ADVERTISEMENT

ಚಂದಾವರ್ಕರ್ ತೋರಿದ ಹಾದಿ

ಶಂಕರ ಬಿದರಿ
Published 13 ಜುಲೈ 2013, 19:59 IST
Last Updated 13 ಜುಲೈ 2013, 19:59 IST

ಫಜಲ್‌ಪುರ ಬಹಳ ಹಿಂದುಳಿದ ತಾಲ್ಲೂಕಾಗಿತ್ತು. ರಸ್ತೆಗಳು ಹದಗೆಟ್ಟಿದ್ದವು; ಇರಲೇ ಇಲ್ಲ ಎಂದರೂ ತಪ್ಪಲ್ಲ. ಅಲ್ಲಿಗೆ ನಾನು ಹೋದಾಗ `ಲೆವಿ' ವಸೂಲು ಮಾಡುವುದು ಮುಖ್ಯ ಕೆಲಸವಾಗಿತ್ತು. ಆಹಾರಧಾನ್ಯಗಳ ಸಮಸ್ಯೆ ಇದ್ದಿದ್ದರಿಂದ ರೈತರು ತಾವು ಬೆಳೆದಿದ್ದರಲ್ಲಿ ಒಂದಿಷ್ಟನ್ನು ಕೊಡಲೇಬೇಕಿತ್ತು.

ತಹಸೀಲ್ದಾರ್ ಆಗಿ ಗಾಣಗಾಪುರ ದೇವಸ್ಥಾನದ ಕಾರ್ಯದರ್ಶಿಯೂ ಆಗಿದ್ದೆ. ಅದರ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುವ ಹೊಣೆ ನನ್ನ ಮೇಲಿತ್ತು. ದಿನವೂ ಮುಂಜಾನೆ ನಾನು ವಾಕಿಂಗ್ ಹೋಗುತ್ತಿದ್ದೆ. ಶಿವಪುರ ಎಂಬ ಹಳ್ಳಿಯಲ್ಲಿ ವಾಕ್ ಹೋದವನು ಕಲ್ಲಿನ ಬೆಂಚಿನ ಮೇಲೆ ಕುಳಿತೆ. ಕಣ್ಣಾಡಿಸಿದಾಗ ಹತ್ತಿರದ ಹೊಲಕ್ಕೆ ಹಾಕಿದ್ದ ಕಲ್ಲಿನ ಕಾಂಪೌಂಡ್ ಗಮನ ಸೆಳೆಯಿತು. ಅದರ ಮೇಲೆ ಸುಂದರವಾಗಿ ಕೆತ್ತಿದ ಮೂರ್ತಿಗಳಿದ್ದವು.

ಹತ್ತಿರಕ್ಕೆ ಹೋಗಿ, ಕಲ್ಲುಗಳನ್ನು ತೆಗೆಸಿದಾಗ ಸುಮಾರು ಮೂರ್ತಿಗಳು ಸಿಕ್ಕವು. ಬಹಳ ಹಿಂದೆ ಪರಕೀಯರು ದೇವಸ್ಥಾನ ನಾಶಪಡಿಸಿದಾಗ ಎಸೆದಿರಬಹುದಾದ ಮೂರ್ತಿಗಳು ಅವು. ಅವುಗಳಲ್ಲಿ ಕಪ್ಪುಶಿಲೆಯ ಶಿವಮೂರ್ತಿಯೊಂದನ್ನು ನಾನು ಈಗಲೂ ನೆನಪಾಗಿ ಇಟ್ಟುಕೊಂಡಿದ್ದೇನೆ. ನಾನು ತಹಸೀಲ್ದಾರ್ ಆಗಿದ್ದಾಗ `ಡೆಬ್ಟ್ ರಿಲೀಫ್ ಆಕ್ಟ್' ಜಾರಿಗೆ ಬಂದಿತ್ತು. 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸಬೇಕಾದ ಕಾಯ್ದೆ ಅದು.

ADVERTISEMENT

ಅದರಂತೆ ನಾನು ಬಡವರಿಗೆ ನೆರವಾದೆ. ದುಬಾರಿ ಬಡ್ಡಿಗೆ ಅವರು ಒತ್ತೆ ಇಟ್ಟಿದ್ದ ಬಂಗಾರದ ಆಭರಣಗಳು, ಪಾತ್ರೆ-ಪಡಗಗಳನ್ನು ಬಿಡಿಸಿಕೊಟ್ಟೆ. ಅದೇ ಕಾಯ್ದೆಯ ಒಂದು ಪ್ರಮುಖ ಕಾರ್ಯಕ್ರಮದ ಅನ್ವಯ ಬಳ್ಳೂರಗಿ ಎಂಬ ಗ್ರಾಮಕ್ಕೆ ಹೋದೆ. ಅಲ್ಲಿ ದಲಿತರ ಕೇರಿಗೆ ಹೋಗಲು ಮೂರು ನಾಲ್ಕು ಅಡಿ ರಸ್ತೆ ಮಾತ್ರ ಇತ್ತು. ನಕ್ಷೆಯಲ್ಲಿ ನೋಡಿದರೆ 33 ಅಡಿ ರಸ್ತೆ (ಒಂದು ಚೈನ್) ಎಂದು ಉಲ್ಲೇಖ ಮಾಡಲಾಗಿತ್ತು. ರಸ್ತೆಯ ಎಡಬಲಕ್ಕೆ ಇದ್ದ ಹೊಲದವರು ಒತ್ತುವರಿ ಮಾಡಿದ್ದರು. ಅವರಿಗೆ ಮೂರು ಸಲ ನೋಟಿಸ್ ಕೊಟ್ಟರೂ ಎಚ್ಚೆತ್ತುಕೊಳ್ಳಲಿಲ್ಲ.

ಅರ್ಜುನ್ ಎಂಬ ರೆವಿನ್ಯೂ ಇನ್‌ಸ್ಪೆಕ್ಟರ್ ಅಲ್ಲಿದ್ದರು. ಅವರನ್ನು ಕರೆಸಿ, ಅವರಿಂದಲೇ ಬೆಂಕಿಪೊಟ್ಟಣ ಪಡೆದು ಎರಡೂ ಬದಿಗೆ ಇದ್ದ ಬೇಲಿಗೆ ಬೆಂಕಿ ಹಚ್ಚಿದೆ. ಎರಡು ದಿನ ಬೇಲಿ ಉರಿಯಿತು. ಆಮೇಲೆ ರಸ್ತೆ ತಂತಾನೇ ತೆರವಾಯಿತು. ದಲಿತರು ಓಡಾಡಲು ಇದ್ದ ಆ ರಸ್ತೆ ತೆರವು ಮಾಡಿಸಿದ ಕೀರ್ತಿ ನನಗೆ ಸಂದಿತು. ಅಲ್ಲಿನ ನಾಲ್ಕೈದು ದಲಿತರು ಅಫಜಲಪುರಕ್ಕೆ ಬಂದು, ರಸ್ತೆ ತೆರವು ಮಾಡಿಸಿಕೊಟ್ಟಿದ್ದಕ್ಕೆ ನನಗೆ ಹಾರ ಹಾಕಿ ಗೌರವಿಸಿದರು.

ಅಫಜಲಪುರ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿತ್ತು. ಆಹಾರಧಾನ್ಯಗಳನ್ನು ಪರಸ್ಪರ ರಾಜ್ಯಗಳಿಗೆ ಸಾಗಣೆ ಮಾಡುವುದನ್ನು ಆಗ ನಿಷೇಧಿಸಲಾಗಿತ್ತು. ಒಮ್ಮೆ ನಾನು ಗಡಿಯಲ್ಲಿ ನಿಂತು ಒಂದು ಲಾರಿಯನ್ನು ಹಿಡಿದೆ. ಅದರಲ್ಲಿ ಆಹಾರಧಾನ್ಯಗಳನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದರು. ಹಿಡಿದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಆಮೇಲೆ ಗೊತ್ತಾಯಿತು, ಅದನ್ನು ಸಾಗಿಸುತ್ತ್ದ್ದಿದುದು ಅಲ್ಲಿನ ಸಬ್ ಇನ್‌ಸ್ಪೆಕ್ಟರ್ ಎಂದು. ದೂರನ್ನು ನಾನು ವಾಪಸ್ ತೆಗೆದುಕೊಳ್ಳಲಿಲ್ಲ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದರು.

ತಹಸೀಲ್ದಾರ್ ಆಗಿ ಅಫಜಲಪುರದಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಇಲಾಖಾ ಪರೀಕ್ಷೆಗಳ ಫಲಿತಾಂಶ ಬಂದಿತು. ಈಗಿನಂತೆ ಆಗ ಎಲ್ಲೆಡೆ ಫಲಿತಾಂಶ ನೋಡಲು ಆಗುತ್ತಿರಲಿಲ್ಲ. ಪತ್ರಿಕೆಗಳಲ್ಲಿ ಫಲಿತಾಂಶ ಪ್ರಕಟವಾಗಿದೆ ಎಂದಷ್ಟೇ ಮುದ್ರಿತವಾಗುತ್ತಿತ್ತು. ಕೆ.ಪಿ.ಎಸ್.ಸಿ. ಕಚೇರಿಯಲ್ಲಷ್ಟೇ ಫಲಿತಾಂಶ ನೋಡಬೇಕಿತ್ತು. ನನ್ನ ಸ್ನೇಹಿತನೊಬ್ಬ ದ್ವಿತೀಯ ದರ್ಜೆ ಸಹಾಯಕನಾಗಿದ್ದ. ಅವನಿಗೆ ಟಪಾಲು ಬರೆದು, ನನ್ನ ಫಲಿತಾಂಶ ಏನಾಗಿದೆ ಎಂದು ತಿಳಿಸುವಂತೆ ಕೇಳಿಕೊಂಡೆ.

ಆ ಟಪಾಲಿಗೆ ಅವನು ಉತ್ತರ ಕೊಟ್ಟ: `ಸಾರಿ ಶಂಕರ್ ನೀನು ಯಾವುದರಲ್ಲಿಯೂ ಪಾಸಾಗಿಲ್ಲ'. ನನಗೆ ಭಾರಿ ಆಶ್ಚರ್ಯವಾಯಿತು. ಮತ್ತೊಮ್ಮೆ ಪರೀಕ್ಷೆ ಕಟ್ಟಲು ಅರ್ಜಿ ಹಾಕಿ ಹತ್ತು ದಿನಗಳಾಗಿತ್ತಷ್ಟೆ. ಸ್ನೇಹಿತ ಫೇಲಾಗಿದ್ದೆ ಎಂದು ತಿಳಿಸಿದ್ದನಲ್ಲ; ಅದರ ಮಾರ್ಕ್ಸ್‌ಕಾರ್ಡ್ ಬಂದಿತು. ಎಲ್ಲಾ ಏಳು ವಿಷಯಗಳಲ್ಲಿ ಮೊದಲ ದರ್ಜೆಯಲ್ಲಿ ಪಾಸಾಗಿದ್ದೆ.

ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲು ಬೆಂಗಳೂರಿಗೆ ಹೋದಾಗ ಆ ಸ್ನೇಹಿತನನ್ನು ಭೇಟಿಯಾದೆ. ಎಲ್ಲಾ ವಿಷಯಗಳಲ್ಲಿ ನಾನು ಫಸ್ಟ್‌ಕ್ಲಾಸ್‌ನಲ್ಲಿ ಪಾಸಾಗಿದ್ದರೂ ಫೇಲ್ ಎಂದು ತಿಳಿಸಿದ್ದು ಯಾಕೆ ಎಂದು ಕೇಳಿದೆ. ಫಲಿತಾಂಶದ ಪಟ್ಟಿಯಲ್ಲಿ ಅವನ ಕಣ್ಣು ಸೆಕೆಂಡ್ ಕ್ಲಾಸ್‌ನಿಂದ ಮೇಲಕ್ಕೆ ಹೋಗೇ ಇರಲಿಲ್ಲ.

ಜೀವನದಲ್ಲಿ ಎಂದೂ ಫಸ್ಟ್‌ಕ್ಲಾಸ್ ಬರದಿದ್ದ ಅವನು, ನಾನು ಕೂಡ ಫಸ್ಟ್‌ಕ್ಲಾಸ್ ಬರುವುದಿಲ್ಲ ಎಂದುಕೊಂಡಿದ್ದ. ಅವನು ಪ್ರಾಮಾಣಿಕವಾಗಿ `ಸೆಕೆಂಡ್ ಕ್ಲಾಸ್ ಎಂಬಲ್ಲಿ ಮಾತ್ರ ನೋಡಿದೆ. ನಿನ್ನ ಹೆಸರು ಇರಲಿಲ್ಲ' ಎಂದ. ನಾನು ಅವನನ್ನು ಛೇಡಿಸಿ, `ನಿನಗೆ ಫಸ್ಟ್‌ಕ್ಲಾಸ್ ಕಾಣುವುದೇ ಇಲ್ಲವಲ್ಲೋ' ಎಂದು ಚಟಾಕಿ ಹಾರಿಸಿ, ಚಹಾ ಕೊಡಿಸಿ ಕಳುಹಿಸಿದೆ. 

ಕೆಎಎಸ್ ಅಧಿಕಾರಿಯಾಗಿ ನಾನು ಸುಖವಾಗಿಯೇ ಇದ್ದೆ. ಐಪಿಎಸ್ ಬರೆಯಬೇಕು ಎಂಬ ಒಲವು ಮೊದಲು ಇರಲಿಲ್ಲ. ಯಾಕೆಂದರೆ, ಬೇರೆ ಯಾವುದಾದರೂ ರಾಜ್ಯಕ್ಕೆ ಹೋಗಿ ಕೆಲಸ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಬಹುದು ಎಂಬ ಯೋಚನೆ. ಐಎಎಸ್ ಪರೀಕ್ಷೆಯಲ್ಲಿ ಎಂಟು ಪೇಪರ್‌ಗಳಿದ್ದವು.

ಐಪಿಎಸ್ ಪರೀಕ್ಷೆಯಲ್ಲಿ ಇದ್ದದ್ದು ಆರೇ ಪೇಪರ್. ಹಾಗಾಗಿ ಅದನ್ನೇ ಬರೆಯೋಣ ಎಂದುಕೊಂಡು ಕೊನೆಗೂ ಪರೀಕ್ಷೆ ಕಟ್ಟಿದೆ. ಫಲಿತಾಂಶ ಪ್ರಕಟವಾಯಿತು. ಉತ್ತಮ ಅಂಕ ಗಳಿಸಿ ಪಾಸಾಗಿದ್ದೆ. ಪಟ್ಟಿಯ ಮೊದಲ ಹತ್ತು ಅಭ್ಯರ್ಥಿಗಳಲ್ಲಿ ನಾನೂ ಒಬ್ಬನಾಗಿದ್ದೆ.

ಪರೀಕ್ಷೆ ಪಾಸಾದ ಮೇಲೆಯೂ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲೇ ಇದ್ದೆ. ಮೆಡಿಕಲ್ ಆಫೀಸರ್ ಆಗಿದ್ದ ನನ್ನ ಪತ್ನಿಯ ವರ್ಗಾವಣೆಯ ಕುರಿತು ಆತಂಕ ಇತ್ತು. ಆಗ ಡಿ.ಸಿ. ಆಗಿದ್ದ ಚಂದಾವರ್ಕರ್ ನನಗೆ ಬುದ್ಧಿ ಹೇಳಿದರು. 1942ರಲ್ಲಿ ಮುಂಬೈನಲ್ಲಿ ಮಾಮಲೇದಾರ (ಇಲ್ಲಿನ ತಹಸೀಲ್ದಾರ್) ಆಗಿ ಕೆಲಸಕ್ಕೆ ಸೇರಿದ್ದ ಅವರು ಡಿ.ಸಿ. ಆಗಲು ಅಷ್ಟು ವರ್ಷ ಹಿಡಿದಿತ್ತು.

ತಾವು ವೃತ್ತಿಯಲ್ಲಿ ಹುದ್ದೆಯ ಮೆಟ್ಟಿಲುಗಳನ್ನು ಏರಲು ಎಷ್ಟು ತಡವಾಯಿತು ಎಂಬುದನ್ನು ಉದಾಹರಣೆಯಾಗಿ ಹೇಳಿ, ಐಪಿಎಸ್‌ಗೆ ಸೇರುವಂತೆ ಹುರಿದುಂಬಿಸಿದರು. ಉನ್ನತ ಅಧಿಕಾರಿಯಾಗಿ ಕೆಲಸ ಮಾಡುವ ದೊಡ್ಡ ಅವಕಾಶ ಅದು ಎಂದು ಮನವರಿಕೆ ಮಾಡಿಕೊಟ್ಟರು.

ಅವರೇ ರೈಲು ಟಿಕೆಟ್ ರಿಸರ್ವೇಷನ್ ಮಾಡಿಸಿ ದೆಹಲಿಗೆ ಕಳುಹಿಸಿಕೊಟ್ಟರು. 1978ರಲ್ಲಿ ಪಂಚಾಯಿತಿ, ಟಿಡಿಬಿ (ತಾಲ್ಲೂಕ ಡೆವಲೆಪ್‌ಮೆಂಟ್ ಬೋರ್ಡ್) ಚುನಾವಣೆಗಳಿಗೆ ನಾನು ಚುನಾವಣಾ ಅಧಿಕಾರಿಯಾಗಿದ್ದೆ. ಆ ಕೆಲಸ ಮುಗಿದ ತಕ್ಷಣ ದೆಹಲಿಗೆ ಹೋಗುವಂತೆ ಅವರು ರಿಸರ್ವೇಷನ್ ಮಾಡಿಸಿದ್ದರು.

ಆಗ ಬಸವಲಿಂಗಪ್ಪನವರು ರೆವಿನ್ಯೂ ಮಂತ್ರಿಯಾಗಿದ್ದರು. ರೆವಿನ್ಯೂ ಆಡಳಿತ ಬಹಳ ಬಿಗಿಯಾಗಿತ್ತು. ತುಂಬಾ ಕಟ್ಟುನಿಟ್ಟಾಗಿ ಸಾಲ ವಸೂಲು ಮಾಡುವಂತೆ ಆದೇಶಿಸಿದ್ದರು. ಪಂಪ್‌ಸೆಟ್ ಸಾಲ, ತಕಾವಿ ಸಾಲ ಎಲ್ಲವನ್ನೂ ವಸೂಲು ಮಾಡಬೇಕಿತ್ತು. ನಮ್ಮ ಡೆಪ್ಯುಟಿ ಕಮಿಷನರ್ ಪ್ರತಿ ತಿಂಗಳು `ಡಿಮಾಂಡ್ ಕಲೆಕ್ಷನ್ ಅಂಡ್ ಬ್ಯಾಲೆನ್ಸ್' ಸಭೆ ಮಾಡುತ್ತಿದ್ದರು.

ಸರ್ಕಾರಿ ಬಾಕಿಗಳ ಕುರಿತು ಅಲ್ಲಿ ಪುನರ್‌ವಿಮರ್ಶೆ ನಡೆಯುತ್ತಿತ್ತು. ಒಮ್ಮೆ ನನ್ನ ಡಿಮ್ಯಾಂಡ್ ಹಾಗೂ ಕಲೆಕ್ಷನ್ ಟ್ಯಾಲಿ ಆಗಲಿಲ್ಲ. ಹತ್ತು ಸಾವಿರ ರೂಪಾಯಿ ಲೆಕ್ಕದಲ್ಲಿ ವ್ಯತ್ಯಾಸ ಬರುತ್ತಿತ್ತು. ಬೆಳಿಗ್ಗೆ ಹತ್ತಕ್ಕೆ ಕೂತ ನಾನು ಕ್ಯಾಲ್‌ಕ್ಯುಲೇಟರ್‌ನಲ್ಲಿ ಎಷ್ಟು ಲೆಕ್ಕ ಹಾಕಿದರೂ ಟ್ಯಾಲಿ ಆಗಲಿಲ್ಲ. ಊಟದ ವೇಳೆ ಆಯಿತು. ಹೆಡ್ ಕ್ವಾರ್ಟರ್ಸ್ ಅಸಿಸ್ಟೆಂಟ್ ಊಟಕ್ಕೆ ಕರೆದರು.

ನಾನು ಲೆಕ್ಕದ ವಿಷಯಕ್ಕೆ ತಲೆ ಕೆಡಿಸಿಕೊಂಡಿರುವ ಸಂಗತಿಯನ್ನು ಅವರಿಗೆ ಹೇಳಿದೆ. ಅಲ್ಲಿ ಲೋಕನಾಥ್ ಎಂಬ ಶಿರಸ್ತೇದಾರ್ ಒಬ್ಬರಿದ್ದರು. ಭಾರಿ ಅನುಭವಿ. ಅವರಿಗೆ ಲೆಕ್ಕ ಸರಿಮಾಡುವಂತೆ ಹೇಳಿ, ನನ್ನನ್ನು ಊಟಕ್ಕೆ ಕರೆದುಕೊಂಡು ಹೋದರು. ಉಂಡು ಬರುವುದರೊಳಗೆ ಅವರು ಲೆಕ್ಕ ಸರಿಪಡಿಸಿದ್ದರು.

ನಿಜಾಮನ ಕಾಲದಲ್ಲಿ `ಗೂಲೇ ರೋಜಾ' ಎಂದು ಅಪೀಮು ಕಾಂಟ್ರಾಕ್ಟ್ ಕೊಡುತ್ತಿದ್ದರು; ಈಗ ಮದ್ಯದ ಗುತ್ತಿಗೆ ಕೊಡುತ್ತಾರಲ್ಲ ಹಾಗೆ. ಅದಕ್ಕೆ ಸಂಬಂಧಿಸಿದ ರೆಕಾರ್ಡ್ಸನ್ನು ಪೊಲೀಸ್ ಆಕ್ಷನ್ ಟೈಮಿನಲ್ಲಿ ಸುಟ್ಟುಹಾಕಲಾಗಿತ್ತು. ಅದರ ಬಾಬತ್ತಿಗೆ ಎಂಬಂತೆ ಹತ್ತು ಸಾವಿರ ರೂಪಾಯಿಯನ್ನು ಅವರು ಹೊಂದಿಸಿದ್ದರು.

ನನಗೆ ಅದು ಕೃಷ್ಣನ ಲೆಕ್ಕ ಎಂಬುದು ಗೊತ್ತಾಗಿ ಮನಸ್ಸಿಗೆ ಅಷ್ಟಾಗಿ ಒಪ್ಪಿಗೆಯಾಗಲಿಲ್ಲ. ಆದರೂ ಹಣ ಸರ್ಕಾರಕ್ಕೇ ಅಲ್ಲವೇ ಸಲ್ಲುವುದು ಎಂದು ಸುಮ್ಮನಾದೆ. ಮಧ್ಯಾಹ್ನ ಮೂರು ಗಂಟೆಯ ಸಭೆಗೆ ಪಕ್ಕಾ ಲೆಕ್ಕ ತೆಗೆದುಕೊಂಡೇ ಹೋಗುತ್ತಿದ್ದೇನೆ ಎಂಬ ಸಮಾಧಾನ ನನ್ನದಾಯಿತು.

ಅಸಿಸ್ಟೆಂಟ್ ಕಮಿಷನರ್‌ಗೆ ನಮ್ಮ ಊರಿನ ಕಡೆ ಪ್ರಾಂತಸಾಹೇಬ ಎನ್ನುತ್ತಿದ್ದರು. `ಆ ಪೋಸ್ಟ್ ಬಿಟ್ಟು ಫೌಜ್‌ದಾರ್ ಪೋಸ್ಟ್‌ಗೆ ಯಾಕೆ ಹೋಗುತ್ತೀಯೆ' ಎಂದು ಮನೆಯಲ್ಲಿ ಎಲ್ಲರೂ ಒತ್ತಡ ಹಾಕುತ್ತಿದ್ದರು. ಹಾಗಾಗಿ ಅಸಿಸ್ಟೆಂಟ್ ಕಮಿಷನರ್ ಆಗಿಯೇ ಇದ್ದುಬಿಡು ಎಂದು ಮನಸ್ಸು ಹೇಳುತ್ತಿತ್ತು. ಚಂದಾವರ್ಕರ್ ಸಾಹೇಬರು ಆಗ ಒತ್ತಾಯ ಮಾಡಿ, ರೈಲು ಟಿಕೆಟ್ ರಿಸರ್ವ್ ಮಾಡಿಸಿ ಕೊಡದೇ ಇದ್ದರೆ ನಾನು ಐಪಿಎಸ್ ಅಧಿಕಾರಿ ಆಗುತ್ತಲೇ ಇರಲಿಲ್ಲ.

ಅಸಿಸ್ಟೆಂಟ್ ಕಮಿಷನರ್ ಆಗಿ ನಾನು ಎರಡೇ ವರ್ಷ ಕೆಲಸ ಮಾಡಿದ್ದು. ಆದರೆ ಎಲ್ಲಾ ಕೆಲಸಗಳನ್ನು ಕಲಿತಿದ್ದೆ. ಸರ್ಕಾರದ ಸಾಲಗಳನ್ನು ನಮ್ಮದೇ ಸಾಲ ಎಂಬಂತೆ ವಸೂಲು ಮಾಡಿ ಅನೇಕ ಶ್ರೀಮಂತರನ್ನು ಎದುರುಹಾಕಿಕೊಂಡಿದ್ದೆ. ಜನರಿಗೆ ಉಪಯೋಗವಾಗುವ ಒಂದಿಷ್ಟು ಕೆಲಸ ಮಾಡಿಸಿದ ಸಮಾಧಾನವೂ ನನ್ನದಾಗಿತ್ತು. ಆ ಅನುಭವವನ್ನು ಬೆನ್ನಿಗಿಟ್ಟುಕೊಂಡೇ ಜುಲೈ 1978ರಲ್ಲಿ ಮಸ್ಸೂರಿನಲ್ಲಿ ತರಬೇತಿಗೆ ತಲುಪುವ ಸಲುವಾಗಿ ದೆಹಲಿ ರೈಲು ಹತ್ತಿದೆ.

ಮುಂದಿನ ವಾರ - ಐಪಿಎಸ್: ಮೊದಲ ಹೆಜ್ಜೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.