ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ
ಒಟ್ಟಾವ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರ ವಿರುದ್ಧ ಮುಂದಿನ ವರ್ಷ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಮಿತ್ರ ಪಕ್ಷವಾದ ನ್ಯೂ ಡೆಮಾಕ್ರೆಟಿಕ್ ಪಾರ್ಟಿ (ಎನ್‌ಡಿಪಿ) ಘೋಷಿಸಿದೆ.
ಜಸ್ಟಿನ್ ಟ್ರುಡೊ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ಭಾರತ ಸಂಜಾತ ಕೆನಡಾ ಸಂಸದ, ಎನ್‌ಡಿಪಿ ನಾಯಕ ಜಗ್‌ಮೀತ್ ಸಿಂಗ್ ಅವರು ಬಹಿರಂಗ ಪತ್ರವನ್ನು ಬರೆದಿದ್ದಾರೆ.
ಜಸ್ಟಿನ್ ಟ್ರುಡೊ ನೇತೃತ್ವದ ಲಿಬರಲ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಮತ ಚಲಾಯಿಸಬೇಕು. ಇದರಿಂದಾಗಿ ಒಂಬತ್ತು ವರ್ಷಗಳ ಬಳಿಕ ಟ್ರೂಡೊ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಬಳಿಕ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಜಗ್‌ಮೀತ್ ಸಿಂಗ್ ತಿಳಿಸಿದ್ದಾರೆ.
ಲಿಬರಲ್ ಪಕ್ಷದವರು ಮತ್ತೊಂದು ಅವಕಾಶಕ್ಕೆ ಅರ್ಹರಲ್ಲ. ಅದಕ್ಕಾಗಿಯೇ ಈ ಸರ್ಕಾರವನ್ನು ಉರುಳಿಸಲು ಹೌಸ್ ಆಫ್ ಕಾಮನ್ಸ್‌ನ ಮುಂದಿನ ಅಧಿವೇಶನದಲ್ಲಿ ಜಸ್ಟಿನ್ ಟ್ರುಡೊ ವಿರುದ್ಧ ನಾವು (ಎನ್‌ಡಿಪಿ) ಕಡ್ಡಾಯವಾಗಿ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದರ ಜತೆಗೆ ಮತ ಚಲಾಯಿಸುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.
ಕೆನಡಾದ ಹಣಕಾಸು ಸಚಿವರ ಡಿಢೀರ್ ರಾಜೀನಾಮೆ ಹಿನ್ನೆಲೆಯಲ್ಲಿ ಜಸ್ಟಿನ್ ಟ್ರುಡೊ ಅವರು ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಾಗಿದೆ. ಜತೆಗೆ, ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ ವರದಿಯಾಗಿದೆ.
2019ರ ಅಕ್ಟೋಬರ್‌ನಲ್ಲಿ ನಡೆದ ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಜಗಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ‘ಕಿಂಗ್ ಮೇಕರ್‘ ಆಗಿ ಹೊರಹೊಮ್ಮಿತ್ತು. ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಲಿಬರಲ್ ಪಕ್ಷ ಅಧಿಕಾರಕ್ಕೆ ಬರಲು ಎನ್‌ಡಿಪಿ ಬೆಂಬಲ ನೀಡಿತ್ತು.
ಸಾರ್ವತ್ರಿಕ ಚುನಾವಣೆಯಲ್ಲಿ ಲಿಬರಲ್ ಪಾರ್ಟಿ 157 ಸ್ಥಾನ ಪಡೆದರೆ, ವಿರೋಧಿ ಕನ್ಸರ್ವೇಟಿವ್ 121, ಬ್ಲಾಕ್ ಕ್ಯುಬೇಸಿಸ್ 32, ಎನ್‌ಡಿಪಿ 24, ಗ್ರೀನ್ ಪಾರ್ಟಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದರು.
ಟ್ರುಡೊ ಅವರು ಎನ್‌ಡಿಪಿ ಸಂಸದರ ಬೆಂಬಲದೊಂದಿಗೆ 338 ಸ್ಥಾನದ ಹೌಸ್ ಆಫ್ ಕಾಮನ್ಸ್‌ನಲ್ಲಿ ಲಿಬರಲ್ ಪಾರ್ಟಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.