ADVERTISEMENT

ಘರ್ಷಣ - ಮಂಥನ

ಡಾ.ಎಂ.ಎ ಜಯಚಂದ್ರ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST

ದಾರಿಯ ಬದಿಯಲ್ಲಿ ಬಿದಿರಿನ ದಟ್ಟವಾದ ಪೊದೆಗಳು. ಗಾಳಿ ಜೋರಾಗಿ ಬೀಸುತ್ತಿತ್ತು. ಬೊಂಬುಗಳು ಒಂದೊಕ್ಕೊಂದು ತಾಗಿ ಶಬ್ದವಾಗುತ್ತಿತ್ತು. ಅತಿ ತಿಕ್ಕಾಟ. ಜೋರು ಜೋರು ಶಬ್ದ. ಘರ್ಷಣೆ ತೀವ್ರಗೊಂಡು, ನೋಡು ನೋಡುತಿರುವಂತೆಯೇ, ಘರ್ಷಣೆಯು ಬೆಂಕಿಯ ರೂಪಕ್ಕೆ ಪರಿವರ್ತನೆಯಾಯಿತು. ಜ್ವಾಲೆ ಹಬ್ಬಿ ಪೊದೆ ಬೂದಿಯಾಯಿತು. ಇದನ್ನು ಕಣ್ಣಾರೆ ಕಂಡ ಮುಗ್ಧ ಯುವಕ ನಡುಗಿ ಹೋದ. ಅವನು ಕಾಡು ದಾಟಿ ಗ್ರಾಮವನ್ನು ಸಮೀಪಿಸಿದ. ಅದೇ ರೀತಿಯ ಶಬ್ದ ಕೇಳಿಸಿತು. ಕಂಪಿಸಿದ. ಶಬ್ದ ಯಾವ ಕಡೆಯಿಂದ ಬರುತ್ತಿತ್ತೋ ಅತ್ತ ಗಮನ ಹರಿಸಿದ. ಬಿದಿರ ಮೆಳೆಯಿಂದಲ್ಲ, ಒಂದು ಮನೆಯಿಂದ ಶಬ್ದ ಬರುತ್ತಿತ್ತು. ಅವನು ಗಾಬರಿಯಾದ. ಕಾಡಿನ ಬೆಂಕಿಯಿಂದ ಜನರ ಹಾನಿಯಾಗಲಿಲ್ಲ, ಆದರೆ ಮನೆಯ ಬೆಂಕಿಯಿಂದ ಏನೆಲ್ಲ ಆಗುವುದಿಲ್ಲ? ಅನಾಹುತ ತಪ್ಪಿಸಲು ಮನೆಯೊಳಗೆ ನುಗ್ಗಿದ. ನೋಡುತ್ತಾನೆ- ಒಬ್ಬ ಹೆಂಗಸು ಕಡೆಗೋಲಿನಿಂದ ಮೊಸರು ಕಡೆಯುತ್ತಿದ್ದಾಳೆ. ಅಲ್ಲಿಂದ ಶಬ್ದ ಬರುತ್ತಿದೆ. ತಕ್ಷಣ ಆ ಶಬ್ದವನ್ನು ನಿಲ್ಲಿಸು ನಿಲ್ಲಿಸು ಎಂದು ಅರಚಿದ. ಆಕೆ, ‘ಮಗ, ಯಾಕೆ ಏನಾಯಿತು?’- ಎಂದು ಕೇಳಿದಳು. ಆತ ಬಡಬಡನೆ ಬಿದಿರ ಪೊದೆಯ ಘಟನೆ ಹೇಳಿ, ಆ ಶಬ್ದವನ್ನು ನಿಲ್ಲಿಸು ಎಂದ. ಆಕೆಗೆ ಇವನ ಸ್ಥಿತಿ ಅರ್ಥವಾಯಿತು. ‘ಮಗು ಸ್ವಲ್ಪ ನಿಧಾನಿಸು, ಎಚ್ಚರವಾಗು. ಇಲ್ಲಿ ಬೆಂಕಿ ಬರುವುದಿಲ್ಲ, ನವನೀತ ಬರುವುದು’- ಎಂದಳು. ತಿನ್ನಲು ಕೊಂಚ ಬೆಣ್ಣೆ ಕೊಟ್ಟಳು. ತಿಂದು ಆನಂದಿತನಾದ. ಆಗ ಹೆಂಗಸು ಹೇಳಿದಳು- ‘ಕಾಡಿನ ಆ ಶಬ್ದದ ಹಿಂದೆ ಘರ್ಷಣೆ ಇತ್ತು; ಇಲ್ಲಿಯ ಶಬ್ದದ ಹಿಂದೆ ಮಂಥನವಿದೆ. ಘರ್ಷಣೆಯಿಂದ ಬೆಂಕಿ, ಮಂಥನದಿಂದ ನವನೀತ’.

ಇಂದಿನ ಸಂದರ್ಭಕ್ಕೆ ಈ ಪ್ರಸಂಗ ಉಪಯುಕ್ತವಾಗಿದೆ. ಘರ್ಷಣೆ ಮತ್ತು ಮಂಥನ ಇವೆರಡು ಬೇರೆಬೇರೆ ಕ್ರಿಯೆಗಳು, ಅವುಗಳ ಪರಿಣಾಮವೂ ಸಹ ಬೇರೆಬೇರೆ. ಬಿದಿರುಗಳು ಸೆಟೆದು ನಿಂತು ಪರಸ್ಪರ ಘರ್ಷಣೆಗೆ ಇಳಿದರೆ, ಅದರ ಪರಿಣಾಮ ಬೆಂಕಿ ಹೊತ್ತಿಕೊಳ್ಳವುದು. ಇಲ್ಲಿ ಸೆಟೆದು ನಿಲ್ಲುವ ಹಟವಿದೆ. ಆದರೆ ಮಂಥನಕ್ರಿಯೆಯಲ್ಲಿ ಒಂದು ಕೈಯಿಂದ ಹಗ್ಗ ಎಳೆಯುವಾಗ, ಇನ್ನೊಂದು ಕೈಯಿಂದ ಹಗ್ಗವನ್ನು ಸಡಿಲ ಬಿಡಲಾಗುವುದು. ಇಲ್ಲಿ ಹೊಂದಾಣಿಕೆಯಿದೆ. ಇದು ಜೀವನದ ಒಂದು ಮಹತ್ವದ ಸೂತ್ರ. ಈ ಸೂತ್ರದ ಮೂಲಕ ಭಗವಾನ್ ಮಹಾವೀರರು ಜೀವನಕ್ಕೆ ಪ್ರೇರಣೆ ನೀಡುವ ಅನೇಕಾಂತವಾದವನ್ನು ಹೇಳಿದ್ದಾರೆ. ಇದು ಜೈನದರ್ಶನದ ಹೃದಯ. ಮಹಾವೀರವಾಣಿಯ ಸಾರ. ದಾರ್ಶನಿಕರು ಅನೇಕಾಂತವಾದವನ್ನು ಸಿದ್ಧಾಂತ ಹಾಗೂ ಆದರ್ಶದ ರೂಪದಲ್ಲಿ ಕಂಡು ಪ್ರಶಂಸಿದ್ದಾರೆ. ಆದರೆ ಇದು ಕೇವಲ ದಾರ್ಶನಿಕ ಸಿದ್ಧಾಂತವಲ್ಲ, ಜೀವನ ವ್ಯವಹಾರದ ತತ್ವ. ಇದನ್ನು ಲೋಕ ವ್ಯವಹಾರದಲ್ಲಿ ಮೈಗೂಡಿಸಿಕೊಳ್ಳಬೇಕು. ಸಾಧ್ಯವಾದರೆ ಮಹಾತ್ಮ ಗಾಂಧೀಜಿ ಅವರಂತೆ ರಾಜಕೀಯದಲ್ಲಿ ಪ್ರಯೋಗಿಸಲು ಪ್ರಯತ್ನಿಸಬೇಕು. ಇದರಿಂದ ಅನೇಕ ಸಮಸ್ಯೆಗಳು ಪರಿಹಾರಗೊಳ್ಳುವುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT