ADVERTISEMENT

ಚೀನಾದ 'ಐಫೋನ್‌ ಸಿಟಿಯಲ್ಲಿ' ಪ್ರವಾಹ; 24 ಗಂಟೆಗಳಲ್ಲಿ 18 ಇಂಚು ಮಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜುಲೈ 2021, 8:32 IST
Last Updated 21 ಜುಲೈ 2021, 8:32 IST
ಝೆಂಗ್‌ಝೊ ನಗರದಲ್ಲಿ ಸಬ್‌ವೇ ಕಾರ್ (ಮೆಟ್ರೊ ರೈಲು ರೀತಿಯ ಸಂಚಾರ) ಸಂಚರಿಸುವ ಸುರಂಗದೊಳಗೆ ನೀರು ನುಗ್ಗಿ, ರೈಲಿನೊಳಗೂ ನೀರು ತುಂಬಿರುವುದು.
ಝೆಂಗ್‌ಝೊ ನಗರದಲ್ಲಿ ಸಬ್‌ವೇ ಕಾರ್ (ಮೆಟ್ರೊ ರೈಲು ರೀತಿಯ ಸಂಚಾರ) ಸಂಚರಿಸುವ ಸುರಂಗದೊಳಗೆ ನೀರು ನುಗ್ಗಿ, ರೈಲಿನೊಳಗೂ ನೀರು ತುಂಬಿರುವುದು.   

ನವದೆಹಲಿ: ಆ್ಯಪಲ್‌ ಕಂಪನಿಯ ಐಫೋನ್‌ಗಳನ್ನು ತಯಾರಿಸುವ ಜಗತ್ತಿನ ಅತಿ ದೊಡ್ಡ ಘಟಕ ಹೊಂದಿರುವ ಝೆಂಗ್‌ಝೊ ನಗರ ಈಗ ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿದೆ. ಭಾರೀ ಮಳೆಯಿಂದ ಸೃಷ್ಟಿಯಾಗಿರುವ ಪ್ರವಾಹದಿಂದ ಕನಿಷ್ಠ 12 ಮಂದಿ ಸಾವಿಗೀಡಾಗಿದ್ದು, ಸುಮಾರು 2,00,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಚೀನಾದ ಹೆನನ್‌ ಪ್ರಾಂತ್ಯದ ಝೆಂಗ್‌ಝೊ ನಗರದಲ್ಲಿ 24 ಗಂಟೆಗಳಲ್ಲಿ 18 ಇಂಚು (457.5 ಮಿಲಿಮೀಟರ್‌) ಮಳೆಯಾಗಿದೆ. ಪ್ರವಾಹ ಸ್ಥಿತಿ ಎದುರಾಗಿರುವುದರಿಂದ ವಿಮಾನಗಳ ಹಾರಾಟ ರದ್ದು ಪಡಿಸಲಾಗಿದೆ. ಬಹುತೇಕ ರಸ್ತೆಗಳು ಹೊಳೆಯಂತಾಗಿದ್ದು, ನಗರದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿರುವುದಾಗಿ ತಿಳಿದು ಬಂದಿದೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

'ಕೆಲವು ಕಡೆ ಅಣೆಕಟ್ಟೆಗಳು ಒಡೆದು ನೀರು ನುಗ್ಗಿರುವುದರಿಂದ ಪ್ರಾಣ ಹಾನಿ, ಆಸ್ತಿ–ಪಾಸ್ತಿ ಹಾನಿ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ. ಪರಿಸ್ಥಿತಿಯು ಅತ್ಯಂತ ಗಂಭೀರವಾಗಿದೆ' ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿರುವುದಾಗಿ ವರದಿಯಾಗಿದೆ.

ADVERTISEMENT

ಝೆಂಗ್‌ಝೊ ನಗರದಲ್ಲಿರುವ ಐಫೋನ್‌ ತಯಾರಿಕಾ ಘಟಕವನ್ನು ತೈವಾನ್‌ನ ಹಾನ್‌ ಹಾಯ್‌ ಪ್ರಿಸಿಶನ್‌ ಇಂಡಸ್ಟ್ರಿ ಕಂಪನಿ ನಿರ್ವಹಿಸುತ್ತಿದೆ. ಆ್ಯಪಲ್‌ ಹೊಸ ಮಾದರಿಯ ಸಾಧನಗಳ ಬಿಡುಗಡೆಗಾಗಿ ತಯಾರಿ ಹೆಚ್ಚಿಸುತ್ತಿರುವ ಸಮಯದಲ್ಲೇ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ವರದಿಗಳ ಪ್ರಕಾರ, ಝೆಂಗ್‌ಝೊದಲ್ಲಿರುವ ಕಾರ್ಖಾನೆಯಲ್ಲಿ ಒಂದು ದಿನಕ್ಕೆ 5,00,000 ಐಫೋನ್‌ಗಳನ್ನು ತಯಾರಿಸುವ ವ್ಯವಸ್ಥೆ ಇದ್ದು, ಸ್ಥಳೀಯವಾಗಿ 'ಐಫೋನ್‌ ಸಿಟಿ' ಎಂದೇ ಜನಪ್ರಿಯವಾಗಿದೆ.

ಹೆನನ್‌ ಪ್ರಾಂತ್ಯವು ಚೀನಾದಲ್ಲಿ ಎರಡನೇ ಅತಿ ಹೆಚ್ಚು ಆಹಾರ ಬೆಳೆಯುವ ಪ್ರದೇಶವಾಗಿದೆ. ಚೀನಾದಲ್ಲಿ ಬೆಳೆಯಲಾಗುವ ಒಟ್ಟು ಗೋಧಿಯ ಪ್ರಮಾಣದಲ್ಲಿ ಕಾಲು ಭಾಗದಷ್ಟು ಬೆಳೆಯು ಹೆನನ್‌ನಿಂದ ಉತ್ಪಾದನೆಯಾಗುತ್ತದೆ. ಶೀತಲೀಕರಿಸಿದ ಆಹಾರ ಉತ್ಪಾದನೆಗೂ ಪ್ರಮುಖ ಕೇಂದ್ರವಾಗಿದೆ. ಅಲ್ಲಿ ಕಲ್ಲಿದ್ದಲು ಹಾಗೂ ಲೋಹಗಳ ಗಣಿಗಾರಿಕೆಗಳು ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.