ADVERTISEMENT

ಮೌಂಟ್‌ ಎವರೆಸ್ಟ್‌ನಲ್ಲಿ ಜಗತ್ತಿನ ಅತಿ ದೊಡ್ಡ ಹವಾಮಾನ ಕೇಂದ್ರ ಸ್ಥಾಪನೆ

ಪಿಟಿಐ
Published 19 ಮೇ 2022, 16:07 IST
Last Updated 19 ಮೇ 2022, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು:ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ತಜ್ಞರ ತಂಡವು ವಿವಿಧಹವಾಮಾನದ ವಿದ್ಯಮಾನಗಳನ್ನು ಸ್ವಯಂಚಾಲಿತವಾಗಿ ಅಳೆಯುವ ವಿಶ್ವದ ಅತಿ ಎತ್ತರದ ಹವಾಮಾನ ಕೇಂದ್ರವನ್ನುಮೌಂಟ್ ಎವರೆಸ್ಟ್‌ನಲ್ಲಿ ಸ್ಥಾಪಿಸಿದೆ ಎಂದು ನೇಪಾಳದ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

8,848.86 ಮೀಟರ್ ಎತ್ತರದ ಶಿಖರದ ಮೇಲೆ ಹವಾಮಾನ ಕೇಂದ್ರಕ್ಕೆ ಉಪಕರಣಗಳನ್ನು ಅಳವಡಿಸಲುಹಿಮ ಮತ್ತು ಮಂಜುಗಡ್ಡೆ ಕಳೆದ ವಾರ ಅಡ್ಡಿಯಾಗಿತ್ತು. ಹಾಗಾಗಿ ಶಿಖರದ ತುದಿಯಿಂದ ಕೆಲವೇ ಮೀಟರ್‌ಗಳಷ್ಟು ಕೆಳಗೆ ಸ್ವಯಂಚಾಲಿತ ಹವಾಮಾನ ಕೇಂದ್ರ ಸ್ಥಾಪಿಸಲಾಗಿದೆ ಎಂದುನೇಪಾಳದ ಜಲವಿಜ್ಞಾನ ಮತ್ತು ಹವಾಮಾನ ಇಲಾಖೆಯು(ಡಿಎಚ್‌ಎಂ) ಹೇಳಿದೆ.

ಹವಾಮಾನ ನಿಗಾ ವ್ಯವಸ್ಥೆಯು ಸೌರಶಕ್ತಿಯಿಂದ ಕಾರ್ಯ ನಿರ್ವಹಿಸಲಿದೆ. ಇದು ಗಾಳಿಯ ಉಷ್ಣತೆ, ಗಾಳಿಯ ವೇಗ ಮತ್ತು ದಿಕ್ಕು, ಗಾಳಿಯ ಒತ್ತಡ ಮತ್ತು ಹಿಮದ ಮೇಲ್ಮೈ ಎತ್ತರದಲ್ಲಿನ ಬದಲಾವಣೆ, ಒಳಬರುವ ಮತ್ತು ಹೊರಹೋಗುವ ಸಣ್ಣ, ದೀರ್ಘ ತರಂಗ ವಿಕಿರಣದಂತಹ ವಿವಿಧ ಹವಾಮಾನ ವಿದ್ಯಮಾನಗಳನ್ನು ಅಳೆಯಲಿದೆ.

ADVERTISEMENT

ನ್ಯಾಷನಲ್ ಜಿಯಾಗ್ರಾಫಿಕ್ ತಂಡವು ಒಪ್ಪಂದಂತೆ ಈ ಕೇಂದ್ರದ ತಂತ್ರಜ್ಞಾನವನ್ನು2026ರಲ್ಲಿ ನೇಪಾಳ ಸರ್ಕಾರಕ್ಕೆ ವರ್ಗಾಯಿಸಲಿದ್ದು, ಅಲ್ಲಿಯವರೆಗೆ ಈ ಕೇಂದ್ರವನ್ನು ನಿರ್ವಹಿಸಲಿದೆ ಎಂದು ವರದಿ ತಿಳಿಸಿದೆ.

ಅಮೆರಿಕದ ಅಪಲಾಚಿಯನ್ ಸ್ಟೇಟ್ ಯೂನಿವರ್ಸಿಟಿಯ ಹವಾಮಾನ ವಿಜ್ಞಾನಿ ಬೇಕರ್ ಪೆರ್ರಿ ನೇತೃತ್ವದ ತಂಡದಲ್ಲಿ ನುರಿತ ಪರ್ವತಾರೋಹಿಗಳು ಮತ್ತು ವಿಜ್ಞಾನಿಗಳು ಇದ್ದರು. ಇವರಲ್ಲಿ ಅನೇಕರು ಹವಾಮಾನ ಕೇಂದ್ರ ಸ್ಥಾಪಿಸುವಾಗ ವಿಶ್ವದ ಅತಿ ಎತ್ತರದ ಶಿಖರ ಏರಿದರು.

ಚೀನಾ ಈಗಾಗಲೇ ಮೌಂಟ್‌ ಎವರೆಸ್ಟ್‌ನಲ್ಲಿ 5,200–8,800 ಮೀಟರ್‌ ಅಂತರದ ನಡುವೆ 8 ಹವಾಮಾನ ಕೇಂದ್ರಗಳನ್ನು ಸ್ಥಾಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.