ADVERTISEMENT

ಕ್ಯಾನ್ಸರ್ ಮಕ್ಕಳ ಚಾಚಾ

ಡಾ.ಆಶಾ ಬೆನಕಪ್ಪ
Published 9 ಮಾರ್ಚ್ 2013, 19:59 IST
Last Updated 9 ಮಾರ್ಚ್ 2013, 19:59 IST
ಕ್ಯಾನ್ಸರ್ ಮಕ್ಕಳ ಚಾಚಾ
ಕ್ಯಾನ್ಸರ್ ಮಕ್ಕಳ ಚಾಚಾ   

ನನ್ನ ತಂದೆಯನ್ನು `ಅಪ್ಪಾಜಿ' ಎಂದು ಕರೆಯುವುದು ನನಗಿಷ್ಟ. ನನ್ನ ಮನೆಯ ಹೆಸರೂ `ಅಪ್ಪಾಜಿ' ಎಂದೇ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳಿಗೊಬ್ಬರು ಅಪ್ಪಾಜಿ ಇದ್ದಾರೆ, ಅವರು ಡಾ. ಎಲ್. ಅಪ್ಪಾಜಿ. ಕಳೆದ 29 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಅವರು ಈಗ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ವೈದ್ಯಕೀಯ ಮೇಲ್ವಿಚಾರಕರು.

ಬಾಲ್ಯಾವಸ್ಥೆಯ ಕ್ಯಾನ್ಸರ್ ಅರಿತುಕೊಳ್ಳಲು ನನ್ನ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು 15 ದಿನಗಳ ಕಾಲ ಕಿದ್ವಾಯಿ ಆಸ್ಪತ್ರೆಗೆ ನಿಯೋಜಿಸಲಾಗಿತ್ತು. ಅವರು ಡಾ. ಅಪ್ಪಾಜಿ ಮತ್ತು ಅವರ ವಿಶಿಷ್ಟ ರೌಂಡ್ಸ್‌ಗಳ (ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ವೈದ್ಯರು ಪ್ರತಿದಿನ ನೋಡಲು ಹೋಗುವುದನ್ನು ರೌಂಡ್ಸ್ ಎಂದು ಕರೆಯಲಾಗುತ್ತದೆ) ಬಗ್ಗೆ ಹಲವು ಬಾರಿ ಹೇಳಿದ್ದರು. ಅವರಿಂದ ಎಷ್ಟು ಸಲ ಕೇಳಿದ್ದರೂ ನನಗೆ ತೃಪ್ತಿಯಾಗಲಿಲ್ಲ. ಫೆಬ್ರುವರಿ 21ರ ಗುರುವಾರ, `ಬಂದ್' ದಿನದಂದು ಡಾ. ಅಪ್ಪಾಜಿಯವರ ರೌಂಡ್ಸ್‌ಗೆ  ಹಾಜರಾಗಲೇಬೇಕೆಂದು ನಿರ್ಧರಿಸಿದೆ.

ನನ್ನ ಎಂ.ಡಿ. ಮುಗಿದ ಬಳಿಕ ಡಿ.ಎಂ. ಗ್ರಂಥಿ ವಿಜ್ಞಾನ (ಕ್ಯಾನ್ಸರ್) ಮಾಡಲು ಉದ್ದೇಶಿಸಿದ್ದೆ. ನಾನು ಅದನ್ನು ಪರಿಗಣಿಸುವುದಕ್ಕೆ ಮುನ್ನವೇ- `ಅದರ ಬಗ್ಗೆ ಯೋಚಿಸಲೂ ಹೋಗಬೇಡ. ಹಗಲೂ ರಾತ್ರಿ ನೀನು ಎಳೆಯ ಮಕ್ಕಳು ನೋವಿನಿಂದ ನರಳುವುದನ್ನು ಮತ್ತು ಸಾಯುವುದನ್ನು ನೋಡಬೇಕಾಗುತ್ತದೆ. ನಿನ್ನ ಸೂಕ್ಷ್ಮ ಮನಸ್ಸು ಈ ಕೋರ್ಸ್‌ಗೆ ಸರಿಹೋಗುವುದಿಲ್ಲ' ಎಂದು ನನ್ನ ಅಪ್ಪಾಜಿ ಹೇಳಿದ್ದರು.

ಬಾಲ್ಯದ ಕ್ಯಾನ್ಸರ್ ಕುರಿತ ಪುಸ್ತಕವೊಂದರಲ್ಲಿನ ಪೀಠಿಕೆಯಿದು- `ಕೆಲವೊಮ್ಮೆ ಗುಣಪಡಿಸಲು, ಹೆಚ್ಚು ಬಾರಿ ಕಡಿಮೆಗೊಳಿಸಲು ಮತ್ತು ಸದಾ ನೆಮ್ಮದಿಯಿಂದಿರಿಸಲು...'. ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಆರೈಕೆ ಮಾಡುವ ವೈದ್ಯರಿಗೆ ಈ ಮಾತು ಮನನಯೋಗ್ಯವಾದುದು. ಶಿಶು ಗ್ರಂಥಿ ವಿಜ್ಞಾನ ಕ್ಷೇತ್ರವನ್ನು ವಿಶಿಷ್ಟಗೊಳಿಸುವ ಭರವಸೆ, ದೃಢತೆ, ತಳಮಳ, ಹತಾಶೆ ಮತ್ತು ಅನುಕಂಪಗಳ ಸಹಮಿಶ್ರಣವನ್ನು ಈ ಮಾತು ಸೂಕ್ತವಾಗಿ ವಿವರಿಸುತ್ತದೆ.

ಬಾಲ್ಯಾವಸ್ಥೆ ಕ್ಯಾನ್ಸರ್ ರೋಗನಿರ್ಣಯ ಮಾಡುವುದು ಅತ್ಯಂತ ನೋವಿನ ಸಂಗತಿ. ರೋಗನಿರ್ಣಯದ ಬಳಿಕ ಅದನ್ನು ಮಗುವಿನ ಪೋಷಕರಿಗೆ ತಿಳಿಸುವುದು ಇನ್ನೂ ಕಷ್ಟದ ವಿಷಯ. ಬೆಳೆಯುವ ಮೊಳಕೆಯಲ್ಲೇ `ಮರಣ ದಂಡನೆ'ಯನ್ನು ಘೋಷಿಸಿದಂತೆ. ಏಳು ವರ್ಷದ ಖುಷಿಯ ತಾಯಿಗೆ ತನ್ನ ಮಗಳು ಲ್ಯುಕೇಮಿಯಾಕ್ಕೆ ತುತ್ತಾಗಿದ್ದಾಳೆಂದು ತಿಳಿಸಿದಾಗ ಅವರು ಪಾತಾಳಕ್ಕೆ ಕುಸಿದುಹೋದಂತಾಗಿದ್ದರು. ಮತ್ತೊಂದು ಕಳವಳಕಾರಿಯೆಂದರೆ ಇದು ದೀರ್ಘಕಾಲ ಎಳೆಯುವ ವೆಚ್ಚದಾಯಕ ಮತ್ತು ನೋವು ನೀಡುವ ಚಿಕಿತ್ಸೆ- ಹೀಗೆಂದೇ ಅಲ್ಲವೆ ನಾನು ಅಂದುಕೊಂಡದ್ದು?

ಕಿದ್ವಾಯಿಗೆ ನಿಯೋಜನೆಗೊಂಡಿರುವ ನನ್ನ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಅನಿತಾ, ಪ್ರತಿದಿನ ಬೆಳಿಗ್ಗೆ 10ಕ್ಕೆ ಸರಿಯಾಗಿ ಕಪೂರ್ ವಾರ್ಡ್ ಬ್ಲಾಕ್‌ನಿಂದ ಡಾ. ಅಪ್ಪಾಜಿಯವರ ದಿನದ ರೌಂಡ್ಸ್ ಶುರುವಾಗುತ್ತದೆ ಎಂದು ಹೇಳಿದರು. ಅಲ್ಲಿಗೆ ನಾನು ವೇಗವಾಗಿ ಹೆಜ್ಜೆಹಾಕಿದೆ. ಅಲ್ಲಿ ಉತ್ತರ ಕರ್ನಾಟಕ ಮೂಲದ ಕಾವಲುಗಾರ ತಡೆದು ನಿಲ್ಲಿಸಿ, ಚಪ್ಪಲಿಗಳನ್ನು ತೆಗೆಯುವಂತೆ ಹೇಳಿದರು. ಆಸ್ಪತ್ರೆ ಹೊರಭಾಗದಲ್ಲೇ ಚಪ್ಪಲಿಗಳನ್ನು ತೆಗೆದ ನನಗೆ ದೇವಸ್ಥಾನ ಪ್ರವೇಶಿಸುತ್ತಿರುವ ಅನುಭವ.

ಅಲ್ಲಿನ ವಾತಾವರಣ ನಿರ್ಮಲವೂ, ಪ್ರಶಾಂತವೂ ಮತ್ತು ಶುಭ್ರವೂ ಆಗಿತ್ತು. ಬೇರೆ ಕಟ್ಟಡದೊಳಗೆ ತಪ್ಪಾಗಿ ಹೆಜ್ಜೆ ಇರಿಸಿದೆನೆ ಎಂದು ಒಂದುಕ್ಷಣ ಚಕಿತಗೊಂಡೆ. ಇಲ್ಲ, ನಾನು ಸರಿಯಾದ ಕಟ್ಟಡದೊಳಗೇ ಹೊಕ್ಕಿದ್ದೆ. ಅಲ್ಲಿ ಡಾ. ಅಪ್ಪಾಜಿ ಮತ್ತವರ ಸಂಪೂರ್ಣ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ತಂಡವನ್ನು ಭೇಟಿಯಾದೆ. ಅವರು ನನ್ನನ್ನು `ಡಾ. ಆಶಾರ ತಂದೆ ಡಾ. ದಿ.ಜಿ. ಬೆನಕಪ್ಪ ನನ್ನ ಮೇಷ್ಟ್ರು' ಎಂದು ಸರಳವಾಗಿ ತಮ್ಮ ತಂಡಕ್ಕೆ ಪರಿಚಯಿಸಿದರು.

ಪ್ರತಿ ರೋಗಿಯ ಹೆಸರು, ಆತ/ಆಕೆ ಯಾವ ಊರಿನಿಂದ ಬಂದವರು, ಯಾವ ಬಗೆಯ ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ ಇತ್ಯಾದಿ ವಿಚಾರಗಳ ಸ್ಥೂಲ ಪರಿಚಯದೊಂದಿಗೆ ರೌಂಡ್ಸ್ ನಡೆಯುತ್ತಿತ್ತು. ನಿರುತ್ಸಾಹದ, ನೋವಿನಿಂದ ನರಳುತ್ತಿರುವ ಮಕ್ಕಳಿಂದ, ತಮ್ಮ ಮಗುವಿನ ಪರಿಸ್ಥಿತಿ ಹಾಗೂ ಹಣಕಾಸಿನ ಸಮಸ್ಯೆಯ ಕುರಿತ ಚಿಂತೆಯಿಂದ ಮುಖದಲ್ಲಿ ದುಗುಡ ಭಾವ ಹೊತ್ತು ಅಳುತ್ತಿರುವ ಪೋಷಕರಿಂದ  ಕ್ಯಾನ್ಸರ್ ವಾರ್ಡ್ ತುಂಬಿರುತ್ತದೆ ಎಂದೇ ನಾನು ಭಾವಿಸಿದ್ದೆ.

ಆದರೆ ಅಲ್ಲಿ ಕಂಡ ಸನ್ನಿವೇಶ ಭಿನ್ನವಾಗಿತ್ತು. ಅಲ್ಲಿದ್ದ ಪ್ರತಿ ಮಕ್ಕಳೂ ಸಂತೋಷದ ನಗುಮೊಗ ಹೊತ್ತಿದ್ದವು. ತಮ್ಮ ರೋಗ, ಆ ದಿನ ತಾವು ಒಳಗಾಗಬೇಕಾದ ಪರೀಕ್ಷೆಗಳು ಮತ್ತು ಚಿಕಿತ್ಸೆಗಳ ಬಗ್ಗೆ ಸ್ವತಃ ಹೇಳುತ್ತಿದ್ದರು. ಆರ್‌ಟಿ, ಪಿಎಸ್, ಬಿಎಂ ಎಂಬಿತ್ಯಾದಿ ಪದಗಳನ್ನು ಕೇಳಿದಾಗ ಅವು ಏನೆಂದು ನನಗೆ ಆಶ್ಚರ್ಯವಾಗುತ್ತಿತ್ತು. ಒಂದು ಕ್ಯಾನ್ಸರ್ ಪೀಡಿತ ಮಗು ನನ್ನ ಸಹಾಯಕ್ಕೆ ಧಾವಿಸಿತು.

`ಆರ್‌ಟಿ' ಎಂದರೆ ರೇಡಿಯೊ ಥೆರಪಿ (ರೇಡಿಯೇಷನ್ ಬಳಸಿ ಕ್ಯಾನರ್‌ಗೆ ಚಿಕಿತ್ಸೆ ನೀಡುವ ಒಂದು ವಿಧಾನ). `ಪಿಎಸ್'- ಬಾಹ್ಯ ಲೇಪನ ಮತ್ತು `ಬಿಎಂ' ಎಂದರೆ ಮೂಳೆ ಮಜ್ಜೆ. ಇವು ಕ್ಯಾನ್ಸರ್ ಪ್ರಗತಿ ಮತ್ತು ಚಿಕಿತ್ಸೆಗೆ ಸಿಗುತ್ತಿರುವ ಪ್ರತಿಕ್ರಿಯೆಯನ್ನು ಪತ್ತೆಹಚ್ಚಲು ಇರುವ ವಿಧಾನಗಳು. ಕಪಾಲ ರೇಡಿಯೊ ಥೆರಪಿಗಾಗಿ (ಮಿದುಳಿನಲ್ಲಿರುವ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಬಳಸುವ ವಿಕಿರಣ) ತಲೆಯನ್ನು ನುಣ್ಣಗೆ ಬೋಳಿಸಿಕೊಂಡ ಸುಮಾರು ಮೂರು ವರ್ಷಕ್ಕೂ ಮೇಲ್ಪಟ್ಟ ಮಕ್ಕಳು ಹೆಚ್ಚಿನವರಾಗಿದ್ದರು. ಶೇಕಡಾ 40ರಷ್ಟು ಬಾಲ್ಯಾವಸ್ಥೆ ಕ್ಯಾನ್ಸರ್‌ನಲ್ಲಿ ಸ್ಥಾನಪಡೆದುಕೊಂಡಿರುವ ಲ್ಯುಕೆಮಿಯಾ ಚಿಕಿತ್ಸೆಗಾಗಿ ಸ್ಟೀರಾಯ್ಡಗಳನ್ನು ಬಳಸಿದ ಪರಿಣಾಮವಾಗಿ ಈ ಎಲ್ಲಾ ಮಕ್ಕಳ ಕೆನ್ನೆಗಳೂ ದಪ್ಪಗಾಗಿದ್ದವು.

ನಮ್ಮ ರೌಂಡ್ಸ್‌ನಲ್ಲಿ 13 ವರ್ಷದ ಕ್ಯಾನ್ಸರ್ ರೋಗಿಯೊಬ್ಬ ಭಾಗವಹಿಸಿದ್ದನು. ಡಾ. ಅಪ್ಪಾಜಿ ಅವರಿಗೆ ರೋಗನಿರ್ಣಯ ಮಾತ್ರವಲ್ಲ ಚಿಕಿತ್ಸೆಯ ವಿಧಾನಗಳು ಮತ್ತು ಹೆಚ್ಚುವರಿ ಪರೀಕ್ಷೆಗಳ ಕುರಿತೂ ಅರಿವಿದೆ. ಅವರು ಪ್ರತಿ ಮಗುವನ್ನೂ ಖುದ್ದಾಗಿ ತಪಾಸಣೆ ಮಾಡುತ್ತಾರೆ. ಕೇಸ್‌ಷೀಟ್‌ನಲ್ಲಿ ಸ್ವತಃ ಟಿಪ್ಪಣಿಗಳನ್ನು ಬರೆಯುತ್ತಾರೆ. ತಮ್ಮ ಜೇಬಿನೊಳಗೆ ಪರೀಕ್ಷೆ ಆದೇಶ ಪತ್ರವನ್ನು ಸದಾ ಇಟ್ಟುಕೊಂಡಿರುತ್ತಾರೆ, ಅಗತ್ಯವಿದ್ದಾಗ ನಿಂತ ಸ್ಥಳದಲ್ಲೇ ಅದನ್ನು ಬರೆದುಕೊಡುತ್ತಾರೆ.

ಮತ್ತೊಂದು ಅಚ್ಚರಿಯೆಂದರೆ ವೈದ್ಯ-ಸಾಮಾಜಿಕ ಕಾರ್ಯಕರ್ತರೂ ರೌಂಡ್ಸ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಇದರಿಂದ ಮಕ್ಕಳಿಗೆ ಲಭ್ಯವಿರುವ ವಿವಿಧ ಉಚಿತ ಯೋಜನೆಗಳ ಲಾಭ ದೊರಕಲು ಸಾಧ್ಯವಾಗುತ್ತಿದೆ. ಶಿಕ್ಷಿತ/ಅಶಿಕ್ಷಿತ ಪೋಷಕರು ಅಲ್ಲಿ ಕಚೇರಿಗಳಿಗೆ ಮತ್ತು ಹಣಕಾಸಿನ ಬಿಡುಗಡೆಯ ಕಡತಗಳಿಗೆ ಅಲೆದಾಡಬೇಕಾಗಿಲ್ಲ. ಅಲ್ಲಿರುವ ನೊಂದ ಪೋಷಕರಿಗೆ ಮತ್ತು ರೋಗಿಗಳಿಗೆ ಆಪ್ತ ಸಲಹಾ ಗೃಹವಿದೆ. ರೋಗ ಹಾಗೂ ಅದರ ಚಿಕಿತ್ಸೆಯನ್ನು ಹೇಗೆ ನಿರ್ವಹಣೆ ಮಾಡಬೇಕೆಂದು ಮನದಟ್ಟು ಮಾಡಲು ಮನೋವೈದ್ಯರು ಸಹಾಯ ಮಾಡುತ್ತಾರೆ.

ಡಾ. ಅಪ್ಪಾಜಿಯವರ ದಿನಚರಿಯಿದು. ಬೆಳಿಗ್ಗೆ 9 ರಿಂದ 10ರವರೆಗೆ ಕಚೇರಿ ಕೆಲಸ. 10ಕ್ಕೆ ಸರಿಯಾಗಿ ಕಪೂರ್ ಮಕ್ಕಳ ಬ್ಲಾಕ್ ತಲುಪುತ್ತಾರೆ. ಅಲ್ಲಿನ ಆಟದ ಮೈದಾನದಲ್ಲಿ ಆಡುತ್ತಿರುವ ಮಕ್ಕಳು ಅವರನ್ನು ನೋಡಿದೊಡನೆ ತಮ್ಮ ಪ್ರೀತಿಯ `ಚಾಚಾ'ರ ಆಶೀರ್ವಾದ ಪಡೆಯಲು ತಮ್ಮ ಹಾಸಿಗೆಗಳತ್ತ ಓಡುತ್ತಾರೆ. ಕಪೂರ್ ಬ್ಲಾಕ್‌ನಿಂದ ವಿಶೇಷ ವಾರ್ಡ್‌ಗಳತ್ತ ಅವರ ಹೆಜ್ಜೆ. ತೀವ್ರ ನಿಗಾ ಘಟಕದೆಡೆಗೆ, ಶಾಂತಿಧಾಮ, ಮುಖ್ಯ ಬ್ಲಾಕ್ ಮುಗಿಸಿ 11.30ಕ್ಕೆ ಓಪಿಡಿ ತಲುಪುತ್ತಾರೆ. ಅವರು ನಡೆಯುವಾಗ ನಾನು ಓಡುತ್ತಿದ್ದೆ! ಓಪಿಡಿ ನಂತರ ಊಟಕ್ಕೆ ಪುಟ್ಟ ವಿರಾಮ. ಮಧ್ಯಾಹ್ನ 2.30ಕ್ಕೆ ಮರಳಿ ರೌಂಡ್ಸ್.

ಆ ವೇಳೆಗೆ ಮಕ್ಕಳು ಬೆಳಿಗ್ಗೆ ಕಳುಹಿಸಿದ ತಮ್ಮ ರಕ್ತ/ ಮಜ್ಜೆ ಮೂಳೆ ಪರೀಕ್ಷೆಯ ವರದಿಗಾಗಿ ಕಾಯುತ್ತಿರುತ್ತಾರೆ. ಅಲ್ಲಿ ನಡೆಯುವ ಪರೀಕ್ಷೆಗಳ ವರದಿ 24 ಗಂಟೆಯೊಳಗೆ ಲಭ್ಯವಾಗುತ್ತದೆ. ಅವರು ಹೇಳುವುದು, “ಕ್ಯಾನ್ಸರ್‌ನೊಳಗೆ ಕಳೆದುಕೊಳ್ಳುವುದಕ್ಕೆ ನಮಗೆ ಸಮಯವಿರುವುದಿಲ್ಲ. ಇಲ್ಲಿ ಪ್ರತಿಕ್ಷಣವೂ ಮುಖ್ಯ.”  ರೋಗಿಯ ಹಾಸಿಗೆಯಿಂದ ಹೊರಡುವ ಮೊದಲು ಆ ಮಗು ಆರೋಗ್ಯಪೂರ್ಣ ತಿಂಡಿಯನ್ನು ತಿಂದಿದೆಯೇ ಎಂದು ಖಚಿತಪಡಿಸಿಕೊಂಡೇ ಹೊರಡುವುದು. ಅಲ್ಲಿನ ಪ್ರತಿ ಮಕ್ಕಳು ಬೆಳಿಗ್ಗೆ ಏನು ತಿಂದಿದ್ದೇವೆ ಎಂಬುದನ್ನು ಅವರಿಗೆ ಹೇಳುತ್ತಾರೆ.

ಕೇಸ್‌ಶೀಟ್‌ಗೆ ವರದಿಯನ್ನು ಹಚ್ಚುವ ಮಕ್ಕಳಿಗೆ ಆ ವರದಿಯ ಬಗ್ಗೆ ಹೆಚ್ಚು ಕಡಿಮೆ ತಿಳಿದಿರುತ್ತದೆ. ಪುಟಾಣಿ ಹುಡುಗ ಶ್ರೀನಿವಾಸ್‌ನ ಕಣ್ಣೀರ ಕಟ್ಟೆಯೊಡೆದಿತ್ತು. ವರದಿಯಂತೆ ಆತ ಐಟಿ (ಇಂಟ್ರಾಥೆಕಲ್- ಎಂದರೆ ಮಿದುಳಿನಲ್ಲಿರುವ ಕ್ಯಾನ್ಸರ್ ಕೋಶಗಳಿಗೆ ತಲುಪುವಂತೆ ಔಷಧವನ್ನು ದೇಹದ ಹಿಂಬದಿಯ ರಂಧ್ರದ ಮೂಲಕ ನೀಡುವುದು) ಚಿಕಿತ್ಸೆಗೆ ಒಳಗಾಗಬೇಕಿತ್ತು.

ಡಾ. ಅಪ್ಪಾಜಿ ಅದ್ಭುತ ಶಿಕ್ಷಕರೂ ಹೌದು. ಪ್ರತಿದಿನ 2.30ರಿಂದ 4ರವರೆಗೆ ರಾಜ್ಯದ ಮೂಲೆ ಮೂಲೆಯಿಂದ ನಿಯೋಜನೆಗೊಂಡ ವಿದ್ಯಾರ್ಥಿಗಳಿಗೆ ಅವರು ಬೋಧಿಸುತ್ತಿದ್ದರು. ಬಳಿಕ ಓಪಿಡಿಗೆ ಹಿಂದಿರುಗುತ್ತಿದ್ದರು. ಅವರು ಮನೆಗೆ ಹೋಗುತ್ತಾರೋ ಇಲ್ಲವೋ ಎನ್ನುವಷ್ಟು ನಾನು ಅಚ್ಚರಿಗೊಳಗಾಗಿದ್ದೆ. ಅವರು ಮನೆಗೆ ಹಿಂದಿರುಗುತ್ತಿದ್ದದ್ದೇ ಸಂಜೆ 7ರ ನಂತರ.

`ಅನಿಕೇತನ'ದಲ್ಲಿದ್ದ ಆರು ವರ್ಷದ ಹೇಮಾಶ್ರೀ ಎಲ್‌ಕೆಜಿ ಓದುತ್ತಿದ್ದಳು. ಆಕೆ ಇವಿಂಗ್ ಟ್ಯೂಮರ್‌ನಿಂದ (ಮೂಳೆ ಗೆಡ್ಡೆ) ಬಳಲುತ್ತಿದ್ದಳು. ಡಾ. ಅಪ್ಪಾಜಿ ಒಪ್ಪಂದ ಅರ್ಜಿಯಲ್ಲಿದ್ದ ಆಕೆಯ ಸಹಿಯನ್ನು ತೋರಿಸಿದರು. “ಈ ಮಗುವಿನ ಚಿಕಿತ್ಸೆಗಾಗಿ ಒಪ್ಪಂದದ ಪತ್ರಕ್ಕೆ ಸಹಿ ಹಾಕುವಂತೆ ತಂದೆಯನ್ನು ಕೇಳಿದೆ. ಆದರೆ ಈ ಪುಟ್ಟ ಮಗು- `ಡಾಕ್ಟರ್ ನಾನು ಸಹಿ ಹಾಕಲೇ?' ಎಂದು ಕೇಳಿತು” ಎಂದರು. ಆಕೆ ಕೇಸ್‌ಶೀಟ್‌ನಲ್ಲಿ `ಹೇಮಾಶ್ರೀ' ಎಂದು ಸಹಿ ಹಾಕಿದ್ದಳು.

ಈ ಪುಟ್ಟ ಕಂದನ ಎಲ್ಲಾ ಅಗತ್ಯಗಳನ್ನೂ ಈ ವೈದ್ಯರೇ ನಿರ್ವಹಿಸುತ್ತಿದ್ದರು. ಹಾಸನದವಳಾದ ಎಂಟು ವರ್ಷದ ಶಮೀನಾ ಬಾನು ಡಾ. ಅಪ್ಪಾಜಿ ಅವರಿಗೆ ಹೇಳಿದ್ದು, `ನನ್ನ ಹೊಟ್ಟೆಯಲ್ಲಿ ಗೆಡ್ಡೆ ಇದೆ. ದಯವಿಟ್ಟು ನನ್ನನ್ನು ಗುಣಪಡಿಸಿ'. ಆ ಗೆಡ್ಡೆ ವಿಲ್ಮ್ಸ್ ಟ್ಯೂಮರ್ ಮೂರನೇ ಹಂತದಲ್ಲಿತ್ತು (ಮೂತ್ರಪಿಂಡ ಗೆಡ್ಡೆ). ಶಿವಮೊಗ್ಗದಿಂದ ಬಂದ ಮಕ್ಕಳನ್ನು ನನಗೆ ಅವರು `ನಿಮ್ಮ ಜಿಲ್ಲೆಯ ಮಗು' ಎಂದೇ ಪರಿಚಯಿಸುತ್ತಿದ್ದರು.

ಲ್ಯೂಕೇಮಿಯಾದಿಂದ ಬಳಲುತ್ತಿದ್ದ ನಾಲ್ಕು ವರ್ಷದ ಧನುಶ್ ಕಿಮೊಥೆರಪಿಗೆ ಒಳಗಾಗಿದ್ದ. ತನ್ನ ಅಂಗಿಯನ್ನು ಮೇಲಕ್ಕೆತ್ತಿ ಕಿಮೊದ ಜಾಗವನ್ನು ನನಗೆ ತೋರಿಸಿದ. ನನಗೆ ಅದರ ಬಗ್ಗೆ ಯಾವ ಅರಿವೂ ಇರಲಿಲ್ಲ. ಬಳಿಕ ಡಾ. ಅಪ್ಪಾಜಿ ಕ್ಯಾನ್ಸರ್ ಔಷಧ (ಕಿಮೊಥೆರಪಿ) ರಕ್ತನಾಳಗಳ ಮೂಲಕ ನೀಡಬೇಕಾಗುತ್ತದೆ. ಮಕ್ಕಳ ರಕ್ತನಾಳಗಳು ಮಿದುವಾಗಿರುವುದರಿಂದ ಅವು ನಾಶವಾಗುವ ಸಾಧ್ಯತೆಯಿರುತ್ತದೆ, ದೀರ್ಘಕಾಲದ ಚಿಕಿತ್ಸೆಯಿಂದ ನಾಳಗಳಿಲ್ಲದೆ ಬದುಕಬೇಕಾಗುತ್ತದೆ. ಲೋಕಲ್ ಅನಸ್ತೇಶಿಯಾ ನೀಡಿ ಈ ಪುಟ್ಟ ಗ್ಯಾಜೆಟ್ ಅನ್ನು ಚರ್ಮದ ಅಡಿಯಲ್ಲಿ ಇರಿಸಲಾಗುತ್ತದೆ.

ಅದನ್ನು ನಾಳಕ್ಕೆ ಸಂಪರ್ಕಿಸಿ ಅದರ ಮೂಲಕ ನೋವುಂಟಾಗದಂತೆ ಔಷಧ ನೀಡಬಹುದು ಮತ್ತು ಇದರಿಂದ ಹಲವಾರು ನಾಳಗಳನ್ನು ರಕ್ಷಿಸಲು ಸಾಧ್ಯ ಎಂದು ವಿವರಿಸಿದರು. ಈ ದ್ವಾರದ ಮೂಲಕ ಪರೀಕ್ಷೆಗಾಗಿ ರಕ್ತವನ್ನು ತೆಗೆದುಕೊಳ್ಳಬಹುದು ಮತ್ತು ರಕ್ತ ವರ್ಗಾವಣೆಯನ್ನೂ ಮಾಡಬಹುದು. ಇದರಿಂದ ರಂಧ್ರಗಳು, ನೋವು ಮತ್ತು ನಾಳಗಳು ಉಳಿಯಲು ಸಾಧ್ಯ. ಈ ಗ್ಯಾಜೆಟ್‌ನ ಬೆಲೆ ರೂ. 15,000. ಬಡಜನರು ಇದಕ್ಕಾಗಿ ಹೇಗೆ ಹಣವನ್ನು ಹೊಂದಿಸುತ್ತಾರೆ? ಡಾ. ಸುಮನ್ ಗುಪ್ತ, ಡಾ. ಮುನಿರೆಡ್ಡಿ, ಡಾ. ಆಶಿಶ್ ಪ್ರಾರಂಭಿಸಿದ ಮಕ್ಕಳಲ್ಲಿ ಗುಣಪಡಿಸಬಹುದಾದ `ಕ್ಯಾನ್ಸರ್ ಟ್ರಸ್ಟ್' (ಸಿಸಿಕೆ ಟ್ರಸ್ಟ್) ಎಂಬ ವಿಶಿಷ್ಟ ಟ್ರಸ್ಟ್ ಈ ಗ್ಯಾಜೆಟ್‌ಗಳ ಪ್ರಾಯೋಜಕತ್ವ ಮಾಡುತ್ತವೆ ಎಂದು ಅವರು ತಿಳಿಸಿದರು.

`ಸರ್, ವಾರ್ಡ್‌ಗಳು ಎಷ್ಟು ಶುಭ್ರವಾಗಿವೆ' ಎಂದೆ. ಅವರು ನಕ್ಕರು. ಅಲ್ಲಿನ ತಾಯಂದಿರು ಶುಚಿತ್ವದ ಕೆಲಸವನ್ನು ನಿರ್ವಹಿಸುತ್ತಾರೆ. ಕ್ಯಾನ್ಸರ್ ಹೊಂದಿರುವ ಮಕ್ಕಳು ಸೋಂಕಿಗೆ ತುತ್ತಾಗುವ ಸಂಭವಿರುತ್ತದೆ. ಏಕೆಂದರೆ ಅವರಲ್ಲಿನ ಸೋಂಕು ವಿರುದ್ಧ ಹೋರಾಡುವ ಕೋಶಗಳು ದುರ್ಬಲವಾಗಿರುತ್ತವೆ.

ನಾವು ಸ್ವಾಗತ ಕೊಠಡಿಯ ಸಮೀಪ ಬಂದೆವು. ಬೆಳಿಗ್ಗೆ ಮಕ್ಕಳೆಲ್ಲರೂ ಅಲ್ಲಿನ ಕ್ಲಾಸ್‌ರೂಂನಲ್ಲಿದ್ದದ್ದನ್ನು ನಾವು ನೋಡಿದ್ದೆವು. `ಕ್ಯಾನ್ಸರ್ ಚಿಕಿತ್ಸೆ ತುಂಬಾ ದೀರ್ಘಕಾಲದ್ದು (9 ವಾರ-2 ವರ್ಷ). ಹೀಗಾಗಿ ಅವರು ತಮ್ಮ ವಿದ್ಯಾಭ್ಯಾಸವನ್ನು ಕಳೆದುಕೊಳ್ಳಬಾರದು' ಎನ್ನುವುದು ಅವರ ಕಳಕಳಿ. ಅವರಿಗೆ ಶಿಕ್ಷಣ ಮತ್ತು ಆಟ ಎರಡರ ಅಗತ್ಯವೂ ಇರುತ್ತದೆ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗುವ ಸಮೀಕ್ಷಾ ಫೌಂಡೇಷನ್ ವಾರಕ್ಕೆ ಮೂರು ದಿನ ಒಬ್ಬ ಶಿಕ್ಷಕರನ್ನು ಅಲ್ಲಿಗೆ ಕಳುಹಿಸುತ್ತದೆ. ಅಲ್ಲಿ ನಡೆಯುವ ಮೇಲ್ವಿಚಾರಣೆಯ ಚಟುವಟಿಕೆಗಳನ್ನು ನೋಡಿ ನನ್ನ ಹೃದಯ ತುಂಬಿ ಬಂತು. ಪುಟ್ಟ ಹುಡುಗ ರಕ್ಷಿತ್ ತನ್ನ ಬಣ್ಣಬಣ್ಣದ ಪ್ರಮಾಣಪತ್ರವನ್ನು ನನಗೆ ತೋರಿಸಿ ಸಂಭ್ರಮಿಸಿದ.

ಮಕ್ಕಳ ವಾರ್ಡ್‌ನಲ್ಲಿ ಲೈಬ್ರರಿ, ಆಟಿಕೆಗಳು ಮತ್ತು ಮಕ್ಕಳು - ವಯಸ್ಕರಿಗಾಗಿ ಸಂಗೀತ, ಎಲ್ಲವೂ ಇವೆ. ಚಿತ್ರಕಲೆ, ಮ್ಯಾಜಿಕ್ ಶೋ ಮತ್ತು ಮಡಿಕೆ ಕುಡಿಕೆಗಳನ್ನು ಮಾಡುವುದು ಇತ್ಯಾದಿ ಚಟುವಟಿಕೆಗಳಿಗೂ ಅಲ್ಲಿ ಜಾಗವಿದೆ. ಸಮೀಕ್ಷಾ ನೆರವು ನೀಡುವವರಿಗೆ ಎದುರು ನೋಡುತ್ತಿದೆ (www.samikshafoundation.org). ಕಾರಿಡಾರಿನ ಬದಿಯ ಸಣ್ಣ ಜಾಗದಲ್ಲಿ ಸರ್ವ ಧರ್ಮೀಯರಿಗಾಗಿ ದೇವಸ್ಥಾನವಿದೆ.

ಅವರು ತುಂಬಾ ವೇಗವಾಗಿ ನಡೆಯುತ್ತಿದ್ದರು. ಕಷ್ಟಪಟ್ಟು ಏದುರಿಸುಬಿಡುತ್ತಾ ಹಿಂಬಾಲಿಸಿ ಅವರನ್ನು ಹಿಡಿದೆ. `ಸರ್ ಈ ಮಕ್ಕಳೆಲ್ಲಾ ತುಂಬಾ ಬಡವರು. ನೀವು ಹೇಗೆ ನಿರ್ವಹಣೆ ಮಾಡುತ್ತೀರಿ?'. ಅವರು ಸರ್ಕಾರದಿಂದ ಸಿಗುವ ಅನೇಕ ಯೋಜನೆಗಳನ್ನು ತೆರೆದಿಟ್ಟರು. ಅನುದಾನವನ್ನು ಅವರು ಅದ್ಭುತವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಯಶಸ್ಸಿನ ರಹಸ್ಯವೇನು? ಎಂದಾಗ ಅವರ ಉತ್ತರ, `ಸರ್ಕಾರದ ಯೋಜನೆಗಳು ಮತ್ತು ಅನುದಾನವನ್ನು ಸಮರ್ಪಕವಾಗಿ ಬಳಸುವುದು'.

ಕಿದ್ವಾಯಿಯ ಅನೇಕ ಸಿಬ್ಬಂದಿ ಅದರಿಂದ ಹೊರಬಂದು ಖಾಸಗಿ ವಾಣಿಜ್ಯ ಔಷಧೋದ್ಯಮಕ್ಕೆ ಕೈಹಾಕಿದರೆ, ಡಾ. ಅಪ್ಪಾಜಿ ಮತ್ತವರ ತಂಡ ಬಡವರ ಸೇವೆಗಾಗಿ ಅಲ್ಲಿಯೇ ಉಳಿದುಕೊಂಡಿದೆ. ನನ್ನ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ಕಾರ್ಪೊರೇಟ್ ಕ್ಯಾನ್ಸರ್ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು. ಅವರ ಚಿಕಿತ್ಸೆ ಭಾರಿ ಬೆಲೆಯನ್ನೇ ತೆರುವಂತೆ ಮಾಡಿತು.

`ಪ್ರಜಾವಾಣಿ'ಯಲ್ಲಿ ಸೇವೆ ಸಲ್ಲಿಸಿದ್ದ ಟಿ.ಎಸ್. ರಾಮಚಂದ್ರರಾವ್ ಅವರ ನೆನಪಿನಲ್ಲಿ ಅನಿಕೇತನ ಸಂಕೀರ್ಣಕ್ಕೆ ಅಗತ್ಯ ಉಪಕರಣ ಮತ್ತು ಸೌಲಭ್ಯಗಳನ್ನು ಶ್ರೀಮತಿ ಲಲಿತಾ ಟಿಎಸ್‌ಆರ್ ರಾವ್ ಒದಗಿಸಿದ್ದಾರೆ.

`ಸರ್, ನಾನು ಅಂದುಕೊಂಡಿದ್ದೆ, ಕ್ಯಾನ್ಸರ್ ಎಂದರೆ...'. ಅವರು ನಕ್ಕರು. `ಶಿಶುಗಳಲ್ಲಿ ಕಾಣಿಸುವ ಕ್ಯಾನ್ಸರ್ ಅನ್ನು ಸುಲಭವಾಗಿ ವಾಸಿ ಮಾಡಬಹುದು. ನಮ್ಮ ಸಂಸ್ಥೆ ವಿಶ್ವದ ಅತ್ಯುತ್ತಮ ಕ್ಯಾನ್ಸರ್ ಸಂಸ್ಥೆಗಳ ರೋಗ ಗುಣಪಡಿಸುವ ಪ್ರಮಾಣಕ್ಕೆ ಸರಿಸಮನಾಗಿದೆ' ಎಂದರು. ಸುಮಾರು 90 ರೋಗಿಗಳನ್ನು ನಾನು ಆ ದಿನದ ರೌಂಡ್ಸ್‌ನಲ್ಲಿ ನೋಡಿದೆ.
`ಸರ್, ನಿಮಗೆ ಏನಾದರೂ ಕೆಟ್ಟ ಅನುಭವಗಳು ಎದುರಾಗಿವೆಯೇ?' ಎಂದೆ. `ಇಲ್ಲ' ಎಂದು ಸ್ಪಷ್ಟವಾಗಿ ಹೇಳಿದರು. ಇಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಲ್ಲಿ ಪ್ರತಿ ವರ್ಷ ಇಬ್ಬರಿಂದ ಮೂವರು ಮದುವೆಯಾಗುತ್ತಾರೆ. ಕೋಲ್ಕತ್ತಾ, ಇಂದೋರ್ ಮುಂತಾದ ದೂರದ ಊರುಗಳಿಂದ ಅವರನ್ನು ಆಹ್ವಾನಿಸಲು ಬರುತ್ತಾರೆ.

ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ಮಕ್ಕಳು ನೋವನ್ನು ಸಹಿಸಿಕೊಳ್ಳಬಲ್ಲರೇ ಎನ್ನುವ ನನ್ನ ಪ್ರಶ್ನೆಗೆ- `ಡಾ. ಆಶಾ, ಬಾಲ್ಯಾವಸ್ಥೆ ಕ್ಯಾನ್ಸರ್‌ನಲ್ಲಿನ ವಿಶೇಷ ಅಂಶವೆಂದರೆ ಪುನರುತ್ಪತ್ತಿ ಮಾಡುವ ಅಂಗಗಳು ಮಡಿಚಿಕೊಂಡಿರುವುದಿಲ್ಲ. ಮತ್ತು ಕ್ಯಾನ್ಸರ್ ಔಷಧಗಳು ಅವರನ್ನು ಕೊಲ್ಲುವುದಿಲ್ಲ. ಕ್ಯಾನ್ಸರ್ ಕೋಶಗಳು ಬಲು ವೇಗವಾಗಿ ಬೆಳೆಯುತ್ತವೆ ಹಾಗೂ ಕ್ಯಾನ್ಸರ್ ಚಿಕಿತ್ಸೆ ಈ ವೇಗವಾಗಿ ಬೆಳೆಯುವ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ' ಎಂದು ಅಪ್ಪಾಜಿ ಹೇಳಿದರು.

ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯು ಬಾಂಬೆಯ ರಾಜ್ಯಪಾಲರಾಗಿದ್ದ ರಫಿ ಅಹ್ಮದ್ ಕಿದ್ವಾಯಿ ಅವರ ನೆನಪಿನಲ್ಲಿ ಭಾರತ ಸರ್ಕಾರ ಸ್ಥಾಪಿಸಿದ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ. ಇದಕ್ಕಾಗಿ 20 ಎಕರೆ ಜಾಗವನ್ನು ನೀಡಿದ್ದಲ್ಲದೆ, ರೇಡಿಯೊಥೆರಪಿ ಯಂತ್ರವನ್ನು ಕೊಳ್ಳಲು ಒಂದು ಲಕ್ಷ ರೂಪಾಯಿ ನೀಡಿದ್ದರು. ಇದರ ಸ್ಥಾಪನೆಯಲ್ಲಿ ಕನಸುಗಾರ ಡಾ. ಕೃಷ್ಣ ಭಾರ್ಗವ ಪ್ರಮುಖ ಹೊಣೆ ಹೊತ್ತವರು.

ಅದು ಬದ್ಧತೆಯ ತಳಹದಿಯನ್ನು ನಂಬಿದ ಸರ್ಕಾರಿ ಸಂಸ್ಥೆ. ಇಲ್ಲಿನ ಮಕ್ಕಳ ಕ್ಯಾನ್ಸರ್ ವೈದ್ಯರ ತಂಡದಲ್ಲಿ ಇರುವುದು 5-6 ಪರಿಣಿತರು ಮಾತ್ರ. ಆದರೆ ಅವರೊಂದಿಗೆ ತಾಯಂದಿರು ಮತ್ತು ಮಕ್ಕಳು ಕೈಜೋಡಿಸುವ ವಿಶಿಷ್ಟ ಪರಿಸರದಿಂದ ಈ ಕೊರತೆ ಮರೆಯಾಗುತ್ತದೆ. ಪಾರ್ಕಿಂಗ್ ಸಹಾಯಕರಿಂದ ಸೆಕ್ಯುರಿಟಿ ಗಾರ್ಡ್‌ವರೆಗೆ, ಎಲ್ಲರೂ ಬದ್ಧತೆ, ಪ್ರೀತಿ, ಅನುಕಂಪ, ಸಮರ್ಪಣಾ ಮನೋಭಾವ ಹೊಂದಿದ್ದಾರೆ. ಅಲ್ಲಿದ್ದ ಪ್ರತಿಯೊಬ್ಬ ದಾದಿಯರೂ ನನಗೆ `ಫ್ಲಾರೆನ್ಸ್ ನೈಟಿಂಗೇಲ್'ನಂತೆ ಕಂಡರು.

ಕಿದ್ವಾಯಿಯಲ್ಲಿ ಪರಿಚಿತರಾದ ಡಾ. ಅವಿನಾಶ್ `ನಮ್ಮ ಆಸ್ಪತ್ರೆಗೆ ನೀವು ಭೇಟಿ ನೀಡಿದ ಗಳಿಗೆ ಅತ್ಯಂತ ಪ್ರಶಸ್ತವಾದ ದಿನ. ಫೆಬ್ರುವರಿ 15 ಅಂತರರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನ ಮತ್ತು ಮಾರ್ಚ್ 4 ವಿಶ್ವ ಕ್ಯಾನ್ಸರ್ ದಿನ' ಎಂದರು.

ಡಾ. ಅಪ್ಪಾಜಿ, ಡಾ. ಅರುಣಾ, ಡಾ. ಪದ್ಮ, ಡಾ. ಕವಿತಾ, ಡಾ. ಅವಿನಾಶ್ ಮತ್ತು ಡಾ. ಸುಮಾ ಅವರನ್ನು ಭೇಟಿ ಮಾಡಿ, ಆ ಮುದ್ದಿನ ಮಕ್ಕಳನ್ನು ನೋಡಿದಾಗ ಕ್ಯಾನ್ಸರ್ ಕುರಿತಿದ್ದ ವೈಯಕ್ತಿಕ ಭಯ ತೊಲಗಿದ್ದು ಮಾತ್ರವಲ್ಲ, ನನ್ನಲ್ಲಿ ಅರ್ಪಣಾ ಮನೋಭಾವದ ಮರುಸ್ಥಾಪನೆಯಾಯಿತು.

ಎರಡು ವರ್ಷದಲ್ಲಿ ಡಾ. ಅಪ್ಪಾಜಿ ಮತ್ತು ಡಾ. ಅರುಣಾ ಇಬ್ಬರೂ ನಿವೃತ್ತರಾಗುತ್ತಾರೆ ಎನ್ನುವುದನ್ನು ತಿಳಿದು ಬೇಸರವಾಯಿತು. ಡಾ. ಅರುಣಾ ತಮ್ಮ ಕೆಲಸದಲ್ಲಿ ಎಷ್ಟು ತೊಡಗಿಕೊಂಡಿದ್ದಾರೆಂದರೆ ಮದುವೆಯಾಗುವುದನ್ನೂ ಅವರು ಮರೆತಿದ್ದಾರೆ! ನನ್ನ ಆಯಸ್ಸನ್ನು ಅವರಿಗೆ ನೀಡಬೇಕು ಎನ್ನುವುದು ನನ್ನ ಆಸೆ. ಸಾವಿರಾರು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಅನುಕೂಲವಾಗಲಿ.

ಮನ್ನಣೆ ಮತ್ತು ಪ್ರಶಸ್ತಿಗಳಿಂದ ಡಾ. ಅಪ್ಪಾಜಿ ದೂರವೇ ಇದ್ದಂತೆ ಕಾಣುತ್ತಿದ್ದರು. ಅವರು ತಮ್ಮದೇ ಪ್ರಪಂಚದಲ್ಲಿ ಸಾರ್ಥಕ ಮನೋಭಾವದಿಂದ ವಿಹರಿಸುತ್ತಿದ್ದಾರೆ.

ಸರ್ಕಾರಿ ಸಾಹಸದ ಈ ಆದರ್ಶಪ್ರಾಯ ಕೇಂದ್ರಕ್ಕೆ ನನ್ನ ಪ್ರಣಾಮಗಳು.

ashabenakappa@yahoo.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.