ADVERTISEMENT

ಟೀಕಾಚಾರ್ಯರು

ಡಾ. ಗುರುರಾಜ ಕರಜಗಿ
Published 23 ಆಗಸ್ಟ್ 2012, 19:30 IST
Last Updated 23 ಆಗಸ್ಟ್ 2012, 19:30 IST

ನಮ್ಮ ಸಮಾಜದಲ್ಲಿ ಟೀಕಾಚಾರ್ಯರ ಸಂಖ್ಯೆ ತುಂಬ ಹೆಚ್ಚುತ್ತಿದೆ. ಯಾವುದೇ ಕೆಲಸವನ್ನು ಯಾರೇ ಮಾಡಲಿ ನಾಲ್ಕು ಜನ ಕತ್ತಿ (ಪೆನ್ನು ಅಥವಾ ಮೈಕು) ಮಸೆದು ಟೀಕೆಗಳ ಬಾಣಗಳನ್ನು ಬಿಡಲು ಸಿದ್ಧರಾಗಿಬಿಡುತ್ತಾರೆ. ಕೆಲಸ ಪ್ರಾರಂಭವಾಗುವುದಕ್ಕಿಂತ ಮೊದಲೇ ಟೀಕೆಗಳ ಹತ್ತಾರು ಅಂಕಣಗಳು ಬಂದು ಹೋಗಿರುತ್ತವೆ. ಕರ್ನಲ್ ಜಾರ್ಜ ವಾಷಿಂಗ್ಟನ್ ಗೋಯೆಥಾಲ್ಸ ಎಂಬ ಮಹಾನ್ ವ್ಯಕ್ತಿ ಪನಾಮಾ ಕಾಲುವೆ ಕಟ್ಟಲು ಮುಂದಾದ. ಪನಾಮಾ ಕಾಲುವೆಯನ್ನು ಕಟ್ಟಿದ ಮೇಲೆ ಪ್ರಪಂಚಕ್ಕೆ ಆಗುವ ಲಾಭವನ್ನು ಗಮನಿಸಿ ತಾನು ಎಷ್ಟೇ ಕಷ್ಟಪಟ್ಟರೂ ಅದನ್ನು ಪೂರೈಸುವುದಾಗಿ ನಿರ್ಧಾರ ಮಾಡಿದ.

ಅವನಿಗೆ ತಾನು ಎದುರಿಸಬಹುದಾದ ತೊಂದರೆಗಳ ಅರಿವಿತ್ತು. ಕಾಲುವೆಯ ನಿರ್ಮಾಣದಲ್ಲಿ ಸಿಮೆಂಟಿನ ಬಳಕೆ, ಕೆಲಸಗಾರರ ಕೊರತೆ, ಮರಳಿನ ತಳದ ಅಭದ್ರತೆ, ಏಕಾಏಕಿ ಬದಲಾಗುವ ಹವಾಮಾನ, ಜೇಡರ ಹುಳದಷ್ಟು ದೊಡ್ಡವಾದ ಸೊಳ್ಳೆಗಳು, ಮಲೇರಿಯಾ ಜ್ವರದ ಭೀತಿ, ಹಣಕಾಸಿನ ಹೊಂದಾಣಿಕೆ ಇವೆಲ್ಲ ತೊಂದರೆಗಳ ಅರಿವು ಗೊಯೆಥಾಲ್ಸನಿಗೆ ಇತ್ತು. ಕಾರ್ಯಪ್ರಾರಂಭವಾಯಿತು. ಇತ್ತ ಟೀಕಾಕಾರರ ಬಾಯಿ ತೆರೆಯಿತು. ಗೊಯೆಥಾಲ್ಸ ಮೂರು ತಿಂಗಳಲ್ಲಿ ಕೆಲಸ ಮುಚ್ಚಿ ಮನೆಗೆ ಬಂದುಬಿಡುತ್ತಾನೆ ಎಂದು ಕೆಲವರು ಭವಿಷ್ಯ ನುಡಿದರೆ, ಮತ್ತೆ ಕೆಲವರು ಆತನಿಗೆ ಕಟ್ಟಡಶಾಸ್ತ್ರದ ಅರಿವೇ ಇಲ್ಲ. ಇದು ಕೇವಲ ಹುಂಬ ಭಾವನಾಜೀವಿಯ ತುಡಿತ ಎಂದು ಬರೆದರು. ಇನ್ನೂ ಕೆಲವರಂತೂ ಆತ ಮಲೇರಿಯಾಕ್ಕೆ ತುತ್ತಾಗಿ ಮನೆಗೆ ಜೀವಂತ ಮರಳಲಾರ ಎಂದು ಭಾಷಣ ಮಾಡಿದರು. ಒಬ್ಬ ಪತ್ರಕರ್ತ ಈ ಟೀಕೆಗಳ ಕಟ್ಟನ್ನು ಹೊತ್ತುಕೊಂಡು ಗೊಯೆಥಾಲ್ಸನ ಕಡೆಗೆ ಹೋದ. ಟೀಕಾಚಾರ್ಯರ ಮಾತುಗಳನ್ನು ಹೇಳಿದ. ಆಗ ಗೊಯೆಥಾಲ್ಸ ಹೇಳಿದ,  ನನಗೆ ದಯವಿಟ್ಟು ಟೀಕೆಗಳ ಬಗ್ಗೆ ಹೇಳಲೇಬೇಡಿ. ನಾನು ಸಮಯ ವ್ಯರ್ಥ ಮಾಡಲಾರೆ  ಎಂದ.  ಹಾಗಾದರೆ ನೀವು ಈ ಟೀಕಾಕಾರರಿಗೆ ಉತ್ತರ ಕೊಡುವುದಿಲ್ಲವೇ  ಎಂದು ಕೇಳಿದಾಗ ಗೊಯೆಥಾಲ್ಸ ಹೇಳಿದ `ಉತ್ತರ ಕೊಡುತ್ತೇನೆ. ಆದರೆ ಈಗ ಮಾತಿನಿಂದಲ್ಲ, ಪನಾಮಾ ಕಾಲುವೆಯನ್ನು ಚೆನ್ನಾಗಿ ಕಟ್ಟಿ ಮುಗಿಸುವುದರಿಂದ ಉತ್ತರ ನೀಡುತ್ತೇನೆ~. ಪನಾಮಾ ಕಾಲುವೆ ತೆರೆದಾಗ ಟೀಕಾಚಾರ್ಯರ ತೆರೆದ ಬಾಯಿಗಳು ಮುಚ್ಚಿದ್ದವು.

ಸಚಿನ್ ತೆಂಡೂಲ್ಕರರ ಬ್ಯಾಟಿಂಗ್ ಬಗ್ಗೆ ಮಾತನಾಡುವುದೇ ಅನವಶ್ಯಕ. ಅವರು ಸಾಧಿಸಬಹುದಾದದ್ದನ್ನೆಲ್ಲ ಸಾಧಿಸಿ ತೋರಿದ್ದಾರೆ. ಆದರೂ ಎರಡು ವರ್ಷಗಳ ಹಿಂದೆ ಟೀಕಾಚಾರ್ಯರು ಪುಟಿದೆದ್ದರು. ಸಚಿನ್‌ಗೆ ಈಗ ಮೊದಲಿನ ಹೊಳಪಿಲ್ಲ. ಅವರೀಗ ಹಳೆಯ ಆಟಗಾರರ ನೆರಳು. ರಿಟೈರ್ ಆದರೇ ಮರ್ಯಾದೆ. ಅವರೀಗ ಭಾರತದ ತಂಡಕ್ಕೆ ಒಂದು ಹೊರೆ ಎಂದೆಲ್ಲ ರಾಗ ತೆಗೆದೇ ತೆಗೆದರು. ಸಚಿನ್ ಮಾತನಾಡಲೇ ಇಲ್ಲ.
ನಂತರ ಅವರು ಏಕದಿನ ಪಂದ್ಯದಲ್ಲಿ ಪ್ರಪ್ರಥಮ ದ್ವಿಶತಕ ಹೊಡೆದು ದಾಖಲೆ ಮಾಡಿದರು. ಆತ ಆಟ ಮುಗಿಸಿ ಮರಳುವಾಗ ಟಿ.ವಿ. ನಿರೂಪಕನೊಬ್ಬ ಅವರನ್ನು ಕೇಳಿದ,  ಇಷ್ಟೊಂದು ಜನ ನಿಮ್ಮನ್ನು ಟೀಕೆ ಮಾಡಿದರು, ನಿಮಗೆ ಬ್ಯಾಟಿಂಗೇ ಬರುವುದಿಲ್ಲವೆನ್ನುವ ಮಟ್ಟಿಗೆ ಬರೆದರು, ನಿಮ್ಮ ವ್ಯಕ್ತಿತ್ವಕ್ಕೆ ಕಲ್ಲು ತೂರಿದರು. ಆದರೆ ನೀವೇನೂ ಹೇಳಲೇ ಇಲ್ಲವಲ್ಲ. ಆಗ ಸಚಿನ್ ಹೇಳಿದ ಮಾತು ತುಂಬ ಚೆಂದ,  `ಹೌದು, ನಿಮ್ಮ ಸಮಯ ಸರಿ ಇಲ್ಲದಿದ್ದಾಗ ಜನ ಕಲ್ಲು ಹೊಡೆಯುತ್ತಾರೆ. ಆ ಕಲ್ಲುಗಳನ್ನೇ ನಮ್ಮ ಸಾಧನೆಯ ಮೈಲಿಗಲ್ಲುಗಳನ್ನಾಗಿಸಿಕೊಳ್ಳುವುದು ಬುದ್ಧಿವಂತಿಕೆ~. ಅವರ ಆಟವೇ ಟೀಕಾಚಾರ್ಯರನ್ನು ಸುಮ್ಮನಾಗಿಸಿತ್ತು. ನಮ್ಮಲ್ಲಿ ಇರುವುದು ಎರಡೇ ತರಹದ ಜನ.

ಒಂದು ವರ್ಗದವರು ಕೇವಲ ಕೆಲಸಮಾಡುತ್ತ ಹೋಗುತ್ತಾರೆ. ಇನ್ನೊಂದು ವರ್ಗದವರು ಬರೀ ಟೀಕೆ ಮಾಡುತ್ತಾರೆ. ಟೀಕೆ ಮಾಡುವುದು, ಅದನ್ನು ಕೇಳುತ್ತ ಸಂತೋಷಿಸುವುದು ಎರಡೂ ಸಮಯ ವ್ಯರ್ಥಮಾಡುವ ಕ್ರಿಯೆಗಳು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.