನ ಭಾರತದ ನಿಯೋಗದ ಮುಖ್ಯಸ್ಥ ದೀಪಕ್ ಮಿತ್ತಲ್ ಅವರು ತಾಲಿಬಾನ್‌ನ ರಾಜಕೀಯ ಕಚೇರಿ ಮುಖ್ಯಸ್ಥ ಶೇರ್ ಮೊಹಮ್ಮದ್ ಸ್ಟಾನಿಕ್‌ಜೈ ಅವರನ್ನು ಭೇಟಿ ಮಾಡಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಗುರುವಾರ ಹೇಳಿತ್ತು. ಅದರ ಮರುದಿನವೇ ತಾಲಿಬಾನ್ ಈ ಹೇಳಿಕೆ ನೀಡಿದೆ.

‘ಚೀನಾ ಮುಖ್ಯ ಪಾಲುದಾರ’
ಪೆಶಾವರ (ಪಿಟಿಐ):
ಚೀನಾ ತನ್ನ ಅತ್ಯಂತ ಮುಖ್ಯವಾದ ಪಾಲುದಾರ ಎಂದು ತಾಲಿಬಾನ್‌ ಘೋಷಿಸಿದೆ.

ತಮ್ಮ ದೇಶದಲ್ಲಿ ಅಪಾರ ಪ್ರಮಾಣದ ತಾಮ್ರದ ಗಣಿಗಳಿವೆ. ಈ ಗಣಿಗಳನ್ನು ಚೀನಾವು ಆಧುನೀಕರಿಸಬಹುದು ಮತ್ತು ಪುನರಾರಂಭಿಸಬಹುದು. ಅದಲ್ಲದೆ, ಚೀನಾ ಮೂಲಕ ಜಗತ್ತಿನ ಇತರ ಮಾರುಕಟ್ಟೆಗಳ ಜತೆಗೆ ಅಫ್ಗಾನಿಸ್ತಾನವು ಸಂಪರ್ಕ ಪಡೆಯಬಹುದು ಎಂದು ತಾಲಿಬಾನ್‌ ಹೇಳಿದೆ.

ಚೀನಾ ಕೂಡ ತಾಲಿಬಾನ್‌ ಬಗ್ಗೆ ಸಕಾರಾತ್ಮಕವಾಗಿಯೇ ಇದೆ.ಅಫ್ಗಾನಿಸ್ತಾನವು ಚೀನಾಕ್ಕೆ ಹತ್ತಿರವಾಗುತ್ತಿರುವುದು ಭಾರತಕ್ಕೆ ಒಳ್ಳೆಯ ಸುದ್ದಿಯೇನೂ ಅಲ್ಲ ಎಂದು ವಿದೇಶಾಂಗ ನೀತಿ ಪರಿಣತರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.