
ರಾಮನಗರ: ನಗರದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಶನಿವಾರ ದ್ವಿತಳಿ ಗೂಡಿನ ದರ ಪ್ರತಿ ಕೆ.ಜಿ.ಗೆ ಗರಿಷ್ಠ ₹1 ಸಾವಿರಕ್ಕೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆಯಿತು. ಮಿಶ್ರತಳಿ ಗೂಡಿಗೂ ಬಂಪರ್ ಬೆಲೆ ಬಂದಿದ್ದು ಪ್ರತಿ ಕೆ.ಜಿ.ಗೆ ₹800ಕ್ಕೆ ಬಿಕರಿಯಾಯಿತು!
ಎರಡೂವರೆ ತಿಂಗಳ ಹಿಂದೆ ₹900 ಗಡಿ ದಾಟಿದ್ದ ದ್ವಿತಳಿ ದರವು ನಂತರ ನಿಧಾನವಾಗಿ ಏರಿಕೆಯಾಗುತ್ತಿದೆ. ನಿನ್ನೆ ₹999 ತಲುಪಿದ್ದ ದರವು ಇಂದು ಸಾವಿರದ ಗಡಿ ಮುಟ್ಟಿದೆ. ಪ್ರತಿ ಕೆ.ಜಿ.ಗೆ ₹750ರ ಆಸುಪಾಸಿನಲ್ಲಿದ್ದ ಮಿಶ್ರತಳಿ ದರವೂ ₹800 ದಾಟಿದೆ.
ನಾಲ್ಕು ವರ್ಷಗಳ ಹಿಂದೆ 2022ರಲ್ಲಿ ನಾಲ್ಕಂಕಿ ತಲುಪಿದ್ದ ದ್ವಿತಳಿ ರೇಷ್ಮೆಗೂಡಿನ ದರ, ಇದೀಗ ಮತ್ತೆ ಸಾವಿರಕ್ಕೆ ಏರಿಕೆಯಾಗಿರುವುದಕ್ಕೆ ರೇಷ್ಮೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಮಾರುಕಟ್ಟೆಗೆ ಶನಿವಾರ ಗೂಡುಗಳನ್ನು ತಂದಿದ್ದ 330 ಬೆಳೆಗಾರರ ಪೈಕಿ, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಯದಲಡಕು ಗ್ರಾಮದ ಶ್ರೀನಿವಾಸ್ ಅವರು ತಂದಿದ್ದ 84 ಕೆ.ಜಿ ದ್ವಿತಳಿ ಗೂಡನ್ನು ರೀಲರ್ ಮೊಹಮದ್ ಜಬಿ ಅಹಮದ್ ಅವರು ಪ್ರತಿ ಕೆ.ಜಿ.ಗೆ ₹1 ಸಾವಿರದಂತೆ ಖರೀದಿಸಿದರು. ಅತಿ ಹೆಚ್ಚು ದರ ಪಡೆದ ಶ್ರೀನಿವಾಸ್ ಅವರಿಗೆ ಮಾರುಕಟ್ಟೆ ಅಧಿಕಾರಿಗಳು ಅಭಿನಂದನಾ ಪತ್ರ ನೀಡಿದರು.
ದ್ವಿತಳಿಯತ್ತ ಚಿತ್ತ: ಕೆಲ ತಿಂಗಳುಗಳಿಂದ ದ್ವಿತಳಿ ರೇಷ್ಮೆಗೂಡಿಗೆ ಉತ್ತಮ ಧಾರಣೆ ಸಿಗುತ್ತಿರುವುದರಿಂದ ಬೆಳೆಗಾರರು, ಮಿಶ್ರತಳಿಗಿಂತ ಹೆಚ್ಚಾಗಿ ದ್ವಿತಳಿಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ದೇಶಿಯ ಸೀರೆ ಮತ್ತಿತರ ಸಿದ್ದ ಉಡುಪಿನಲ್ಲಿ ದ್ವಿತಳಿ ರೇಷ್ಮೆ ಹೆಚ್ಚಾಗಿ ಬಳಕೆಯಾಗುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ರೇಷ್ಮೆ ಇಲಾಖೆ ಅಧಿಕಾರಿಗಳು.
ಏಷ್ಯಾಖಂಡದಲ್ಲೇ ರಾಮನಗರದ ರೇಷ್ಮೆ ಮಾರುಕಟ್ಟೆ ಅತ್ಯಂತ ದೊಡ್ಡದಾಗಿದೆ. ಇಲ್ಲಿಗೆ ರಾಜ್ಯದ ಬೆಳೆಗಾರರಷ್ಟೇ ಅಲ್ಲದೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರದಿಂದಲೂ ಬೆಳೆಗಾರರು ಗೂಡುಗಳನ್ನು ತಂದು ಮಾರಾಟ ಮಾಡುತ್ತಾರೆ. ಬೇರೆ ಜಿಲ್ಲೆಗಳ ಮಾರುಕಟ್ಟೆಗಳು ಸ್ಥಳೀಯ ಹಾಗೂ ಅಕ್ಕಪಕ್ಕದ ತಾಲ್ಲೂಕುಗಳ ಬೆಳೆಗಾರರಿಗೆ ಮಾತ್ರ ಸೀಮಿತವಾಗಿದೆ. ಹಾಗಾಗಿ, ಹೆಚ್ಚಿನ ಬೆಳೆಗಾರರು ರಾಮನಗರ ಮಾರುಕಟ್ಟೆಗೆ ಬರುತ್ತಾರೆ.
ನಾಲ್ಕು ವರ್ಷದ ಬಳಿಕ ದ್ವಿತಳಿ ರೇಷ್ಮೆಗೂಡಿನ ದರ ಪ್ರತಿ ಕೆ.ಜಿ.ಗೆ ಒಂದು ಸಾವಿರ ತಲುಪಿದೆ. ಮಿಶ್ರತಳಿ ದರವು ₹800 ದಾಟಿದೆ. ಮುಂದಿನ ದಿನಗಳಲ್ಲಿ ದರವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆಎಂ. ಮಲ್ಲಿಕಾರ್ಜುನ ಸ್ವಾಮಿ ರೇಷ್ಮೆ ಜಂಟಿ ನಿರ್ದೇಶಕ ರಾಮನಗರ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ
ರೇಷ್ಮೆ ಬೆಳೆ ನನ್ನ ಕುಟುಂಬದ ಕೈ ಹಿಡಿದಿದೆ. ಕಳೆದ ಹತ್ತು ವರ್ಷಗಳಿಂದ ದ್ವಿತಳಿ ರೇಷ್ಮೆ ಬೆಳೆಯುತ್ತಿದ್ದೇನೆ. ನಾನು ತಂದ ಗೂಡಿಗೆ ಪ್ರತಿ ಕೆ.ಜಿ.ಗೆ ₹1 ಸಾವಿರ ದರ ಸಿಕ್ಕಿರುವುದರಿಂದ ಸಂತಸವಾಗಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆಶ್ರೀನಿವಾಸ್ ರೇಷ್ಮೆ ಬೆಳೆಗಾರ ತುಮಕೂರು ಜಿಲ್ಲೆ
ರೇಷ್ಮೆಗೆ ಉತ್ತಮ ದರ ಸಿಕ್ಕಿರುವುದು ಸಂತಸದ ವಿಷಯ. ಆದರೆ ವಿವಿಧ ಕಾರಣಗಳಿಗಾಗಿ ಇತ್ತೀಚೆಗೆ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರೇಷ್ಮೆ ಇಲಾಖೆ ಇದನ್ನು ಗಂಭಿರವಾಗಿ ಪರಿಗಣಿಸಬೇಕುಗೌತಮ್ ಗೌಡ ಅಧ್ಯಕ್ಷ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಬೆಂಗಳೂರು ದಕ್ಷಿಣ ಜಿಲ್ಲೆ
4 ವರ್ಷದ ಬಳಿಕ ದ್ವಿತಳಿ ರೇಷ್ಮೆಗೂಡಿನ ದರ ಪ್ರತಿ ಕೆ.ಜಿ.ಗೆ ₹1 ಸಾವಿರ ತಲುಪಿದೆ. ಮಿಶ್ರತಳಿ ದರವು ₹800 ದಾಟಿದೆ. ಮುಂದಿನ ದಿನಗಳಲ್ಲಿ ದರವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆಎಂ. ಮಲ್ಲಿಕಾರ್ಜುನ ಸ್ವಾಮಿ, ರೇಷ್ಮೆ ಜಂಟಿ ನಿರ್ದೇಶಕ, ರಾಮನಗರ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ
ದರ ಏರಿಕೆ ಉತ್ಪಾದನೆ ಇಳಿಕೆ
ರೇಷ್ಮೆಗೂಡಿಗೆ ಒಂದೆಡೆ ಬಂಪರ್ ಬೆಲೆ ಸಿಗುತ್ತಿದ್ದರೆ ಮತ್ತೊಂದೆಡೆ ಉತ್ಪಾದನೆ ಕುಸಿತ ಕಂಡಿದೆ. ಮಾರುಕಟ್ಟೆಗೆ ಐದು ತಿಂಗಳ ಹಿಂದೆ ಆವಕವಾಗುತ್ತಿದ್ದ 40–45 ಮೆಟ್ರಿಕ್ ಟನ್ ರೇಷ್ಮೆಗೂಡು ಇದೀಗ 20–25 ಟನ್‌ಗೆ ಕುಸಿದಿದೆ. ಹಾಗಾಗಿ ಗೂಡಿಗೆ ಉತ್ತಮವಾದ ದರ ಸಿಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ‘ಚಳಿಗಾಲದಲ್ಲಿ ಹಿಪ್ಪುನೇರಳೆ ಜೊತೆಗೆ ರೇಷ್ಮೆಗೂಡು ಉತ್ಪಾದನೆ ಇಳಿಕೆಯಾಗುವುದರಿಂದ ಮಾರುಕಟ್ಟೆಗೆ ಗೂಡಿನ ಆವಕ ತಗ್ಗಿದೆ. ಚಳಿಗಾಲದ ಋತುವಿನ ವಾತಾವರಣದಿಂದಾಗಿ ನವೆಂಬರ್–ಫೆಬ್ರುವರಿ ಅವಧಿಯಲ್ಲಿ ಹಿಪ್ಪುನೇರಳೆ ಸೊಪ್ಪು ಚನ್ನಾಗಿ ಬರುವುದಿಲ್ಲ. ಇದರಿಂದಾಗಿ ರೇಷ್ಮೆಹುಳು ಸಾಕಾಣಿಕೆ ಕುಸಿಯುತ್ತದೆ. ಏಪ್ರಿಲ್‌ನಿಂದ ಸೊಪ್ಪು ಮತ್ತು ಗೂಡು ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ರಾಮನಗರ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯ ಜಂಟಿ ನಿರ್ದೇಶಕ ಎಂ. ಮಲ್ಲಿಕಾರ್ಜುನ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಶಿಡ್ಲಘಟ್ಟದಲ್ಲೂ ಧಾರಣೆ ಏರಿಕೆ
ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕಳೆದ ಎಂಟತ್ತು ದಿನಗಳಿಂದ ರೇಷ್ಮೆಗೂಡಿನ ಧಾರಣೆಯಲ್ಲಿ ಏರಿಕೆ ಕಂಡಿದೆ.
ಶನಿವಾರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಿಶ್ರತಳಿಯ ಒಂದು ಕೆ.ಜಿ ಗೂಡು ಗರಿಷ್ಠ ₹822, ಬೈವೋಲ್ಟಿನ್ ಗೂಡು ಕೆ.ಜಿಗೆ ₹943 ಮಾರಾಟವಾಗಿದೆ. ಶುಕ್ರವಾರ ಮಿಶ್ರತಳಿ ಗೂಡು ಗರಿಷ್ಠ ₹833 ಮತ್ತು ಬೈವೋಲ್ಟಿನ್ ಗೂಡು ₹986ಕ್ಕೆ ಮಾರಾಟವಾಗಿವೆ.
ಗೂಡಿನ ಆವಕ ಕಡಿಮೆ ಆಗಿರುವುದು, ಕಚ್ಚಾ ರೇಷ್ಮೆ ಬೆಲೆ ಏರಿಕೆಯಿಂದ ಗೂಡಿನ ಬೆಲೆ ಹೆಚ್ಚಳವಾಗುತ್ತಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹಿಪ್ಪುನೇರಳೆ ಸೊಪ್ಪಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇದೂ ಕೂಡ ರೇಷ್ಮೆ ಗೂಡಿನ ಆವಕ ಕಡಿಮೆ ಆಗಲು ಕಾರಣವಾಗಿದೆ.
ಈಗ ಮಾರುಕಟ್ಟೆಗೆ ಬರುತ್ತಿರುವ ರೇಷ್ಮೆ ಗೂಡುಗಳು ಉತ್ತಮ ಗುಣಮಟ್ಟದಿಂದ ಕೂಡಿವೆ. ರೇಷ್ಮೆ ಬಿಚ್ಚಾಣಿಕೆ ತುಂಬಾ ಚೆನ್ನಾಗಿ ಆಗುತ್ತಿದೆ. ರೇಷ್ಮೆ ಗೂಡಿನ ಗುಣಮಟ್ಟದಿಂದ ರೀಲರುಗಳು ಕೊಂಚ ಹೆಚ್ಚಿನ ಬೆಲೆಗೆ ಹರಾಜು ಕೂಗುತ್ತಾರೆ.
‘ಯಾವ ಬೆಳೆಗೂ ಸಿಗದ ಉತ್ತಮ ವ್ಯವಸ್ಥೆಯನ್ನು ರೇಷ್ಮೆ ಬೆಳೆಗಾರರು ಹೊಂದಿದ್ದಾರೆ. ಬೆಲೆ ಹೆಚ್ಚುತ್ತಿದೆ. ಖಾಸಗಿಯಾಗಿ ರೇಷ್ಮೆ ಗೂಡನ್ನು ಮಾರಾಟ ಮಾಡುವ ಬದಲು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಉತ್ತಮ ಬೆಲೆ ಪಡೆಯಬಹುದು’ ಎಂದು ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕ ಎನ್.ಉಮೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.