ADVERTISEMENT

ಮತಗಟ್ಟೆಯಲ್ಲಿ ಕೇಳಿ ಬಂದ ಹರಟೆ

ಪ್ರಕಾಶ ಶೆಟ್ಟಿ
Published 11 ಮೇ 2018, 19:30 IST
Last Updated 11 ಮೇ 2018, 19:30 IST
ಚಿತ್ರ: ಪ್ರಕಾಶ್ ಶೆಟ್ಟಿ
ಚಿತ್ರ: ಪ್ರಕಾಶ್ ಶೆಟ್ಟಿ   

ಕೊನೆಗೂ ದಪ್ಪ ಚರ್ಮದ ‘ಎಮ್ಮೆ’ಲ್ಲೆಗಳನ್ನು ಆಯ್ಕೆ ಮಾಡಿ, ‘ನಿಧಾನ’ಸೌಧಕ್ಕೆ ಕಳುಹಿಸುವ ಮುಹೂರ್ತ ಕೂಡಿಬಂದಿದೆ. ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅಲ್ಲಿ ನಿಂತಿರುವ ಇಬ್ಬರು ಮಾತ್ರ ತುಂಬಾ ಮಜಾ ಮೂಡ್‌ನಲ್ಲಿದ್ದರು. ಅವರ ಹರಟೆ ಎಷ್ಟು ಚೆನ್ನಾಗಿತ್ತು ಎಂದರೆ ಅಲ್ಲಿದ್ದವರಿಗೆ ಕ್ಯೂ ಚಲಿಸದೆ ಇದ್ದರೂ ಪರವಾಗಿಲ್ಲ ಅನಿಸುವಂತಿತ್ತು.

‘ಅಲ್ಲಯ್ಯಾ, ನಿನ್ನ ಜನ್ಮದಲ್ಲಿ ಇದುವರೆಗೆ ದಾನ ಮಾಡಿದವನಲ್ಲ. ಮತದಾನ ಮಾಡೋಕೆ ಬಂದಿದ್ದೀಯಲ್ಲ…’

‘ನೀನು ತಪ್ಪು ತಿಳ್ಕೊಂಡಿದ್ದೀಯಾ. ನಾನು ದಾನ ಗೀನ ಮಾಡೋಕೇನೂ ಇಲ್ಲಿ ಬಂದಿಲ್ಲ. ಮತ ಚಲಾಯಿಸೋಕೆ ಬಂದಿದ್ದೇನೆ’.

ADVERTISEMENT

‘ಆಹಾ... ಮತವನ್ನು ಚಲಾಯಿಸ್ತೀಯಾ! ಚುನಾವಣಾ ಆಯೋಗವೇ ‘ನಾವೆಲ್ಲಾ ಮತದಾನ ಮಾಡಬೇಕು’ ಅನ್ನುತ್ತಿರುವಾಗ ನಿನ್ನದೇನಪ್ಪಾ ಅಪಸ್ವರ?’

‘ನೋಡು, ನಮ್ಮ ರಾಜ್ಯದಲ್ಲಿ ಭಿಕ್ಷಾಟನೆಗೆ ನಿಷೇಧವಿದೆ. ಯಾರೂ ಭಿಕ್ಷೆ ಬೇಡುವಂತಿಲ್ಲ ಮತ್ತು ಯಾರೂ ದಾನ ನೀಡುವಂತಿಲ್ಲ. ತಿಳಿಯಿತೇನೋ ಗೂಬೆ!’

‘ನೊ, ನೋ... ಚುನಾವಣೆ ಬಂದಾಗಲೆಲ್ಲಾ ಭಿಕ್ಷಾಟನೆಗೆ ವಿಶೇಷ ಅನುಮತಿ ನೀಡಲಾಗುತ್ತದೆ’.

(ಪಕ್ಕದಲ್ಲಿದ್ದ ಭಿಕ್ಷುಕನೊಬ್ಬ ನಡುವೆ ಬಾಯಿ ಹಾಕಿದ)

‘ಹೂಂ, ಸ್ವಾಮಿ… ನನ್ನಂತಹ ಭಿಕ್ಷುಕರಿಗೂ ಮೊದಲ ಬಾರಿಗೆ ವೋಟ್ ಮಾಡಾಕೆ ಅವುಕಾಸ ನೀಡವ್ರೆ’

‘ನೋಡಿದೆಯಾ… ಭಿಕ್ಷುಕರ ಜೀವನದಲ್ಲೂ ಮೊತ್ತ ಮೊದಲ ಬಾರಿಗೆ ‘ದಾನ’ ಮಾಡುವ ಸುವರ್ಣಾವಕಾಶ ಸಿಕ್ಕಿದೆ!’

‘ನೀನು ಏನೇ ಹೇಳು, ನಾನು ಮತವನ್ನು ದಾನ ಮಾಡಲ್ಲ… ಚಲಾಯಿಸ್ತೀನಿ!’

‘ಅಲ್ಲಯ್ಯಾ, ಈ ಅಭ್ಯರ್ಥಿಗಳು ಭಿಕ್ಷುಕರಿದ್ದಂತೆ. ಭಾಜಪ್ಪರುಗಳು ಮತ ಭಿಕ್ಷೆಯ ನೆಪದಲ್ಲಿ ‘ಮುಷ್ಟಿ ಅಕ್ಕಿ’ ಬೇಡಿಕೊಂಡು ಹೋಗಿಲ್ಲವೇ? ಅದ್ಯಾರೋ ಪಕ್ಷೇತರ ಅಭ್ಯರ್ಥಿಯಂತೂ ಜಂಗಮ ವೇಷ ಹಾಕ್ಕೊಂಡೇ ಮತ ಕೇಳೋಕೆ ಹೊರಟಿದ್ನಂತೆ!’

‘ಅದೆಲ್ಲಾ ಸಾಯ್ಲಿ… ಮಹಾದಾನ ಮಾಡೋಕೆ ಬಂದಿರುವ ನೀನು, ನಿನ್ನ ಮತವನ್ನು ಯಾರಿಗೆ ದಾನ ಮಾಡ್ಬೇಕಂತಿದ್ದೀಯಾ?’

‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಅನ್ನುವ ಪಕ್ಷಕ್ಕೆ’.

‘ನೋಡಯ್ಯಾ, ನೀನು ಮೋಸ ಹೋಗಿದಿಯಾ! ಅದು ಸರ್ವ
ರಿಗೆ ಅಲ್ಲ. ಇಂಗ್ಲಿಷ್‌ನ ‘ಸರ್ವ್’ ಅದು! ಜನಸೇವೆ ಮಾಡುವವರಿಗೆ ಸಮಬಾಳು ಮತ್ತು ಸಮಪಾಲು ಎಂದು ಅರ್ಥ ಮಾರಾಯ’.

‘ಓಹ್! ಅದೂ ಇರಬಹುದು. ಹಾಗಾದರೆ ಜಾತಿ ನೋಡಿ ವೋಟ್‌ ಹಾಕ್ತೀನಿ’.

‘ಥೂ, ನಿನ್ನ! ಜಾತಿ ನೋಡಿ ವೋಟ್‌ ಹಾಕುವಷ್ಟು ಕೀಳುಮಟ್ಟಕ್ಕೆ ಇಳಿಯುತ್ತೀಯೇನೋ?’
‘ಏಯ್! ಆ ಜಾತಿ ಅಲ್ಲಯ್ಯಾ! ನಾನು ಹೇಳಿದ್ದು ‘ಪ್ರಾಮಾಣಿಕ ಜಾತಿ’ಯವರಿಗೆ ಗುಂಡಿ ಒತ್ತೋಣಾಂತ’.

‘ಪರವಾಗಿಲ್ವೇ… ನಿನ್ನ ತಲೆಯಲ್ಲೂ ಇಂತಹ ಪ್ರಾಮಾಣಿಕ ಯೋಚನೆಗಳು ಹರಿದಾಡುತ್ತವಲ್ಲ! ಆದರೆ… ನೀನು ಹೇಳುತ್ತಿರುವ ‘ಪ್ರಾಮಾಣಿಕ ಜಾತಿ’ಯವರು ಯಾರೂ ಅಭ್ಯರ್ಥಿಗಳ ಪಟ್ಟಿಯಲ್ಲಿ ಇದ್ದಂತಿಲ್ಲವಲ್ಲ!’

‘ಅದೂ ಸರೀನೇ ! ಪ್ರಣಾಳಿಕೆ ನೋಡಿ ಮತದಾನ ಮಾಡೋಣಾಂದ್ರೆ ಎಲ್ಲಾ ಪಕ್ಷದವರ ಪ್ರಣಾಳಿಕೆಗಳೂ ಸೇಮ್ ಟು ಸೇಮ್ ಡೋಂಗಿ...’

‘ಹಾಗಾದರೆ ನೀನು ಇವತ್ತು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತೀರಾ ಸಂಕಷ್ಟದಲ್ಲಿದ್ದೀಯಾ ಅನ್ನು’.

‘ಹೂಂ ಕಣೋ, ಪುಸ್ತಕವನ್ನೇ ಬಿಚ್ಚದೆ ನೇರ ಪರೀಕ್ಷೆಗೆ ಬಂದ ವಿದ್ಯಾರ್ಥಿಯ ಸ್ಥಿತಿಯಾಗಿದೆ’.

‘ನೀನು ಒಂದು ಕೆಲ್ಸ ಮಾಡು. ಯಾರಾದರೂ ಪಕ್ಷೇತರರಿಗೆ ನಿನ್ನ ಅಮೂಲ್ಯವಲ್ಲದ ವೋಟು ಹಾಕಿಬಿಡು. ಪಾಪ, ಅವರೂ ನಿನ್ನಂತಹ ಮತದಾರರಿಗಾಗಿ ಕಾಯುತ್ತಿರುತ್ತಾರೆ’.

‘ಆದರೆ, ಹ್ಯಾಗಯ್ಯಾ ಅಷ್ಟು ಮಂದಿ ಪಕ್ಷೇತರರಲ್ಲಿ ಒಬ್ಬರನ್ನು ಆಯ್ಕೆ ಮಾಡೋದು. ಅವರೆಲ್ಲ ಯಾರು ಎಂದೇ ನನಗೆ ಗೊತ್ತಿಲ್ಲ’.

‘ಅದಕ್ಕೆ ಸೊಲ್ಯೂಷನ್ ಹೇಳ್ತೀನಿ, ಕೇಳು. ನಿನಗೆ ಕೋಳಿ ಅಂದರೆ ಪಂಚಪ್ರಾಣ ತಾನೇ? ಇವಿಎಂನಲ್ಲಿ ‘ಕೋಳಿ’ಯ ಚಿಹ್ನೆ ಇರುವ ಅಭ್ಯರ್ಥಿಯೊಬ್ಬರಿದ್ದಾರೆ. ಅದಕ್ಕೆ ಒತ್ತು’.

‘ಓಹ್… ಕ್ಯೂ ಬೆಳೆದಿದೆ ನೋಡು! ಈ ಸಾರಿ ಚುನಾವಣೆಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದಂತಿದೆ…’

‘ಮಣ್ಣಿನ ಮಕ್ಕಳ ಪಕ್ಷ, ಮತದಾರರನ್ನು ಸೆಳೆಯಲು, ಗೆದ್ದು ಬಂದ ಮೇಲೆ ಎಲ್ಲಾ ಮಹಿಳಾ ಮತದಾರರಿಗೆ ಎರಡು ಸಾವಿರ ರೂಪಾಯಿ ಹಣದ ‘ಆಮಿಷ’ವನ್ನು ಘಂಟಾಘೋಷವಾಗಿ ಸಾರಿದೆಯಲ್ಲ! ಅದಕ್ಕಿರಬಹುದೇ?’
‘ಅದ್ಯಾವುದೋ ಸಂಘಟನೆಯವರು ಮತದಾರರನ್ನು ಆಕರ್ಷಿಸಲು ‘ಲಕ್ಕಿಡಿಪ್ ಡ್ರಾ’ ಕೂಡಾ ಇಟ್ಟುಕೊಂಡಿದ್ದಾರಂತೆ. ಅದೂ ಕಾರಣವಿರಬಹುದು. ಹಾಂ! ಲಕ್ಕಿ ಡಿಪ್ ಅಂದಾಗ ನೆನಪಾಯಿತು… ನಾನು ‘ಲಕ್ಕಿ ಡಿಪ್’ ಹಾಕಿಯೇ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡ್ತೀನಿ. ಆ ಮೂಲಕ ಅತಂತ್ರ ಸ್ಥಿತಿಯಿಂದ ಹೊರಗೆ ಬರುತ್ತೇನೆ’.

‘ಭೇಷ್ ! ನಿನ್ನಂಥವರಿಂದಲೇ ಅತಂತ್ರ ಫಲಿತಾಂಶ ಬರೋದು. ನನ್ನ ಸರದಿ ಬಂತು… ಆಮೇಲೆ ಸಿಗ್ತೀನಿ, ಮತದಾನಿಗಳೇ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.