ADVERTISEMENT

ಆಸ್ಪತ್ರೆಯಲ್ಲಿ ಅಮ್ಮನ ಕಾಲಿಗೆ ಬಿದ್ದು ಕ್ಷಮೆ

ದ್ವಾರಕೀಶ್
Published 23 ಫೆಬ್ರುವರಿ 2013, 19:59 IST
Last Updated 23 ಫೆಬ್ರುವರಿ 2013, 19:59 IST

ಎಲ್ಲಾ ಚೆಕಪ್‌ಗಳ ನಂತರ ನನಗೆ ಬೈಪಾಸ್ ಸರ್ಜರಿ ಆಗಬೇಕೆಂಬುದು ನಿಶ್ಚಿತವಾಯಿತು. ಕೈಯಲ್ಲಿ ಹಣವಿಲ್ಲ. ಸಹಾಯ ಮಾಡಬಲ್ಲ ಸ್ನೇಹಿತರೂ ಇಲ್ಲ. 40 ಚಿತ್ರಗಳ ಸ್ಯಾಟಲೈಟ್ ಹಕ್ಕನ್ನು ಮಾರಿದ್ದರಿಂದ ಜೀವನ ನಿರ್ವಹಣೆಗೆ ಒಂದಿಷ್ಟು ಹಣ ಬಂತು.

ಏನು ಮಾಡುವುದು ಎಂಬ ಪ್ರಶ್ನೆ. ಆದರೂ ಧೈರ‍್ಯಗೆಡಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಬೆಂಗಳೂರಿನ ಹೋಟೆಲ್ ಏಟ್ರಿಯಾ ಹತ್ತಿರ ಜಾಫರ್ ಷರೀಫ್ ಸಿಕ್ಕರು. ವೆಂಕಟೇಶ್ ಎಂಬ ಒಬ್ಬರು ನಮ್ಮಿಬ್ಬರಿಗೂ ಆಪ್ತರಾಗಿದ್ದರು. ನನ್ನ ಹೃದಯದ ಸಮಸ್ಯೆಯ ವಿಷಯವನ್ನು ಅವರೇ ಜಾಫರ್ ಷರೀಫ್‌ಗೆ ಮುಟ್ಟಿಸಿದ್ದರು. ನನ್ನನ್ನು ನೋಡಿದಾಕ್ಷಣ, `ಏನಯ್ಯಾ, ಒಂದು ವಿಷಯ ಕೇಳಿದೆ. ಎಲ್ಲಿ ನಿನ್ನ ಮನೆ? ನಾಳೆ ಬೆಳಿಗ್ಗೆ ಬರುತ್ತೇನೆ' ಎಂದರು. ಆಗ ಶೈಲಜಾ ಮನೆ ಸುಬ್ರಹ್ಮಣ್ಯನಗರದಲ್ಲಿತ್ತು. ಮದ್ರಾಸ್‌ನಿಂದ ಬೆಂಗಳೂರಿಗೆ ಬಂದಾಗ ಅಲ್ಲೇ ಇರುತ್ತಿದ್ದೆ. ನುಡಿದಂತೆಯೇ ಮರುದಿನ ಬೆಳಿಗ್ಗೆ ಜಾಫರ್ ಷರೀಫ್ ಅಲ್ಲಿಗೆ ಬಂದರು.

`ಎಲ್ಲಿ ಮಾಡಿಸಿಕೋತೀಯಾ ಬೈಪಾಸ್- ಲಂಡನ್ನಾ, ಅಮೆರಿಕಾನಾ? ನಾನು ಲಂಡನ್‌ನಲ್ಲಿ ಮಾಡಿಸಿಕೊಂಡಿದ್ದೆ. ನೀನು ಎಲ್ಲಿ ಹೇಳಿದರೆ ಅಲ್ಲಿ ಮಾಡಿಸೋಣ' ಎಂದು ಅವರು ಹೇಳಿದರು. ಅಂಬುಜಾ ತಂದೆ, ದೊಡ್ಡಪ್ಪ, ಚಿಕ್ಕಪ್ಪ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದವರು. ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದ್ದರು. ಆಗಿನಿಂದಲೂ ಅಂಬುಜಾ, ಷರೀಫ್ ಇಬ್ಬರೂ `ಹೋಗು, ಬಾ' ಎನ್ನುವ ಮಟ್ಟಕ್ಕೆ ಪರಿಚಯಸ್ಥರಾಗಿದ್ದರು. ಜಾಫರ್ ನನ್ನನ್ನು ಕಂಡಾಗಲೆಲ್ಲಾ `ನಮ್ಮೂರ ಅಳಿಯ' ಎನ್ನುತ್ತಿದ್ದರು.

ಅವರು ಹೇಳಿದರೆಂದ ಮಾತ್ರಕ್ಕೆ ಲಂಡನ್‌ಗೋ, ಅಮೆರಿಕಾಕ್ಕೋ ನಾನು ಹೋಗಲಿಲ್ಲ. ಮದ್ರಾಸ್‌ನ ಮೆಡಿಕಲ್ ಮಿಷನ್ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸುವುದು ಎಂದು ತೀರ್ಮಾನಿಸಿದೆವು. ಶೈಲಜಾ ಮನೆಯಿಂದಲೇ ಜಾಫರ್ ಷರೀಫ್ ಆ ಆಸ್ಪತ್ರೆಯ ಡಾ.ಚೆರಿಯನ್ ಎಂಬುವರಿಗೆ ಫೋನ್ ಮಾಡಿದರು. `ನಾಳೆ ಅಳಿಯನ ಜೊತೆ ಅಲ್ಲಿಗೆ ಬರುತ್ತೇನೆ' ಎಂದರಷ್ಟೆ.

ಮರುದಿನ ಅಲ್ಲಿಗೆ ಹೋದೆವು. ಅಂದೇ ನನಗೆ ವೈದ್ಯರು `ಏಂಜಿಯೋಗ್ರಾಮ್' ಮಾಡಿದರು. ವಾರದ ನಂತರ ಬೈಪಾಸ್ ಸರ್ಜರಿ ಆಯಿತು. ಜೇಬಿನಲ್ಲಿ ಒಂದು ರೂಪಾಯಿ ಇಲ್ಲದಿದ್ದರೂ ಜಾಫರ್ ಷರೀಫ್ ದೊಡ್ಡ ಮನಸ್ಸು ಮಾಡಿದ್ದರಿಂದ ಅತಿ ಗಣ್ಯ ವ್ಯಕ್ತಿಗೆ ಸಿಗುವಂಥ ಚಿಕಿತ್ಸೆ ನನಗೆ ಸಿಕ್ಕಿತು. ಸಂಬಂಧಿಕರಲ್ಲಿ ಧನವಂತರಿದ್ದರೂ ಹಣದ ವಿಷಯ ಬಂದಾಗ ಅವರೆಲ್ಲರ ಫೋನ್‌ಗಳು `ಔಟ್ ಆಫ್ ಆರ್ಡರ್' ಆಗಿಬಿಟ್ಟವು. ನಾಲ್ಕು ದಿನಗಳ ನಂತರ ಡಿಸ್‌ಚಾರ್ಜ್ ಆಗಿ, ಆಸ್ಪತ್ರೆಯಿಂದ ಮನೆಗೆ ಹೋದೆ.

ಒಂದು ವಾರವಾಗಿತ್ತಷ್ಟೆ. ಮತ್ತೆ ವಿಪರೀತ ಜ್ವರ ಕಾಣಿಸಿಕೊಂಡಿತು. ಬಿಡದ ಜ್ವರದಿಂದ ಬಳಲುತ್ತಿದ್ದ ನನಗೆ ಭಯವಾಯಿತು. ಆಗ ಜಾಫರ್ ಷರೀಫ್ ಇನ್ನೊಮ್ಮೆ ಅದೇ ವೈದ್ಯರಿಗೆ ಫೋನ್ ಮಾಡಿ, ಪರೀಕ್ಷಿಸುವಂತೆ ಸಮಯ ನಿಗದಿ ಮಾಡಿದರು. ಮತ್ತೆ ಆಸ್ಪತ್ರೆ ಸೇರಿದೆ. ಮೂರ್ನಾಲ್ಕು ವೈದ್ಯರು ಸುತ್ತ ನಿಂತಿದ್ದರು. `ನೀವು ವಿವಿಐಪಿ ಪೇಷೆಂಟ್. ನಿಮ್ಮನ್ನು ಹುಷಾರು ಮಾಡಬೇಕಾದದ್ದು ನಮ್ಮ ಜವಾಬ್ದಾರಿ' ಎಂದು ಡಾ.ಚೆರಿಯನ್ ಅಂದು ಹೇಳಿದ್ದು ಈಗಲೂ ಕಿವಿಯಲ್ಲಿದೆ.

ಎರಡನೇ ಸಲ ಆಸ್ಪತ್ರೆಗೆ ಸೇರಿದಾಗ ಕೆಟ್ಟ ಕನಸುಗಳು ಬಿದ್ದವು. ಎರಡು ದಿನ ನಿದ್ದೆ ಬರಲಿಲ್ಲ. ವೈದ್ಯರು ಇಂಜೆಕ್ಷನ್‌ಗಳನ್ನು ಕೊಟ್ಟರೂ ಮನಸ್ಸಿನಲ್ಲಿ ತಳಮಳ. ಹತ್ತಿರದವರನ್ನೆಲ್ಲಾ ಕರೆಸಿ, ಕಷ್ಟಗಳನ್ನು ಹೇಳಿಕೊಂಡೆ. ಬಂದವರೆಲ್ಲಾ `ಅಯ್ಯೋ' ಎಂದು, ಆಮೇಲೆ ಮಾಯವಾದರು. ಮಕ್ಕಳ ಭವಿಷ್ಯಕ್ಕೆ ತಕ್ಕ ದಾರಿ ಮಾಡದೆ ಕಣ್ಮುಚ್ಚಿಕೊಳ್ಳುತ್ತೇನೋ ಏನೋ ಎಂಬ ಆತಂಕ ಶುರುವಾಯಿತು. ರಾಘವೇಂದ್ರ ಸ್ವಾಮಿ ಜತೆ ಮನಸ್ಸಿನಲ್ಲೇ ಮತ್ತೆ ಜಗಳವಾಡಿದೆ. ನನ್ನಿಂದ ಏನೋ ತಪ್ಪಾಗಿದೆ ಎಂದು ಅರಿವಾಯಿತು.

ಅಮ್ಮನಿಗೆ ನಾನು ಪ್ರೀತಿಯ ಮಗ. ಆದರೆ ಆಗಾಗ ಅವರ ಹತ್ತಿರ ಜಗಳ ಆಡುತ್ತಿದ್ದೆ. ಅವರಿಗೆ ಇದ್ದ ತಾಪತ್ರಯ ಒಂದೇ- ಒಂದು ಕಡೆ ಮಗ, ಇನ್ನೊಂದು ಕಡೆ ಅಳಿಯ. ಇಬ್ಬರೂ ಸಿನಿಮಾದವರೇ. ಇಬ್ಬರಲ್ಲಿ ಯಾರೊಬ್ಬರು ಗೆದ್ದು, ಇನ್ನೊಬ್ಬರು ಬಿದ್ದರೆ ಅವರಿಗೆ ಯೋಚನೆ. ಮನಸ್ಸು ಸರಿ ಇಲ್ಲದೇ ಇದ್ದಾಗ ಅವರ ಜತೆ ನಾನು ಜಗಳ ಆಡಿದ್ದುಂಟು.

ಆಪರೇಷನ್ ಆದ ನಂತರ ಒಂದು ವಾರ ಜ್ವರದಲ್ಲಿ ಒದ್ದಾಡಿದಾಗ ತಾಯಿಯನ್ನು ನೋಯಿಸಿದ್ದು ತಪ್ಪು ಎಂದು ಅರಿವಾಯಿತು. ಅವರನ್ನು ಆಸ್ಪತ್ರೆಗೆ ಕರೆಸಿದೆ. ಕಾಲಿಗೆ ಬಿದ್ದು, ಕ್ಷಮೆ ಕೇಳಿದೆ. ಆ ರೀತಿ ಮಾಡಿದ ನಂತರವೇ ನಾನು ಹುಷಾರಾದದ್ದು. ತಾಯಿಗಿಂತ ದೇವರಿಲ್ಲ. ಆಸ್ಪತ್ರೆಯಲ್ಲಿದ್ದಾಗ `ಕ್ಲೈಮ್ಯಾಕ್ಸ್'ನಲ್ಲಿ ನನಗೆ ಈ ವಿಷಯ ತಿಳಿಯಿತು.

ನನ್ನ ಆಪ್ತರು ಯಾರು ಎಂಬುದು ಸ್ಪಷ್ಟವಾದದ್ದು ಕೂಡ ಆಸ್ಪತ್ರೆಯಲ್ಲಿದ್ದಾಗಲೇ. ಮೊದಲು ನೋಡಬಂದವರು ಕಲ್ಯಾಣ್ ಕುಮಾರ್. ಒಂದು ಇಡೀ ದಿನ ಆಸ್ಪತ್ರೆಯಲ್ಲಿ ಇದ್ದ ಅವರು ಧೈರ್ಯ ತುಂಬಿದರು. ವಿಳಾಸ ಗೊತ್ತಿಲ್ಲದಿದ್ದರೂ ನನ್ನ ಮನೆ ಹುಡುಕಿಕೊಂಡು ಬಂದು, ಆರೋಗ್ಯ ವಿಚಾರಿಸಿದವರು ಸರೋಜಾದೇವಿ. `ಭಾಗ್ಯವಂತರು' ಹೊರತುಪಡಿಸಿ ಬೇರೆ ಯಾವ ಚಿತ್ರದಲ್ಲೂ ನಾನು ಅವರಿಗೆ ಪಾತ್ರ ಕೊಟ್ಟಿರಲಿಲ್ಲ. ನನ್ನ ಒಂದು ಸಿನಿಮಾದಲ್ಲಿ ನಟಿಸಿದ ಅವರಿಗೆ ಇದ್ದ ಕಾಳಜಿ ಐದಾರು ಚಿತ್ರಗಳಲ್ಲಿ ನಟಿಸಿದವರಿಗೂ ಇರಲಿಲ್ಲ.

ಕೆಲವು ದಿನಗಳ ನಂತರ ವಿಷ್ಣು ಬಂದ. ನಾನು ಎಂದೂ ಪಾತ್ರ ಕೊಡದೇ ಇದ್ದರೂ ಪ್ರಕಾಶ್ ರಾಜ್ ಬಂದು ಮಾತನಾಡಿಸಿದ. ಕೆ.ಎಸ್.ಎಲ್. ಸ್ವಾಮಿ, ಸಿ.ವಿ.ಎಲ್. ಶಾಸ್ತ್ರಿ ಸೇರಿದಂತೆ ಬೆರಳೆಣಿಕೆಯಷ್ಟು ಮಂದಿ ಬಂದು ಮಾತನಾಡಿಸಿದರು.

ಎರಡು ತಿಂಗಳಲ್ಲಿ ಚೇತರಿಸಿಕೊಂಡೆ. ನಂತರ ಮಾಡಿದ ಮತ್ತೊಂದು ಚಿತ್ರ `ಮಜ್ನು'. ಮೂರನೇ ಮಗನನ್ನು ಹೀರೊ ಆಗಿಸಿ ಮಾಡಿದ ಇನ್ನೊಂದು ಪ್ರಯತ್ನ ಅದು. ಆ ಚಿತ್ರ ಬಿಡುಗಡೆ ಮಾಡಲು ತಿಂಗಳುಗಟ್ಟಲೆ ಕಾಯಬೇಕಾಯಿತು. ಚಿಟಿಕೆ ಹೊಡೆದಂತೆ ಸಿನಿಮಾ ಮಾಡುತ್ತಿದ್ದ ನಾನು ಗಾಂಧಿನಗರದಲ್ಲಿ ಸುತ್ತಾಡಬೇಕಾಯಿತು. ಉದಯ ಟೀವಿಯ ಸೆಲ್ವಂ ಎಂಬುವರ ಸಹಾಯದಿಂದ ಕೊನೆಗೂ ಸಿನಿಮಾ ಬಿಡುಗಡೆ ಮಾಡಿದೆ. ಆ ಚಿತ್ರವೂ ಸೋತಿತು. ಇನ್ನು ಸಿನಿಮಾ ಮರೆತ ವಿಷಯ ಅಂದುಕೊಂಡು ನಾನು ಸುಮ್ಮನಾದೆ. ಮಕ್ಕಳು ತಮ್ಮ ತಮ್ಮ ಓದಿಗೆ ತಕ್ಕಂಥ ಕೆಲಸ ಹುಡುಕಲು ಆರಂಭಿಸಿದರು.

ಇಷ್ಟೆಲ್ಲಾ ಕಷ್ಟದ ನಡುವೆಯೇ ಮೊದಲ ಮಗನಿಗೆ ಮದುವೆ ಮಾಡಿದೆ. `ಪ್ಯಾರ್ ತೊ ಹೋನಾ ಹೀ ಥಾ' ಎಂಬ ಹಿಂದಿ ಚಿತ್ರವನ್ನು ತಮಿಳು ನಟ ವಿಜಯ್ ಮೆಚ್ಚಿದ್ದರು. ಅದನ್ನು ತಮಿಳಿನಲ್ಲಿ ಮಾಡಬೇಕೆಂಬುದು ಅವರ ಬಯಕೆ. ಆ ಚಿತ್ರ ನಿರ್ಮಿಸಲು ನಾನು ಉತ್ಸಾಹ ತೋರಿದ್ದೆ. ಅದು ತಮಿಳುನಾಡಿನಲ್ಲಿ ಸುದ್ದಿಯಾಗಿ, ಒಂದಿಷ್ಟು ಹಣ ಓಡಾಡಿತು.

ಮದ್ರಾಸ್‌ನಿಂದ ಬೆಂಗಳೂರಿಗೆ ಒಮ್ಮೆ ಬರುತ್ತಿದ್ದಾಗ ಪರಿಚಯಸ್ಥರೊಬ್ಬರು ಸಿಕ್ಕಿದರು. `ಏನ್ ಸಾರ್ ನೀವು ಎರಡು ಮದುವೆ ಮಾಡಿಕೊಂಡಿರಿ. ಮಕ್ಕಳ ಮದುವೆ ಮಾಡುವುದಿಲ್ಲವಾ?' ಎಂದು ಕಪಾಳಕ್ಕೆ ಹೊಡೆದಂತೆ ಪ್ರಶ್ನೆ ಕೇಳಿದರು.
ನಮ್ಮ ಮನೆಯಲ್ಲಿದ್ದ ಲಕ್ಷ್ಮಿ ಎಂಬ ಹುಡುಗಿ ಮರುದಿನ `ನಿಮಗಾಗಿ ಒಂದು ಕಾಗದ ಬಂದಿದೆ' ಎಂದಳು. ಆ ಕಾಗದದ ಮೂಲಕ ಬಂದ ಸಂಬಂಧವೇ ನನ್ನ ದೊಡ್ಡ ಸೊಸೆಯದ್ದು. ಉತ್ತರ ಕರ್ನಾಟಕದ ಹುಡುಗಿ ಮೊದಲ ಸೊಸೆಯಾಗಿ ಮನೆ ಸೇರಿದಳು. ವಿಜಯ್ ಅಭಿನಯದ ಚಿತ್ರ ಮಾಡಲು ಆಗಲಿಲ್ಲವಾದರೂ ಆಗ ಓಡಾಡಿದ್ದ ಹಣದಿಂದ ಮಗನ ಮದುವೆಯನ್ನು ಅದ್ದೂರಿಯಾಗಿಯೇ ಮಾಡಿದೆ.

ತಮಿಳುನಾಡಿನಲ್ಲಿ ಸಿನಿಮಾದವರ ರಾಜಕೀಯ ವರ್ಚಸ್ಸನ್ನು ಕಂಡಿದ್ದ ನನಗೂ ಆ ಕ್ಷೇತ್ರದ ಮೇಲೆ ಬಯಕೆ ಬಂತು. 1998ರಲ್ಲಿ ಬಿಜೆಪಿ ಪಕ್ಷದ ಪರವಾಗಿ ಓಡಾಡಿದೆ. ಯಡಿಯೂರಪ್ಪ, ಈಶ್ವರಪ್ಪ, ವಿಶ್ವನಾಥ ಕಾಗೇರಿ, ಕೇಶವ ಪ್ರಸಾದ್ ಮೊದಲಾದವರ ಒಡನಾಡವಿತ್ತು. ನಂತರ ಯಾವ ಚಿತ್ರಕ್ಕೂ ಕೈಹಾಕಲಿಲ್ಲ. ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದೆ.

`ಕನ್ನಡನಾಡು' ಎಂಬ ಹೊಸ ಪಕ್ಷದ ಕುರಿತು ಪತ್ರಿಕೆಗಳಲ್ಲಿ ಓದಿದೆ. ಅದಕ್ಕೆ ಸೇರಲು ನಿಶ್ಚಯಿಸಿದೆ. ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಬೇಕು ಎಂಬ ದೃಷ್ಟಿಯಿಂದ 2003ರಲ್ಲಿ ಮದ್ರಾಸ್‌ನಿಂದ ಬೆಂಗಳೂರಿಗೆ ವಾಪಸ್ಸಾದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.