ADVERTISEMENT

ಕೋವಿಡ್‌–19 ಲಸಿಕೆ ಸಂಶೋಧನೆಗೆ 8.1 ಬಿಲಿಯನ್‌ ಡಾಲರ್‌ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 5 ಮೇ 2020, 2:15 IST
Last Updated 5 ಮೇ 2020, 2:15 IST
   

ವಾಷಿಂಗ್ಟನ್‌: ಕೊರೊನಾ ವೈರಸ್‌ಗೆ ಪ್ರತಿಯಾಗಿ ಸಂಭವನೀಯ ಲಸಿಕೆ ಮತ್ತು ಚಿಕಿತ್ಸೆಯನ್ನು ಸಂಶೋಧಿಸಲು, ತಯಾರಿಸಲು ಮತ್ತು ವಿತರಿಸಲು ವಿಶ್ವದ ಹಲವು ರಾಷ್ಟ್ರಗಳು ಮತ್ತು ಸಂಸ್ಥೆಗಳು 8 ಬಿಲಿಯನ್ ಡಾಲರ್‌ ನೆರವಿನ ವಾಗ್ದಾನ ಮಾಡಿವೆ. ಗಮನಿಸಬೇಕಾದ ಅಂಶವೆಂದರೆ, ಅಮೆರಿಕ ದೇಣಿಗೆ ನೀಡಲು ನಿರಾಕರಿಸಿದೆ.

ಸೋಮವಾರ ಐರೋಪ್ಯ ಆಯೋಗ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ಶೃಂಗದಲ್ಲಿ ವಿಶ್ವದ 40 ರಾಷ್ಟ್ರಗಳು, ಸಂಸ್ಥೆಗಳು ಭಾಗವಹಿಸಿದ್ದವು. ಅಲ್ಲದೆ, ಆರ್ಥಿಕ ನೆರವಿನ ವಾಗ್ದಾನ ಮಾಡಿದವು.

'ಕೊರೊನಾ ವೈರಸ್‌ ಲಸಿಕೆ, ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ 8.1 ಬಿಲಿಯನ್ ಹಣವನ್ನು ಕೆಲವೇ ಗಂಟೆಗಳ ಅವಧಿಯಲ್ಲಿ ನಡೆದ ಈ ಶೃಂಗದಲ್ಲಿ ಸಂಗ್ರಹಿಸಲಾಗಿದೆ. ಇದನ್ನು ಕೊರೊನಾ ವೈರಸ್‌ ರೋಗಪತ್ತೆ, ಔಷಧ ಸಂಶೋಧನೆ ಮತ್ತು ವಿತರಣೆಗಾಗಿ ವಿನಿಯೋಗಿಸಲಾಗುವುದು " ಎಂದು ಆನ್‌ಲೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುರೋಪಿಯನ್ ಆಯೋಗದ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದರು.

ADVERTISEMENT

"ಜಾಗತಿಕ ಸಹಕಾರಕ್ಕೆ ಈ ಬೆಳವಣಿಗೆಯು ಉತ್ತೇಜನ ನೀಡಲಿದೆ,’ ಎಂದೂ ಅವರು ಅಭಿಪ್ರಾಯಪಟ್ಟರು.

ಭಾಗವಹಿಸದ ಅಮೇರಿಕ

ಕೊರೊನಾ ವೈರಸ್‌ ವಿರುದ್ಧದ ಹೋರಾಟಕ್ಕಾಗಿ ಹಣ ಸಂಗ್ರಹಿಸುವ ಈ ಪ್ರಯತ್ನದಲ್ಲಿ ಅಮೆರಿಕ ಭಾಗವಹಿಸಲಿಲ್ಲ ಎಂದು ಐರೋಪ್ಯ ಆಯೋಗ ತಿಳಿಸಿದೆ.

ಈ ಮಹತ್ವದ ಶೃಂಗದಲ್ಲಿ ಭಾಗವಹಿಸದೇ ಇರುವ ಬಗ್ಗೆ ಸುದ್ದಿ ಸಂಸ್ಥೆ ರಾಯಿಟರ್ಸ್‌ ಅಮೆರಿಕದ ಮೇಲಧಿಕಾರಿಗಳ ಪ್ರತಿಕ್ರಿಯೆ ಪಡೆದಿದೆ.
‘ಕೊರೊನಾ ವೈರಸ್‌ನ ವಿರುದ್ಧದ ಪ್ರಯತ್ನವನ್ನು ನಾವು ಬೆಂಬಲಿಸುತ್ತೇವೆ. ಕಾಯಿಲೆ ವಿರುದ್ಧ ನಡೆಯುತ್ತಿರುವ ಹಲವು ಪ್ರಯತ್ನಗಳಲ್ಲಿ ಇದೂ ಒಂದಾಗಿದೆ. ಇಂಥ ಕಾರ್ಯದಲ್ಲಿ ಅಮೆರಿಕ ಈಗಾಗಲೇ ಮುಂದಿದೆ,’ ಎಂದು ಅಧಿಕಾರಿಯೊಬ್ಬರು ದೂರವಾಣಿ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ.

ಶ್ರೀಮಂತ ರಾಷ್ಟ್ರಗಳಿಗೆ ಸೀಮಿತವಾಗಬಾರದು

‘ಮುಂದೆ ಅನ್ವೇಷಣೆಗೊಳ್ಳಲಿರುವ ಲಸಿಕೆಯು ಎಲ್ಲ ರಾಷ್ಟ್ರಗಳಿಗೆ ಲಭ್ಯವಾಗಬೇಕು. ಅದು ಕೇವಲ ಶ್ರೀಮಂತ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಬಾರದು,’ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದರು.

ಒಗ್ಗಟ್ಟಿನ ಪ್ರದರ್ಶನ: ಆರೋಗ್ಯ ಸಂಸ್ಥೆ

ಕೊರೊನಾ ವೈರಸ್‌ ವಿರುದ್ಧ ಜಗತ್ತಿನ ಹಲವು ರಾಷ್ಟ್ರಗಳು ಪ್ರದರ್ಶಿಸಿರುವ ಈ ಪ್ರಯತ್ನವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕೊಂಡಾಡಿದ್ದಾರೆ. "ಇದು ಜಾಗತಿಕ ಒಗ್ಗಟ್ಟಿನ ಪ್ರಬಲ ಮತ್ತು ಸ್ಪೂರ್ತಿದಾಯಕ ಪ್ರದರ್ಶನವಾಗಿದೆ" ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.