ADVERTISEMENT

ಧೀಮಂತರ ದಾರಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ಕಾಳಿದಾಸನ `ಅಭಿಜ್ಞಾನ ಶಾಕುಂತಲ~ ನಾಟಕದ ನಾಲ್ಕನೆಯ ಅಂಕ. ಶಕುಂತಲೆ ಪತಿಗೃಹಕ್ಕೆ ಹೊರಟುನಿಂತ ಸನ್ನಿವೇಶ. ಕಣ್ವಮುನಿಗಳು ಹೇಳುತ್ತಾರೆ: “ವತ್ಸೆ, ಇನ್ನು ನಿನಗೆ ಬುದ್ಧಿಯ ಮಾತು ಹೇಳುವುದಿದೆ. ನಾವೇನೋ ವನವಾಸಿಗಳು.

ಆದರೂ ಲೋಕವನ್ನು ಬಲ್ಲೆವು!”. ಈ ಮಾತಿಗೆ ಶಾರ್ಙ್ಗರವನ ಪ್ರತಿಕ್ರಿಯೆ: “ಬುದ್ಧಿಶಾಲಿಗಳಿಗೆ ಅಗೋಚರವಾದ ವಿಷಯ ಯಾವುದು ತಾನೇ ಇದೆ?” (“ನ ಖಲು ಧೀಮತಾಂ ಕಶ್ಚಿದವಿಷಯೋ ನಾಮ”).

ಇಲ್ಲಿರತಕ್ಕದ್ದು ಬರಿಯ ಬುದ್ಧಿಯ ಪ್ರಸಕ್ತಿಯಲ್ಲ, ದರ್ಶನದ ಪ್ರಸಕ್ತಿ; ಎರಡನೆಯದೇ ಮುಖ್ಯ. ಕಣ್ವರು ಋಷಿಗಳು; ತ್ರಿಕಾಲಜ್ಞಾನಿಗಳು. ಅವರ ದೃಷ್ಟಿಗೆ ಯಾವುದೂ ಹೊರತಲ್ಲ; ಅಲೌಕಿಕವಾದುದು, ಲೌಕಿಕವಾದುದು ಎಲ್ಲವೂ ಅದಕ್ಕೆ ವಿಷಯವೇ. ಕಣ್ವರು ಸಂನ್ಯಾಸಿಯಾಗಿಯೂ ಸಂಸಾರದ ಸ್ವರೂಪವನ್ನು ಬಲ್ಲರು; ಸ್ವಾನುಭವದಿಂದಲ್ಲ, ದರ್ಶನ ಸಾಮರ್ಥ್ಯದಿಂದ.

“ಬುದ್ಧಿಶಾಲಿಗಳಿಗೆ ಯಾವುದೂ ಅಗೋಚರವಲ್ಲ” ಎಂಬ ಸೂಕ್ತಿ ಋಷಿಗೆಂತೋ ಅಂತೆ ಕವಿಗೂ ಅನ್ವಯಿಸಬಲ್ಲುದು. (“ಋಷಿಯಲ್ಲದವನು ಕವಿಯಲ್ಲ”). ಕವಿಯ ಪ್ರತಿಭೆಯನ್ನು ನಿರ್ದೇಶಿಸಬಲ್ಲುದು. ಕವಿ ತನ್ನ ಪ್ರತಿಭಾ ಬಲದಿಂದ ಹಿಂದು ಮುಂದುಗಳನ್ನು ಅಂತರಂಗ ಬಹಿರಂಗಗಳನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲ; ಎಲ್ಲವನ್ನೂ ಕುಳಿತಲ್ಲೆ ಕಾಣಬಲ್ಲ.

ಒಂದು ನಿರ್ದಿಷ್ಟ ವರ್ಗದ ಜನಜೀವನವನ್ನು ಆ ವರ್ಗದಿಂದ ಬಂದ ಲೇಖಕನಷ್ಟೆ ಚಿತ್ರಿಸಬಲ್ಲ.  ಉಳಿದವರಿಗೆ ಅದು ಅಗಮ್ಯ ಎಂಬ ವಾದವೊಂದು ಇತ್ತೀಚೆಗೆ ತಲೆಯೆತ್ತಿದೆಯಷ್ಟೆ. ಇದು ಸಂಪೂರ್ಣ ಸಮರ್ಪಕವೆಂದು ಹೇಳಲಾಗದು. ನಿಜ, ಆಯಾ ವರ್ಗದಿಂದ ಬಂದವರಿಗೆ ಅದರ ಪರಿಚಯ ಚೆನ್ನಾಗಿರುತ್ತದೆ, ಅದರ ಬಾಹ್ಯ ವಿವರಗಳನ್ನು ಅವರು ಅನನ್ಯವಾಗಿ ಕೊಡಬಲ್ಲರು.

ಆದರೆ ಅದರ ಅಂತರಂಗವನ್ನು ಅವರು ಪ್ರವೇಶಿಸಬಲ್ಲರೆಂಬ ಭರವಸೆಯಿಲ್ಲ. ಪ್ರತಿಭಾಶಾಲಿಯೂ, ಸೂಕ್ಷ್ಮ ಸಂವೇದನಶೀಲರೂ ಆದ ಕವಿ ತನ್ನದಲ್ಲದ ಬೇರೆ ವರ್ಗದ ಜನಜೀವನವನ್ನೂ ಅರ್ಥವತ್ತಾಗಿ ಚಿತ್ರಿಸಬಲ್ಲ. ಕುವೆಂಪು, ಕಾರಂತ ಮುಂತಾದವರು ಕೊಟ್ಟಿರುವ ದಲಿತ ಜೀವನದ ಚಿತ್ರಣವನ್ನು ಉದಾಹರಣೆಯಾಗಿ ಗಮನಿಸಬಹುದು.

(ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು~ ಅತ್ಯುತ್ತಮ ನಿದರ್ಶನವಾಗಬಲ್ಲುದು). ವಾಸ್ತವಿಕತೆ ಬೇರೆ, ಸತ್ಯ ಬೇರೆ; ಸತ್ಯ ಪ್ರತಿಭಾಗೋಚರ.
ಯಾವೊಬ್ಬ ಲೇಖಕ ತನ್ನ ವರ್ಗದ ಬಾಳನ್ನು ಬಣ್ಣಿಸುವಾಗ ರಾಗದ್ವೇಷ ವಶವಾಗಿ, ವ್ಯಕ್ತಿನಿಷ್ಠವಾಗಿ ಬರೆಯುವ ಅಪಾಯವಿದೆ;

ADVERTISEMENT

ಅದರಿಂದ ಬರವಣಿಗೆ ಕಲಾತ್ಮಕತೆಯನ್ನು ಕಳೆದುಕೊಳ್ಳಬಹುದು. ಆದರೆ ಅನ್ಯವರ್ಗದ ಲೇಖಕ ಹೆಚ್ಚು ವಸ್ತುನಿಷ್ಠವಾಗಿ, ಕಲಾತ್ಮಕವಾಗಿ ಆ ವಸ್ತುವನ್ನು ನಿರ್ವಹಿಸುವ ಸಾಧ್ಯತೆಯುಂಟು.

ಹೀಗೆಯೆ ಹೆಣ್ಣಿನ ಹೃದಯ ವ್ಯಾಪಾರಗಳನ್ನು ಗಂಡು, ಗಂಡಿನ ಹೃದಯವನ್ನು ಹೆಣ್ಣು ಯಶಸ್ವಿಯಾಗಿ ಚಿತ್ರಿಸಬಹುದು. ಷೇಕ್ಸ್‌ಪಿಯರ್ ಚಿತ್ರಿಸಿರುವ ಲೇಡಿ ಮ್ಯಾಕ್‌ಬೆತ್, ಕ್ಲಿಯೋಪಾತ್ರ ಡೆಸ್ಡೆಮೊನ ಮುಂತಾದ ಪಾತ್ರಗಳನ್ನು ನಿದರ್ಶನವಾಗಿ ಪರಿಗಣಿಸಬಹುದು.

ಅಂತೂ ಧೀಮಂತರಿಗೆ ಯಾವುದೂ ಅವಸ್ತುವಲ್ಲ. ಧೀಮಂತಿಕೆಯೆಂದರೆ ಬುದ್ಧಿಯೂ ಹೌದು, ಪ್ರತಿಭೆಯೂ ಹೌದು. (`ಧೀ~ ಶಬ್ದಕ್ಕೆ ಎರಡು ಅರ್ಥಗಳೂ ಉಂಟು.) ವ್ಯಕ್ತಿತ್ವದಲ್ಲಿ ಎರಡರ ಸಾಮರಸ್ಯವುಳ್ಳವನು ಉತ್ತಮ ಕಲಾವಿದನಾಗಬಲ್ಲ; ಕವಿಯಾಗಬಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.