ADVERTISEMENT

ಕಟ್ಟಬೇಕಿದೆ...

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST
ವೀರಣ್ಣ ತಿಪ್ಪಣ್ಣ ಮಡಿವಾಳರ
ವೀರಣ್ಣ ತಿಪ್ಪಣ್ಣ ಮಡಿವಾಳರ   

– ವೀರಣ್ಣ ತಿಪ್ಪಣ್ಣ ಮಡಿವಾಳರ, ಕಲಕೇರಿ, ಮುಂಡರಗಿ

ವಚನ ಬಂಡಾಯದ ಕಾವಲು ಕಾದ ಸಮುದಾಯ ನನ್ನದು. ಇಂದು ಮತ್ತದೇ ಬಿಸಿಲು ಕಾಲದ ತುಸು ನೀರಲ್ಲಿ ಕಂಡವರ ಬಟ್ಟೆ ತೊಳೆಯುತ್ತ ಕಾಲು ಸೆಳೆತು ನಿತ್ರಾಣಗೊಂಡು ಹನಿ ನೀರಿಗಾಗಿ ಬಾಯಾರಿದೆ. ‘ಅಗಸನಲ್ಲಯ್ಯ ನೀನು ಅರಸ’ ಎಂದ ಬಸವಣ್ಣನಂತೆ ಈಗಲೂ ಕೆಲವರು ಹೇಳುತ್ತಿರುತ್ತಾರೆ ‘ಮಡಿವಾಳರ ಕಾಯಕ ಪವಿತ್ರವಾದದ್ದು’. ನಾವು ಮಾತ್ರ ಅಲ್ಲಿಯೇ ಕುಂತಿದ್ದೇವೆ ಎಂದಿನಿಂದಲೋ.

ಬಸವ ಕಲ್ಯಾಣದಲ್ಲಿ ಅಚಲವಾಗಿ ಕೂತ ಬಸವಣ್ಣನ ಬೃಹತ್ ಪ್ರತಿಮೆ ಇದೆ. ಅದರ ಕೆಳಗಡೆ ಒಂದು ಬದಿಯಲ್ಲಿ ಕುದುರೆ ಮೇಲೆ ಕುಳಿತ ಮಾಚಿದೇವನ ಮೂರ್ತಿ ಇದೆ. ಕೈಯೆತ್ತಿ ಬಿಚ್ಚುಗತ್ತಿಯ ಹಿಡಿದಂತಿರುವ ಮಾಚಿದೇವನ ಕೈಯಲ್ಲಿನ ಆ ವೀರಗತ್ತಿಯನ್ನು ಯಾರೋ ಕಿತ್ತುಕೊಂಡಿದ್ದಾರೆ ಅಥವಾ ಅದನ್ನು ಮಾಡಿರುವುದೇ ಹಾಗೆ ಏನೋ? ಎತ್ತರದಲ್ಲಿ ಕುಳಿತ ಬಸವಣ್ಣ ಇದನ್ನು ಕನಿಕರದಿಂದ ನೋಡುತ್ತಿದ್ದಾನೆ. ವಚನ ಬಂಡಾಯದ ಕಟ್ಟುಗಳನ್ನು ಕತ್ತು ಕೊಟ್ಟು ಕಾಯ್ದ ವೀರಪರಂಪರೆ ನಮ್ಮದು. ಈಗ ಎಲ್ಲದರಿಂದಲೂ ವಂಚಿತರು. ಅಗಸರ ಹೆಣ್ಣುಮಕ್ಕಳ ಬವಣೆಗಳನ್ನು ಕಂಡರಿಯದವರಿಲ್ಲ. ಇಸ್ತ್ರಿಪೆಟ್ಟಿಗೆಯಿಂದ ಹಾರಿದ ಕಿಡಿಯೊಂದು ಕಣ್ಣಿಗೆ ಬಿದ್ದು ಒಂದು ಕಣ್ಣು ಕಳೆದುಕೊಂಡಿರುವ ನನ್ನ ಚಿಕ್ಕಮ್ಮ ಕೇಳುತ್ತಿರುತ್ತಾಳೆ - ‘ಈರಾ, ನೀನು ಅಲ್ಲೆಲ್ಲಾ, ದೊಡ್ಡಮಂದ್ಯಾಗ ಅಡ್ಡಾಡತಿರ್ತಿಯಲ್ಲಪ್ಪಾ, ಅಲ್ಲಿ ಯಾರಾದರೂ ನನಗ ಕಣ್ಣು ಹಾಕಸ್ತಾರನ ಕೇಳ ಯಪ್ಪಾ’ ಅಂತ. ಇನ್ನೂ ಅರ್ಧ ಬದುಕನ್ನೂ ಮುಗಿಸಿರದ, ಯಾರದೋ ಬಟ್ಟೆ ಇಸ್ತ್ರಿ ಮಾಡಲು ಹೋಗಿ ತನ್ನ ಕಣ್ಣ ಕಳೆದುಕೊಂಡ ಚಿಕ್ಕಮ್ಮನಂತೆ ನನ್ನ ಸಮುದಾಯ ಮುಗ್ಧ, ಸಹಿಷ್ಣು ಮತ್ತು ತ್ಯಾಗಿ.

ADVERTISEMENT

ಕಲ್ಯಾಣವೆಂಬ ಪ್ರಣತಿಯನ್ನು ಕಾಯ್ದು ಕಾಪಾಡಿ ಇಲ್ಲಿಯವರೆಗೂ ತಂದಿದ್ದೇವೆ. ಜಯಂತಿ ಮಾಡಿ, ಮಠಕ್ಕೆ ದುಡ್ಡು ಕೊಟ್ಟು ಸುಮ್ಮನಾಗಿಸಿ, ಸುಮ್ಮನಾಗಿಬಿಡಬೇಡಿ. ಡಾ. ಅನ್ನಪೂರ್ಣ ವರದಿ ಜಾರಿಮಾಡಿ. ಸಾಧ್ಯವಾದರೆ ನಿಮ್ಮನ್ನು ಕ್ಷಮಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.