
ಶಿವರಾಜ್ ಸಿಂಗ್ ಚೌಹಾಣ್
–ಪಿಟಿಐ ಚಿತ್ರ
ಭೋಪಾಲ್: ‘ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ರಚನಾತ್ಮಕ ಮಾತುಕತೆಯಿಂದ ನಡೆದಿದೆಯೋ ಹೊರತು ಚೌಕಾಶಿಯಿಂದ ಅಲ್ಲ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಒಪ್ಪಂದದ ವಿಚಾರದಲ್ಲಿ ಅಮೆರಿಕದ ಮುಂದೆ ಭಾರತವು ಸಂಪೂರ್ಣ ಶರಣಾಗತಿಯಾಗಿದೆ ಎಂದು ಕಾಂಗ್ರೆಸ್ ಮಾಡಿದ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ.
‘ಕೃಷಿ ಕ್ಷೇತ್ರಕ್ಕೆ ಈ ಒಪ್ಪಂದದಿಂದ ಸಂಪೂರ್ಣ ರಕ್ಷಣೆ ದೊರೆಯಲಿದ್ದು, ರೈತರು ಹಾಗೂ ದೇಶದ ಹಿತರಕ್ಷಣೆಯೇ ಸರ್ವೋಚ್ಛ ಗುರಿಯಾಗಿದೆ. ದೇಶದ ಕೃಷಿ ಉತ್ಪನ್ನಗಳನ್ನು ಒಪ್ಪಂದದಿಂದ ಹೊರಗಿಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಈ ಒಪ್ಪಂದದಿಂದ ಭಾರತದ ಯಾವುದೇ ಕೃಷಿ ಉತ್ಪನ್ನಕ್ಕೆ ಸಣ್ಣ ಮಟ್ಟದ ಹಾನಿಯೂ ಆಗುವುದಿಲ್ಲ. ದಶಕಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷವು, ಜಾಗತಿಕ ಮಾರುಕಟ್ಟೆಗಳ ಜೊತೆಗೆ ರೈತರನ್ನು ಜೋಡಿಸಲು ಸಂಪೂರ್ಣವಾಗಿ ವಿಫಲವಾಗಿದೆ, ಭಾರತದ ಆರ್ಥಿಕತೆಗೆ ಸ್ಥಿರತೆ ತರಲು ಸಾಧ್ಯವಾಗಿಲ್ಲ’ ಎಂದು ಚೌಹಾಣ್ ಆರೋಪಿಸಿದ್ದಾರೆ.
‘ಭಾರತ– ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಭಾರತದ ನೀತಿಯು ರಾಜಿಯಲ್ಲ, ಬದ್ಧತೆಯಾಗಿದೆ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ರವಾನಿಸಿದೆ. ದೇಶದ ಹಿತಾಸಕ್ತಿ ಹಾಗೂ ಆತ್ಮವಿಶ್ವಾಸದಿಂದಲೇ ಈ ಒಪ್ಪಂದ ನಡೆದಿದೆ’ ಎಂದು ಒತ್ತಿ ಹೇಳಿದ್ದಾರೆ.
‘ಈ ಒಪ್ಪಂದವು ಭಾರತದ ರಾಜತಾಂತ್ರಿಕತೆ, ಅಭಿವೃದ್ಧಿ ಹಾಗೂ ಘನತೆಗೆ ವಿಶೇಷ ಉದಾಹರಣೆಯಾಗಿದೆ. ರಾಜತಾಂತ್ರಿಕತೆ ಎಂದರೆ ದೇಶವೇ ಮೊದಲು. ಅಭಿವೃದ್ಧಿಯೇ ದೇಶದ ಅಡಿಗಲ್ಲು. ರೈತರ ಘನತೆಯನ್ನು ಸಂಪೂರ್ಣವಾಗಿ ಕಾಪಾಡಲಾಗಿದೆ’ ಎಂದು ವಿವರಿಸಿದ್ದಾರೆ.
ಕಾಂಗ್ರೆಸ್ ಕಿಡಿ: ‘ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದಿಂದ ಭಾರತಕ್ಕೆ ಯಾವುದೇ ಲಾಭವಿಲ್ಲ. ದೇಶದ ಸ್ವಾಭಿಮಾನ ಹಾಗೂ ಹಿತಾಸಕ್ತಿಯನ್ನು ಬದಿಗೊತ್ತಿ, ಅಮೆರಿಕದ ಮುಂದೆ ಶರಣಾಗತಿಯಾಗುವ ಮೂಲಕ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಕಾಂಗ್ರೆಸ್ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.