ADVERTISEMENT

ಅಕ್ಕಿ ತೊಳೆದ ನೀರು

ಡಾ. ಗುರುರಾಜ ಕರಜಗಿ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST
ಇದು ಸಂಧ್ಯಾ ಪೈ ಅವರು ಬರೆದ ಕಥೆ. ತುಂಬ ಮಾರ್ಮಿಕವಾದದ್ದು ಮತ್ತು ನನ್ನ ಮನಸ್ಸನ್ನು ಬಲವಾಗಿ ಹಿಡಿದದ್ದು. ಒಂದು ಬಡಾವಣೆಯಿಂದ ಮಕ್ಕಳು ಹತ್ತಿರದ ಶಾಲೆಗೆ ಹೋಗುತ್ತಿದ್ದರು. ಸಾಮಾನ್ಯವಾಗಿ ಮಕ್ಕಳೆಲ್ಲ ಜೊತೆಜೊತೆಯಾಗಿಯೇ ಹೋಗಲು ಇಷ್ಟಪಡುತ್ತಾರೆ. ಒಂದು ಅತ್ಯಂತ ಬಡ ಕುಟುಂಬದ ಮಗು ತಾನು ಶಾಲೆಗೆ ಹೋಗುವಾಗ ದಾರಿಯಲ್ಲಿದ್ದ ಇನ್ನೊಂದು ಮಗುವಿನ ಜೊತೆಗೂಡಿ ಹೋಗುತ್ತಿತ್ತು. ಆ ಇನ್ನೊಂದು ಮನೆಯವರು ತಕ್ಕಷ್ಟು ಉಳ್ಳವರು. ಈ ಮಗು ಉಳ್ಳವರ ಮನೆಗೆ ಹೋಗಿ ಸ್ವಲ್ಪ ಕಾಯ್ದು ಆ ಮಗುವನ್ನು ಜೊತೆಗೂಡಿ ಶಾಲೆಗೆ ಹೋಗುವುದು ವಾಡಿಕೆಯಾಗಿತ್ತು. ಹಾಗೆ ಹೋದಾಗ ಕೆಲವೊಮ್ಮೆ ಮಗುವಿನ ತಾಯಿ ತನ್ನ ಮಗನಿಗೆ ತಿಂಡಿ ಕೊಟ್ಟು ಹಾಲು ಕುಡಿಯಲು ಒತ್ತಾಯಿಸುವರು. ಗೆಳೆಯ ಹಾಲು ಕುಡಿದದ್ದನ್ನು ನೋಡಿದ ಈ ಹುಡುಗನಿಗೆ ಕುತೂಹಲವಾಯಿತು. ಬುದ್ಧಿ ತಿಳಿದ ಮೇಲೆ ಹಾಲಿನ ರುಚಿಯನ್ನೇ ಕಾಣದ ಈತ ತಾಯಿಯನ್ನು ಕೇಳಿದ,  `ಅಮ್ಮೋ, ನನ್ನ ಸ್ನೇಹಿತ ದಿನಾಲು ಹಾಲು ಕುಡಿದು ಶಾಲೆಗೆ ಬರುತ್ತಾನೆ. ನನಗೂ ಹಾಲು ಕೊಡಮ್ಮ'.

ತಾಯಿಗೆ ದುಃಖವಾಯಿತು. ಆಕೆಗೂ ಮಗನಿಗೆ ಹಾಲು ಕೊಡಬೇಕೆಂಬ ಆಸೆ ಇದೆ. ಆದರೆ, ಮನೆಯ ಪರಿಸ್ಥಿತಿಯಲ್ಲಿ ಹಾಲು ಕೊಳ್ಳುವುದು ಕನಸಿನ ಮಾತು. ಕೊಡುವುದು ಇಲ್ಲವೆಂದರೆ ಮಗುವಿನ ಮನಸ್ಸು ಮುರಿಯುತ್ತದೆ. ತಾನು ಮಾಡುವುದು ಅಸತ್ಯವಾದರೂ ಮಗುವಿಗೆ ಸಮಾಧಾನ ತರಲೆಂದು ಆಕೆ ಅಕ್ಕಿಯನ್ನು ತೊಳೆದ ನೀರನ್ನೇ ಹಾಲು ಎಂದು ನಂಬಿಸಿ ನೀಡಿದಳು. ಮಗು ಅದನ್ನೇ ನಂಬಿತು. ಆ ದಿನದಿಂದ ಮಗು ದಿನ ನಿತ್ಯ ಶಾಲೆಗೆ ಹೋಗುವ ಮೊದಲು ತಾಯಿ ಕೊಟ್ಟ ಅಕ್ಕಿ ತೊಳೆದ ನೀರನ್ನೇ ಹಾಲೆಂದು ಕುಡಿದು ತೃಪ್ತಿಯಿಂದ ಹೋಗುತ್ತಿತ್ತು. ಒಂದಷ್ಟು ಕಾಲ ಇದು ಹೀಗೇ ನಡೆಯಿತು. ಒಂದು ಬಾರಿ ಸಂಜೆಯ ಮುಂದೆ ಆಡಲು ಈ ಮಗು ತನ್ನ ಗೆಳೆಯನ ಮನೆಗೆ ಹೋಯಿತು. ಆಟವಾಡಿ ಮನೆಗೆ ಬರಬೇಕೆನ್ನುವಾಗ ಗೆಳೆಯನ ತಾಯಿ ಈತನನ್ನೂ ಕರೆದು ತಿಂಡಿ ನೀಡಿದರು. ನಂತರ ಇಬ್ಬರಿಗೂ ಕುಡಿಯಲು ಹಾಲು ಕೊಟ್ಟರು. ಮೊಟ್ಟಮೊದಲನೆಯ ಬಾರಿಗೆ ಮಗು ಹಾಲಿನ ರುಚಿ ನೋಡಿತು. ತಕ್ಷಣ ಅದಕ್ಕೆ ತಾನು ಇದುವರೆಗೂ ಕುಡಿಯುತ್ತಿದ್ದುದು ಹಾಲಲ್ಲ ಎಂಬುದೂ ತಿಳಿಯಿತು. ಮಗುವಿಗೆ ತಾಯಿ ಹೇಳಿದ್ದು ಸತ್ಯವಲ್ಲ ಎಂಬುದು ಮನದಟ್ಟಾಯಿತು. 
 
ಮನೆಗೆ ಹೋದ ಮೇಲೆ ಮಗು ತಾಯಿಯನ್ನು ಕೇಳಿತು, `ಅಮ್ಮೋ, ನೀನು ನನಗೆ ನಿತ್ಯ ಕೊಡುತ್ತಿದ್ದುದು ನಿಜವಾಗಿಯೂ ಹಾಲೇ. ಯಾಕೆಂದರೆ ನಾನಿಂದು ಗೆಳೆಯನ ಮನೆಯಲ್ಲಿ ಹಾಲು ಕುಡಿದೆ. ಅದರ ರುಚಿಯೇ ಬೇರೆಯಾಗಿತ್ತು'. ತಾಯಿಯ ಕಣ್ಣಿನಲ್ಲಿ ನೀರು ಉಕ್ಕಿದವು. ಆಕೆಗೆ ಅರಿವಾಯಿತು, ಮಗು ನಿಜವಾದ ಹಾಲನ್ನು ಕುಡಿದಿದೆ. ಇನ್ನು ಸುಳ್ಳು ಹೇಳಿ ಪ್ರಯೋಜನವಿಲ್ಲ. ಆಕೆ ದುಃಖದಿಂದ ಸತ್ಯ ಸಂಗತಿ ವಿವರಿಸಿದಳು. ಮನೆಯಲ್ಲಿಯ ಬವಣೆ, ಹಾಲಿಗೆ ಹಣ ಹೊಂದಿಸಲಾಗದ ಅನಿವಾರ್ಯತೆ. ಇವೆಲ್ಲವನ್ನೂ ಅಳುತ್ತಲೇ ಮಗುವನ್ನು ತಬ್ಬಿಕೊಂಡು ತಿಳಿಸಿದಳು.  `ಮಗೂ ನಿನಗೆ ಹಾಲಿಲ್ಲ ಎಂದು ಹೇಳಲು ಮನಸ್ಸಾಗದ್ದರಿಂದ ಅಕ್ಕಿ ತೊಳೆದ ನೀರನ್ನೇ ಹಾಲೆಂದು ಕೊಟ್ಟೆ'  ಎಂದು ಹೇಳಿ ಗದ್ಗದಳಾದಳು. ಮಗು ತಾಯಿಯ ತೊಡೆಯಿಂದ ಮೇಲಕ್ಕೆದ್ದು ಆಕೆಯ ಕಣ್ಣೀರು ಒರೆಸಿತು.  

`ಅಮ್ಮೋ, ನಾನು ಇನ್ನು ಎಂದಿಗೂ ನಿನ್ನನ್ನು ಹಾಲು ಕೊಡು ಎಂದು ಪೀಡಿಸುವುದಿಲ್ಲ. ಆದರೆ, ನನಗೆ ಅಕ್ಕಿ ತೊಳೆದ ನೀರನ್ನು ಮಾತ್ರ ಹಾಲೆಂದು ಕೊಡಬೇಡ, ನಾನು ಕುಡಿಯಲಾರೆ'  ಎಂದಿತು. ಇದೊಂದು ಪುಟ್ಟ ಘಟನೆಯಾದರೂ ಅಸಾಮಾನ್ಯ ದರ್ಶನ ನೀಡುವಂತಹದು. ನಮ್ಮ ಬಹಳಷ್ಟು ಬದುಕು ಹೀಗೇ ಹೋಗುತ್ತದೆ. ಆದರೆ ಒಂದು ಬಾರಿ ಸತ್ಯದ ದರ್ಶನವಾದರೆ ಅಸತ್ಯದ ತಾತ್ಕಾಲಿಕ ಮೆರುಗು ಕರಗಿಹೋಗುತ್ತದೆ, ನಮಗರಿವಿಲ್ಲದಂತೆ ನಮ್ಮ ಜೀವನದಲ್ಲಿ ಶಾಂತಿ ನೆಲೆಮಾಡುತ್ತದೆ, ತಳಮಳ ನಿಂತು ಹೋಗುತ್ತದೆ. ನಿಜವಾದ ಹಾಲಿನ ರುಚಿ ಕಂಡ ಮೇಲೆ ಅಕ್ಕಿ ತೊಳೆದ ನೀರಿಗೆ ಮನ ತುಡಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.