ನಾನು ನನ್ನೊಂದು ಕವನಸಂಕಲನದ ಮುನ್ನುಡಿಯಲ್ಲಿ ಹೀಗೆ ಹೇಳಿದ್ದೇನೆ. ಕವಿತೆ ನನ್ನೊಳಗಿನ ನಿರಾಳ. ಬರಹದಲ್ಲಿ ನನ್ನ ಮೊದಲ ಒಲವು, ನನ್ನ ಧರ್ಮ, ನನ್ನ ದೇವರು. ನನ್ನೊಳಗಿನ ನಿರಾಳಗಳನ್ನು ಮುಟ್ಟಲು ನಿಗಳಗಳೊಳಗಿಂದಲೇ ಕೈಚಾಚುತ್ತಿದ್ದೇನೆ
ಜಗದ ನಿಗಳಗಳನ್ನು ಕಟ್ಟಿಕೊಂಡೇ ನಿರಾಳವನ್ನು ಹುಡುಕಲು ಹೆಜ್ಜೆಯಿಟ್ಟಾಗ ನಿನದಿಸಿದ ಗೆಜ್ಜೆನಾದ ನನ್ನ ಕವಿತೆ.
ಕವಿತೆ ನನ್ನೊಳಗೆ ಬೆಳೆದಿದ್ದು ಹೇಗೆ ಎಂದು ಯೋಚಿಸಿದಂತೆಲ್ಲ ನನಗೆ ನನ್ನ ಬಾಲ್ಯದಲ್ಲಿ ಕತೆಗಳನ್ನು ಹಾಡುಗಳನ್ನು ಹೇಳಿದ ಅಮ್ಮ ಅಕ್ಕಂದಿರು, ದೈನಂದಿನ ಜೀವನದ ಸಣ್ಣಪುಟ್ಟ ಘಟನೆಗಳನ್ನೇ ಕತೆಯಾಗಿ ಹಾಡಾಗಿ ಹೊಸೆದುಬಿಡುತ್ತಿದ್ದ ಹೆಸರಿಲ್ಲದ ಕವಿಗಳು ನೆನಪಾಗುತ್ತಾರೆ. ಅವರಿಗೆ ಯಾರೂ ಪಂಪ- ರನ್ನ- ಕುಮಾರವ್ಯಾಸರನ್ನು ಪಾಠ ಹೇಳಿರಲಿಲ್ಲ. ಅವರು ವರ್ಜೀನಿಯಾ ವೂಲ್ಫ್ ತನ್ನ ಲೇಖನಗಳಲ್ಲಿ ಚಿತ್ರಿಸಿದ `ಷೇಕ್ಸ್‌ಪಿಯರನ ಸೋದರಿಯರು'.
ನನ್ನಿಬ್ಬರು ಅಜ್ಜಿಯರು ಮತ್ತು ಅಜ್ಜಿಯ ಗೆಳತಿಯೊಬ್ಬರು ಮುಟ್ಟಿದ್ದನ್ನೆಲ್ಲ ಚಿನ್ನವಾಗಿಸುವ ಸ್ಪರ್ಶಮಣಿಗಳಂತೆ ದಿನದಿನದ ಪಾಡುಗಳನ್ನು ಹಾಡಾಗಿಸಿದ್ದರು. ಸಮಷ್ಟಿಯ ಬದುಕು ಆಧುನಿಕತೆಗೆ ತೆರೆದುಕೊಂಡಾಗ ಜಗತ್ತನ್ನೆಲ್ಲ ಬೆಳಗುವ ಬಿಸಿಲು ಬೀಸೋಕಲ್ಲಿನ ಮೂಲೆಗೂ ಬೀಳುವಂತೆ ಅವರ ಮೇಲೂ ಸ್ವಲ್ಪ ವಿದ್ಯಾಭ್ಯಾಸದ ಬೆಳಕು, ಉದ್ಯೋಗದ ಬಿಸಿಲು ಬಿದ್ದವು. ಜೊತೆಗೆ ಹೊಸ ಜವಾಬ್ದಾರಿಗಳೂ ಟಿಸಿಲೊಡೆದವು. ಕಾಫಿಗೊಂದು ಹಾಡು, ಬುತ್ತಿಗೊಂದು ಹಾಡು, ಚಿಣಿಮಿಣಿ ಬಿನ್ನಾಣಿಯೊಬ್ಬಳು ಅಲಂಕಾರ ಮಾಡಿಕೊಂಡ ಹಾಡು, ಗುಬ್ಬಚ್ಚಿ ತನ್ನ ಗೂಡಿನಲ್ಲಿದ್ದ ಮರಿಗಳನ್ನು ಬಿರುಗಾಳಿ ಮಳೆಗಳಿಂದ ಕಾಪಾಡಲು ನರಿ ಮತ್ತು ಉಳಿದ ಪ್ರಾಣಿಗಳ ಸಹಾಯ ಪಡೆದು ಮರಿಗಳನ್ನು ಕಾಪಾಡಿದ ಕತೆ ಎಲ್ಲ ಆ ಕ್ಷಣಕ್ಕೆ ಕಣ್ದೆಗೆದು ಬೆಳಕು ಚೆಲ್ಲುತ್ತಿದ್ದವು.
ಲಿಖಿತ ಕವಿತೆಯ ಜೊತೆಗಿನ ನನ್ನ ನಂಟು ಆರಂಭವಾಗಿದ್ದು ಐದನೆಯ ತರಗತಿಯಿಂದ. ಇದರ ಜೊತೆ ಜೊತೆಗೇ ನಮ್ಮ ಬೀದಿಯಲ್ಲಿ ವರ್ಷದ ಯಾವುದೋ ತಿಂಗಳಲ್ಲಿ ನಡೆಯುತ್ತಿದ್ದ ಹರಿಕಥೆಗಳಲ್ಲಿ `ಹರಿಶ್ಚಂದ್ರ ಕಾವ'್ಯ, `ಕುಮಾರವ್ಯಾಸ ಭಾರತ'ದ ಸ್ವಾರಸ್ಯಕರ ಭಾಗಗಳು, ಇನ್ನೆಲ್ಲೋ ನಡೆಯುತ್ತಿದ್ದ ಚಾಮುಂಡಮ್ಮನ ಕುರಿತ ಹಾಡು ಕುಣಿತಗಳು, ಗಣಪತಿ ಇಡುವ ಸಮಯದಲ್ಲಿ ಪಿ. ಕಾಳಿಂಗರಾಯರು ಹಾಡುತ್ತಿದ್ದ ಭಾವಗೀತೆಗಳು, ಬೆಳಿಗ್ಗೆ ಯಾರದೋ ಮನೆಯ ರೇಡಿಯೋದಿಂದ ತೇಲಿಬರುತ್ತಿದ್ದ ಆಗಿನ ಸುಶ್ರಾವ್ಯ ಭಾವಗೀತೆಗಳು ಮನಸ್ಸಿನೊಳಗೆ ಒಂದು ಕೋಮಲ ಲೋಕವೊಂದನ್ನು ಕಟ್ಟಿಕೊಡುತ್ತಿದ್ದವು. ಮತ್ತು ಕೆಲವು ತಲ್ಲಣಗಳನ್ನೂ ಹುಟ್ಟು ಹಾಕುತ್ತಿದ್ದವು.
ನಾನು ಸಾಹಿತ್ಯದ ವಿದ್ಯಾರ್ಥಿಯಾಗಿದ್ದು ಒಂದು ಆಕಸ್ಮಿಕ. ನಾನು ಪಿಯುಸಿಯಲ್ಲಿ ಓದಿದ್ದು ಜೀವಶಾಸ್ತ್ರ. ಪಿಯುಸಿಯಲ್ಲಿ ನಮಗೆ ಎಂ.ವಿ. ಶ್ರೀನಿವಾಸಮೂರ್ತಿ ಎಂಬ ಕನ್ನಡ ಉಪನ್ಯಾಸಕರು ಕನ್ನಡ ಕವಿತೆ ಕಲಿಸಿದರು. ಕನ್ನಡ ತರಗತಿ ಮತ್ತು ಕವಿತೆಯ ಸವಿ ಹೈಸ್ಕೂಲಿನಲ್ಲೇ ಹತ್ತಿದ್ದರೂ ಅವರ ಹಾಗೆ ಸಾಹಿತ್ಯದ ಅಧ್ಯಾಪಕಳೇ ಆಗಬೇಕು ಎಂಬ ಹಂಬಲ ಪಿಯುಸಿ ನಂತರ ಬೇರೂರಿದ್ದು.
ನಾನು ಮೊದಲು ಕವಿತೆ ಬರೆದದ್ದು ಎಂ.ಎ. ಮೊದಲ ವರ್ಷದಲ್ಲಿದ್ದಾಗ. ಅದರ ಹೆಸರು `ಅಮ್ಮನಿಗೆ'. ನಾನು ಯಾರಿಗೂ ಅದನ್ನು ತೋರಿಸದೆ ಗುಟ್ಟಾಗಿ `ಪ್ರಜಾವಾಣಿ'ಗೆ ಕಳಿಸಿಬಿಟ್ಟಿದ್ದೆ. ಅದು ಪ್ರಕಟವಾದ ಮೇಲೆ ನನಗೆ ಕವಿ ಪಟ್ಟ ದಕ್ಕಿತು. ನನ್ನ ವಾರಿಗೆಯ ಹುಡುಗ ಹುಡುಗಿಯರು ಬಹಳ ದಿನ ನನ್ನನ್ನು `ಪ್ರಜಾವಾಣಿ ಸ. ಉಷಾ', `ಅಮ್ಮನಿಗೆ ಸ.ಉಷಾ' ಎಂದೇ ಗುರ್ತಿಸುತ್ತಿದ್ದರು. ಆಗ ಎಪ್ಪತ್ತೆರಡನೇ ಇಸವಿ, ನವ್ಯದ ಏರುದನಿಗಳು ಕೇಳುತ್ತಿದ್ದ ಕಾಲ. ಕವಿತೆ ಬರೆಯುತ್ತಿದ್ದ ಹೆಣ್ಣುಮಕ್ಕಳು ಕಡಿಮೆ.
ಬೆಂಗಳೂರಲ್ಲೊಬ್ಬರು ವಿ.ಆರ್. ಪ್ರತಿಭಾ (ಈಗ ಪ್ರತಿಭಾ ನಂದಕುಮಾರ್), ಧಾರವಾಡದಲ್ಲೊಬ್ಬರು ವೀಣಾ ಯಲಬುರ್ಗಿ (ಈಗ ವೀಣಾ ಶಾಂತೇಶ್ವರ), ಕವಿತೆ ಬರೆಯುವ ಹುಡುಗಿಯರ ಜಗತ್ತು ಮೆಲ್ಲಮೆಲ್ಲಗೆ ಕಣ್ತೆರೆಯತೊಡಗಿತ್ತು. ನಾವು ಎರಡನೆ ಎಂ.ಎ. ಯಲ್ಲಿದ್ದಾಗ ದೇವನೂರ ಮಹಾದೇವ ಮೊದಲ ಎಂ.ಎ.ಯಲ್ಲಿದ್ದರು. ಆದರೆ ಅವರ ಅದ್ಭುತ ಸಂವೇದನೆಯ ಜಗತ್ತು ಆಗ ನಮಗಂತೂ ಅನಾವರಣಗೊಂಡಿರಲಿಲ್ಲ. ಈ ಎಲ್ಲ ಸಾಹಿತ್ಯಕ ಸಂಗತಿಗಳ ಜೊತೆಗೆ ಒಂದು ವೈಯಕ್ತಿಕ ಸಂಗತಿಯೂ ನನ್ನ ಬದುಕನ್ನು ತುಂಬಿಕೊಂಡಿತ್ತು. ಎಂ.ಎ.ಯಲ್ಲಿ ನನ್ನ ಸಹಪಾಠಿಯಾಗಿದ್ದ ವೈ. ಮಂಜಪ್ಪ ನನ್ನ ಗೆಳೆಯನಾಗಿ ಪ್ರೇಮಿಯಾಗಿ ಗಂಗೋತ್ರಿಯ ಹಸಿರು ಹುಲ್ಲ ತುಂಬ ನಮ್ಮ ಹೆಜ್ಜೆಗಳು ಚಿತ್ತಾರ ಬರೆದಿದ್ದವು. ಸಂತೋಷದ ಸಂಗತಿಯೆಂದರೆ ನಮ್ಮ ಅಧ್ಯಾಪಕರು ಸಹಪಾಠಿಗಳು ಎಲ್ಲರೂ ನಮ್ಮ ಸ್ನೇಹ ಒಡನಾಟಗಳನ್ನು ಗೌರವದಿಂದಲೇ ಕಂಡರು.
ಎಪ್ಪತ್ತಾರನೇ ಇಸವಿಯಲ್ಲಿ ಮೈಸೂರಿನಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ನಡೆದ ಲೇಖಕಿಯರ ಸಮ್ಮೇಳನ, ಆಮೇಲೆ ಬೆಂಗಳೂರಿನಲ್ಲಿ ತಲೆಯೆತ್ತಿದ ಕರ್ನಾಟಕ ಲೇಖಕಿಯರ ಸಂಘದ ಸ್ಥಾಪನೆ ಎರಡೂ ಮಹಿಳಾ ಸಾಹಿತ್ಯಕ್ಕೆ ಸಂಬಂಧಪಟ್ಟ ಸಂಘಟನೆಯಲ್ಲಿ ಎರಡು ಮೈಲಿಗಲ್ಲುಗಳು ಎಂದು ನನ್ನ ಭಾವನೆ. ಈ ಎರಡು ಘಟನೆಗಳ ನಂತರ ಸಮ್ಮೇಳನಗಳು ವಿಚಾರಗೋಷ್ಠಿಗಳು ಪ್ರಕಟಣೆಗಳು ಮೆಲ್ಲಮೆಲ್ಲಗೆ ಆರಂಭವಾದವು. ವಿಳಾಸ-ವಿಚಾರ ವಿನಿಮಯಗಳ ದಾರಿ ತೆರೆಯಿತು. ಮಹಿಳೆಯರು ಪ್ರಕಾಶಕರಾಗಿಯೂ ಕೆಲಸ ಮಾಡತೊಡಗಿದರು. ಸರಿಸುಮಾರು ಇದೇ ಕಾಲಘಟ್ಟದಲ್ಲೇ ಬಂಡಾಯ ಸಾಹಿತ್ಯ ಸಂಘಟನೆ ದಲಿತ ಸಾಹಿತ್ಯ ಸಂಘಟನೆಗಳು ಮಹಿಳಾ ವಾಙ್ಞಯಕ್ಕೆ ಒಂದು ಹೊಸ ಆಯಾಮವನ್ನು ಕೊಟ್ಟುದನ್ನು ಅಲ್ಲಗಳೆಯುವಂತಿಲ್ಲ.
ಆದರೆ ಜಾತಿ ಪದ್ಧತಿಯನ್ನು, ಬಂಡವಾಳಶಾಹಿ ವ್ಯವಸ್ಥೆಯನ್ನು ಅಲ್ಲಗಳೆಯುತ್ತಾ ತನ್ನದೇ ತಾತ್ವಿಕತೆಯನ್ನು ಕಟ್ಟುವ ಲೇಖಕ ವಿಮರ್ಶಕರು ಸ್ತ್ರೀ ಶೋಷಣೆಯ ಬಗ್ಗೆ ಆಗಲೀ, ಸ್ತ್ರೀಯ ಬುದ್ಧಿವಂತಿಕೆಯ ಬಗ್ಗೆ ಸಾಂಪ್ರದಾಯಿಕವಾಗಿ ಇರುವ ತಿರಸ್ಕಾರಗಳ ಬಗ್ಗೆ ಆಗಲೀ ಮಾತೆತ್ತದಿರುವಾಗ ಮಹಿಳಾ ಸಾಹಿತ್ಯವೂ ಹೊಸ ತಾತ್ವಿಕತೆಗಳನ್ನು ಕಟ್ಟಿಕೊಳ್ಳುವುದು ಸಹಜವೂ ಅನಿವಾರ್ಯವೂ ಆದ ಬೆಳವಣಿಗೆಯಾಗಿತ್ತು. ಅದಕ್ಕೆ ಅನುಗುಣವಾಗಿ ಮಹಿಳಾ ಸಾಹಿತ್ಯದಲ್ಲಿ ಹೊಸ ಹೊಸ ಆಲೋಚನೆಗಳು ಹೊಸ ಭಾಷೆ ಕಾಣತೊಡಗಿತು. ಸ್ವಾತಂತ್ರ್ಯದ ಕಲ್ಪನೆ, ಆಗಸ್ಟ್ 15, ಧ್ವಜಾರೋಹಣ, ಕುಟುಂಬ, ಧರ್ಮ, ಈ ಎಲ್ಲ ವಿಷಯಗಳನ್ನು ಹೆಣ್ಣು ಪರಿಭಾವಿಸುವ ರೀತಿ ಬೇರೆಯದು ಎಂಬುದು ಕಾವ್ಯದಲ್ಲೂ ಮೂಡಿತು.
`ಮೈಯ ವಾಸನೆಗೆ ಜನ್ಮಾಂತರಗಳಿಲ್ಲ' ಎನ್ನುವ `ಅಮೃತಮತಿಯ ಸ್ವಗತ'ದ ಎಚ್.ಎಲ್. ಪುಷ್ಪ, `ನಾನೇಕೆ ಬಳ್ಳಿ ನೀನೇಕೆ ಮರ' ಎಂದು ಪ್ರಶ್ನಿಸುವ ಎಂ.ಎಸ್. ವೇದಾ, `ನಾವು ಪತಿವ್ರತೆಯರಲ್ಲ' ಎನ್ನುವ ಎಚ್.ಎಸ್. ಮುಕ್ತಾಯಕ್ಕ, `ಗಲ್ಲಿಗೇರಿಸಿದ ಜಗತ್ತನ್ನೇ ಕ್ಷಮಿಸಿದ ಯೇಸುವಿನಂತ ಪ್ರೀತಿ ಬೇಕು' ಎಂದುಕೊಳ್ಳುವ ಸುಧಾಶರ್ಮಾ ಚವತ್ತಿ , ಹೀಗೇ ಹೆಸರುಗಳ ಪಟ್ಟಿ ಬೆಳೆಯುತ್ತದೆ. ಕವಿತೆಯಲ್ಲಿಯೂ ಪ್ರತಿ ಸಂಸ್ಕೃತಿಯ ಸಾಧ್ಯತೆಯತ್ತ ಒಂದು ವಿಶಾಲ ತಾತ್ವಿಕ ನೆಲೆಯೊಂದು ಬೆಳೆದಿದೆ. ಮಹಿಳಾ ಕಾವ್ಯದಲ್ಲಂತೂ ಅದು ತೀರ ಸ್ಪಷ್ಟವಾಗಿಯೆ ಇದೆ.
ನಾನು `ಅಮ್ಮನಿಗೆ' ಬರೆದಾಗ ಹೈಸ್ಕೂಲಿನಿಂದ ಹಿಡಿದು ಎಂ.ಎ. ಮಾಡುವ ಹೊತ್ತಿನವರೆಗೂ ಹೆಣ್ಣುಮಗಳೊಬ್ಬಳ ಮೇಲೆ ಇರುವ ಸಾಮಾಜಿಕ ಸಾಂಸ್ಕೃತಿಕ ಒತ್ತಡಗಳ ಕುರಿತು ಸ್ಫೋಟಗೊಂಡು `ಬೇಡಮ್ಮಾ-ಬೇಡ' ಎಂದು ಒಮ್ಮೆಗೇ ಕನಲಿ `ನಿನ್ನಂತಾಗದೆ ಬದುಕುತ್ತೇನೆ' ಎಂದು ಆಸ್ಫೋಟಿಸಿದ್ದೆ.
`ಈ ನೆಲದ ಹಾಡು' ಎಂಬ ಕವಿತೆಯಲ್ಲಿ ಹೆಣ್ಣನ್ನು `ನೆಲ' ಎಂದು ಸಮೀಕರಿಸುವ ಸಾಂಪ್ರದಾಯಿಕ ತಿಳಿವಳಿಕೆಗಿಂತ ಭಿನ್ನವಾಗಿ ತನ್ನನ್ನು `ತಾಯೆಂದು-ಬಾಯೆಂದು' ಕೂಡ ಕೂಡಾ ಕರೆದ ಕೃಷ್ಣ ಸಂತಾನವನ್ನು ಕಟು ಮಾತುಗಳಿಂದ ವಿಮರ್ಶಿಸುತ್ತ
`ಹೋಗಯ್ಯ ಹೋಗು, ಎಲ್ಲಿ ಹೋಗುತ್ತೀ ನನಗೆ ಗೊತ್ತಿಲ್ಲವೇ?
ನನ್ನೆದೆಗೆ ಬೇರಿಳಿದ ಕಾಲು ನಿನ್ನದು'
ಎಂದು ಆತ್ಮವಿಶ್ವಾಸ ತೋರುತ್ತ ಕೊನೆಗೆ ಪುರುಷನನ್ನು ಗೆಳೆಯ ಎಂದು ಕರೆದು `ಈ ನೆಲದ ಕಣ್ಣೀರನಳಿಸಲು ಕಯ್ಯನಾದರು ಎತ್ತೋಣ' ಎಂದು ಲಿಂಗತಾರತಮ್ಯದ ವಿರುದ್ಧ-ದಮನದ ವಿರುದ್ಧ ಮಾತನಾಡುತ್ತಲೇ ಸಮಾನತೆಯ ಹೊಸ ಕನಸನ್ನು ಕಾಣುವ ಮನುಕುಲದ ಅಸಲಿ ನೋವುಗಳನ್ನು ಅಳಿಸಲು ಹೆಣ್ಣು ಗಂಡು ಕೂಡಾ ಒಂದಾಗಿ ದುಡಿಯಬೇಕೆನ್ನುವುದರ ಕಡೆಗೆ ನನ್ನ ಕನಸು ಇದೆ.
ಕವಿತೆಯೆಂಬುದು ಒಂದು ಕನಸು - ನನ್ನ ಕವಿತೆಯೆಂಬ ಕನಸಿನಲ್ಲಿ ಗಂಡು ಹೆಣ್ಣುಗಳೆರಡೂ ಇವೆ. ಜಗತ್ತಿನ ದಮನಶೀಲತೆಯಿಂದ ನೊಂದ ಹೆಣ್ಣನ್ನು ಗಂಡು ಸಾಂತ್ವನಗೊಳಿಸುತ್ತಾನೆ.
`ಈಗ ಹೇಳು ಯಾರು ನಿನ್ನನೀ ಗತಿಗೆ ತಂದವರು.
ಅಥವಾ ಮರೆತುಬಿಡು
ನಿನ್ನೆಗಳು ನಾಳೆಗಳು ಕೊಚ್ಚಿ ಹೋಗಲಿ
ಒಂದು ಬಿಸಿ ಚುಂಬನದಲಿ' (ಮೋದಾಳಿ - ಈ ನೆಲದ ಹಾಡು)
ನನ್ನ ಕವಿತೆಗಳಲ್ಲಿ ನಾನು ಕಟ್ಟಬಯಸುವ ಪ್ರತಿಸಂಸ್ಕೃತಿ ಎಂಥದು ಎಂಬ ಬಗ್ಗೆ ನನ್ನ ಕವಿತೆಗಳಿಂದಲೇ ಕೆಲವು ನಿದರ್ಶನಗಳನ್ನು ಕೊಡುತ್ತಿದ್ದೇನೆ.
`ಹವಳ ಹಾರಿದ ಹೊತ್ತು' ಎಂಬ ಕವಿತೆಯಲ್ಲಿ ಹವಳ ಮತ್ತು ಸಾಲ್ಮನ್‌ಗಳನ್ನು ಹೆಣ್ಣು ಮತ್ತು ಗಂಡಿಗೆ ಸಮೀಕರಿಸಿ ಬಳಸಿಕೊಂಡಿದ್ದೇನೆ. ಹವಳಕ್ಕೆ ತನ್ನ ಸೌಂದರ್ಯದರಮನೆಯಲ್ಲೇ ಸಮಾಧಿ, ಸಾಲೊಮನ್ನಿಗೆ ಅಲೆತದ ಶಿಕ್ಷೆ. ಈ ಸ್ಥಿತಿ ಬೇಕಾದರೆ ತಿರುವು ಮುರುವು ಆಗಬಹುದು. ಅಲೆಮಾರಿಯ ಸ್ವಾತಂತ್ರ್ಯವನ್ನು ಹೆಣ್ಣೂ, ತಂಗುವ ನೆಮ್ಮದಿಯನ್ನು ಗಂಡೂ ಅನುಭವಿಸಬಹುದು.
`ನೀನು ಬರಿ ಹವಳವಲ್ಲ
ನಾನು ಬರಿ ಸಾಲ್ಮನ್ ಅಲ್ಲ
ಹಾರು ನನ್ನೊಡನೆ ಈ ಅನಂತ ನೀಲಧಿಯಲಿ
ನಾನೂ ತಂಗುತ್ತೇನೆ ನಿನ್ನ ಹವಳ ವಕ್ಷದಲ್ಲಿ
ಬೆಳೆಯಲಿ ಸಾಲ್ಮನ್ ಕುವರಿಯರು
ಹವಳ ಕುಮಾರರು ನನ್ನ ನಿನ್ನ ಆಸರೆಯಲಿ'
- (ಹವಳ ಹಾರಿದ ಹೊತ್ತು)
ಹೆಣ್ಣಿನೊಳಗೊಂದು ಗಂಡಿದೆ, ಗಂಡಿನೊಳಗೊಂದು ಹೆಣ್ಣಿದೆ. ಅವರಿಬ್ಬರ ಆರೋಪಿತ ಸ್ಥಾಯಿಗುಣಗಳು ಪಲ್ಲಟಗೊಂಡಾಗ ಬದುಕು ಚೆಲುವಾಗುತ್ತದೆ.
ನನ್ನ ಕವಿತೆಯಲ್ಲಿ ಗಂಡು ಹೆಣ್ಣುಗಳು ಪರಸ್ಪರ ಪ್ರತಿಸ್ಪರ್ಧಿಗಳಲ್ಲ. ಜೊತೆ ಜೊತೆಗೆ ನಡೆಯುವವರು. ಪರಸ್ಪರರಿಗೆ ಆಸರೆ ಕೊಡುವವರು. `ರುರು ಪ್ರಮದಾ ಪ್ರೀತಿ' ಎಂಬ ಕವಿತೆಯಲ್ಲಿ ಗಂಧರ್ವ ಕನ್ನಿಕೆ ಪ್ರಮದ್ವರೆ ಹಾವು ಕಚ್ಚಿ ಸತ್ತಾಗ ಅವಳ ಪ್ರಿಯತಮನೂ ಪತಿಯೂ ಆದ ರುರು ಅವಳಿಗೆ ತನ್ನ ಅರ್ಧಾಯುಸ್ಸು ಕೊಟ್ಟು ಅವಳನ್ನು ಬದುಕಿಸಿಕೊಳ್ಳುತ್ತಾನೆ. ರೂಢಿಚಕ್ರ ಸುಲಲಿತವಾದ ಜಗತ್ತು ರುರುವಿಗೆ ಹೇಳುತ್ತದೆ ನಿನ್ನಂಥ ಪುರುಷೋತ್ತಮನಿಗೆ ಸಾವಿರ ಪ್ರಮದೆಯರಿದ್ದಾರೆ - ನೀನು ಒಲಿದರೆ - ಎಂದು. ಆದರೆ ರುರು ನನ್ನ ಒಲವಿಗೆ ಪ್ರಮದೆಯೊಬ್ಬಳೆ ಎನ್ನುತ್ತಾನೆ. (ರುರು ಪ್ರಮದಾ ಪ್ರೀತಿ - ಹವಳ ಹಾರಿದ ಹೊತ್ತು)
ಇವನು ಈ ಊರಿನವನು. ಇವನು ಈ ಪ್ರಾಂತದವನು ಎಂದು ಮನುಷ್ಯರನ್ನು ವರ್ಗೀಕರಿಸುವುದರಲ್ಲಿಯೂ ಒಂದು ಕ್ರೌರ್ಯವಿದೆ. ನನ್ನ ಮೂರು ಸಂಕಲನಗಳ ನಂತರ ಬಂದ `ಭಾಮೆಯ ಹಾಡು' ಎಂಬ ಪದ್ಯದಲ್ಲಿ ಭಾಮೆ ಮೊಸರನ್ನೋ ಹಾಲನ್ನೋ ಹೊತ್ತು ಹೋಗುವಾಗ ಗೋಪಬಾಲರು ಅವಳ ದಾರಿಯನ್ನು ತಡೆದು `ನೀನು ಯಾವೂರಿನವಳೇ ಗೊಲ್ಲ ಭಾಮಾ' ಎಂದು ಕೇಳುತ್ತಾರೆ. ಈ ಸಾಂಪ್ರದಾಯಿಕ ಕೃಷ್ಣ ಭಾಮೆ - ಗೋಪರ ಸರಸದ ಚಿತ್ರ ನನಗೆ ವಲಸೆ ಬಂದವರ ಮತ್ತು ಈಗಾಗಲೇ ನೆಲಸಿ ಒಕ್ಕಲಾದವರ ನಡುವಿನ ಪ್ರಶ್ನೆಗಳನ್ನು ಎತ್ತುತ್ತದೆ. ಭಾಮೆ ಈ ಕವಿತೆಯಲ್ಲಿ ಗೋಪಬಾಲರಿಗೆ ಹೇಳುತ್ತಾಳೆ.
`ನಾನಿರುವುದೆ ನನ್ನೂರು ಬಾಲರೇ
ಸೀರೆಯ ಜೋಳಿಯಲ್ಲಿ ಕಂದ
ಮೂರು ಕಲ್ಲ ಮೇಲೊಂದು ಗಡಿಗೆ
ದೂರದಲಿ ಶಿಬಿರಾಗ್ನಿ ಕಂಡರೆ
ನಾನು ಹತ್ತಿದ ರಥವೆ ನನ್ನೂರು'
ಭಾಮೆಯಷ್ಟೇ ಅಲ್ಲ ನರ - ನಾರಾಯಣರೂ ವಲಸೆಯ ಪ್ರಕ್ರಿಯೆಗೆ ಒಳಗಾದವರೇ. ಭಾಮೆ ಅರ್ಜುನನನ್ನು ಕೇಳುತ್ತಾಳೆ. `ನಿನ್ನೂರು ಯಾವುದು ಹಸ್ತಿನಾವತಿಯೋ ಇಂದ್ರಪ್ರಸ್ಥವೋ? ನೀನು ಹುಟ್ಟಿದ ಕಾಡೋ? ನಿನ್ನ ಸಖ ಆ ನಾರಾಯಣನ ಊರಾದರೂ ಯಾವುದು ಮಧುರೆಯೋ?, ಗೋಕುಲವೋ? ಪ್ರಭಾಸವೋ.'
ಅವರಿಗೆ ಇಲ್ಲಿ ಎಲ್ಲರೂ ವಲಸಿಗರೇ ಆದರೆ ಒಂದೂರಿಗೆ ಮೊದಲು ಬಂದ ಮನುಷ್ಯ, ಆಮೇಲೆ ಬಂದವನನ್ನು ನಿಲ್ಲಗೊಡುವುದಿಲ್ಲ. ಒಬ್ಬ ವಲಸಿಗ ಇನ್ನೊಬ್ಬ ವಲಸಿಗನನ್ನು `ನೀನು ಯಾವೂರಿನವನು' ಎಂದು ರಹದಾರಿ ಪತ್ರ ಕೇಳುತ್ತಾನೆ.
ನನ್ನ ಕವಿತೆ ನರ - ನಾರಾಯಣ - ಭಾಮೆ ಎಲ್ಲರ ಕನಸುಗಳನ್ನು ಎಲ್ಲರ ನೋವುಗಳನ್ನೂ ಕುರಿತು ಹಾಡಬೇಕು. ನಿಗಳಗಳ ನಡುವೆಯೇ ನಿರಾಳದ ದಿವ್ಯವನ್ನು ಕನವರಿಸಬೇಕು ಎಂಬುದು ನನ್ನ ಕಣಸು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.