ADVERTISEMENT

ಇಂಡಿಯಲ್ಲಿ ಭಾಗ್ಯೋದಯ

ಶಂಕರ ಬಿದರಿ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ಇಂಡಿಯಲ್ಲಿ ಟೆಲಿಫೋನ್ ಎಕ್ಸ್‌ಚೇಂಜ್ ಇದ್ದದ್ದು ಮೊದಲ ಮಹಡಿಯಲ್ಲಿ. ಜಹಾಂಗೀರ್ ಜೊತೆ ನಾನು ಹೋದಾಗ ನರಸಿಂಹ ದಾಮಡೆ ಎಂಬುವರು ಅಲ್ಲಿ ಕೆಲಸ ಮಾಡುತ್ತಿದ್ದರು. ಹದಿನೈದು ಇಪ್ಪತ್ತು ನಿಮಿಷ ಕಳೆದ ಮೇಲೆ ಜಹಾಂಗೀರ್ ಅಲ್ಲಿಂದ ಹೋದರು. ಮೂರ‌್ನಾಲ್ಕು ದಪ್ಪ ದಪ್ಪ ಟೆಲಿಫೋನ್ ಡೈರೆಕ್ಟರಿಗಳನ್ನು ಜೋಡಿಸಿ, ನರಸಿಂಹ ದಾಬಡೆ ದಿಂಬಿನಂತೆ ಮಾಡಿಕೊಟ್ಟರು. ಬೆಡ್‌ಶೀಟ್ ಹಾಸಿಕೊಂಡು ಅಲ್ಲಿಯೇ ಮಲಗಿದೆ.

1971 ಅಕ್ಟೋಬರ್ 20 ಇಂಡಿಯಲ್ಲಿ ನನ್ನ ಮೊದಲ ಬೆಳಗು. ಬದುಕಿನ ಭಾಗ್ಯೋದಯ ಆ ಬೆಳಗಿನಿಂದಲೇ ಆಯಿತೆನ್ನಬೇಕು. ಯಾಕೆಂದರೆ, ಅಲ್ಲಿಂದಾಚೆಗೆ ನಲವತ್ತೆರಡು ವರ್ಷ ನನಗೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಹಂತಹಂತವಾಗಿ ಮೇಲೇರುತ್ತಾ ಬಂದೆ. ಕೆ.ಪಿ.ಕುಲಕರ್ಣಿ, ಅವಿನಾಶ್ ಧರ್ಮಾಧಿಕಾರಿ ಎಂಬ ಇನ್ನೂ ಇಬ್ಬರು ಆಪರೇಟರ್‌ಗಳು ಆ ದಿನ ಟೆಲಿಫೋನ್ ಎಕ್ಸ್‌ಚೇಂಜ್‌ಗೆ ಬಂದರು. ಅವರು ಮೂರು ಕೋಣೆಗಳಿರುವ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಇಬ್ಬರಿಗೂ ಮದುವೆಯಾಗಿರಲಿಲ್ಲ. ನನಗೂ ಆ ಮನೆಯಲ್ಲಿಯೇ ಜಾಗ ಕೊಟ್ಟರು.

ಎಲ್ಲರೂ ತಲಾ ಹತ್ತು ಹತ್ತು ರೂಪಾಯಿ ಬಾಡಿಗೆ ಕೊಡುತ್ತಿದ್ದೆವು. ನೀರಿಗೆ ವಿಪರೀತ ಸಮಸ್ಯೆ. ತಳ್ಳುವ ಗಾಡಿಯಲ್ಲಿ ನೀರು ತಂದು ಕೊಡುವವನಿದ್ದ. ಅವನಿಗೆ ತಿಂಗಳಿಗೆ 10 ರೂಪಾಯಿ ಕೊಟ್ಟರೆ ದಿನಕ್ಕೆ ನಾಲ್ಕು ಕೊಡ ನೀರು ಕೊಡುತ್ತಿದ್ದ. ಒಂದು ಕೊಡ ಕುಡಿಯಲು, ಉಳಿದವು ಸ್ನಾನಕ್ಕೆ.
ಇಂಡಿ ತಾಲ್ಲೂಕು, ಉಪ ವಿಭಾಗಾದಿ ಕೇಂದ್ರವಾಗಿದ್ದರೂ ಬಹಳ ಹಿಂದುಳಿದಿತ್ತು. ಅಸಿಸ್ಟೆಂಟ್ ಕಮಿಷನರ್, ಡಿಎಸ್‌ಪಿ ಹುದ್ದೆಗಳಿದ್ದವು. ಕೃಷಿ, ವ್ಯಾಪಾರ ಆಧಾರಿತ ಬದುಕು ಬಹುಪಾಲು ಜನರದ್ದು. ಖಾನಾವಳಿಯಲ್ಲಿ ನಮ್ಮ ಊಟ. ತಿಂಗಳಿಗೆ 40 ರೂಪಾಯಿ ಕೊಟ್ಟರೆ ಸ್ವಾದಿಷ್ಟವಾದ ಊಟ ಸಿಗುತ್ತಿತ್ತು.

ಟೆಲಿಫೋನ್ ಎಕ್ಸ್‌ಚೇಂಜ್‌ನಲ್ಲಿ ಅಷ್ಟೇನೂ ಕೆಲಸವಿರುತ್ತಿರಲಿಲ್ಲ. ಹತ್ತಿರದಲ್ಲಿ ಇದ್ದ ಗ್ರಂಥಾಲಯಕ್ಕೆ ಹೋಗುವ ಅಭ್ಯಾಸ ಬೆಳೆಸಿಕೊಂಡೆ. ಎಕ್ಸ್‌ಚೇಂಜ್ ಎದುರಲ್ಲೇ ಚೌಧರಿ ಎಂಬ ವಕೀಲರ ಮನೆಯಿತ್ತು. ಅವರ ಪರಿಚಯವಾಯಿತು. ಅವರ ಮನೆಯಲ್ಲಿ ಒಳ್ಳೊಳ್ಳೆಯ ಪುಸ್ತಕಗಳಿದ್ದವು. ಆಗ ಇದ್ದ ಪ್ರಮುಖ ಇಂಗ್ಲಿಷ್ ಪತ್ರಿಕೆಗಳು `ಇಂಪ್ರಿಟ್', `ಇಲ್ಲಸ್ಟ್ರೇಟೆಡ್ ವೀಕ್ಲಿ'. `ಇಂಪ್ರಿಟ್' ತಿಂಗಳಿಗೆ ಒಮ್ಮೆಯೋ ಎರಡು ಸಲವೋ ಓದಲು ಸಿಗುತ್ತಿತ್ತು. `ಇಲ್ಲಸ್ಟ್ರೇಡೆಟ್ ವೀಕ್ಲಿ' ಪ್ರತಿ ವಾರ ಬರುತ್ತಿತ್ತು. ಅವನ್ನೂ ಅಲ್ಲಿ ಓದುತ್ತಿದ್ದೆ. ಜವಾಹರಲಾಲ್ ನೆಹರು ಬರೆದ `ಡಿಸ್ಕವರಿ ಆಫ್ ಇಂಡಿಯಾ', `ಗ್ಲಿಮ್ಸಸ್ ಆಫ್ ದಿ ವರ್ಲ್ಡ್ ಹಿಸ್ಟರಿ' ಕೃತಿಗಳನ್ನು ಅವರ ಮನೆಯಿಂದ ತಂದು ಓದಿದೆ. ದೇಶ, ವಿಶ್ವದ ಇತಿಹಾಸದ ಬಗೆಗೆ ಆಳವಾದ ಅರಿವು ಮೂಡಿದ್ದು ಆ ಓದಿನಿಂದಲೇ. ಆ ಎರಡೂ ಕೃತಿಗಳು ನನ್ನನ್ನು ಬಹುವಾಗಿ ಪ್ರಭಾವಿಸಿದವು.

ಇಂಡಿ, ಸಿಂಧಗಿ ಎರಡೂ ತಾಲ್ಲೂಕಿನ ಟೆಲಿಫೋನ್ ಲೈನ್‌ಗಳು ನಮ್ಮ ಎಕ್ಸ್‌ಚೇಂಜ್ ವ್ಯಾಪ್ತಿಗೆ ಸೇರಿದ್ದವು. ಆಗೆಲ್ಲಾ `ಫಿಸಿಕಲ್ ಲೈನ್'. ನಾಲ್ಕೈದು ಆಪರೇಟರ್‌ಗಳಷ್ಟೇ ಇದ್ದರು. ಮದುವೆಯಾದವರು ವಿಜಾಪುರದಲ್ಲಿ ಮನೆ ಮಾಡಿಕೊಂಡಿದ್ದರು. ಅಲ್ಲಿಂದ ದಿನವೂ ಕೆಲಸಕ್ಕೆ ಬಂದು, ಹೋಗುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ ಮತ್ತಿತರ ಕೆಲಸಗಳಿಂದಾಗಿ ಅವರು ಮೇಲಿಂದ ಮೇಲೆ ರಜಾ ಹಾಕುತ್ತಿದ್ದರು. ನನಗೆ ಆಗ ತಿಂಗಳಿಗೆ 233 ರೂಪಾಯಿ ಸಂಬಳ.

ಓವರ್ ಟೈಮ್ ಮಾಡಿದರೆ ಪ್ರತಿ ಗಂಟೆಗೆ ಒಂದು ರೂಪಾಯಿ ನಲವತ್ತು ಪೈಸೆ ಹೆಚ್ಚು ಸಿಗುತ್ತಿತ್ತು. ಭಾನುವಾರ ಓವರ್ ಟೈಮ್ ಮಾಡಿದರೆ ಪ್ರತಿ ಗಂಟೆಗೆ ಎರಡು ರೂಪಾಯಿ ಹತ್ತು ಪೈಸೆ ಕೊಡುತ್ತಿದ್ದರು. ತಿಂಗಳಿಗೆ ಓವರ್ ಟೈಮ್ ಹಣವೂ ಸೇರಿ 270 ರಿಂದ 275 ರೂಪಾಯಿ ಬರುತ್ತಿತ್ತು. ಆಗ ಒಂದು ತೊಲ ಬಂಗಾರದ ಬೆಲೆ 270 ರೂ. ತಿಂಗಳಿಗೆ ಊಟ-ತಿಂಡಿಗೆ 60 ರೂಪಾಯಿ ಖರ್ಚಾದರೆ, ಬಾಡಿಗೆಗೆ 14 ರೂಪಾಯಿ ಹೋಗುತ್ತಿತ್ತು. 200 ರೂಪಾಯಿಯಷ್ಟು ಉಳಿಯುತ್ತಿತ್ತು. ತಂದೆಗೆ 80 ರೂಪಾಯಿ ಮನಿ ಆರ್ಡರ್ ಮಾಡುತ್ತಿದ್ದೆ. ಉಳಿದದ್ದು ಬ್ಯಾಂಕ್‌ನಲ್ಲಿ ನನ್ನ ಉಳಿತಾಯ. ಸಂತೋಷದ ಬದುಕು ಅದು.

ಒಮ್ಮೆ ವಿಶ್ವ ಸಂಪರ್ಕ ದಿನ ಆಚರಿಸಿದರು. ಆಗ ಟೆಲಿಫೋನ್ ಹಾಗೂ ಟೆಲಿಕಾಂ ಇಲಾಖೆಗಳೆರಡೂ ಒಂದೇ ಕಡೆ ಇದ್ದವು. ಎಸ್. ಕೃಷ್ಣಕುಮಾರ್ ಎಂಬುವರು ಹೊಸದಾಗಿ ಅಸಿಸ್ಟೆಂಟ್ ಕಮಿಷನರ್ ಆಗಿ ಬಂದಿದ್ದರು. 1969ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅವರು. ಇತ್ತೀಚೆಗೆ ರಾಜ್ಯಪಾಲರಿಗೂ ಸಲಹೆಗಾರರಾಗಿ ಕೆಲಸ ಮಾಡಿ ನಿವೃತ್ತಿಯಾದವರು. ತುಂಬಾ ಒಳ್ಳೆಯ ಅಧಿಕಾರಿ. ಆ ಸಮಾರಂಭದಲ್ಲಿ ನಾನು ಇಂಗ್ಲಿಷ್‌ನಲ್ಲಿ ಸ್ವಾಗತ ಭಾಷಣ ಮಾಡಿದೆ. ಅದನ್ನು ಕೇಳಿ ಕೃಷ್ಣಕುಮಾರ್ ಖುಷಿಪಟ್ಟರು. ತಮ್ಮ ಮನೆಗೆ ಒಮ್ಮೆ ಬರುವಂತೆ ನನ್ನನ್ನು ಕರೆದರು.

ಎರಡು ದಿನಗಳ ನಂತರ ಒಂದು ಸಂಜೆ ಅವರ ಮನೆಗೆ ಹೋದೆ. ಅವರು ನನ್ನ ಹುಟ್ಟಿದ ದಿನಾಂಕ, ಓದು, ಕೌಟುಂಬಿಕ ಹಿನ್ನೆಲೆ ಎಲ್ಲವನ್ನೂ ಕೇಳಿದರು. ದೂರ ಶಿಕ್ಷಣದ ಮೂಲಕ ಪದವಿ ಓದುವ ಅವಕಾಶದ ಕುರಿತು ಮನವರಿಕೆ ಮಾಡಿಕೊಟ್ಟರು. ನಾನು ಮುಕ್ತ ವಿಶ್ವವಿದ್ಯಾಲಯದ ಮೂಲಕ ಬಿ.ಎ. ಕಲಿಯಲು ನಿರ್ಧರಿಸಿದ್ದೇ ಅವರ ಪ್ರೇರಣೆಯಿಂದ.

ಇಂಡಿಯಲ್ಲಿ ದಿನದ ಬಹುಪಾಲು ಟೆಲಿಫೋನ್ ಎಕ್ಸ್‌ಚೇಂಜ್‌ನಲ್ಲೇ ಕೂರುತ್ತಿದ್ದೆ. ಪೊಲೀಸ್ ಇಲಾಖೆಯ ಅನೇಕರ ಸಂಪರ್ಕ ಬೆಳೆಯಿತು. ಡಿಸಿ, ಡಿವಿಷನಲ್ ಕಮಿಷನರ್, ಎಸ್‌ಪಿ, ಡಿಎಸ್‌ಪಿ ಮೊದಲಾದವರಿಗೆ ಫೋನ್ ಕರೆಗಳನ್ನು ಸಂಪರ್ಕಿಸುವುದು ಮಾಮೂಲಾಗಿತ್ತು. ನನಗೆ ಯಾರು ಹೆಚ್ಚು ಗೌರವ ಕೊಡುತ್ತಿದ್ದರೋ ಅಂಥವರು ಕರೆ ಸಂಪರ್ಕಿಸುವಂತೆ ಕೇಳಿದಾಗ, ಮೊದಲು ಸಂಪರ್ಕ ಕಲ್ಪಿಸಿ ಆಮೇಲೆ `ಟ್ರಂಕಾಲ್' ಬುಕಿಂಗ್ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದೆ. ಕೆಲವು ವರ್ತಕರು ಕೂಡ ನನ್ನ ಈ ಸ್ವಭಾವವನ್ನು ಮೆಚ್ಚಿಕೊಂಡಿದ್ದರು. ಕಾಲಕ್ರಮೇಣ ಪೊಲೀಸರು, ವರ್ತಕರಿಗೆ ನನ್ನ ಮೇಲಿನ ಗೌರವ ಹೆಚ್ಚಾಯಿತು.

ಊರಿನಲ್ಲಿದ್ದ ನಿರುದ್ಯೋಗಿ ಯುವಕರು ನನ್ನಲ್ಲಿಗೆ ಏನಾದರೂ ಅವಕಾಶ ಇದ್ದರೆ ಸೂಚಿಸಿ ಎಂದು ಕೇಳಲು ಬರುತ್ತಿದ್ದರು. ನಾನೇ ಅವರಿಗೆ ಅರ್ಜಿ ತುಂಬಿ ಕೊಡುತ್ತಿದ್ದೆ. ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯವಿರುವ ಪಾಠ ಕೂಡ ಮಾಡುತ್ತಿದ್ದೆ. ಸಂದರ್ಶನಕ್ಕೆಂದು ಬೆಂಗಳೂರಿಗೋ, ಧಾರವಾಡಕ್ಕೋ ಅವರೆಲ್ಲಾ ಹೋಗುವ ಸಂದರ್ಭ ಬಂದಾಗ ನಾನೂ ಅವರ ಜೊತೆ ಹೋಗುತ್ತಿದ್ದೆ. ಆ ಯುವಕರ ತಂದೆ-ತಾಯಿ ನನಗೂ ರೈಲು ಪ್ರಯಾಣದ ಖರ್ಚು ಕೊಟ್ಟು ಕಳುಹಿಸುತ್ತಿದ್ದರು. ಹಾಗೆ ನನ್ನ ಪಾಠ ಕೇಳಿದ ಹತ್ತು ಹದಿನೈದು ಯುವಕರಲ್ಲಿ ಆಮೇಲೆ ಕೆಲವರು ಕೆ.ಎ.ಎಸ್ ಅಧಿಕಾರಿಗಳಾದರು. ಇನ್ನು ಕೆಲವರು ಬ್ಯಾಂಕ್‌ಗಳಲ್ಲಿ ಕೆಲಸಕ್ಕೆ ಸೇರಿದರು. ನಾನು ಬಿ.ಎ. ಮೊದಲ ವರ್ಷದಲ್ಲಿ ಕಲಿಯುವಾಗ ನನಗಿಂತ ಎರಡು ಮೂರು ವರ್ಷ ಹಿರಿಯರಿಗೂ ಇಂಗ್ಲಿಷ್ ಪಾಠ ಹೇಳುತ್ತಿದ್ದೆ.

ಟೆಲಿಫೋನ್ ಎಕ್ಸ್‌ಚೇಂಜ್‌ನಲ್ಲಿ ಅನುಭವ ಹೆಚ್ಚಾಗುತ್ತಾ ಹೋದಂತೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಸಬ್ ಇನ್ಸ್‌ಪೆಕ್ಟರ್‌ಗಳು ನನಗೆ ಆಪ್ತರಾದರು. ಆಗ ಘೋರ ಅಪರಾಧ ಪ್ರಕರಣಗಳ ಕುರಿತು `ಗ್ರೇವ್ ಕ್ರೈಮ್ ರಿಪೋರ್ಟ್' ಸಿದ್ಧಪಡಿಸಬೇಕಿತ್ತು. ಪೊಲೀಸ್ ಇಲಾಖೆಯ ರೈಟರ್‌ಗಳು ಕರಡು ಪ್ರತಿ ಸಿದ್ಧಪಡಿಸಿ, ಸೀದಾ ನನ್ನ ಮನೆಗೆ ತರುತ್ತಿದ್ದರು.

ಅವರಿಗೆ ನನ್ನ ಇಂಗ್ಲಿಷ್ ಮೇಲೆ ನಂಬಿಕೆ. ಅದನ್ನು ನಾನು ತಿದ್ದಿ, ಸೂಕ್ತ ಬದಲಾವಣೆಗಳನ್ನು ಸೂಚಿಸುತ್ತಿದ್ದೆ. ಆಮೇಲೆ ತಿದ್ದಿದ ಪ್ರತಿಯನ್ನು ಡಿಎಸ್‌ಪಿ ಅವಗಾಹನೆಗೆ ಕಳುಹಿಸುತ್ತಿದ್ದರು. ಬರೆಯುವಾಗ ಯಾವುದಾದರೂ `ಸ್ಪೆಲಿಂಗ್', ವ್ಯಾಕರಣ ಕುರಿತು ಅನುಮಾನ ಬಂದರೆ ನನಗೆ ಫೋನ್ ಮಾಡುತ್ತಿದ್ದರು. ಅಷ್ಟು ಬಾಂಧವ್ಯ ನನ್ನ, ಅವರ ನಡುವೆ ಮೂಡಿತು. ಬರಬರುತ್ತಾ ಪೊಲೀಸ್ ಇಲಾಖೆಗೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆ, ಅಲ್ಲಿನ ಕೆಲಸಗಳ ಸ್ವರೂಪ ನನಗೆ ಅರಿವಾಯಿತು.

ಯಾವುದಾದರೂ ಠಾಣೆಗೆ ಪರಿಶೀಲನೆಗೆಂದು ಉನ್ನತ ಅಧಿಕಾರಿಗಳು ಬರುವವರಿದ್ದರೆ, ದಾಖಲೆಗಳು ಸಮರ್ಪಕವಾಗಿವೆಯೇ ಎಂದು ಗಮನಿಸುವಂತೆ ಸಬ್ ಇನ್ಸ್‌ಪೆಕ್ಟರ್ ಅಥವಾ ಇನ್ಸ್‌ಪೆಕ್ಟರ್‌ಗಳು ನಮ್ಮ ಮನೆಗೇ ರೈಟರ್‌ಗಳನ್ನು ಕಡತಗಳ ಸಮೇತ ಕಳುಹಿಸುತ್ತಿದ್ದರು. ಅವರಿಗೆ ನನ್ನ ಮೇಲೆ ಅಷ್ಟು ವಿಶ್ವಾಸ.

ಮೊಟ್ಟ ಮೊದಲಿಗೆ ಡಿಎಸ್‌ಪಿ ಆಫೀಸ್‌ಗೆ ವೈರ್‌ಲೆಸ್ ಬಂದಿತು. ಅದನ್ನು ಬಳಸುವುದು ಹೇಗೆ ಎಂಬುದನ್ನೂ ನಾನು ಕಲಿತೆ. ಡಿಎಸ್‌ಪಿ ಅವರಿಗೆ ನನ್ನ ಮೇಲೆ ಕಾಳಜಿ. ವಿಜಾಪುರಕ್ಕೆ ಆಗಾಗ ಪುಸ್ತಕ ಕೊಂಡುಕೊಳ್ಳಲು ಹೋಗುವುದು ನನ್ನ ಅಭ್ಯಾಸ. ಅವರು ನಾನು ಹೊರಟಾಗಲೆಲ್ಲಾ ಜೀಪ್‌ನಲ್ಲಿ ನನ್ನನ್ನು ಕಳುಹಿಸಿಕೊಡುತ್ತಿದ್ದರು. ಅವರಿಗೂ ಕೆಲಸವಿದ್ದಲ್ಲಿ ಇಡೀ ದಿನ ಅವರೊಟ್ಟಿಗೆ ನನ್ನನ್ನೂ ಸುತ್ತಾಡಿಸುತ್ತಿದ್ದರು. ಊಟ ಕೊಡಿಸಿ, ಸಂಜೆ ಹೊತ್ತಿಗೆ ಇಂಡಿ ತಲುಪಿಸುತ್ತಿದ್ದರು. ಹತ್ತು ಹದಿನೈದು ರೂಪಾಯಿ ಬೆಲೆಯ ಪುಸ್ತಕ ಕೊಳ್ಳಲು ಪೊಲೀಸ್ ಜೀಪ್‌ನಲ್ಲಿ ಅಷ್ಟು ದೂರ ಹೋಗುವ ಯೋಗ ನನ್ನದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.