ADVERTISEMENT

ಅಶಕ್ತ ಚಕ್ರವರ್ತಿ

ಡಾ. ಗುರುರಾಜ ಕರಜಗಿ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಮೊಘಲ್ ಚಕ್ರವರ್ತಿ ಶಹಾಜಹಾನ್ ತನ್ನ ವಿಶಾಲವಾದ ಅರಮನೆಯಲ್ಲಿ ಮಲಗಿದ್ದ. ರಾತ್ರಿ ಸುಮಾರು ಎರಡು ಗಂಟೆಯಾಗಿರಬೇಕು. ಅವನಿಗೆ ಎಚ್ಚರವಾಯಿತು. ಅವು ಬೇಸಿಗೆಯ ದಿನಗಳು. ಶಹಾಜಹಾನನಿಗೆ ಗಂಟಲು ಒಣಗಿ ಕುಡಿಯಲು ನೀರು ಬೇಕೆನಿಸಿತ್ತು.

ಎಂದಿನಂತೆ ಸೇವಕರನ್ನು ಕೂಗಿದ. ಯಾವ ಪ್ರತ್ಯುತ್ತರವೂ ಬರಲಿಲ್ಲ. ಸದಾ, ಸರ್ವದಾ ಈತನ ಸೇವೆಗೆಂದೇ ಎಚ್ಚರವಾಗಿರುತ್ತಿದ್ದ ಸೇವಕರು ಧ್ವನಿಗೊಡಲಿಲ್ಲ.ಶಹಾಜಹಾನ್ ಕರುಣಾಳುವಾಗಿದ್ದ.
 
ಬಹುಶಃ ತನ್ನ ಸೇವಕರು ಇಡೀ ದಿನ ದುಡಿದು ದುಡಿದು ಸುಸ್ತಾಗಿ ಮಲಗಿರಬೇಕು. ಅವರನ್ನೇಕೆ ಎಬ್ಬಿಸಬೇಕೆಂದುಕೊಂಡು ತಾನೇ ಹಾಸಿಗೆಯಿಂದೆದ್ದು ಸ್ವಲ್ಪ ದೂರದಲ್ಲಿದ್ದ ನೀರಿನ ಹೂಜಿಯ ಬಳಿಗೆ ಹೋದ.

ಅವತ್ತು ಅದೇನು ದೈವವೊ ಹೂಜಿಯಲ್ಲೂ ನೀರು ಇರಲಿಲ್ಲ. ಮೊಘಲ್ ಚಕ್ರವರ್ತಿಗೆ ರಾತ್ರಿ ನೀರಡಿಕೆಯಾದರೆ ಒಂದು ಹನಿ ನೀರೂ ಇರಲಿಲ್ಲ.ಶಹಾಜಹಾನ್ ತನ್ನಷ್ಟಕ್ಕೆ ತಾನೇ ನಕ್ಕ.

ಪಾಪ! ಮಲಗಿರುವ ಸೇವಕರನ್ನು ಎಬ್ಬಿಸಿ ತೊಂದರೆ ಕೊಡುವುದು ಬೇಡ, ಒಂದು ದಿನ ತಾನೇ ಕೆಲಸಮಾಡಿಕೊಂಡರೆ ಆಗದೇ ಎಂದುಕೊಂಡು ತನ್ನ ಮಲಗುವ ಕೋಣೆಯಿಂದ ಸ್ವಲ್ಪವೇ ದೂರದಲ್ಲಿದ್ದ ಬಾವಿಗೆ ಹೊರಟ.

ಅದೊಂದು ಬೆಳದಿಂಗಳ ರಾತ್ರಿ, ಆಕಾಶ ಶುಭ್ರವಾಗಿದೆ. ಚಂದ್ರನ ಬೆಳಕು ಎಲ್ಲೆಡೆಗೆ ಚೆಲ್ಲಿದೆ. ಬಾವಿಯ ಕಟ್ಟೆಯ ಮೇಲೊಂದು ಹಿತ್ತಾಳೆಯ ಕೊಡ ಇದೆ. ಮುಂದೆ ನೀರು ಎಳೆಯಲು ಸಿದ್ಧವಾಗಿದ್ದ ರಾಟೆಯ ಮೇಲೆ ಹಗ್ಗವನ್ನೂ ಹಾಕಲಾಗಿತ್ತು.

ಚಕ್ರವರ್ತಿಗೆ ಎಂದಾದರೂ ಬಾವಿಯಿಂದ ನೀರು ಎಳೆದು ಅಭ್ಯಾಸವಿರುತ್ತದೆಯೇ? ಆತ ಮೊದಲು ಬಾವಿಯಲ್ಲಿ ಬಗ್ಗಿ ನೋಡಿದ. ಚಂದ್ರನ ಪ್ರತಿಬಿಂಬ ಆಳವಾದ ಬಾವಿಯ ನೀರಿನಲ್ಲಿ ಸುಂದರವಾಗಿ ಕಾಣುತ್ತಿತ್ತು.

ಕೊಡದ ಬಾಯಿಗೆ ಹಗ್ಗ ತೊಡಿಸಿ ನೀರಿಗೆ ಬಿಡಬೇಕೆಂದುಕೊಂಡು ಹಿಂದಕ್ಕೆ ಸರಿದ. ಆಗ ನೇತಾಡುತ್ತಿದ್ದ ಕಬ್ಬಿಣದ ರಾಟೆ ಅವನ ಹಣೆಗೆ ಬಡಿಯಿತು. ಕ್ಷಣಾರ್ಧದಲ್ಲಿ ರಕ್ತ ಚಿಮ್ಮಿತು. ಅಯ್ಯೋ ಎಂದು ಕಿರುಚಿದ ಶಹಾಜಹಾನ್.
 
ಅವನ ಕೈ ಬಡಿದು ಕಟ್ಟೆಯ ಮೇಲಿದ್ದ ಕೊಡ ಢಮಾರೆಂದು ಬಾವಿಯಲ್ಲಿ ಬಿತ್ತು. ಈ ಭಾರೀ ಸದ್ದು ಕಾವಲುಗಾರರನ್ನು ಎಚ್ಚರಿಸಿತು. ಒಂದೇ ನಿಮಿಷದಲ್ಲಿ ಚಕ್ರವರ್ತಿಯ ಕಾವಲುಗಾರರು, ಸೇವಕರು ಎಲ್ಲರೂ ಅಲ್ಲಿಗೆ ಓಡಿ ಬಂದರು.
 
ಚಕ್ರವರ್ತಿಯನ್ನು ಅಲ್ಲಿ ಕಂಡು, ಅವನ ಹಣೆಯಿಂದ ಸುರಿಯುತ್ತಿದ್ದ ರಕ್ತವನ್ನು ನೋಡಿ ಎಲ್ಲರೂ ಗಾಬರಿಯಾದರು. ಅವರ ಗಾಬರಿಗೆ ಅನೇಕ ಕಾರಣಗಳು. ಚಕ್ರವರ್ತಿ ಎದ್ದು ಹೊರಗೆ ಬರುವವರೆಗೆ ತಮ್ಮ ಗಮನಕ್ಕೆ ಬರದಿದ್ದುದು ತಮ್ಮ ಬೇಜವಾಬ್ದಾರಿಯಲ್ಲವೇ? ಈ ನಿರ್ಲಕ್ಷ್ಯಕ್ಕೆ ಚಕ್ರವರ್ತಿ ಅದಾವ ಶಿಕ್ಷೆ ನೀಡುತ್ತಾನೋ?

ಆದರೆ ಶಹಾಜಹಾನ್ ಇವರ ಮೇಲೆ ಕೋಪಿಸಿಗೊಂಡು ಕೂಗಾಡಲಿಲ್ಲ. ಬದಲಾಗಿ ರಕ್ತ ಸೋರುತ್ತಿದ್ದ ಹಣೆಯನ್ನು ಒತ್ತಿ ಹಿಡಿದುಕೊಂಡು,  `ಅಲ್ಲಾ, ನಿನ್ನ ಕೃಪೆ ದೊಡ್ಡದು~ ಎನ್ನುತ್ತ ನಗುತ್ತಿದ್ದ.
 
ಅಲ್ಲಿಗೆ ಧಾವಿಸಿ ಬಂದ ಮಂತ್ರಿಗಳಿಗೆ ಆಶ್ಚರ್ಯವಾಯಿತು. `ಪ್ರಭೂ, ವೈದ್ಯರು ಬರುತ್ತಿದ್ದಾರೆ, ಶುಶ್ರೂಷೆ ಮಾಡುತ್ತಾರೆ. ಆದರೆ ತಾವು ನಗುತ್ತಿರುವ ಕಾರಣ ಅರ್ಥವಾಗುತ್ತಿಲ್ಲ~ ಎಂದರು ಮಂತ್ರಿಗಳು.

ಆಗ ಚಕ್ರವರ್ತಿ ಹೇಳಿದ,  `ನೋಡಿ ಭಗವಂತನ ಕೃಪೆ ಎಷ್ಟು ದೊಡ್ಡದು! ಅವನ ಲೀಲೆಯೇ ವಿಚಿತ್ರ. ತಾನಾಗಿಯೇ ಎದ್ದು ಬಾವಿಯಿಂದ ಒಂದು ಕೊಡ ನೀರನ್ನು ಎಳೆದುಕೊಂಡು ದಾಹ ತಣಿಸಿಕೊಳ್ಳಲಾಗದ ಅಶಕ್ತ ವ್ಯಕ್ತಿಯ ಕೈಯಲ್ಲಿ ಇಡೀ ಮೊಘಲ್ ಸಾಮ್ರೋಜ್ಯದ ಸಿಂಹಾಸನವನ್ನು ಕೊಟ್ಟಿದ್ದಾನೆ!~

ದೇವರ ಕೃಪೆ ಇದ್ದರೆ ಯಾವುದೂ ಅಸಾಧ್ಯವಲ್ಲ. ಅವನ ಕೃಪೆಯಲ್ಲಿ ನಂಬಿಕೆ ಇರಲಿ, ಆದರೆ ಅತ್ಮವಿಶ್ವಾಸದೊಂದಿಗೆ ಸತತ ಪರಿಶ್ರಮ ಮಾಡುವ ಮನಸ್ಸೂ ಇರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.