ADVERTISEMENT

ಕಳೆದ ಹಣ, ದೊರೆತ ಮೌಲ್ಯ

ಡಾ. ಗುರುರಾಜ ಕರಜಗಿ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ಸದಾ ಆದರ್ಶವನ್ನೇ ಚಿಂತಿಸುತ್ತ, ಆದರ್ಶವನ್ನು ಬೋಧಿಸುತ್ತ, ತಮ್ಮ ಜೀವನವನ್ನೇ ಆದರ್ಶವೆಂಬಂತೆ ಬದುಕಿ ಇತ್ತೀಚಿಗೆ ಮರೆಯಾದ ಹಿರಿಯ ಚೇತನ ಬೆಳಗೆರೆ ಕಷ್ಣಶಾಸ್ತ್ರಿಯವರನ್ನು ಮರೆಯಲಾದೀತೇ?  ಪುಸ್ತಕದ ಒಂದು ಘಟನೆಯನ್ನು ನೆನೆಯುವ ಮೂಲಕ ಅವರಿಗೆ ಶ್ರದ್ಧಾಂಜಲಿ ಇದು.

ಹೆಗ್ಗೆರೆಯಲ್ಲಿ ಚಿಕ್ಕರಂಗಪ್ಪ ಎಂಬ ರೈತನೊಬ್ಬನಿದ್ದ. ಅವನು ಹೆಚ್ಚಿಗೆ ಓದಿರದಿದ್ದರೂ ಸಂಸ್ಕಾರವಂತ. ಅವನಿಗೆ ಇಬ್ಬರು ಹೆಣ್ಣುಮಕ್ಕಳು. ದೊಡ್ಡವಳಿಗೆ ಮದುವೆ ಮಾಡುವ ಸಮಯ ಬಂದಿತು. ತಮ್ಮ ಬಳಗದಲ್ಲೆೀ ಹುಡುಗನೊಬ್ಬನನ್ನು ನೋಡಿ ಮದುವೆ ಗೊತ್ತು ಮಾಡಿದ. ಎಷ್ಟೇ ಸರಳ ಮದುವೆ ಎಂದರೂ ಹಣ ಬೇಕಲ್ಲ? ಆತ ಬಡವ. ತನ್ನ ಜೊತೆ ಎತ್ತುಗಳನ್ನೇ ಮಾರಿ ಬಂದ ಹಣದಲ್ಲಿ ಮದುವೆ ಮಾಡುವುದೆಂದು ತೀರ್ಮಾನಿಸಿ ಹತ್ತಿರದ ಹರ್ತಿಕೋಟೆಯ ಜಾತ್ರೆಗೆ ಹೋದ. ಅದು ಎತ್ತುಗಳನ್ನು ಮಾರಲು, ಕೊಳ್ಳಲು ಪ್ರಸಿದ್ದವಾದ ಜಾತ್ರೆ. ಎತ್ತುಗಳನ್ನು ಮಾರಿದಾಗ ಐದಾರು ನೂರು ರೂಪಾಯಿಗಳು ದೊರೆತವು. ಆ ಕಾಲಕ್ಕೆ ಅದೊಂದು ಬಹು ದೊಡ್ಡ ಮೊತ್ತ.

ಮರಳಿ ತನ್ನ ಊರಿಗೆ ಬರುವಾಗ ದಾರಿಯಲ್ಲಿ ಆತನ ಹೊಲ ಸಿಗುತ್ತಿತ್ತು. ಆಗ ಕತ್ತಲೆಯಾಗಿದ್ದರೂ ಸುಂದರವಾದ ಬೆಳದಿಂಗಳಿತ್ತು. ಚಿಕ್ಕರಂಗಪ್ಪ ಹಾಗೂ ಅವನ ಇಬ್ಬರು ಸ್ನೇಹಿತರು ಜೋಳದ ಹೊಲದಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದು, ಜೋಳದ ತೆನೆಯಿಂದ ಹಸಿ ಕಾಳುಗಳನ್ನು ಬೇರ್ಪಡಿಸಿ ತಿಂದು ನೀರು ಕುಡಿದರು. ನಂತರ ಮನೆಗೆ ಬಂದ ಚಿಕ್ಕರಂಗಪ್ಪ ಹೆಂಡತಿಗೆ ಹಣವನ್ನು ನೀಡಲು ಜೇಬಿಗೆ ಕೈ ಹಾಕಿದರೆ ಜೇಬು ಖಾಲಿ! ತನ್ನ ಕೋಟಿನ ಎಲ್ಲ ಜೇಬುಗಳನ್ನು ತಡಕಾಡಿದರೂ ಹಣ ಇಲ್ಲ! ಅವನ ಎದೆ ಒಡೆದು ಹೋಯಿತು.

ADVERTISEMENT

ತಾನು ಹಣವನ್ನು ಎಲ್ಲಿ ಕಳೆದುಕೊಂಡಿರಬಹುದು? ಜೊತೆಗೆ ಬಂದಿದ್ದವರು ನಂಬಿಕಸ್ಥರು. ಜಾತ್ರೆಯಲ್ಲಿ ಯಾರಾದರೂ ಹಣದ ಚೀಲವನ್ನು ಹೊಡೆದು ಬಿಟ್ಟರೋ? ಇನ್ನು ಮಗಳ ಮದುವೆ ಮಾಡುವ ಬಗೆ ಹೇಗೆ? ಎಂದೆಲ್ಲ ಆತಂಕ ಪಟ್ಟ. ತಕ್ಷಣ ಸ್ನೇಹಿತರನ್ನು ಕರೆದುಕೊಂಡು ಹೊಲಕ್ಕೆ ಹೋದ. ತಾನು ಕುಳಿತ ಸ್ಥಳವನ್ನು ತಡಕಾಡಿದ. ಅಲ್ಲಿ ನೋಟುಗಳ ಪತ್ತೆ ಇಲ್ಲ. ಆ ರಾತ್ರಿಯಲ್ಲಿ ಜಾತ್ರೆಗೆ ಹೋಗುವುದರಲ್ಲಿ ಅರ್ಥವಿಲ್ಲ. ಈ ರಾತ್ರಿಯಲ್ಲಿ ಅಲ್ಲಾರಿದ್ದಾರು? ಅಲ್ಲಿಗೆ ಬಂದವರಲ್ಲಿ ಯಾರಿಗಾದರೂ ಅಷ್ಟು ದುಡ್ಡು ಸಿಕ್ಕಿದ್ದರೆ ಮರಳಿ ಕೊಡುತ್ತಾರೆಯೇ? ಮಗಳ ಮದುವೆ ಮುರಿದು ಹೋಯಿತಲ್ಲ ಎಂಬ ಆತಂಕದಲ್ಲೆೀ ಬೆಳಗಾಯಿತು.

ಆ ಊರಿನಲ್ಲಿ ಎಮ್ಮೆ ಕಾಯುವ ತಮ್ಮಣ್ಣನೆಂಬ ಹುಡುಗನಿದ್ದ. ಪ್ರತಿದಿನ ಬೆಳಿಗ್ಗೆ ಚಿಕ್ಕರಂಗಪ್ಪನವರ ಮನೆಗೆ ಬಂದು ಕೊಟ್ಟಿಗೆ ಸ್ವಚ್ಛ ಮಾಡುತ್ತಿದ್ದ. ಹೆಗ್ಗೆರೆ ಸಣ್ಣ ಊರಾದ್ದರಿಂದ ಯಾವ ವಿಷಯವೂ ಗುಟ್ಟಾಗಿರುವಂತಿರಲಿಲ್ಲ. ಈಗಾಗಲೇ ಊರಿನಲ್ಲಿ ಅನೇಕ ಜನ  `ಛೇ ಚಿಕ್ಕರಂಗಪ್ಪನಿಗೆ ಹೀಗಾಗಬಾರದಿತ್ತು, ಪಾಪ! ಮಗಳ ಮದುವೆ ನಿಂತೇ ಹೋಗುವಂತೆ ಕಾಣುತ್ತದೆ, ಮದುವೆಯೂ ನಿಂತಿತು, ದುಡ್ಡೂ ಹೋಯಿತು'  ಎಂದು ಮಾತನಾಡಿಕೊಳ್ಳುತ್ತಿದ್ದರು.

ಇದು ಇವನ ಕಿವಿಗೆ ಬಿದ್ದಿತ್ತು. ಇವರ ಮನೆಗೆ ಬಂದು ಕೊಟ್ಟಿಗೆಯಲ್ಲಿ ಕೆಲಸ ಮಾಡುವಾಗ ಹೊರಬಂದ ಚಿಕ್ಕರಂಗಪ್ಪನನ್ನು ನೋಡಿ,  `ಏನಣ್ಣ, ಏನು ಕಳಕೊಂಡ್ರಿ?' ಎಂದು ಕೇಳಿದ. ಮೊದಲೇ ಸಂಕಟದಲ್ಲಿದ್ದ ಚಿಕ್ಕರಂಗಪ್ಪನಿಗೆ ಮತ್ತಷ್ಟು ಕೆರಳಿತು, `ಲೇ ನೀನು ಸೆಗಣಿ ಬಾಚಲೇ, ನಾನು ಕಳಕೊಂಡದ್ದನ್ನು ನೀನು ಕೊಡ್ತೀಯಾ?'  ಎಂದು ಗುರುಗಟ್ಟಿದ. ಅದಕ್ಕೆ ತಮ್ಮಣ್ಣ,  `ಕಳಕೊಂಡದ್ದು ಎಲ್ಲೋ ಹುಡುಕುವುದು ಎಲ್ಲೋ?'  ಎಂದು ನಕ್ಕು ತನ್ನ ನಿಕ್ಕರಿನ ಜೇಬಿನಿಂದ ದುಡ್ಡು ತೆಗೆದುಕೊಟ್ಟ. ಅದರಲ್ಲಿಯ ಒಂದು ಪೈಸೆಯನ್ನೂ ಆತ ಮುಟ್ಟಿರಲಿಲ್ಲ.

​ರಾತ್ರಿ ಹೊಲಕಾಯಲು ಹೋದ ತಮ್ಮಣ್ಣನಿಗೆ ಯಾರೋ ಬಂದು ಜೋಳದ ತೆನೆ ತಿಂದು ಹೋದದ್ದು ತಿಳಿದು ನೋಡಲು ಹೋದಾಗ ಹಣದ ಕಟ್ಟು ಸಿಕ್ಕಿದೆ. ಮರುದಿನ ಅದು ಚಿಕ್ಕರಂಗಪ್ಪನದು ಎಂದು ಗೊತ್ತಾದೊಡನೆ ತೆಗೆದುಕೊಟ್ಟುಬಿಟ್ಟಿದ್ದಾನೆ. ಈಗ ಚಿಕ್ಕರಂಗಪ್ಪನೂ ಇಲ್ಲ, ತಮ್ಮಣ್ಣನೂ ಇಲ್ಲ. ಬಹುಶಃ ಅಂತಹ ದಿನಗಳೇ ಕಳೆದು ಹೋದವೇನೋ ಎನ್ನಿಸುತ್ತಿದೆ. ತೀರ ಬಡವನಾದ ತಮ್ಮಣ್ಣನ ಪ್ರಾಮಾಣಿಕತೆಯ ಮಟ್ಟ ಎಷ್ಟು ದೊಡ್ಡದ್ದು ಎಂದು ಯೋಚಿಸುವಾಗ ತನ್ನದಲ್ಲದ ಹಣಕ್ಕೆ ನಾಲಿಗೆ ಚಾಚುವವರನ್ನು ಕಂಡಾಗ ನಾವೆಷ್ಟು ಕುಬ್ಜರಾಗಿದ್ದೇವೆ ಎಂಬ ಭಾವನೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.