ADVERTISEMENT

ಚೀನಾ ಪಾತ್ರವಿದ್ದರೆ ತಕ್ಕ ಉತ್ತರ: ಟ್ರಂಪ್ ಎಚ್ಚರಿಕೆ

ಕೋವಿಡ್‌–19: ಚೀನಾಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಎಚ್ಚರಿಕೆ

ಪಿಟಿಐ
Published 19 ಏಪ್ರಿಲ್ 2020, 20:30 IST
Last Updated 19 ಏಪ್ರಿಲ್ 2020, 20:30 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ‘ಕೊರೊನಾ ವೈರಸ್‌ನಿಂದಾಗುವ ಅನಾಹುತ ಗೊತ್ತಿದ್ದರೂ ಅದು ಇತರ ದೇಶಗಳಿಗೆ ಹಬ್ಬುವಲ್ಲಿ ಚೀನಾದ ಪಾತ್ರ ಇದೆ ಎನ್ನುವುದಾದಲ್ಲಿ ಆ ದೇಶ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

‘ಈ ವೈರಸ್‌ ವ್ಯಾಪಕವಾಗುತ್ತಿದ್ದರೂ ಚೀನಾ ಈ ಸಾಂಕ್ರಾಮಿಕ ರೋಗವನ್ನು ನಿರ್ವಹಿಸಿದ ರೀತಿ ಸಮರ್ಪಕವಾಗಿರಲಿಲ್ಲ. ಈ ಸೋಂಕು ಕಾಣಿಸಿಕೊಂಡಾಗ, ನಂತರದ ದಿನಗಳಲ್ಲಿ ಈ ಬಗ್ಗೆ ಯಾವುದೇ ರೀತಿಯ ಪಾರದರ್ಶಕತೆ, ಮಾಹಿತಿ ಹಂಚಿಕೊಳ್ಳುವಲ್ಲಿ ಸಹಕಾರ ಇರಲಿಲ್ಲ’ ಎಂದು ಆರೋಪಿಸಿದರು.

‘ಯಾವುದೋ ತಪ್ಪಿನಿಂದಾಗಿ ಪರಿಸ್ಥಿತಿ ಕೈ ಮೀರಿ ಹೋಗುವುದಕ್ಕೂ, ಉದ್ದೇಶಪೂರ್ವಕವಾಗಿ ಆ ರೀತಿ ಮಾಡುವುದಕ್ಕೂ ವ್ಯತ್ಯಾಸ ಇದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘1917ರ ನಂತರ ಇಷ್ಟೊಂದು ಪ್ರಮಾಣದಲ್ಲಿ ಸಾವು–ನೋವು ಸಂಭವಿಸಿರಲಿಲ್ಲ. ಈ ಸೋಂಕು ಇಷ್ಟೊಂದು ಪ್ರಮಾಣದಲ್ಲಿ ಹಾನಿ ಮಾಡುತ್ತದೆ ಎಂಬುದು ಗೊತ್ತಿದ್ದರೂ, ಸೋಂಕು ಹರಡುವುದಕ್ಕೆ ಚೀನಾ ಜವಾಬ್ದಾರಿ ಎಂದಾದರೆ ಅದಕ್ಕೆ ಆ ದೇಶ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್‌ ಹೇಳಿದರು.

‘ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಲಿರುವ, ಮಾಜಿ ಉಪಾಧ್ಯಕ್ಷ ಜೊ ಬಿಡೆನ್‌ ಪರವಾಗಿ ಚೀನಾ ಕೆಲಸ ಮಾಡುತ್ತಿದೆ. ಜೊ ಬಿಡೆನ್‌ ಕೂಡಲೇ ಎಚ್ಚರಗೊಳ್ಳದಿದ್ದರೆ ಮುಂದೊಂದು ದಿನ ಚೀನಾ ಅಮೆರಿಕವನ್ನೇ ವಶಪಡಿಸಿಕೊಳ್ಳುವುದು ನಿಶ್ಚಿತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.