ADVERTISEMENT

ಕೋವಿಡ್‌–19: ನಿರ್ಬಂಧಗಳ ಸಡಿಲಿಕೆಗೆ ಡಬ್ಲ್ಯೂಎಚ್‌ಒ ಆಕ್ಷೇಪ

ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ ಮುಖ್ಯಸ್ಥ ಟೆಡ್ರೊಸ್‌

ಏಜೆನ್ಸೀಸ್
Published 13 ಫೆಬ್ರುವರಿ 2021, 5:31 IST
Last Updated 13 ಫೆಬ್ರುವರಿ 2021, 5:31 IST
ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌
ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌   

ಜಿನಿವಾ: ಜಗತ್ತಿನಾದ್ಯಂತ ಕೋವಿಡ್‌–19 ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ, ನಿರ್ಬಂಧಗಳನ್ನು ಸಡಿಲಿಸುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.

’ಯಾವುದೇ ದೇಶದಲ್ಲಿ ನಿರ್ಬಂಧಗಳನ್ನು ಸಡಿಲಿಸಲು ಇದು ಸಕಾಲವಲ್ಲ. ಎಚ್ಚರಿಕೆ ಕ್ರಮಗಳನ್ನು ವಹಿಸಲೇಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌ ಹೇಳಿದ್ದಾರೆ.

‘ಸತತ ನಾಲ್ಕನೇ ವಾರವೂ ಸೋಂಕು ಪ್ರಕರಣಗಳು ಕಡಿಮೆಯಾಗಿವೆ. ಜತೆಗೆ, ಸತತ ಎರಡನೇ ವಾರವೂ ಸಾವಿನ ಪ್ರಕರಣಗಳು ಸಹ ಕಡಿಮೆಯಾಗಿವೆ. ಎಲ್ಲ ರಾಷ್ಟ್ರಗಳಲ್ಲಿ ಆರೋಗ್ಯ ರಕ್ಷಣೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿರುವುದರಿಂದ ಸೋಂಕು ಪ್ರಕರಣಗಳು ಕಡಿಮೆಯಾಗಿರಬಹುದು. ಆದರೆ, ಪರಿಸ್ಥಿತಿ ಅನಿಶ್ಚಿತತೆಯಿಂದ ಮತ್ತು ಅಪಾಯಕಾರಿಯಿಂದ ಕೂಡಿದ್ದರೂ ನಾವು ಯಾವುದೇ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿಲ್ಲ ಎಂದು ಭಾವಿಸಿಕೊಳ್ಳಬಾರದು. ಈ ರೀತಿಯ ಮನೋಭಾವ ವೈರಸ್‌ನಷ್ಟೇ ಅಪಾಯಕಾರಿ’ ಎಂದು ಹೇಳಿದ್ದಾರೆ.

ADVERTISEMENT

‘ವೈರಸ್‌ನ ಮೂಲದ ಬಗ್ಗೆ ತನಿಖೆ ನಡೆಸಲು ಚೀನಾಗೆ ತೆರಳಿರುವ ಡಬ್ಲ್ಯೂಎಚ್‌ಒ ತಂಡವು ಮುಂದಿನ ವಾರ ವರದಿ ಸಲ್ಲಿಸುವ ನಿರೀಕ್ಷೆ ಇದೆ’ ಎಂದು ಟೆಡ್ರೊಸ್‌ ತಿಳಿಸಿದ್ದಾರೆ.

ಪ್ರಾಣಿಗಳಿಂದ ಮನುಷ್ಯನಿಗೆ ಕೊರೊನಾ ವೈರಸ್‌ ಮೊದಲು ತಗುಲಿರಬಹುದು. ಚೀನಾ ಪ್ರಯೋಗಾಲಯದಿಂದ ವೈರಸ್‌ ಹಬ್ಬಿದೆ ಎನ್ನುವ ಸಾಧ್ಯತೆಗಳು ಕಡಿಮೆ ಎಂದು ಚೀನಾ ವಿಜ್ಞಾನಿಗಳು ಮತ್ತು ಅಂತರರಾಷ್ಟ್ರೀಯ ಸಂಶೋಧಕರನ್ನು ಒಳಗೊಂಡ ಡಬ್ಲ್ಯೂಎಚ್ಒ ತಂಡ ಇತ್ತೀಚೆಗೆ ಹೇಳಿತ್ತು.

‘ವೈರಸ್‌ನ ಮೂಲದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಇನ್ನೂ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಡಿಸೆಂಬರ್‌ ತಿಂಗಳಲ್ಲಿ ಮನುಷ್ಯರಿಗೆ ಯಾವ ಮಾರ್ಗದಲ್ಲಿ ವೈರಸ್‌ ಪ್ರವೇಶಿಸಿತು ಎನ್ನುವ ಬಗ್ಗೆ ಅಧ್ಯಯನಗಳು ನಡೆಯಬೇಕಾಗಿದೆ’ ಎಂದು ಡಬ್ಲ್ಯೂಎಚ್‌ಒ ತಂಡ ಪೀಟರ್‌ ಬೆನ್‌ ಎಂಬಾರೆಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.