ADVERTISEMENT

ಪ್ರೇಮ ಪಥದ ಹುತಾತ್ಮರು

ಫಕೀರ್ ಮಹಮ್ಮದ ಕಟ್ಪಾಡಿ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST

ಹುತಾತ್ಮತ್ವವೆಂಬುದು ವಿಶೇಷವಾಗಿ ಸ್ವರ್ಗದಿಂದ ನೀಡಲಾದ ದಿವ್ಯಕಾಣಿಕೆ. ಕುರಾನ್ ಸಂದೇಶದ ಮೂಲಕ ರೂಪುಗೊಂಡ ‘ಪ್ರೇಮಪಥದ ಹುತಾತ್ಮ’ ಎಂಬ ಶಬ್ದವು ಧರ್ಮಯುದ್ಧದಲ್ಲಿ ಹೋರಾಡಿದವನು ಅಥವಾ ಪ್ರಿಯತಮೆಯನ್ನು ಸೇರಲೆಂದು ಹೊರಟ ಪ್ರೇಮಿ, ಪ್ರೇಮದ ಮುಳ್ಳುಗಳ ಹಾದಿಯಲ್ಲಿ ಘಾಸಿಕೊಂಡು ಮೃತ್ಯುವನ್ನು ಅಪ್ಪಿಕೊಂಡ ಸಾವಿರಾರು ಭಗ್ನ ಹೃದಯಿಗಳು ಮುಳ್ಳುಗಳ ಪೊದೆಯಲ್ಲಿ ಸುಂದರ ಕೆಂಪು ಹೂಗಳಾಗಿ ಅರಳುವ ಸಂರ್ದರ್ಭದಲ್ಲಿ ಹುಟ್ಟಿಗೊಂಡಿದೆ ಎಂದು ಖ್ಯಾತ ಉರ್ದು ಕವಿ ಮಿರ್ಜಾ ಗಾಲಿಬ್ ತಮ್ಮ ಪ್ರೇಮಕಾವ್ಯದಲ್ಲಿ ವ್ಯಕ್ತಪಡಿಸಿದ್ದಾರೆ.

ಸೂಫಿ ಅಧ್ಯಾತ್ಮಿಗಳು ಕುರಾನ್‌ನ ಸೂರಃ 3ರ 167ನೇ ವಾಕ್ಯದಲ್ಲಿ "ದೇವರ ಮಾರ್ಗದಲ್ಲಿ ಹುತಾತ್ಮರಾದವರನ್ನು ಸತ್ತುಹೋದವರೆಂದು ಹೇಳಬೇಡಿ, ಅವರು ತಮ್ಮ ಪ್ರಭುವಿನ ಬಳಿ ಜೀವಂತವಾಗಿ ಆಹಾರ ಪಡೆಯುತ್ತಿದ್ದಾರೆ" ಎಂಬ ಸಂದೇಶವನ್ನು ಆಧರಿಸಿ ಹುತಾತ್ಮತ್ವವನ್ನು ವ್ಯಾಖ್ಯಾನಿಸುತ್ತಾರೆ. ಪ್ರೇಮ ಪಥದಲ್ಲಿ ಹುತಾತ್ಮರಾದವರು ಎಲ್ಲಕ್ಕಿಂತಲೂ ಶ್ರೇಷ್ಠರಾದವರು ಎಂದು ಪರಿಗಣಿಸುತ್ತಾರೆ.

ಹಜ್ರತ್ ಶಿಬ್ಲಿಯವರಿಗೆ ಮನ್ಸೂರ್ ಅಲ್ ಹಲ್ಲಾಜರ ಗಲ್ಲು ಶಿಕ್ಷೆಯ ಸಂದರ್ಭದಲ್ಲಿ ಇಂತಹ ಮರಣದಂಡನೆಗೆ ಪರಿಹಾರವೇನು ಎಂಬ ಜಿಜ್ಞಾಸೆಗೆ ಉತ್ತರವಾಗಿ ಕೇಳಿಬಂದ ‘ಹದೀಸೆ ಖುದ್ಸಿ’ ಅಶರೀರವಾಣಿ "ನನ್ನ ಮೇಲಿನ ಪ್ರೇಮದ ಪಥದಲ್ಲಿ ಪ್ರಾಣ ಕಳೆದುಕೊಂಡವರ ರಕ್ತಪರಿಹಾರ ಧನ ನಾನೇ ಆಗಿದ್ದೇನೆ". ಅಲ್ಲಾಹನ ಮೇಲಿನ ಪ್ರೇಮದ ಹಾದಿಯಲ್ಲಿ ಜೀವಕಳೆದುಕೊಂಡವರಿಗೆ ಅಲ್ಲಾಹನೇ ಪರಿಹಾರ ನೀಡುತ್ತಾನೆ, ಅವರು ಅಲ್ಲಾಹನಿಂದ ಅಗಲಲಾರರು.

ADVERTISEMENT

ಈ ಅಭಿಪ್ರಾಯಗಳು ವ್ಯಾಪಕವಾಗಿ ಹರಿದಾಗ ಸೂಫಿ ಅಧ್ಯಾತ್ಮಿಗಳು ತಮ್ಮ ಹಾದಿಯಲ್ಲಿ ಎದುರಾಗುವ ತೀವ್ರವಾದ ನೋವಿನ ಸಂದರ್ಭಗಳನ್ನು ಎದುರಿಸಲು ಹೆಚ್ಚುಹೆಚ್ಚಾಗಿ ಮುಂದಾಗತೊಡಗಿದರು. ಇದರಿಂದ ತಮಗೆ ಅಲ್ಲಾಹ ತನ್ನ ವಿಶೇಷವಾದ ಅನುಕಂಪದ ಕೃಪೆಯನ್ನು ಕರುಣಿಸುತ್ತಾನೆಂದು ನಂಬಿದರು. ತನ್ನ ಪ್ರೀತಿಯಲ್ಲಿ ಪ್ರಾಮಾಣಿಕತೆ ಹೊಂದಿರದವನು ಗೆಳೆಯನ ಕೃಪೆಗೆ ಅರ್ಹನಲ್ಲವೆಂದು ತಿಳಿಯಲಾಯಿತು.

ಈ ಅಭಿಪ್ರಾಯಗಳು ವ್ಯಾಪಕವಾಗಿ ಸೂಫಿ ಕವಿಗಳ ಮೇಲೆ ಪ್ರಭಾವ ಬೀರಿ ಇನ್ನಷ್ಟು ಪ್ರಚಾರಪಡೆಯಿತು. ಘಾಸಿಗೊಳಿಸಿದವನೇ ವಾಸಿಪಡಿಸುತ್ತಾನೆಂಬ ಮಾತು ಮೂಡಿಬಂತು. ‘ನೋವೆಂದರೆ ಖದ್ದು ಅವನೇ ಆಗಿದ್ದಾನೆ’ ಎಂಬ ಸಂತ ಹಲ್ಲಾಜರ ಮಾತು ಮತ್ತೆ ಪ್ರಾಮುಖ್ಯತೆ ಪಡೆದುಕೊಂಡಿತು. ಹೆಚ್ಚುಹೆಚ್ಚು ಸನಿಹವಾದವನು, ಅವನಿಗೆ ಇಷ್ಟವಾದವನನ್ನು ಆರಿಸಿ ಲೌಕಿಕವಾದ ಆಸೆ ಆಕಾಂಕ್ಷೆಗಳಿಗೆ ತುತ್ತಾಗಿಸಿ ತೀವ್ರವಾದ ಪರೀಕ್ಷೆಗಳಿಗೆ ಒಳಪಡಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.