ADVERTISEMENT

2100ರ ವೇಳೆಗೆ ವಿಶ್ವ ಜನಸಂಖ್ಯೆ ಮತ್ತು ಆರ್ಥಿಕತೆ: ಹೇಗಿರುತ್ತೆ? ಎಷ್ಟಿರುತ್ತೆ?

ನೈಜಿರಿಯಾ ಬಲಾಢ್ಯ | ಆಫ್ರಿಕಾ ದೇಶಗಳು ಸದೃಢ

ಏಜೆನ್ಸೀಸ್
Published 20 ಜುಲೈ 2020, 6:53 IST
Last Updated 20 ಜುಲೈ 2020, 6:53 IST
ಅಮೆರಿಕದ ಬೀಚ್‌ಗಳಲ್ಲಿ ಜನಸಂದಣಿ
ಅಮೆರಿಕದ ಬೀಚ್‌ಗಳಲ್ಲಿ ಜನಸಂದಣಿ   

'ಪ್ರಸ್ತುತ ವಿಶ್ವಸಂಸ್ಥೆ ಅಂದಾಜು ಮಾಡಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಕುಸಿಯುತ್ತಿದೆ. 2100ರ ವೇಳೆಗೆ ವಿಶ್ವದ ಜನಸಂಖ್ಯೆಯು 880 ಕೋಟಿ ಆಸುಪಾಸಿನಲ್ಲಿ ಇರಬಹುದು' ಎಂದು 'ದಿ ಲ್ಯಾನ್ಸೆಟ್' ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವಹೊಸ ಅಧ್ಯಯನವೊಂದು ಹೇಳಿದೆ.

ಮಹಿಳೆಯರಲ್ಲಿ ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳು ಹೆಚ್ಚಾದಂತೆ ಶಿಶು ಜನನ ಪ್ರಮಾಣವೂ ಕಡಿಮೆಯಾಗುತ್ತಿದೆ. ಈ ಶತಮಾನ ಮುಗಿಯುವ ಹೊತ್ತಿಗೆ ಜನಸಂಖ್ಯೆಯೇ ಒಂದು ದೇಶದ ಬಲವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿಯೂ ಪರಿಗಣಿತವಾಗಲಿದೆ ಎಂದು ಅಧ್ಯಯನ ಅಂದಾಜಿಸಿದೆ.

ಈ ಶತಮಾನದ ಕೊನೆಗೆ 183 ದೇಶಗಳು ತಮ್ಮ ದೇಶದಲ್ಲಿ ಪ್ರಸ್ತುತ ಇರುವಷ್ಟುಜನಸಂಖ್ಯೆಯ ಪ್ರಮಾಣ ಉಳಿಸಿಕೊಳ್ಳುವಲ್ಲಿ ವಿಫಲವಾಗಲಿವೆ. ವಲಸಿಗರಿಗೆ ಅವಕಾಶಕೊಟ್ಟರೆ ಮಾತ್ರ ಇಂಥ ದೇಶಗಳಲ್ಲಿ ಜನಸಂಖ್ಯೆ ಪ್ರಮಾಣ ಹಾಗೂಹೀಗೂ ಸುಧಾರಿಸಬಹುದು.ಜಪಾನ್, ಸ್ಪೇನ್, ಇಟಲಿ, ಥಾಯ್ಲೆಂಡ್, ಪೊರ್ಚುಗಲ್, ದಕ್ಷಿಣ ಕೊರಿಯಾ ಮತ್ತು ಪೊಲೆಂಡ್ ಸೇರಿದಂತೆ ಸುಮಾರು 20 ದೇಶಗಳಲ್ಲಿ ಜನಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಗಲಿದೆ.

ADVERTISEMENT

ಪ್ರಸ್ತುತ 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಮುಂದಿನ 80 ವರ್ಷಗಳಲ್ಲಿ ಜನಸಂಖ್ಯೆ 75 ಕೋಟಿಗೆ ಕುಸಿಯಲಿದೆ. ಭಾರತದಲ್ಲಿ ಮಾತ್ರ 110 ಕೋಟಿ ಜನಸಂಖ್ಯೆ ಇರುತ್ತದೆ.

ಸಹರಾ ಮರುಭೂಮಿಯ ಅಕ್ಕಪಕ್ಕದಲ್ಲಿ ಇರುವ ಆಫ್ರಿಕಾ ದೇಶಗಳಲ್ಲಿ ಮಾತ್ರ ಜನಸಂಖ್ಯೆ ಏರಿಕೆಯಾಗಲಿದೆ. ನೈಜಿರಿಯಾ ಒಂದರಲ್ಲೇ ಸುಮಾರು 80 ಕೋಟಿ ಜನಸಂಖ್ಯೆ ಇರಬಹುದು ಎಂದು ಅಂದಾಜಿಸಲಾಗಿದೆ. ಆ ವೇಳೆಗೆ ಭಾರತದ ನಂತರ ವಿಶ್ವದಲ್ಲಿ ನೈಜಿರಿಯಾದಲ್ಲಿಯೇ ಅತಿಹೆಚ್ಚಿನ ಜನರು ವಾಸ ಮಾಡುತ್ತಿರುತ್ತಾರೆ.

'ಜನಸಂಖ್ಯೆಯ ಈ ಹೊಸ ಅಂದಾಜು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಒಳ್ಳೆಯದೂ ಹೌದು. ಆಹಾರ ಧಾನ್ಯಗಳಿಗೆ ಬೇಡಿಕೆ ಕಡಿಮೆಯಾಗುವುದರಿಂದ ಕಾಡಿನ ಮೇಲಿನ ಒತ್ತಡವೂ ಕಡಿಮೆಯಾಗಲಿದೆ' ಎಂದು ವಾಷಿಂಗ್‌ಟನ್ ವಿವಿಯ ಆರೋಗ್ಯ ಅಂಕಿಅಂಶ ಮತ್ತು ಮೌಲ್ಯಮಾಪನ ವಿಭಾಗದ ಪ್ರಾಧ್ಯಾಪಕ ಕ್ರಿಸ್ಟೋಫರ್ ಮುರ್ರೆ ವಿಶ್ಲೇಷಿಸಿದ್ದಾರೆ.

'ಪ್ರಸ್ತುತ ವಿಶ್ವ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿರುವ ಬಹುತೇಕ ದೇಶಗಳಲ್ಲಿ ಮುಂದಿನ 80 ವರ್ಷಗಳಲ್ಲಿ ಜನಸಂಖ್ಯೆ ಕುಸಿಯುವುದು ಖಚಿತ ಎಂಬಂಥ ಪರಿಸ್ಥಿತಿಯಿದೆ. ಈ ದೇಶಗಳು ತಮ್ಮ ಜನಸಂಖ್ಯೆಯನ್ನು ಉಳಿಸಿಕೊಳ್ಳಲು ಯೋಚಿಸಬೇಕು. ವಲಸೆ ನೀತಿಯಲ್ಲಿ ಸೂಕ್ತ ಮಾರ್ಪಾಡು ತರುವ ಜೊತೆಗೆ, ಕುಟುಂಬಗಳು ಮಕ್ಕಳನ್ನು ಹೊಂದಲು ಪ್ರೋತ್ಸಾಹ ನೀಡುವ ಯೋಜನೆಗಳನ್ನು ಘೋಷಿಸಬೇಕು' ಎಂದು ಅವರು ಸಲಹೆ ಮಾಡಿದ್ದಾರೆ.

ಹೆಚ್ಚಾಗಲಿದೆ 80 ದಾಟಿದವರ ಸಂಖ್ಯೆ

ಫಲವಂತಿಕೆ ಪ್ರಮಾಣ ಕಡಿಮೆಯಾಗುವುದು ಮತ್ತು ಆಯಸ್ಸಿನ ಪ್ರಮಾಣ ಹೆಚ್ಚಾಗುವುದು ಜನರ ವಯೋಮಾನದ ಹಂಚಿಕೆಯ ಮೇಲೆಯೂ ಪರಿಣಾಮ ಬೀರಲಿದೆ. ಐದು ವರ್ಷಕ್ಕೂ ಕಡಿಮೆಯಿರುವ ಮಕ್ಕಳ ಸಂಖ್ಯೆ ಶೇ 40ರಷ್ಟು ಕಡಿಮೆಯಾಗಲಿದೆ. 2017ರಲ್ಲಿ ವಿಶ್ವದಲ್ಲಿ ಒಟ್ಟು 68 ಕೋಟಿ ಐದು ವರ್ಷದೊಳಗಿನ ಮಕ್ಕಳಿದ್ದವು. 2100ರ ವೇಳೆಗೆ ಈ ಪ್ರಮಾಣ 40 ಕೋಟಿಗೆ ಕುಸಿಯಲಿದೆ.

2100ರ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯ ಕಾಲುಭಾಗ, ಅಂದರೆ 237 ಕೋಟಿ ಮಂದಿಯ ವಯಸ್ಸು 65 ವರ್ಷ ದಾಟಿರುತ್ತದೆ. ಇಂದು ವಿಶ್ವದ ವಿವಿಧೆಡೆ 14 ಕೋಟಿ ಮಂದಿ 80 ವರ್ಷ ದಾಟಿದವರು ಇದ್ದಾರೆ. 2100ರ ವೇಳೆಗೆ ಈ ಪ್ರಮಾಣ 86 ಕೋಟಿ ದಾಟಿರುತ್ತದೆ ಎಂದು ಅಂದಾಜಿಸಲಾಗಿದೆ.

ದುಡಿಯುವ ವಯೋಮಾನದ ಜನಸಂಖ್ಯೆಯಲ್ಲಿ ಕಂಡು ಬರುವ ಗಣನೀಯ ಕಡಿತವು ಹಲವು ದೇಶಗಳಲ್ಲಿ ಗಂಭೀರ ಪರಿಣಾಮಗಳನ್ನು ಬೀರಲಿದೆ. ಅಭಿವೃದ್ಧಿ ಓಟ ಕಾಪಾಡಿಕೊಳ್ಳಲು ದೇಶಗಳು ಹೆಣಗಾಡುತ್ತವೆ. ಪ್ರಸ್ತುತ ಚೀನಾದಲ್ಲಿ 95 ಕೋಟಿ ಮಂದಿ ದುಡಿಯುವ ವಯೋಮಾನದಲ್ಲಿದ್ದಾರೆ. ಈ ಶತಮಾನದ ಕೊನೆಗೆ ಈ ಪ್ರಮಾಣ 35 ಕೋಟಿಗೆ ಕುಸಿಯಲಿದೆ. ಅಂದರೆ ಶೇ 62ರಷ್ಟು ಕಡಿತ. ಭಾರತದಲ್ಲಿ ಪ್ರಸ್ತುತ ದುಡಿಯುವ ಸಾಮರ್ಥ್ಯದ 76 ಕೋಟಿ ಜನರಿದ್ದಾರೆ. 2100ರ ವೇಳೆಗೆ ಈ ಪ್ರಮಾಣ 57.8 ಕೋಟಿಗೆ ಕುಸಿಯಯಲಿದೆ. ನೈಜಿರಿಯಾದಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತ ಬೆಳವಣಿಗೆ ಕಂಡುಬಂದಿದೆ. ಪ್ರಸ್ತುತ ಅಲ್ಲಿ 8.6 ಕೋಟಿ ಮಂದಿ ದುಡಿಯುವ ವಯೋಮಾನದ ಜನರಿದ್ದಾರೆ. ಈ ಶತಮಾನದ ಅಂತ್ಯದ ವೇಳೆಗೆ ಅಲ್ಲಿ 45 ಕೋಟಿ ದುಡಿಯುವ ಜನರು ಇರುತ್ತಾರೆ ಎಂದು ಅಂದಾಜಿಸಲಾಗಿದೆ.

ಬಲಿಷ್ಠ ಆರ್ಥಿಕತೆಗಳು

2050ರ ವೇಳೆಗೆ ಚೀನಾದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಅಮೆರಿಕಕ್ಕಿಂತ ಹೆಚ್ಚಾಗುತ್ತದೆ. ಆದರೆ 2100ರ ನಂತರ ಚೀನಾದಲ್ಲಿ ಮತ್ತೆ ಜಿಡಿಪಿ ಕಡಿಮೆಯಾಗಲಿದೆ. ಭಾರತದ ಜಿಡಿಪಿ ವಿಶ್ವದ 3ನೇ ಸ್ಥಾನಕ್ಕೆ ಬರಲಿದೆ. ಜಪಾನ್, ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್‌ಗಳು ವಿಶ್ವದ 10 ಪ್ರಮುಖ ಆರ್ಥಿಕತೆಗಳಾಗಿ ಮುಂದುವರಿಯಲಿವೆ.

ಪ್ರಸ್ತುತ ವಿಶ್ವದ ಬಲಾಢ್ಯ ಆರ್ಥಿಕತೆಗಳೆನಿಕೊಂಡಿರುವ ಬ್ರೆಜಿಲ್, ರಷ್ಯಾ, ಇಟಲಿ ಮತ್ತು ಸ್ಪೇನ್‌ಗಳು 2100ರ ಹೊತ್ತಿಗೆ ಆರ್ಥಿಕವಾಗಿ ಬಲ ಕುಂದಲಿವೆ. ಇಂಡೋನೇಷಿಯಾ ವಿಶ್ವದ 12ನೇ ದೊಡ್ಡ ಆರ್ಥಿಕತೆಯಾಗಲಿದೆ. ಪ್ರಸ್ತುತ ವಿಶ್ವದ 28ನೇ ಪ್ರಮುಖ ಆರ್ಥಿಕತೆ ಎನಿಸಿಕೊಂಡಿರುವ ನೈಜಿರಿಯಾ ಟಾಪ್ 10ರ ಒಳಗೆ ಬರಲಿದೆ ಎಂದು ವರದಿ ಹೇಳಿದೆ.

'ಈ ಶತಮಾನದ ಅಂತ್ಯದ ವೇಳೆಗೆ ವಿಶ್ವದಲ್ಲಿ ಬಹುಧ್ರುವ ಅರ್ಥ ವ್ಯವಸ್ಥೆ ಕಂಡುಬರಲಿದೆ. ಭಾರತ, ನೈಜಿರಿಯಾ, ಚೀನಾ ಮತ್ತು ಅಮೆರಿಕ ವಿಶ್ವದ ಬಲಾಢ್ಯ ಆರ್ಥಿಕತೆಗಳಾಗಲಿವೆ' ಎಂದು ತಜ್ಞ ರಿಚರ್ಡ್‌ ಹಾರ್ಟನ್ ಹೇಳಿದ್ದಾರೆ.

ಈವರೆಗಿನ ಲೆಕ್ಕಾಚಾರಗಳ ಪ್ರಕಾರ 2100ರ ವೇಳೆಗೆ ಅಮೆರಿಕದಲ್ಲಿ 109 ಕೋಟಿ ಜನಸಂಖ್ಯೆ ಇರುತ್ತದೆ ಎಂದು ಅಂದಾಜಿಸಲಾಗಿತ್ತು. ಈ ಮೂಲಕ ಅದು ವಿಶ್ವದ ಜಾಗತಿಕ ಶಕ್ತಿಯಾಗಿ ಮುಂದುವರಿಯುತ್ತದೆ ಎಂದು ಅಂದಾಜಿಸಲಾಗಿತ್ತು.

'ಪ್ರಸ್ತುತ ಪ್ರತಿ ಮಹಿಳೆಯು ಮಕ್ಕಳನ್ನು ಹೆರುವ ಪ್ರಮಾಣ 2.1 ಎಂದು ಅಂದಾಜಿಸಲಾಗಿದೆ. ಈ ಪ್ರಮಾಣವು 1.8ಕ್ಕೆ ಕಡಿಮೆಯಾಗಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಮಹಿಳೆಯರಲ್ಲಿ ವಿದ್ಯಾಭ್ಯಾಸ ಹೆಚ್ಚಾದಂತೆ ಮಕ್ಕಳನ್ನು ಹೆರುವ ಪ್ರಮಾಣ ಇನ್ನಷ್ಟು ತಗ್ಗಿ ಇದು 1.5ರ ಸರಾಸರಿಗೆ ಬರಬಹುದು' ಎಂದು ಜನಸಂಖ್ಯೆ ಲೆಕ್ಕಾಚಾರದ ತಜ್ಞಮುರ್ರೆ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.