ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ, ಅತಿಥಿದೇವೋ ಭವ ಮುಂತಾದ ಮಾತುಗಳ ಮೂಲಕ ಪ್ರಾಚೀನಕಾಲದ ಋಷಿ-ಮುನಿಗಳು ತಮ್ಮ ಗುರುಕುಲಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಮರಳಿ ಮನೆಗೆ ತೆರಳುವ ವಿದ್ಯಾರ್ಥಿಗಳಿಗೆ ಉಪದೇಶ ನೀಡುತ್ತಿದ್ದರು. ಭಾರತೀಯ ಸಂಸ್ಕೃತಿಯು ಇಂತಹ ವಿಶಿಷ್ಟ ಆಚರಣೆಗಳಿಂದಲೇ ವಿಶ್ವವಿಖ್ಯಾತಿಯನ್ನು ಪಡೆದಿರುವುದು.
ತಾಯಿಯನ್ನು ದೇವರೆಂದು ತಿಳಿದುಕೊಳ್ಳುವವನಾಗು, ತಂದೆಯನ್ನು ದೇವರೆಂದು ತಿಳಿದುಕೊಳ್ಳುವವನಾಗು ಇತ್ಯಾದಿ ಮಾತುಗಳಿಂದ ಜನ್ಮಕೊಟ್ಟ ತಂದೆ-ತಾಯಿಗಳನ್ನು ಗೌರವಿಸುವಂತೆ ಆದೇಶಿಸುವ ಗುರುಗಳ ಮಾತು ಹಿಂದೆಂದಿಗಿಂತಲೂ ಇಂದು ಹೆಚ್ಚು ಅತ್ಯವಶ್ಯವಾಗಿದೆ. ಅದರಲ್ಲೂ ಪ್ರೇಮ-ತ್ಯಾಗಗಳ ಸಾಕಾರ ಮೂರ್ತಿಯಾಗಿರುವ ತಾಯಿಯನ್ನು ನಾವು ಯಾವ ಕಾಲಕ್ಕೂ ಮರೆಯಲಾಗದು, ಅಗೌರವಿಸಲಾಗದು. ತಂದೆಗಿಂತಲೂ ತಾಯಿಯ ಸ್ಥಾನ ಮಿಗಿಲಾದುದು. ಅಂತೆಯೇ ‘ಮಾತೃದೇವೋ ಭವ’ ಎಂಬ ಮಾತನ್ನು ಪ್ರಪ್ರಥಮವಾಗಿ ಉಪದೇಶಿಸಲಾಗಿದೆ.
ತಾಯಿಯನ್ನು ಜನನಿ, ಜನ್ಮದಾತೆ, ಮಾತೆ ಇತ್ಯಾದಿ ಶಬ್ದಗಳಿಂದ ಕರೆಯುತ್ತೇವೆ. ‘ಮಾನ್ಯತೇ ಪೂಜ್ಯತೇ ಯಾ ಸಾ ಮಾತಾ’ ಎಂಬ ಮಾತಿನಲ್ಲಿಯೇ ಗೌರವಿಸಲ್ಪಡುವವಳು, ಪೂಜಿಸಲ್ಪಡುವವಳು ಎಂಬ ಅರ್ಥವಿದೆ. ಅವಳು ನಮಗೆಲ್ಲ ಜನ್ಮಕೊಟ್ಟ ತಾಯಿ, ಮಾತು ಕಲಿಸಿದ ತಾಯಿ ಸಂಸ್ಕಾರ ಸಂಪನ್ನರಾಗಿಸಿದ ತಾಯಿ-ಅವಳೆಂದೂ ಸ್ವಾರ್ಥಕ್ಕಾಗಿ ಬದುಕಿದವಳಲ್ಲ. ತನ್ನ ಕರುಳಕುಡಿಗಳಿಗಾಗಿ ಬದುಕಿದವಳು. ಒಂಬತ್ತು ತಿಂಗಳು ಗರ್ಭದಲ್ಲಿ ಹೊತ್ತು ಹೆತ್ತು ಪಾಲನೆ ಪೋಷಣೆ ಮಾಡಿದ ತಾಯಿ, ಲಲ್ಲೆಮಾತುಗಳಿಂದ ನಡೆನುಡಿಗಳನ್ನು ಕಲಿಸಿದ ತಾಯಿ. ಹಾಗೆಯೇ ಅಖಂಡ ಭೂಮಂಡಲದ ಮಾನವತೆಯಲ್ಲಿಯೇ ನೆಲೆಸಿದವಳು ಆ ಮಹಾತಾಯಿ.
ಮಾನವ ಬದುಕಿನಲ್ಲಿ ಅಷ್ಟೇ ಏಕೆ? ಸಮಸ್ತ ಜೀವ ಸಂಕುಲದಲ್ಲಿಯೇ ತಾಯಿ ತನ್ನ ಕರುಳ ಕುಡಿಗಳಿಗಾಗಿ ಸರ್ವಸ್ವವನ್ನೂ ತ್ಯಾಗಮಾಡುವ ಅಪೂರ್ವ ಗುಣವನ್ನು ಕಾಣುತ್ತೇವೆ. ಈ ಕಾರಣಕ್ಕಾಗಿಯೇ ತಾಯಿಯನ್ನು ದೇವರಿಗಿಂತಲೂ ಮಿಗಿಲಾದವಳು, ದೇವರಿಗಿಂತಲೂ ಶ್ರೇಷ್ಠಳಾದವಳು ಎಂದು ಹೇಳಲಾಗಿದೆ. ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’, ಅತೋ ಹಿ ತ್ರಿಷು ಲೋಕೇಷು ನಾಸ್ತಿ ಮಾತೃ ಸಮೋ ಗುರುಃ ಮುಂತಾದ ಸೂಕ್ತಿಗಳಲ್ಲಿ ತಾಯಿಯ ಹಿರಿಮೆಯನ್ನು ಕಾಣಬಹುದಾಗಿದೆ.
ನಮ್ಮ ಪಾಲಿಗಂತೂ ತಾಯಿಯೇ ಮೊದಲ ಗುರು. ‘ಸಕಲರಿಗೂ ಮೊದಲು ಬೇಕಾದವಳು ತಾಯಿ, ತಾಯಿಯಿಂದಲೇ ನಮಗೆ ಮೂಡುವುದು ಬಾಯಿ, ನುಡಿಯೊಳಗೆ ಶ್ರೇಷ್ಠವಾದುದು ತಾಯಿ ಮಾತು, ದೇವರೂ ಕೇಳುವನು ಗುಡಿಯೊಳಗೆ ಕೂತು’-ಎಂದು ದಿನಕರ ದೇಸಾಯಿಯವರು ಹಾಡಿರುವುದು ಅತ್ಯಂತ ಸೂಕ್ತವೆನಿಸದಿರದು. ಅನೇಕ ವ್ಯಕ್ತಿಗಳ ಬದುಕಿಗೆ ಜನ್ಮಕೊಟ್ಟ ತಾಯಿಯೇ ಸ್ಫೂರ್ತಿಯಾಗಿರುವುದು ಇತಿಹಾಸದಿಂದ ತಿಳಿದು ಬರುವ ಸತ್ಯ.
ಇಂತಹ ತಾಯಿಯ ಸ್ಥಾನ ಹಿರಿದಾದುದು. ಹತ್ತು ಉಪಾಧ್ಯಾಯರಿಗಿಂತ ಒಬ್ಬ ಆಚಾರ್ಯ ಶ್ರೇಷ್ಠ, ನೂರು ಆಚಾರ್ಯರಿಗಿಂತ ಒಬ್ಬ ತಂದೆ ಶ್ರೇಷ್ಠ, ಸಾವಿರ ತಂದೆಗಳಿಗಿಂತ ಒಬ್ಬ ತಾಯಿ ಶ್ರೇಷ್ಠ ಎಂಬ ಅನುಭವ ವಾಣಿಯಂತೆ ತಾಯಿಯ ಸ್ಥಾನವನ್ನು ಯಾರಿಂದಲೂ ತುಂಬಲಾಗದು. ಅದೇ ತಾಯಿಯ ಹಿರಿಮೆ, ‘ಮಾತೃದೇವೋ ಭವ’ ಎಂಬ ಮಾತಿನ ಗರಿಮೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.