ADVERTISEMENT

ನಂಬಿಕೆ-ಪ್ರೀತಿ-ದ್ವೇಷ

ಎಸ್.ಜಿ.ಸಿದ್ದರಾಮಯ್ಯ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST

ಕೆಲವರದು ತುಂಬಾ ಸೂಕ್ಷ್ಮ ಸ್ವಭಾವ. ಇವರು ಒಮ್ಮೆ ಒಬ್ಬರನ್ನು ನಂಬಿದರೆ ಮುಗಿಯಿತು, ಯಾವುದೇ ಕಾರಣಕ್ಕೂ ಯಾವ ಸಂದರ್ಭದಲ್ಲೂ ಅವರನ್ನು ಪ್ರಶ್ನಿಸದೆ ಒಳಕ್ಕೆ ತೆಗೆದುಕೊಳ್ಳುತ್ತಾ ಅವರ ಮಾತನ್ನು ದೈವವಾಣಿ ಎಂದು ಭಾವಿಸುವ ಸ್ವಭಾವದವರು. ಇಂಥ ವ್ಯಕ್ತಿಗಳ ನಡೆ ಹುಂಬತನದ ನಡೆ ಎಂದು ಹೇಳುವುದಕ್ಕಾಗುವುದಿಲ್ಲ. ಏಕೆಂದರೆ ನಂಬಿಕೆ ಹುಟ್ಟಿಸಿದ ವ್ಯಕ್ತಿ ತಮಗೆ ವಂಚನೆ ಮಾಡಿದ್ದಾನೆ ಎಂಬುದು ಅರಿವಿಗೆ ಬಂದರೆ ಇವರ ಪ್ರೀತಿ ದ್ವೇಷಕ್ಕೆ ತಿರುಗುತ್ತದೆ. ನಂಬಿಕೆಯ ಸಂದರ್ಭದಲ್ಲಿ ಎಂಥ ನಿವ್ರ್ಯಾಜ ಪ್ರೀತಿಯನ್ನು ಧಾರೆ ಎರೆಯುತ್ತಿದ್ದರೋ ಅದೇ ವ್ಯಕ್ತಿಯು ನಂಬಿಕೆಗೆ ಅರ್ಹನಲ್ಲವೆಂದು ನಯವಂಚಕನೆಂದು ಅರಿವಿಗೆ ಬಂದ ಮೇಲೆ ಅವನ ಬಗ್ಗೆ ಅಷ್ಟೇ ಕಟು ದ್ವೇಷವನ್ನು ತಾಳುತ್ತಾರೆ. ಈ ಬಗೆಯ ಎರಡು ತುದಿಗಳಲ್ಲಿ ವ್ಯವಹರಿಸುವ ಇಂಥ ಸೂಕ್ಷ್ಮಮತಿಗಳು ಆತುರ ಬುದ್ಧಿಯ ವಿವೇಚನಾಹೀನರು ಎಂದು ಹೇಳಲಿಕ್ಕಾಗದು. ಏಕೆಂದರೆ ತಮ್ಮಲ್ಲಿ ಹುಟ್ಟಿದ ನಂಬಿಕೆಗೆ ಪ್ರೀತಿಗೆ ಎರಡು ಬಗೆದ ನಡವಳಿಕೆಯನ್ನು ಪರಿಶೀಲಿಸಿ ಮನವರಿಕೆಯಾದ ನಂತರವೇ ಇವರಲ್ಲಿ ಈ ಬಗೆಯ ದ್ವೇಷ ಮೊಳೆಯುವುದು ಹೆಮ್ಮರವಾಗುವುದು. ಅಂದರೆ ‘ಅರಿವು’ ಇಲ್ಲದೆ ಯಾವ ಭಾವ ವಿನಿಮಯವನ್ನೂ ಇವರು ಮಾಡುವುದಿಲ್ಲ. ಇವರಿಗೆ ನಂಬಿಕೆ ವಿಶ್ವಾಸ ಎಂಬುದು ಕೇವಲ ವ್ಯವಹಾರವಲ್ಲ; ಅದೊಂದು ದೈವ ಸ್ವಭಾವ. ಅದಕ್ಕೆ ದ್ರೋಹ ಬಗೆಯುವುದು ಅಂದರೆ ಅದು ದೈವ ದ್ರೋಹದ ಕೃತ್ಯ. ಹೀಗಾಗಿ ಇವರ ಎರಡು ತುದಿಯ ನಿಲುವುಗಳು ಬೇರೆಯವರಿಗಿಂತ ಇವರಿಗೇ ಹೆಚ್ಚು ಸಂಕಟ ನೀಡುತ್ತವೆ. ಇವರು ಸೂರ್ಯ ಪ್ರಕಾಶದ ಸತ್ಯವನ್ನು ನೋಡಬಯಸಿದವರು.

ಆದರೆ ಜಗತ್ತು ಸೂರ್ಯ ಪ್ರಕಾಶವನ್ನು ರೆಪ್ಪೆಯ ನೆರಳಲ್ಲಿ ಕಾಣುತ್ತಿರುವುದು ವಸ್ತು ಸತ್ಯ. ಹೀಗಾಗಿಯೇ ಸತ್ಯವೆಂಬುದು ನೆರಳನೋಟದಲ್ಲಿ ಗೃಹೀತವಾಗುವುದು. ಇವರು ನೆರಳ ನೋಟವಿಲ್ಲದೆ ಪ್ರಖರ ಸತ್ಯಕ್ಕೆ ಕಣ್ಣೊಡ್ಡಿದವರು. ಹೀಗಾಗಿ ಇಂಥವರು ಸ್ವಯಂ ಸಂಕಟಿಗರು. ನಮ್ಮ ವಚನಕಾರರಲ್ಲಿ ಅಂಬಿಗರ ಚೌಡಯ್ಯ ಇಂಥ ಪ್ರಖರ ಸತ್ಯವನ್ನು ಅರಸಿ ನಡೆದ ಶರಣ. ಇವನು ಅನ್ಯ ಧರ್ಮದವರನ್ನು ಕುರಿತು ಟೀಕೆ ಮಾಡಿದ್ದು ಕಡಿಮೆ. ಅದಕ್ಕಿಂತ ಹೆಚ್ಚಾಗಿ ಲಿಂಗಾಯತ ದೀಕ್ಷೆ ಪಡೆದ ಮೇಲೆ ಆ ಧರ್ಮಕ್ಕೆ ನಿಷ್ಠೆಯಿಂದ ನಡೆದುಕೊಳ್ಳದೆ ನಂಬಿಕೆಗೆ ದ್ರೋಹ ಬಗೆದಂತೆ ನಡೆದುಕೊಳ್ಳುವ ಶರಣರ ಬಗ್ಗೆ ಕಟುಭಾವದಲ್ಲಿ ಮಾತನಾಡಿದ್ದಾನೆ. ಇಂಥ ನಂಬಿಕೆ ದ್ರೋಹಗಳ ಬಗ್ಗೆ ಇವನ ಸಿಟ್ಟು ಆಕ್ರೋಶ ಬೆಂಕಿಕೆಂಡದಷ್ಟು ತೀಕ್ಷ್ಣವಾದುದು. ತನಗೊಂದು ಪ್ರಾಣಲಿಂಗವೆಂದು ಕಂಕಣಕಟ್ಟಿ ಕರಸ್ಥಲಕ್ಕೆ ಬಂದ ಬಳಿಕ ಅದನು ನಂಬಲರಿಯದೆ ಮತ್ತನ್ಯದೈವಕ್ಕೆರಗಿದಡೆ ನಾಯಕ ನರಕ ಕಟ್ಟಿದ ಲಿಂಗವ ಕಿರಿದು ಮಾಡಿ ಬೆಟ್ಟದ ಲಿಂಗವ ಹಿರಿದು ಮಾಡಿ ಮಾಡುವ ಪರಿಯ ನೋಡಾ ಇಂತಪ್ಪ ಖೊಟ್ಟಿಮೂಳರ ಕಂಡಡೆ ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ

ಲಿಂಗದೀಕ್ಷೆಯೆಂಬುದು ನಂಬುಗೆಯ ಬದುಕು. ದೈವಸಮಾನ ಸಮತೆಯ ಬದುಕು. ಇದಕ್ಕೆ ವಿರುದ್ಧವಾಗಿ ನಂಬಿಕೆಗೆ ದ್ರೋಹ ಬಗೆಯುವ ಎಡಬಿಡಂಗಿಗಳ ಬಗ್ಗೆ ಅಂಬಿಗನಿಗೆ ಆಕ್ರೋಶ. ಏಕೆಂದರೆ ಇವನು ನಂಬುವವರನ್ನು ಒಂದೆ ಹುಟ್ಟಲಿ ಕಡೆಯಹಾಯಿಸುವ ನಂಬಿಗ ಚೌಡಯ್ಯ. ನಂಬಿಕೆ ದ್ರೋಹಿಗಳಿಗೆ ಮೆಟ್ಟಲಿ ಹೊಡೆಯುವ ಇವನ ಮಾತಿನ ಹಿಂದಿನ ಸತ್ಯನಿಷ್ಠೆ ಪ್ರಶ್ನಾತೀತವಾದುದು. ಇವನು ಲಿಂಗಾಯತದ ತೀಕ್ಷ್ಣವಾದಿ ಶರಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.