ADVERTISEMENT

ರಸವತ್ತಾದ ಜೀವನ

ಡಾ.ಎಂ.ಎ ಜಯಚಂದ್ರ
Published 31 ಮೇ 2018, 19:30 IST
Last Updated 31 ಮೇ 2018, 19:30 IST

ಜೀವನ ಎಂದರೇನು? ಎಂದು ಯಾರಾದರು ಕೇಳಿದರೆ, ಉತ್ತರ ಹೇಳುವುದು ಸುಲಭವಲ್ಲ. ಒಬ್ಬೊಬ್ಬರು ಒಂದೊಂದು ರೀತಿ ತಾವು ಕಂಡಂತೆ ಜೀವನದ ಬಗ್ಗೆ ವ್ಯಾಖ್ಯೆ ಮಾಡುತ್ತಾರೆ. ಕೆಲವರಿಗೆ ಕರ್ಮವೇ ಜೀವನ, ಇನ್ನು ಕೆಲವರಿಗೆ ಮೋಜುಮಸ್ತಿಯೇ ಜೀವನ, ಮತ್ತೆ ಕೆಲವರಿಗೆ ತ್ಯಾಗ-ತಪಸ್ಸೇ ಜೀವನ. ಒಬ್ಬೊಬ್ಬರು ಒಂದೊಂದಕ್ಕೆ ಒತ್ತು ಕೊಡುತ್ತಾರೆ.

ಆದರೆ ಬಹಳಷ್ಟು ಜನರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಕೆಲ ಮಹಾಶಯರ ಪ್ರಕಾರ "ರಕ್ತವೇ ಜೀವನ". ದೇಹದಲ್ಲಿ ಅದು ಹರಿಯುತ್ತಿದ್ದರೆ ಪ್ರಾಣವಿರುತ್ತೆ. ಪ್ರಾಣ ಹೋದರೆ ಜೀವನ ಖತಂ. ಪ್ರಾಣ ಇರುವವರೆಗೆ ಖುಷಿ. ಖುಷಿ ಇದ್ದರೆ ಕೆಲಸ ಮಾಡಲು ಹುರುಪು. ಹುರುಪು ಇದ್ದರೆ ಆರೋಗ್ಯ. ಹೀಗೆ ಕೆಲವರು ಪ್ರಾಣಕ್ಕೆ ಒತ್ತು ಕೊಡುತ್ತಾರೆ.

ಪ್ರಾಣವೂ ನಮ್ಮ ಹತ್ತಿರವಿದೆ, ಜೀವನವೂ ನಮ್ಮ ಹತ್ತಿರವಿದೆ. ಆದರೆ ಅದು ದೊಡ್ಡ ವಿಷಯವಲ್ಲ. ಏಕೆಂದರೆ ನಮ್ಮಂತೆಯೇ ನಾಯಿ-ನರಿಗಳಲ್ಲೂ, ಪಶು-ಪಕ್ಷಿಗಳಲ್ಲೂ, ಕ್ರಿಮಿ-ಕೀಟಗಳಲ್ಲೂ, ಗಿಡ-ಗೆಂಟೆಗಳಲ್ಲೂ ಪ್ರಾಣವಿದೆ, ಜೀವನವಿದೆ. ಅವುಗಳಂತೆ ನಾವೂ ಜೀವಿಸುವುದು ನಮ್ಮ ಜೀವನದ ಪರಿಪೂರ್ಣತೆಯಲ್ಲ. ಪ್ರಾಣದ ಜೊತೆ ಇನ್ನು ಏನೋ ಇರಬೇಕು ಎನಿಸುತ್ತದೆ. ಅದು ಏನು?

ADVERTISEMENT

ಅದೇ ಜ್ಞಾನ. ನಮ್ಮಲ್ಲಿ ಹಾಗೂ ಜಗತ್ತಿನ ಇತರ ಪ್ರಾಣಿಗಳಲ್ಲಿ ಇರುವ ಮೌಲಿಕ ಅಂತರವೇ ಜ್ಞಾನವಾಗಿದೆ. ಪ್ರಾಣಿಗಳಲ್ಲಿ ತಿಳಿವಳಿಕೆಯಿಲ್ಲ, ಹೇಗೋ ಜೀವನ ಸಾಗಿಸುತ್ತವೆ. ಮನುಷ್ಯ ಚಿಂತನ, ಮನನಶೀಲನು. ಚಿಂತನ, ಮನನಗಳು

ಜ್ಞಾನದ ಶಾಖೆಗಳು. ಈ ಜ್ಞಾನವಿದ್ದರೆ ಮಾತ್ರ ಪ್ರಾಣಕ್ಕೆ ಅರ್ಥ ಬರುವುದು. ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ನಮ್ಮ ಜೀವನದ ಜೊತೆಯಲ್ಲೇ ಇನ್ನೊಬ್ಬರ ಜೀವನ ವಿಚಾರ ಮಾಡುವುದು- ಜ್ಞಾನ. ಸ್ವ-ಪರ ಹಿತ ಸಾಧಿಸುವುದು- ಜ್ಞಾನ. ಮೌಲ್ಯಯುತ ಜೀವನ ಹೇಗೆ ನಡೆಸಬೇಕು ಎಂಬ ಜ್ಞಾನ, ನಮ್ಮೆಲ್ಲರ ಒಳಗಿದೆ. ಯಾರ ಬುದ್ಧಿ, ವಿವೇಕ ಜಾಗೃತವಾಗಿರುವುದೋ ಅವರು ಈ ಅಂತರ್ಜ್ಞಾನದಿಂದ ಸಂಪನ್ನರಾಗಿರುವರು. ಅವರ ಜ್ಞಾನವೇ ಸಾರ್ಥಕವಾದುದು. ಆದ್ದರಿಂದಲೇ ಕೆಲವರು "ಜ್ಞಾನವೇ ಜೀವನ" ಎನ್ನುವರು. ಕೆಲವರು "ಸತ್ಯವೇ ಜೀವನ" ಎನ್ನುವರು. ಹಾಗಾದರೆ ಸತ್ಯ ಎಂದರೇನು? ಜೀವನದ ಯಥಾರ್ಥ ಜ್ಞಾನ. ಇದನ್ನು ತಿಳಿದವನು ಸುಖಿ, ತಿಳಿಯದವನು ದುಃಖಿ. ಹುಟ್ಟಿದವನು ಸಾಯುತ್ತಾನೆ ಎಂಬುದು ಒಂದು ಸತ್ಯ. ಈ ಸತ್ಯವನ್ನು ಕಂಡೂ ಕಾಣದಂತೆ ಉಪೇಕ್ಷಿಸುತ್ತೇವೆ. ಯಾಕೆ ಹೀಗೆ? "ಬರುವಾಗ ಏನನ್ನು ತೆಗೆದು ಕೊಂಡು ಬಂದಿಲ್ಲ, ಹೋಗುವಾಗ ಏನನ್ನು ತೆಗೆದುಕೊಂಡು ಹೋಗಲ್ಲ"- ಎಂಬುದು ಮತ್ತೊಂದು ಸತ್ಯ. ಇದು ಚೆನ್ನಾಗಿ ಗೊತ್ತಿದ್ದು, "ಎಲ್ಲ ನನಗೆ ನನಗೆ ಅಂತ ಸಂಗ್ರಹಿಸುತ್ತೇವಲ್ಲ ಏಕೆ? ಯಾರಿಗಾಗಿ?" ಎಲ್ಲವನ್ನು ಬಿಟ್ಟು ಹೋಗುವಾಗ, ಎಲ್ಲವನ್ನು ಕೂಡಿಡುವ ಪ್ರವೃತ್ತಿಯಾದರೂ ಏಕೆ?"'

ಈ ಸತ್ಯಜ್ಞಾನ ಕೇವಲ ಗೊತ್ತಾದರೆ ಸಾಲದು. ಅದು ಆಚರಣೆಯಲ್ಲಿ ಬರಬೇಕು. ಆಗ ಮಾತ್ರ ಜೀವನ ಸಾರ್ಥಕ. ಆದುದರಿಂದ ಪ್ರಾಣ-ಜ್ಞಾನ-
ಸತ್ಯ-ಆಚರಣೆ ಈ ನಾಲ್ಕೂ ಸಮರಸವಾಗಿ ಸೇರಿದಾಗ ಮಾತ್ರ ನಮ್ಮ ನಿಮ್ಮೆಲ್ಲರ ಜೀವನ ರಸವತ್ತಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.