ADVERTISEMENT

ಇಂಡೋ ಅಮೆರಿಕನ್ ವೇದಾಂತ್ ಪಟೇಲ್ ‘ಸೂಪರ್ ಟ್ಯಾಲೆಂಟೆಡ್’ಎಂದ ಶ್ವೇತಭವನದ ಅಧಿಕಾರಿ

ಪಿಟಿಐ
Published 8 ಏಪ್ರಿಲ್ 2022, 5:41 IST
Last Updated 8 ಏಪ್ರಿಲ್ 2022, 5:41 IST
ವೇದಾಂತ್ ಪಟೇಲ್ ಟ್ವಿಟರ್ ಖಾತೆಯ ಚಿತ್ರ
ವೇದಾಂತ್ ಪಟೇಲ್ ಟ್ವಿಟರ್ ಖಾತೆಯ ಚಿತ್ರ   

ವಾಷಿಂಗ್ಟನ್: ಅಪರೂಪದ ಘಟನೆಯೊಂದರಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು ಗುರುವಾರ ತಮ್ಮ ಇಂಡೋ–ಅಮೆರಿಕನ್ ಸಹಾಯಕ ವೇದಾಂತ್ ಪಟೇಲ್ ಅವರನ್ನು ‘ಸೂಪರ್ ಟ್ಯಾಲೆಂಟೆಡ್" ಎಂದು ಬಣ್ಣಿಸಿದ್ದಾರೆ.

ನಾವು ಅವರಿಗೆ ಸುಲಭವಾದ ಕಾರ್ಯಯೋಜನೆಗಳನ್ನು ನೀಡುತ್ತೇವೆ ಎಂದು ನಾನು ಅವರೊಂದಿಗೆ (ವೇದಾಂತ್ ಪಟೇಲ್) ಆಗಾಗ್ಗೆ ತಮಾಷೆ ಮಾಡುತ್ತೇನೆ. ಆದರೆ, ನಾವು ಸುಲಭದ ಕೆಲಸವನ್ನೇನೂ ನೀಡಿರುವುದಿಲ್ಲ. ಅವರು ಬಹಳ ಪ್ರತಿಭಾವಂತರಾಗಿರುವುದರಿಂದ ಚಾಣಾಕ್ಷತನದಿಂದ ಕೆಲಸಗಳನ್ನು ನಿರ್ವಹಿಸುತ್ತಾರೆ’ಎಂದು ಪಟೇಲ್ ಅವರ ಸಮ್ಮುಖದಲ್ಲೇ ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸಾಕಿ ಸುದ್ದಿಗಾರರಿಗೆ ತಿಳಿಸಿದರು.

‘ವೇದಾಂತ್ ಒಬ್ಬ ಸುಂದರ ಬರಹಗಾರ. ವೇಗದ ಬರಹಗಾರ. ಸರ್ಕಾರದಲ್ಲಿ ಅತ್ಯಂತ ಭರವಸೆಯ ವೃತ್ತಿಜೀವನವನ್ನು ಅವರು ಹೊಂದಿದ್ದಾರೆಂದು ನಾನು ಭಾವಿಸುತ್ತೇನೆ’ಎಂದು ಅವರು ಹೇಳಿದರು. ‘ನನಗೆ ಸಹಾಯ ಮಾಡಲು, ಅಧ್ಯಕ್ಷರಿಗೆ ಸಹಾಯ ಮಾಡಲು ಅವರು ಮಾಡುವ ಕೆಲಸಗಳು ‘ಅದ್ಭುತ’ಎಂದು ಅವರು ವಿವರಿಸಿದರು.

ADVERTISEMENT

ಬೈಡನ್ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ವೈಟ್ ಹೌಸ್‌ನಲ್ಲಿ ಸಹಾಯಕ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ವೇದಾಂತ್, ರಿವರ್‌ಸೈಡ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದಾರೆ. ಫ್ಲಾರಿಡಾ ವಿಶ್ವವಿದ್ಯಾಲಯದ ವಾರಿಂಗ್‌ಟನ್ ಕಾಲೇಜ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಗುಜರಾತ್‌ನಲ್ಲಿ ಜನಿಸಿದ ಅವರು ಕ್ಯಾಲಿಫೋರ್ನಿಯಾದಲ್ಲಿ ಬೆಳೆದರು.

ಶ್ವೇತಭವನದಲ್ಲಿ, ವೇದಾಂತ್ ಅತ್ಯಂತ ಜನಪ್ರಿಯರಾಗಿದ್ದು ಮಾಧ್ಯಮ ಡೆಸ್ಕ್ ಹೊಂದಿದ್ದಾರೆ. ವಲಸೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಎಲ್ಲಾ ಮಾಧ್ಯಮ ಪ್ರಶ್ನೆಗಳನ್ನು ಅವರು ಉತ್ತರಿಸುತ್ತಾರೆ. ಶ್ವೇತಭವನ ಸೇರುವ ಮೊದಲು ಅವರು, ಬೈಡನ್ ಅವರ ಪ್ರಚಾರದಲ್ಲಿ ಪ್ರಾದೇಶಿಕ ಸಂವಹನ ನಿರ್ದೇಶಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.