‘ದೇಶದಾದ್ಯಂತ ಪುಸ್ತಕದ ಅಂಗಡಿಗಳು ಮುಚ್ಚುತ್ತಿವೆ. ಆದರೆ ದೇಶದಾದ್ಯಂತ ಸಾಹಿತ್ಯೋತ್ಸವಗಳು ಹುಟ್ಟುತ್ತಿವೆ. ನೋಡಿ ಎಂಥಾ ವಿರೋಧಾಭಾಸ!’
ಪ್ರಸಿದ್ಧ ಲೇಖಕ ರಸ್ಕಿನ್ ಬಾಂಡ್ ಮೂರು ತಿಂಗಳ ಹಿಂದೆ ಈ ಉದ್ಗಾರ ತೆಗೆದು ‘ಪುಸ್ತಕದ ಅಂಗಡಿಗಳೆಲ್ಲ ಎತ್ತ ಹೋದವು?’ ಎಂದು ಕಳವಳಪಟ್ಟಿದ್ದರು. ಎಲ್ಲೆಲ್ಲಿ ಪುಸ್ತಕದ ಅಂಗಡಿ ಇದೆಯೋ ಅಲ್ಲೆಲ್ಲ ರಸ್ಕಿನ್ ಬಾಂಡ್ ಪುಸ್ತಕಗಳು ಇರುತ್ತವೆ; ಎಲ್ಲೆಲ್ಲಿ ಸಾಹಿತ್ಯೋತ್ಸವ ನಡೆಯುತ್ತದೆಯೋ ಅಲ್ಲೆಲ್ಲ ರಸ್ಕಿನ್ ಬಾಂಡ್‌ಗೆ ಮಾತನಾಡಲು ಆಹ್ವಾನ ಇರುತ್ತದೆ ಅಥವಾ ಅವರ ಬರಹ ಕುರಿತ ಮಾತುಕತೆ ಇರುತ್ತದೆ. ಲಕ್ಷಲಕ್ಷಾಂತರ ಓದುಗರನ್ನು ಪಡೆದ ಈ ಸಾಹಿತಿ ಪುಸ್ತಕದ ಅಂಗಡಿಗಳು ಮುಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದು ತನಗೆ ತೊಂದರೆ ಆಗಬಹುದು ಎಂದಲ್ಲ. ಲೇಖಕರಿಗೆ-ಓದುಗರಿಗೆ ಪ್ರಿಯವಾದ, ಅಕ್ಷರಲೋಕದ ಆಗುಹೋಗುಗಳನ್ನು ಅರಿಯುವ ತಾಣವಾದ, ಗಾಸಿಪ್‌ಗಳ ವಿನಿಮಯದ ಗೂಡಾದ ಆಪ್ತ ಸ್ಥಳವೊಂದು ಸದ್ದಿಲ್ಲದೆ ಸಾವಿಗೀಡಾಗುತ್ತಿದೆ ಎಂಬ ನೋವೇ ಇದಕ್ಕೆ ಕಾರಣವಾಗಿತ್ತು.
‘ಜನ ಈಗ ಪುಸ್ತಕದ ಅಂಗಡಿ ಹುಡುಕಿಕೊಂಡು ಹೋಗುವುದಿಲ್ಲ, ಜನ ಈಗ ಮನೆ ಬಿಟ್ಟು ಹೊರಡುವುದು ಹೊರಗೆ ತಿನ್ನಲು (ಈಟಿಂಗ್ ಔಟ್) ಮಾತ್ರ’ ಎಂದೂ, ‘ಸಾಹಿತ್ಯೋತ್ಸವಗಳಲ್ಲಿ ಓದುಗೀದು ಎಲ್ಲಿರುತ್ತದೆ, ಅವೆಲ್ಲ ಮುಖ್ಯವಾಗಿ ಟಾಕ್‌ಷೋಗಳು’ ಎಂದೂ ತಮ್ಮ ಎಂದಿನ ಶೈಲಿಯಲ್ಲಿ ರಸ್ಕಿನ್ ಬಾಂಡ್ ಬೆಂಡೆತ್ತಿದರೆನ್ನುವುದು ಬೇರೆ ಮಾತು! ಒಟ್ಟಾರೆ ಅನೇಕರ ಮನದಲ್ಲಿದ್ದ ಆತಂಕವನ್ನು ಅವರು ದೊಡ್ಡದನಿಯಲ್ಲಿ ಹೇಳಿದರು ಎಂದು ಮಾತ್ರ ಅಂದುಕೊಳ್ಳೋಣ.
ನಮ್ಮ ಬಡಾವಣೆಗಳಲ್ಲಿ, ನೆರೆಹೊರೆಯಲ್ಲಿ ಅಷ್ಟೇ ಅಲ್ಲ, ಜಗತ್ತಿನ ಎಲ್ಲ ದೇಶಗಳಲ್ಲೂ ಪುಸ್ತಕದ ಅಂಗಡಿಗಳು ದಿವಾಳಿಯಾಗಿ ಮುಚ್ಚಿಹೋಗುತ್ತಿವೆ. ಲಂಡನ್, ಅಡಿಲೇಡ್, ನ್ಯೂಯಾರ್ಕ್‌ನ ಕೆಲವು ಪ್ರಮುಖ ರಸ್ತೆಗಳನ್ನು ಅವುಗಳಲ್ಲಿರುವ ಪುಸ್ತಕದ ಅಂಗಡಿಗಳಿಂದಲೇ ಗುರುತಿಸಲಾಗುತ್ತಿತ್ತು. ಆದರೆ ಈಗ ಅವೆಲ್ಲ ಒಂದೊಂದಾಗಿ ಮುಚ್ಚಿಹೋಗುತ್ತಿವೆ. ಪುಸ್ತಕಗಳು ಕಾಲವನ್ನು ಹಿಡಿದಿಡುತ್ತವೆ ಎಂದು ಹೇಳುತ್ತಾರೆ- ಆದರೆ ಪುಸ್ತಕದ ಅಂಗಡಿಗಳು ಕಾಲದೊಂದಿಗೆ ಓಡಲಾರದೆ ಅಸುನೀಗುತ್ತಿವೆ.
ಜರ್ಮನಿಯ ಗುಟೆನ್‌ಬರ್ಗ್ ಮುದ್ರಣ ತಂತ್ರ-ಯಂತ್ರವನ್ನು ಕಂಡುಹಿಡಿದ ಈ ಐದು ಶತಮಾನಗಳಲ್ಲಿ ಪ್ರಪಂಚದಲ್ಲಿ ಎಲ್ಲ ಭಾಷೆಗಳಲ್ಲಿ ಅದೆಷ್ಟು ಪುಸ್ತಕಗಳು ಮುದ್ರಣಗೊಂಡಿವೆಯೋ ಲೆಕ್ಕ ಇಡಲು ಯಾವ ಚಿತ್ರಗುಪ್ತನಿಂದಲೂ ಸಾಧ್ಯವಿಲ್ಲ. ಮುದ್ರಣದ ಆವಿಷ್ಕಾರಕ್ಕೆ ಹಿಂದೆಯೂ ಅಲ್ಲಿಂದಾಚೆಗೂ ಮನುಷ್ಯರ ಆಲೋಚನೆಗಳೇ ಪ್ರಪಂಚವನ್ನು ಬದಲಾಯಿಸಿದ್ದರೂ, ಏನೋ ಈ ಪ್ರಪಂಚವೆನ್ನುವುದು ಉರುಳಿರುವುದು ಪುಸ್ತಕಗಳೆಂಬ ಗಾಲಿಗಳ ಮೇಲೇ ಇರಬೇಕೆನ್ನುವಷ್ಟು ಅವು ಮಹತ್ವ ಪಡೆದಿವೆ. ಪುಸ್ತಕ ಓದುವ ಮಸ್ತಕಗಳು ಇರುವುದು ಅಂದಿಗೂ ಇಂದಿಗೂ ಅತ್ಯಂತ ಕಡಿಮೆ, ಅಕ್ಷರಸ್ಥ ಜನಸಂಖ್ಯೆಯಲ್ಲಿ ಪುಸ್ತಕ ಓದುವವರದು ಎಂದೆಂದಿಗೂ ಕಡಿಮೆ ಸಂಖ್ಯೆ.
ಆದರೆ ಅವುಗಳದು ಬೆಲೆ ಕಟ್ಟಲಾಗದ ಕೊಡುಗೆ. ಪುಸ್ತಕದ ಅಂಗಡಿಗಳ ವಿಚಾರವೂ ಅಷ್ಟೆ- ಅವುಗಳ ಸಂಖ್ಯೆ ಕಡಿಮೆ, ಈ ಅಂಗಡಿಗಳಲ್ಲಿ ಇಡುವ ಮಾಲು ಹಾಳಾಗುವುದಿಲ್ಲ, ಆದರೂ ಅವು ಮಾರಾಟವಾಗುವುದು ನಿಧಾನ, ಈ ಮಾರಾಟದಿಂದ ಬರುವ ಲಾಭವೂ ಕಡಿಮೆ. ಆದರೆ ಪುಸ್ತಕದ ಅಂಗಡಿಗಳಿಲ್ಲದೆ ಊರು ಶೋಭಿಸುವುದಿಲ್ಲ ಎನ್ನುವ ಕಾಲವೊಂದಿತ್ತು.
ಆದರೀಗ ಪುಸ್ತಕದ ಅಂಗಡಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಆರ್‌ಐಪಿ’ ಹೇಳುವ, ‘ಆತ್ಮಕ್ಕೆ ಶಾಂತಿ ಕೋರುವ’ ಕಾಲ ಬಂದುಬಿಟ್ಟಿದೆ. ಬಟ್ಟೆ, ಪಾದರಕ್ಷೆ, ಆಟಿಕೆ, ಗಡಿಯಾರ ಮಾರುವ ಅಂಗಡಿಗಳ ಸರಪಳಿ ಇರುವ ಹಾಗೆ ಪುಸ್ತಕಗಳನ್ನು ಮಾರುವ ಅಂಗಡಿ ಸರಪಳಿಗಳ ಕಂಪೆನಿಗಳು ಅಮೆರಿಕ, ಆಸ್ಟ್ರೇಲಿಯ, ಬ್ರಿಟನ್ ಮತ್ತಿತರ ದೇಶಗಳಲ್ಲಿ ನಾನಾ ನಗರಗಳಲ್ಲಿ ಹರಡಿಕೊಂಡು ನಾವೇನು ಕಡಿಮೆಯಿಲ್ಲ ಅನ್ನುವಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಏಕೆಂದರೆ ಜನ ಇನ್ನೂ ಚಿಂತನೆ, ಆಲೋಚನೆ ಮಾಡುತ್ತಾರೆ ಅನ್ನುವುದಕ್ಕೆ ಇರುವ ಸಣ್ಣಪುಟ್ಟ ಸಾಕ್ಷಿಗಳಲ್ಲಿ ಪುಸ್ತಕದ ಅಂಗಡಿಯೂ ಒಂದೆಂಬ ನಂಬಿಕೆ ಇತ್ತಲ್ಲ? ತುಂಬ ಕಡಿಮೆ ಬೆಲೆಗೆ ಅತ್ಯಂತ ಬೌದ್ಧಿಕ ಮೌಲ್ಯವನ್ನು ಜನರಿಗೆ ಕೊಡಬಹುದು, ಬುದ್ಧಿಯನ್ನು ಅಂಗಡಿಯಲ್ಲಿ ಇಟ್ಟು ಮಾರಬಹುದು ಎಂಬ ನಂಬಿಕೆಯಿಂದಲೇ ಕಂಪೆನಿಗಳು ಹೇರಳ ಹಣವನ್ನು ಈ ವ್ಯಾಪಾರಕ್ಕೆ ಸುರಿದಿದ್ದವಲ್ಲ?
ಆದರೆ ಹತ್ತು ವರ್ಷಗಳಿಂದೀಚೆಗೆ ಎಲ್ಲ ಬದಲಾಗುತ್ತಿದೆ, ಐದು ವರ್ಷಗಳಿಂದೀಚೆಗೆ ಅಕ್ಷರ ವ್ಯಾಪಾರದ ‘ಅಆಇಈ’ ಬದಲಾಗಿಬಿಟ್ಟಿದೆ. ಬಾರ್ನೆಸ್ ಅಂಡ್ ನೋಬಲ್, ಬಾರ್ಡರ್ಸ್ ಮುಂತಾದ ಸರಪಳಿ ಪುಸ್ತಕದಂಗಡಿ ಬೃಹತ್ ಕಂಪೆನಿಗಳು ಸೋತು ಸೊರಗುತ್ತಿವೆ. ಮಹಾನಗರಗಳಲ್ಲಿ, ಖ್ಯಾತ ರಸ್ತೆಗಳಲ್ಲಿ, ವ್ಯಾಪಾರ ಸಂಕೀರ್ಣಗಳಲ್ಲಿದ್ದ ತಮ್ಮ ಅಂಗಡಿಗಳನ್ನು ಮುಚ್ಚುತ್ತಿವೆ, ಇರುವ ಸರಕನ್ನು ಕಡಿಮೆ ಬೆಲೆಗೆ ಕೊಟ್ಟು ಸಾಗಿಸುತ್ತಿವೆ, ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿವೆ. ಮೊದಲು ಜನ ಪುಸ್ತಕ ಕೊಳ್ಳದಿದ್ದರೂ ಸುಮ್ಮನೆ ಅಂಗಡಿಗೆ ಭೇಟಿ ಕೊಡುತ್ತಿದ್ದರು. ಈಗ ನೋಡಲೂ ಬರುತ್ತಿಲ್ಲ. ಪುಸ್ತಕದ ಅಂಗಡಿ ವ್ಯಾಪಾರಿಗಳು ಸುಮ್ಮನೆ ನೊಣ ಹೊಡೆಯುತ್ತ ಕೂತಿದ್ದಾರೆ ಎಂದಾದರೂ ಹೇಳೋಣವೆಂದರೆ, ಕಬ್ಬಿಣದ ಅಂಗಡಿಯ ಹಾಗೆ ಪುಸ್ತಕದ ಅಂಗಡಿಯಲ್ಲೂ ನೊಣಕ್ಕೇನು ಕೆಲಸ?
ಛೇ, ಸರಸ್ವತಿಗೆಂಥ ದುರ್ಗತಿ ಬಂತು ಅಂದುಕೊಂಡಿರಾ? ಆದರೇನು ಮಾಡೋಣ? ಬದಲಾವಣೆಯೊಂದೇ ಜಗತ್ತಿನ ನಿಯಮ. ಆದ್ದರಿಂದ ಸ್ಲೇಟ್‌ನಲ್ಲಿ ಆರಂಭವಾದ ಅಕ್ಷರ ಸ್ಕ್ರೀನ್‌ಗೆ ಬದಲಾಗಿದೆ. ಎಲ್ಲವೂ ಅಂಕಿಗೆ ಬಿದ್ದ ಹಾಗೆ- ಅಂದರೆ ಡಿಜಿಟೈಸ್ ಆದ ಹಾಗೆ- ಅಕ್ಷರವೂ ಅಂಕಿಗೆ ಬದಲಾಗಿದೆ. ಓದುವ ಹವ್ಯಾಸದಲ್ಲಿ ಸಿಗುತ್ತಿದ್ದ ಮನರಂಜನೆ ಚಾನೆಲ್‌ಗಳ ಓಡುವ ಧಾರಾವಾಹಿಯಲ್ಲಿ ಸಿಗುತ್ತಿದೆ. ಅಂಗಡಿಯಲ್ಲಿ ಆಗುತ್ತಿದ್ದ ಪುಸ್ತಕದ ವ್ಯಾಪಾರ ಅಮೆಜಾನ್‌ಗೆ ಬದಲಾಗಿದೆ.
ಎಲ್ಲಕ್ಕೂ ಸಿಗುವ ಸೋವಿ, ಸೋಡಿ ಪುಸ್ತಕಗಳಿಗೂ ವರ್ಷವಿಡೀ ಸಿಗುತ್ತಿವೆ. ಬಳೆಗಾರ ಚೆನ್ನಯ್ಯ ಇವತ್ತು ಇಲ್ಲ, ಅಮೆಜಾನ್ ಅಣ್ಣಯ್ಯ ಬಾಗಿಲಿಗೆ ಬರುತ್ತಾನೆ. ಕೈಗಳಿಗೆ ಅಂಗೈನೆಲ್ಲಿಯಂತೆ ಮೊಬೈಲ್ ಬಂದಿದೆ. ಮನೆಯೊಳಗೆ ಕುಳಿತೇ ಮೊಬೈಲ್ ಮೇಲೆ ಬೆರಳಾಡಿಸಿದರೆ ಬೇರೆ ವಸ್ತುವಿನ ಹಾಗೆ ಪುಸ್ತಕವೂ ಮನೆಬಾಗಿಲಿಗೆ ಬರುತ್ತದೆ. ಅದು ಬೇಡದಿದ್ದರೆ ಹೋಗಲಿ, ಮಂಡೆಗೆ ಬೇಕಾದ ಪುಸ್ತಕ ಕಿಂಡಲ್‌ನಲ್ಲಿ ಸಿಗುತ್ತದೆ. ಈ ಜಗತ್ತು ಈಗ ಇ-ಜಗತ್ತು ಆಗಿದೆ, ಪುಸ್ತಕ ಈಗ ಇ-ಪುಸ್ತಕ ಆಗಿದೆ. ಇಲ್ಲವೇ ಇ-ವ್ಯಾಪಾರದ ಸರಕಾಗಿದೆ. ಇ-ಪುಸ್ತಕದಂಗಡಿಯಲ್ಲೋ ವರ್ಷವಿಡೀ ಇಳುವರಿ, ತೀರುವಳಿ ಮಾರಾಟ.
ಅಮೆಜಾನ್‌ಗೆ ಫ್ಲಿಪ್‌ಕಾರ್ಟ್‌ನಂಥ ಹಲವರು ತಮ್ಮಂದಿರಿದ್ದಾರೆ. ಅವರೆಲ್ಲ ಸೇರಿ ಮುದ್ರಿತ ಪುಸ್ತಕಗಳನ್ನು ಓದುವ ಕೈಗಳಿಗೆ ಕೊಡುತ್ತಿದ್ದಾರೆ. ಇನ್ನು ಒಂದು ಅಂದಾಜಿನ ಪ್ರಕಾರ, ಎಲ್ಲಾ ಪುಸ್ತಕ ವ್ಯಾಪಾರಿಗಳು ಸೇರಿ ಮಾರುವುದಕ್ಕೂ ಹೆಚ್ಚು ಪುಸ್ತಕಗಳನ್ನು ಕಿಂಡಲ್ ಒಂದರಲ್ಲೇ ಮಾರಾಟ ಮಾಡಲಾಗಿದೆಯಂತೆ. ಅಚ್ಚಾಗುವುದು ಮಾತ್ರ ಓದುಗರಿಗೆ ಅಚ್ಚುಮೆಚ್ಚು ಎಂದು ಯಾರು ಹೇಳಿದರು? ಬರೆಯುವುದೇ ಜನ ಓದುವುದಕ್ಕೆ, ಅವರು ಹೇಗೆ ಓದಿದರೇನು, ಓದುವುದು ಮುಖ್ಯವಷ್ಟೆ. ಒಟ್ಟು ಕತೆಯ ನೀತಿ ಎಂದರೆ, ಪ್ರಪಂಚ ಪುಸ್ತಕವನ್ನು ಮರೆಯಲಿಲ್ಲ- ಪುಸ್ತಕ ಓದುವ ವಿಧಾನ ಬದಲಾಯಿತು, ಪುಸ್ತಕ ವ್ಯಾಪಾರದ ವಿಧಾನ ಬದಲಾಯಿತು. ‘ಅಮೆಜಾನ್‌ನವರು ಅರ್ಧ ಬೆಲೆಗೆ ಕೊಟ್ಟರು, ನಾವು ಪೂರ್ತಿ ಸತ್ತೆವು’ ಎಂದು ವ್ಯಾಪಾರಿಗಳು ಕಣ್ಣೀರು ಹಾಕುವಂತಾಯಿತು. ವೆಬ್ ಮೇಲೆ ಗೂಬೆ ಕೂರಿಸಲಾಯಿತು.
ಪುಸ್ತಕಗಳ ಮಾರಾಟ ಹೆಚ್ಚಿದಂತೆ ಪುಸ್ತಕದ ಅಂಗಡಿಗಳು ಮುಚ್ಚಿದವು- ಎಂಬ ವಾಕ್ಯ ವಿಚಿತ್ರಕ್ಕೋ ವಿಡಂಬನೆಗೋ ವಿಪರ್ಯಾಸಕ್ಕೋ ವಿರೋಧಾಭಾಸಕ್ಕೋ ಉದಾಹರಣೆಯಾಗಬಹುದು. ಮೊದಲೇ ಅಂಗಡಿ ಬಾಡಿಗೆ ಜಾಸ್ತಿ, ವ್ಯಾಪಾರ ಕಡಿಮೆ, ಲಾಭಾಂಶ ಅಲ್ಪ; ಈಗ ಮೂರೂ ಇನ್ನಷ್ಟು ಆಗುತ್ತಿದೆ. ವರ್ಷ ಉರುಳಿದ ಹಾಗೆ ಆ ಅಂಗಡಿಗಳಿಗೆ ಬೀಗ ಬೀಳುವುದೂ ಹೆಚ್ಚುತ್ತಿದೆ. ಆದರೆ ಕೆಲವು ಪುಸ್ತಕ ವ್ಯಾಪಾರಿಗಳೇನು ಕೈಕಟ್ಟಿ ಕುಳಿತಿಲ್ಲ, ಅಳಿವು ಉಳಿವಿನ ಹೋರಾಟ ನಡೆಸುತ್ತಿದ್ದಾರೆ. ಜಗತ್ತಿನಲ್ಲಿ ಅನೇಕ ಕಡೆ, ಹಾದಿಬೀದಿಗಳಲ್ಲಿ ‘ಪಾಪ್‌ಅಪ್ಸ್’ ಗೂಡಂಗಡಿ ಇಟ್ಟು ಪುಸ್ತಕ ಮಾರಾಟ ಮಾಡುತ್ತಿದ್ದಾರೆ, ಬರೀ ಆನ್‌ಲೈನ್‌ನಲ್ಲಿ ಮಾತ್ರ ಅಲ್ಲ ಈ ಲೇನ್‌ನಲ್ಲೂ (ಅಂದರೆ ಈ ಬೀದಿಯಲ್ಲೂ) ಪುಸ್ತಕ ಸಿಗುತ್ತದೆ ಬನ್ನಿ ಎಂದು ಕರೆಯುತ್ತಿದ್ದಾರೆ.
ಪುಸ್ತಕದ ಜೊತೆ ಕಾಫಿ, ಕೇಕು ಇತ್ಯಾದಿ ಕೊಡುತ್ತಾರೆ. ಪುಸ್ತಕದಂಗಡಿಗೆ ಪದೇ ಪದೇ ಹೋಗಿ ವರ್ಷಕ್ಕೆ ಐದು ಪುಸ್ತಕಗಳನ್ನಾದರೂ ಖರೀದಿಸಿ ಎಂದು ಕರೆ ನೀಡುತ್ತಿದ್ದಾರೆ. ‘ನನ್ನ ಬ್ಯಾಕ್‌ಪ್ಯಾಕ್‌ನಲ್ಲಿ ಬುಕ್ಸ್ ಇವೆ’ ಎಂದು ಹೆಮ್ಮೆಪಡಲು ಹುಡುಗ ಹುಡುಗಿಯರಿಗೆ ಹೇಳುತ್ತಿದ್ದಾರೆ. ಸೆಲೆಬ್ರಿಟಿಗಳನ್ನು ಅಂಗಡಿಗೆ ಆಹ್ವಾನಿಸುತ್ತಿದ್ದಾರೆ. ದೊಡ್ಡ ಮಾಲ್‌ಗಳಲ್ಲಿ ದೊಡ್ಡ ಬ್ರ್ಯಾಂಡ್ ಅಂಗಡಿಗಳ ನಡುವೆ ದುಬಾರಿ ಬಾಡಿಗೆ ಕೊಟ್ಟು ಪುಸ್ತಕದ ಅಂಗಡಿ ತೆರೆಯುವುದೂ ಉಂಟು.
ಸರಪಳಿ ಅಂಗಡಿಗಳು ವೇಗವಾಗಿ ಮುಚ್ಚುತ್ತಿದ್ದರೂ ಒಂದೊಂದೇ ಅಂಗಡಿ ಇಟ್ಟವರು ಹೇಗೋ ತೇಕುತ್ತ ಉಸಿರಾಡುತ್ತಿದ್ದಾರೆ. ಉಳಿದುಕೊಳ್ಳಲು ಪುಸ್ತಕ ಮಾರಾಟದ ಜೊತೆ ಪುಸ್ತಕ ಪ್ರಕಾಶನವನ್ನೂ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಈಗ ಕ್ರೈಸ್ತ ಧರ್ಮದ ಪುಸ್ತಕ ಮಾರುವ ಅಂಗಡಿಗಳು, ಸಲಿಂಗಕಾಮಕ್ಕೆ ಮೀಸಲಾದ, ವರ್ಣಭೇದ ನೀತಿ ವಿರೋಧಿಸುವ ವಿಶೇಷ ಅಂಗಡಿಗಳು ಕೂಡ ಮುಚ್ಚುತ್ತಿವೆಯಂತೆ. ಒಟ್ಟಿನಲ್ಲಿ ಆನ್‌ಲೈನ್ ವ್ಯಾಪಾರದಿಂದ ಹಾರ್ಡ್‌ಬ್ಯಾಕ್, ಪೇಪರ್‌ಬ್ಯಾಕ್ ಪುಸ್ತಕಗಳ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ಬೆನ್ನು ಮುರಿದುಹೋಗಿದೆ.
ಪ್ರಸಿದ್ಧ ಅಂಗಡಿಗಳು ಕೂಡ ಪುಸ್ತಕಗಳ ನೆಪದಲ್ಲಿ ಸ್ಟೇಷನರಿ ಸಾಮಗ್ರಿ, ಮಕ್ಕಳ ಆಟಿಕೆಗಳು, ಉಡುಗೊರೆ ವಸ್ತುಗಳು, ಕಾಂಜಿಪೀಂಜಿ ಸರಕುಗಳನ್ನು ಮಾರಿ ವ್ಯಾಪಾರ ಉಳಿಸಿಕೊಳ್ಳುತ್ತಿದ್ದಾರೆ. ಟಾಟಾ ಸಮೂಹದ ಲ್ಯಾಂಡ್‌ಮಾರ್ಕ್, ಶಾಪರ್ಸ್‌ಸ್ಟಾಪ್‌ನ ಕ್ರಾಸ್‌ವರ್ಡ್ ಮುಂತಾದುವು ಮಾಡಿದ್ದು ಇನ್ನೇನು? ಇವೆಲ್ಲ ಹೋಗಲಿ, ‘ರೀಡಿಂಗ್ ಸ್ಪಾ’ಗಳೂ ಅನೇಕ ದೇಶಗಳಲ್ಲಿ ಶುರುವಾಗಿವೆ. ಇಲ್ಲಿ ಕೈಗೆ ಪುಸ್ತಕ ಕೊಟ್ಟು ಮನಕ್ಕೆ ರಂಜನೆ, ಮೈಗೆ ಮಸಾಜ್ ಇರುತ್ತದೆ. ಗ್ರಾಹಕರು ಪುಸ್ತಕ ಓದುತ್ತಾ ಮಸಾಜ್ ಮಾಡಿಸಿಕೊಳ್ಳಬಹುದು. ಆಮೇಲೆ ‘ಬಿಬ್ಲಿಯೋಗ್ರಫಿ’ ಅಂತ ಕೇಳಿದ್ದೆವು, ಈಗ ‘ಬಿಬ್ಲಿಯೋಥೆರಪಿ’ ಅಂತ ಬಂದಿದೆಯಂತೆ- ಪುಸ್ತಕ ಓದಲುಕೊಟ್ಟು ಮೈಕೈ ನೋವಿಗೆ ಶಮನಚಿಕಿತ್ಸೆ ಮಾಡುತ್ತಾರಂತೆ. ಅಂಗಡಿಯಲ್ಲಿ ಪುಸ್ತಕದ ಜೊತೆ ಅದು ಕೊಡುವ ಅನುಭವ, ಅನುಭೂತಿಯನ್ನೂ ಕೊಡುತ್ತೇವೆ ಅಂದರೆ ಹೇಗೆ?
ಕಾಗದದ ಮೇಲೆ ಮುದ್ರಿತವಾದ ಪುಸ್ತಕವನ್ನು ಹಿಡಿದು ಗಟ್ಟಿಯಾಗಿ ಓದುವುದನ್ನು ಕಲಿಯದಿದ್ದರೆ ಮಕ್ಕಳ ಭಾಷೆ, ಗ್ರಹಿಕೆ ಮತ್ತು ಬುದ್ಧಿವಂತಿಕೆ ಎಲ್ಲಕ್ಕೂ ತೊಂದರೆ ಎಂದು ಶಿಕ್ಷಣತಜ್ಞರು ಆತಂಕಪಡುವುದು ತೀರಾ ಸಹಜ. ಅನೇಕ ದೇಶಗಳ ಶಾಲೆಗಳಲ್ಲಿ ವಾರಕ್ಕೆ ಒಂದಷ್ಟು ಗಂಟೆ ಮಕ್ಕಳು ಪುಸ್ತಕ ಓದಬೇಕು ಎಂದು ಕಡ್ಡಾಯ ಮಾಡಿದ್ದಾರೆ. ಅದು ಸಂಸ್ಕೃತಿಯ ಲಕ್ಷಣವಾದ್ದರಿಂದ ಅದನ್ನು ಕಳೆದುಕೊಳ್ಳುವ ಕಳವಳ ಮೂಡುತ್ತಿದೆ. ಪುಸ್ತಕಗಳ ಸಂಕಟ ಪತ್ರಿಕೆಗಳ ಸಂಕಟವೂ ಆಗುತ್ತಿದೆ.
ಉಳ್ಳವರಿಗೆ ಉಳಿಸಿಕೊಳ್ಳುವ ಚಿಂತೆ, ಆದರೆ ನಮ್ಮ ಹಳ್ಳಿಗಳ ಮಕ್ಕಳಿಗೆ ಬೇರೆ ರೀತಿಯ ಚಿಂತೆ. ಅವರು ಶಾಲೆಗಳಲ್ಲಿ ಓದಲು ಕಲಿಯುವುದೇ ಕಷ್ಟ, ಕಲಿತರೂ ಪುಸ್ತಕ ಸಿಗುವುದೇ ಕಷ್ಟ. ಇನ್ನು ಅವರು ಕಿಂಡಲ್, ಐಪ್ಯಾಡ್, ಕಂಪ್ಯೂಟರ್‌ಗಳಲ್ಲಿ ಓದುವುದು ಹೇಗೆ? ಹತ್ತು ರೂಪಾಯಿಗೆ ಉತ್ತಮ ಪುಸ್ತಕಗಳನ್ನು ಕೊಡುವ ‘ಪ್ರಥಮ್ ಬುಕ್ಸ್’ ಅಂಥವರು ಇನ್ನಷ್ಟು ಹೆಚ್ಚದಿದ್ದರೆ ಅವರು ಓದು ಕಲಿಯುವುದು ಹೇಗೆ? ನಮ್ಮ ದೇಶದ ಅರ್ಧ ಜನಕ್ಕೆ ಸಾಕ್ಷರತೆ ಇಲ್ಲವಂತೆ. ಅವರು ಓದಲು ಕಲಿಯುವವರೆಗಾದರೂ ಪುಸ್ತಕದ ಅಂಗಡಿಗಳು ಇರಬೇಕು.
ಅಂದ ಹಾಗೆ, ನಮ್ಮ ದೇಶದಲ್ಲಿ ನಮ್ಮ ನಡುವೆ ಇದ್ದ ಇನ್ನೊಂದು ಬಗೆಯ ಅಕ್ಷರದ ಅಂಗಡಿಯ ಮರಣವನ್ನು ಮರತೇಬಿಟ್ಟಿದ್ದೇವೆ. ನಮ್ಮ ಬಡಾವಣೆಗಳಲ್ಲಿ ಶೆಟ್ಟರ ಅಂಗಡಿ, ದರ್ಜಿ ಅಂಗಡಿ, ಡಾಕ್ಟರ ಶಾಪು ಇದ್ದ ಹಾಗೆ, ‘ಸರ್ಕ್ಯುಲೇಟಿಂಗ್ ಲೈಬ್ರರಿ’ ಎಂಬ ಕನಸುಗಳನ್ನು ಮಾರುವ ಮಾಯಾ ಅಂಗಡಿಗಳೂ ಇದ್ದುವಲ್ಲ? ಗಂಭೀರ ಗ್ರಂಥಾಲಯಗಳಿಗಿಂತ ಭಿನ್ನವಾಗಿ ಜನಸಾಮಾನ್ಯರನ್ನು ಸಾಹಿತ್ಯಲೋಕಕ್ಕೆ ಇವು ಕರೆತರುತ್ತಿದ್ದುದಂತೂ ಸುಳ್ಳಲ್ಲ.
ಗೃಹಕೃತ್ಯಗಳಲ್ಲೇ ಮುಳುಗಿದ್ದ ಮಹಿಳೆಯರೂ ಇವುಗಳಿಂದಲೇ ಸಾಹಿತ್ಯ ಓದುವಂತಾಗಿದ್ದು, ಸಾಹಿತಿಗಳು ಸಾರ್ವಭೌಮ, ಸಾಮ್ರಾಜ್ಞಿಯರಾದದ್ದು ಮರೆಯುವಂತಿಲ್ಲ. ‘ಸರ್ಕ್ಯುಲೇಟಿಂಗ್ ಲೈಬ್ರರಿ’ಗಳನ್ನು ಕೊಂದದ್ದು ಟಿವಿ ಧಾರಾವಾಹಿಗಳು ಎಂಬ ಆರೋಪವಿದೆ. ಅದೇನೇ ಇರಲಿ, ಓದುವ ಹುಚ್ಚಿರುವ ಯಾರಿಗೂ ಪುಸ್ತಕದಂಗಡಿಗಳ ನಿಧನ ವಾರ್ತೆ ಓದಲು ಇಷ್ಟವಿಲ್ಲ ಎಂದು ನಂಬೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.