ADVERTISEMENT

ನಿಜವಾದ ಸನ್ಯಾಸ

ಡಾ. ಗುರುರಾಜ ಕರಜಗಿ
Published 30 ಮಾರ್ಚ್ 2014, 19:30 IST
Last Updated 30 ಮಾರ್ಚ್ 2014, 19:30 IST

ಅದೊಂದು ಬಹು ಪ್ರಖ್ಯಾತವಾದ ಧರ್ಮಕ್ಷೇತ್ರ. ಅದರ ಧಾರ್ಮಿಕ ಗುರುಗಳು ಒಬ್ಬ ಮಹಾನ್ ಸಂತರು. ಅವರು ದೂರದರ್ಶಿಗಳು. ತಮಗೂ ವಯಸ್ಸಾಗುತ್ತಿರುವುದನ್ನು ಗಮನಿಸಿ ತಮ್ಮ ಉತ್ತರಾಧಿಕಾರಿಯನ್ನು ಆರಿ­ಸಲು ನಿರ್ಧರಿಸಿದರು.

ಅವರಿಗೆ ತರುಣರ ಮೇಲೆ ಅತೀವ ವಿಶ್ವಾಸ. ತಮ್ಮಲ್ಲಿ ಶಾಸ್ತ್ರ­ವನ್ನು ಚೆನ್ನಾಗಿ ಅಭ್ಯಾಸ ಮಾಡಿದವರಲ್ಲಿ ನಾಲ್ವರನ್ನು ಆರಿಸಿ­ದರು. ಅವರಿಗೆ ತಮ್ಮ ಮನಸ್ಸಿನ ಚಿಂತನೆಯನ್ನು ಹೇಳದೇ ಪ್ರವಾಸಕ್ಕೆ ಕಳುಹಿಸಿದರು. ಅವರ ಚರ್ಯೆ­ಗಳನ್ನು ಗಮನಿಸಲು ತಮ್ಮ ಆಂತರ್ಯವನ್ನರಿತ ಶಿಷ್ಯರನ್ನು ಗೊತ್ತು­ಮಾಡಿ­ದರು. ತರು­ಣರು ಪ್ರವಾಸಕ್ಕೆ ಹೊರಟಾಗ ದಾರಿಯಲ್ಲಿ ಒಂದು ಗ್ರಾಮದ ಮೂಲಕ ಹೋಗಬೇಕಾಗಿತ್ತು. ಅಲ್ಲಿ ಒಂದು ಮನೆಯಲ್ಲಿ ಸಾವು ಸಂಭವಿಸಿತ್ತು.

ಮನೆಯ ಯಜಮಾನ ಮಧ್ಯವಯಸ್ಕ. ಆದರೆ ಅವನ ಹೆಂಡತಿ ಚಿಕ್ಕವಯಸ್ಸಿ­ನ­ವಳು. ಅವರಿಗೆ ಇಬ್ಬರು ಮಕ್ಕಳು. ಹಿರಿಯ ಮಗನಿಗೆ ಆಗ ಕೇವಲ ಹತ್ತುವರ್ಷ. ಯಜ­ಮಾನನ ಸಾವಿನಿಂದ ಇಡೀ ಕುಟುಂಬ ಕುಸಿದುಬಿದ್ದಿತ್ತು, ಭವಿಷ್ಯ ಭೀಕ­ರ­ವಾಗಿ ಕಂಡಿತ್ತು. ನಾಲ್ವರೂ ತರುಣರು ಅದನ್ನು ಕಂಡರು. ಒಬ್ಬ ಛೇ, ಹೀಗಾಗ­ಬಾರ­ದಿತ್ತು ಎಂದ. ಮತ್ತೊಬ್ಬ, ದೈವೇಚ್ಛೆ ಎಂದು ಲೊಚಗುಟ್ಟಿದ. ಮೂರನೆ­ಯ­ವನ ಕಣ್ಣಲ್ಲಿ ನೀರು ಒಸರಿತು.

ನಾಲ್ಕನೆ­ಯವನು ಅಲ್ಲಿಯೇ ಉಳಿದು ಸಂಸಾರಕ್ಕೆ ಆಧಾರವಾಗಿ ನಿಲ್ಲುವುದಾಗಿ ತೀರ್ಮಾನ ಮಾಡಿದ. ಸ್ನೇಹಿತರು, ಬೇರೆ ಜನರು ಏನು ಹೇಳಿದರೂ ಆತ ಕೇಳದೆ ಉಳಿದು ಮನೆಯ ಜವಾಬ್ದಾರಿ ಹೊತ್ತ. ಹೊಲಕ್ಕೆ ಹೋಗಿ ಎಲ್ಲ ಕೆಲಸಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡತೊಡಗಿದ. ಜನರು ಟೀಕೆ ಮಾಡಿದರು, ವಿಧವೆಯ ಆಕರ್ಷಣೆಗೆ ಸಿಲುಕಿ ಹೀಗೆ ಮಾಡುತ್ತಿ­ದ್ದಾ­ನೆಂದ­ವರು ಕೆಲವರು.

ಆಸ್ತಿಯ ಆಸೆಗೆ ನಾಟಕ ಮಾಡುತ್ತಿದ್ದಾನೆಂದು ಕೆಲವರು ಕೊಂಕು ನುಡಿದರು. ಆತ ಯಾವ ಮಾತನ್ನೂ ಕೇಳಿಸಿಕೊಳ್ಳದೇ ಭಗವಂತನ ಸಾಕ್ಷಿ­ಯಾಗಿ ದುಡಿದ. ಎರಡು ವರ್ಷ ಕಳೆದವು. ಮನೆಗೆ ಒಂದು ಸ್ಥಿರತೆ ಬರತೊಡ­ಗಿತು. ವಿಧವೆಗೂ ಈತನ ಬಗೆಗಿನ ಅಭಿಮಾನ ಪ್ರೀತಿಯಾಗಿ ಬದಲಾಯಿತು. ಆಕೆಯೇ ಅವನನ್ನು ಮದುವೆಯಾಗಲು ಕೇಳಿದಳು. ಆಗ ಆ ತರುಣ ಹೇಳಿದ, ನಿನ್ನ ಗಂಡ ತೀರಿಹೋಗಿ ಈಗ ಎರಡು ವರ್ಷವಾಯಿತು. ಇನ್ನೂ ಮೂರು ವರ್ಷ ನೀನು ಅವನ ನೆನಪಿನಲ್ಲಿ ಶೋಕ ಆಚರಿಸು. ಆಮೇಲೆ ಮದುವೆಯ ಬಗ್ಗೆ ತೀರ್ಮಾನ ಮಾಡೋಣ.

ಮೂರು ವರ್ಷಗಳು ಗತಿಸಿದ ಮೇಲೆ ಮತ್ತೆ ಆಕೆ ಮದುವೆಯ ವಿಷಯವನ್ನು ಪ್ರಸ್ತಾ­ಪಿ­ಸಿದಳು. ತರುಣ ಹೇಳಿದ, ನಾನು ಈ ಊರಿಗೆ ಬಂದ ದಿನವೇ ನಿನ್ನ ಪತಿ ತೀರಿದ್ದು. ಈಗ ನಾನು ಮೂರು ವರ್ಷ ಶೋಕಾಚರಣೆ ಮಾಡುತ್ತೇನೆ. ಅದು ಮುಗಿದ ಮೇಲೆ ಮದುವೆಯ ವಿಷಯ. ಮೂರು ವರ್ಷಗಳ ನಂತರ ಅದೇ ಮಾತು ಬಂದಿತು. ತರುಣ, ನೀನೊಮ್ಮೆ, ನಾನೊಮ್ಮೆ ಶೋಕಾಚರಣೆ ಮಾಡಿ­ದ್ದೇವೆ. ಈಗ ಇಬ್ಬರೂ ಜೊತೆ­ಯಾಗಿ ಮೂರು ವರ್ಷ ಶೋಕಾಚರಣೆ ಮಾಡೋಣ. ಇದು ಕೊನೆಯ ಬಾರಿ ಎಂದ. ಮೂರು ವರ್ಷಗಳ ನಂತರ ಇದೇ ಮಾತು ಮತ್ತೆ ಬಂದಾಗ ತರುಣ ಎದ್ದು ಕೈ ಜೋಡಿಸಿ ‘ಅಮ್ಮಾ, ನೀನು ನನ್ನ ತಾಯಿಯ ರೂಪ. ಅಂದೂ, ಇಂದೂ ನನ್ನ ಮನಸ್ಸಿನಲ್ಲಿ ನೀನು ನನ್ನ ತಾಯಿಯೇ, ಬೇರೆ ಭಾವ ನನ್ನ ಮನದಲ್ಲಿ ಮೂಡಲೇ ಇಲ್ಲ. ನಿನ್ನ ಮನಸ್ಸು ಚಂಚಲ­­ವಾಗಿದ್ದರಿಂದ ಶೋಕಾಚರಣೆಯ ಮಾತನ್ನು ಹೇಳಿದೆ.

ಈಗ ನಿನ್ನ ಮಗ ತರು­ಣನಾಗಿದ್ದಾನೆ, ಮನೆಯ ಭಾರ ಹೊರುವಷ್ಟು ದಕ್ಷನಾಗಿದ್ದಾನೆ. ಮನೆಯ ಸ್ಥಿತಿಯೂ ತುಂಬ ಚೆನ್ನಾಗಿದೆ. ಇನ್ನು ನನ್ನ ಅವಶ್ಯಕತೆ ಈ ಮನೆಗಿಲ್ಲ’ ಎಂದು ಆಕೆಗೆ ನಮ­ಸ್ಕರಿಸಿ ಅಲ್ಲಿಂದ ಹೊರಟು ಹೋದ. ಯಜಮಾನನಂತೆ ದುಡಿದೂ ಯಜ­ಮಾನ­­ನಾಗದೇ ಉಳಿದು ಹೋದ. ಈ ವಿಷಯವನ್ನು ತಿಳಿದ ಧಾರ್ಮಿಕ ಕ್ಷೇತ್ರದ ಗುರು­ಗಳು ಇವನನ್ನು ಕರೆಯಿಸಿ ಅವನನ್ನೇ ಉತ್ತರಾಧಿಕಾರಿಯನ್ನಾಗಿ ನೇಮಿಸಿ­ದರು. ಸನ್ಯಾಸವೆನ್ನುವುದು ಆಶ್ರಮದಲ್ಲೇ ಆಗಬೇಕಿಲ್ಲ. ಅದಕ್ಕೆ ಕಾಷಾಯ ವಸ್ತ್ರವೂ ಬೇಕಿಲ್ಲ. ಪ್ರಪಂಚ­ದೊಳಗಿದ್ದೂ ಅದಕ್ಕೆ ಯಾವ ರೀತಿಯಲ್ಲೂ ಅಂಟದೇ ನಿರ್ಲಿಪ್ತತೆ ಹೊಂದಿರುವುದೇ ನಿಜವಾದ ಸನ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.