ಲಾಸ್ ವೇಗಾಸ್: ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಟಿಕ್‌ಟಾಕರ್ ಖಾಬಿ ಲೇಮ್, ಅಕ್ರಮವಾಗಿ ನೆಲೆಸಿದ ಆರೋಪ ಮೇಲೆ ವಲಸೆ ಅಧಿಕಾರಿಗಳಿಂದ ಬಂಧಕ್ಕೊಳಗಾದ ನಂತರ ಅಮೆರಿಕ ತೊರೆದಿದ್ದಾರೆ.
‘ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ಉಳಿದುಕೊಂಡ ಆರೋಪದ ಮೇಲೆ ಖಾಬಿ ಅವರನ್ನು ಶುಕ್ರವಾರ ವಲಸೆ ಅಧಿಕಾರಿಗಳು ಬಂಧಿಸಿದ್ದರು. ಗಡೀಪಾರು ಆದೇಶವಿಲ್ಲದೇ ದೇಶ ತೊರೆಯಲು ಅವರಿಗೆ ಅನುಮತಿಸಲಾಗಿದೆ’ ಎಂದು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಫ್ರಿಕಾದ ಸೆನೆಗಲ್‌ನಲ್ಲಿ ಜನಿಸಿದ ಖಾಬಿ, ಚಿಕ್ಕವರಿದ್ದಾಗಲೇ ತಮ್ಮ ಪೋಷಕರೊಂದಿಗೆ ಇಟಲಿಗೆ ವಲಸೆ ಬಂದಿದ್ದರು. ಇಟಲಿಯ ಪೌರತ್ವನ್ನೂ ಹೊಂದಿದ್ದಾರೆ. ಕೋವಿಡ್ ಸಮಯದಲ್ಲಿ ತಮ್ಮ ಆಂಗಿಕ ಅಭಿನಯದ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆದಿದ್ದ ಅವರು, ಟಿಕ್‌ಟಾಕ್‌ನಲ್ಲಿ ಸುಮಾರು 162 ಮಿಲಿಯನ್ ಹಿಂಬಾಕರನ್ನು ಹೊಂದಿದ್ದಾರೆ.
2022ರಲ್ಲಿ ‘ಹ್ಯೂಗೋ ಬಾಸ್’ ಬ್ರ್ಯಾಂಡ್ ಜೊತೆ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಮಾಡಿದ್ದ ಖಾಬಿ, ಯುನಿಸೆಫ್‌ನ ಸೌಹಾರ್ದ ರಾಯಭಾರಿಯಾಗಿ ನೇಮಕಗೊಂಡಿದ್ದರು.
ಕಳೆದ ತಿಂಗಳು ನ್ಯೂಯಾರ್ಕ್‌ನಲ್ಲಿ ನಡೆದ ‘ಮೆಟ್ ಗಾಲಾ’ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.