
ಮಮತಾ ಬ್ಯಾನರ್ಜಿ, ಸುಪ್ರೀಂ ಕೋರ್ಟ್
(ಪಿಟಿಐ ಚಿತ್ರಗಳು)
ಕೋಲ್ಕತ್ತ: ಅಜಿತ್ ಮಾತೃ ಪಕ್ಷಕ್ಕೆ ಮರಳುವ ಯೋಜನೆಯಲ್ಲಿದ್ದರು, ಇತ್ತೀಚಿನ ದಿನಗಳಲ್ಲಿ ಹರಡಿದ್ದ ಸುದ್ದಿಗಳು ಸಹ ಈ ನಡೆಯನ್ನು ಸೂಚಿಸುವಂತೆ ಇದ್ದವು. ಈ ಸಂದರ್ಭದಲ್ಲೇ ಅವರ ಸಾವು ಸಂಭವಿಸಿರುವುದು ತೀವ್ರ ಆಘಾತ ತಂದಿದೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
‘ವಿಮಾನ ದುರಂತದಲ್ಲಿ ಅಜಿತ್ ಪವಾರ್ ಮೃತಪಟ್ಟ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು’ ಎಂದು ಮಮತಾ ಆಗ್ರಹಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗ ಅಸ್ತಿತ್ವದಲ್ಲಿರುವ ತನಿಖಾ ಸಂಸ್ಥೆಗಳಿಂದ ಸತ್ಯ ಹೊರಬರುವುದಿಲ್ಲ. ಎಲ್ಲ ಸಂಸ್ಥೆಗಳು ಸಂಪೂರ್ಣವಾಗಿ ರಾಜಿ ಮಾಡಿಕೊಂಡಿವೆ. ಹಾಗಾಗಿ, ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲೇ ತನಿಖೆ ನಡೆಸಬೇಕು. ಸುಪ್ರೀಂಕೋರ್ಟ್ ಮಾತ್ರ ವಿಶ್ವಾಸಾರ್ಹ’ ಎಂದು ಅವರು ಹೇಳಿದರು.
‘ಅಜಿತ್ ಪವಾರ್ ಅವರು, ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಎಸ್ಪಿ ಬಣಕ್ಕೆ ಮರಳುವ ಯೋಜನೆಯಲ್ಲಿದ್ದರು. ಇತ್ತೀಚಿನ ದಿನಗಳಲ್ಲಿ ಹರಡಿದ್ದ ಸುದ್ದಿಗಳು ಸಹ ಈ ನಡೆಯನ್ನು ಸೂಚಿಸುವಂತೆ ಇದ್ದವು. ಈ ಸಂದರ್ಭದಲ್ಲೇ ಅವರ ಸಾವು ಸಂಭವಿಸಿರುವುದು ತೀವ್ರ ಆಘಾತ ತಂದಿದೆ’ ಎಂದು ಮಮತಾ ಹೇಳಿದರು.
ರಾಜಕೀಯ ಮುಖಂಡರೂ ಸುರಕ್ಷಿತರಲ್ಲ: ‘ಈ ದೇಶದಲ್ಲಿ ರಾಜಕೀಯ ಮುಖಂಡರಿಗೂ ಯಾವುದೇ ಸುರಕ್ಷತೆ ಅಥವಾ ಭದ್ರತೆ ಇಲ್ಲ ಎನ್ನುವುದಕ್ಕೆ ಈ ದುರಂತ ಸಾಕ್ಷಿ. ಇಂದು ಆಡಳಿತ ವ್ಯವಸ್ಥೆಯ ಭಾಗವಾಗಿರುವವರೂ ಸುರಕ್ಷಿತರಲ್ಲ’ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.