ಅದೊಂದು ಬಹುದೊಡ್ಡ, ರಮ್ಯವಾದ ಮೃಗಾಲಯ. ಎಲ್ಲ ಪ್ರಾಣಿಗಳು ಸಂತೋಷವಾಗಿ ಬದುಕಿದ್ದವು. ಎಲ್ಲ ಅರಣ್ಯಗಳಂತೆ ಇಲ್ಲಿಯೂ ಸಿಂಹವೇ ರಾಜ. ಇತ್ತೀಚಿಗೆ ಯಾಕೋ ಸಿಂಹರಾಜನಿಗೆ ಮನಸ್ಸಿನಲ್ಲಿ ಕಿರಿಕಿರಿಯಾಗುತ್ತಿತ್ತು. ತನ್ನ ರಾಜ್ಯದ ಪ್ರಾಣಿಗಳು ತನ್ನ ಹತ್ತಿರ ಬರಲು ಹಿಂದೆ ಮುಂದೆ ನೋಡುತ್ತಿವೆ ಎನ್ನಿಸುತ್ತಿತ್ತು. ಪಾಪ! ಅವುಗಳಿಗೆ ನನ್ನ ಭಯ ಇರುವುದು ಸಹಜ. ಅದು ಗೌರವವೂ ಇದ್ದಿರಬಹುದು. ಆದರೆ, ನಾನು ಕರೆದರೂ ಹತ್ತಿರ ಬರದಿರುವುದಕ್ಕೆ ಕಾರಣ ಏನು ಇರಬಹುದು?
ತಾನಾಗಿಯೇ ಕರೆದರೂ ಹತ್ತಿರ ಬಂದ ಪ್ರಾಣಿಗಳು ತಲೆತಗ್ಗಿಸಿ ಬೇಗನೇ ದೂರ ಓಡಿಹೋಗುವುದನ್ನು ಕಂಡರೆ ಬೇರೇನೋ ಕಾರಣವಿರಬೇಕು ಎನ್ನಿಸಿತು. ಕೆಲವರನ್ನು ಕೇಳಿಯೇ ಬಿಡಬೇಕು ಎಂದು ನಿರ್ಧಾರ ಮಾಡಿ ಹೊರಟಿತು. ಹಿಂದೆ ಕೈಕಟ್ಟಿಕೊಂಡು ಗಂಭೀರವಾಗಿ ಹೋಗುತ್ತಿದ್ದ ಸಿಂಹದ ಎದುರಿಗೆ ಒಂದು ನರಿ ಬಂದಿತು. ‘ಹೇ ನರಿ ಬಾ ಇಲ್ಲಿ, ನಿನಗೊಂದು ಪ್ರಶ್ನೆ ಕೇಳುತ್ತೇನೆ. ನೀನು ಪ್ರಾಮಾಣಿಕವಾಗಿ ಉತ್ತರ ಕೊಡಬೇಕು. ಯಾವ ಭಯವೂ ಬೇಡ. ಎಲ್ಲ ಪ್ರಾಣಿಗಳು ನನ್ನಿಂದ ದೂರವಾಗಿ ಓಡುತ್ತವೆ. ಇದಕ್ಕೆ ಕಾರಣವೇನು? ಇದು ಭಯವೋ, ಗೌರವವೋ ಅಥವಾ ನನ್ನ ಬಾಯಿಯಿಂದ ದುರ್ನಾತ ಬರುತ್ತದೆಯೋ?’ ಎಂದು ಕೇಳಿತು ಸಿಂಹರಾಜ. ನರಿ ತಲೆತಗ್ಗಿಸಿಕೊಂಡು ದೂರಸರಿದು, ‘ಮಹಾರಾಜಾ, ಭಯವೂ ಇದೆ, ಗೌರವವೂ ಇದೆ. ಆದರೆ, ಬಾಯಿಯ ವಾಸನೆಯ ಬಗ್ಗೆ ನಾನೇನೂ ಹೇಳಲಾರೆ. ಯಾಕೆಂದರೆ ಮೂರು ದಿನಗಳಿಂದ ನನಗೆ ಭಾರಿ ನೆಗಡಿ’ ಎಂದು ಪೊದೆಯೊಳಗೆ ಓಡಿಹೋಯಿತು.
ಸಿಂಹ ನಡೆದು ಇತ್ತೀಚಿಗೆ ಆಫ್ರಿಕೆಯಿಂದ ಬಂದ ಹೆಣ್ಣು ಸಿಂಹದ ಬಳಿಗೆ ಹೋಯಿತು. ಅದು ರಾಜನ ಇತ್ತೀಚಿನ ಪ್ರೇಯಸಿ. ಪರದೇಶದವಳು ತಾನೇ? ಅವಳ ಮೇಲೆ ರಾಜನಿಗೆ ವಿಶೇಷ ಪ್ರೀತಿ. ಸಿಂಹ ಕೇಳಿತು, ‘ಯಾಕೆ ಎಲ್ಲ ಪ್ರಾಣಿಗಳು ನನ್ನಿಂದ ದೂರ ಹೋಗುತ್ತಿದ್ದಾರೆ?’ ಪರದೇಶದ ಸಿಂಹಣಿಯದು ಯಾವಾಗಲೂ ನೇರ ಮಾತು, ‘ನಾನು ನಿನಗೆ ಮೊನ್ನೆಯೇ ಹೇಳಿದೆ. ನಿನ್ನ ಬಾಯಿಯಿಂದ ದುರ್ವಾಸನೆ ಬರುತ್ತದೆ. ತಡೆದುಕೊಳ್ಳುವುದೇ ಅಸಾಧ್ಯ.
ಅದಕ್ಕೇ ನನ್ನ ಬಳಿ ಬರುವಾಗ ಲವಂಗವನ್ನೋ, ಮತ್ತಾವುದೋ ಸುಗಂಧವನ್ನೋ ಅಗಿದು ಬಾ ಎಂದು ಹೇಳಿದ್ದೆ’ ಎಂದಿತು. ಸಿಂಹರಾಜನಿಗೆ ಮುಖಭಂಗವಾದಂತಾಗಿ ತನ್ನ ಗುಹೆಗೆ ದುಮುದುಮಿಸುತ್ತಲೇ ಬಂದಿತು. ಹೆಂಡತಿಯನ್ನು ಜೋರಾಗಿ ಕೂಗಿ ಕರೆದು ಘರ್ಜಿಸಿತು, ‘ಏನೇ, ನನ್ನ ಬಾಯಿಯಿಂದ ದುರ್ವಾಸನೆ ಬರುತ್ತದಂತೆ. ಎಲ್ಲ ಪ್ರಾಣಿಗಳು ನನ್ನಿಂದ ದೂರ ಹೋಗುತ್ತಿವೆ. ನೀನು ಏಕೆ ನನಗೆ ಈ ಮಾತನ್ನು ಹೇಳಲಿಲ್ಲ?’ ಸಿಂಹಿಣಿ ಮೆಲುವಾಗಿ ನಕ್ಕು ಹೇಳಿತು, ‘ಪ್ರಭೂ, ನನಗೇನು ಗೊತ್ತು ನಿಮ್ಮ ಬಾಯಿಯಿಂದ ಬರುವುದು ದುರ್ವಾಸನೆ ಎಂದು?
ನಾನೆಂದೂ ಬೇರೆ ಗಂಡು ಸಿಂಹಗಳ ಸಹವಾಸ ಮಾಡದಿದ್ದುದರಿಂದ ಎಲ್ಲ ಗಂಡು ಸಿಂಹಗಳ ಬಾಯಿಯಿಂದ ಇದೇ ತರಹದ ವಾಸನೆ ಬರುತ್ತದೆ ಎಂದುಕೊಂಡಿದ್ದೆ’.
ಸಿಂಹರಾಜ ಭಯಂಕರವಾಗಿ ಗರ್ಜಿಸಿ ಮರಳಿ ಓಡಿದ. ತನ್ನ ಪರದೇಶದ ಪ್ರೇಯಸಿಯ ಕಡೆಗೆ ಹೋಗಿ, ‘ನಿನ್ನ ಬುದ್ಧಿಯೇ ಇಷ್ಟು. ನೀನು ಅನೇಕ ಗಂಡುಸಿಂಹಗಳೊಂದಿಗೆ ಓಡಾಡಿದ್ದೀಯ. ಆದ್ದರಿಂದಲೇ ನೀನು ನನ್ನ ಬಾಯಿಯ ವಾಸನೆಯ ಬಗ್ಗೆ ಹೇಳುತ್ತಿದ್ದೀ’ ಎಂದು ಹಾರಿಬಿದ್ದು ಅದನ್ನು ಕೊಂದು ಹಾಕಿತು. ಇಲ್ಲಿ ಮೂರು ತರಹದ ಮಾತನಾಡುವ ಕಲೆಗಳಿವೆ. ನರಿಯದು ಜಾರಿಕೊಳ್ಳುವ, ಪಾರಾಗುವ ಮಾತಿನ ರೀತಿ. ಪರದೇಶದ ಸಿಂಹ ಸತ್ಯವನ್ನು ಹೇಳಿದರೂ ಅದನ್ನು ಒರಟಾಗಿ ಹೇಳಿ ಪ್ರಾಣ ಕಳೆದುಕೊಂಡಿತು. ರಾಣಿ ಸಿಂಹದ ಮಾತು ಬುದ್ಧಿವಂತಿಕೆಯದು. ಸತ್ಯವನ್ನು ಹೇಳಿದರೂ ಅದು ಮನನೋಯದಂತೆ ಕಂಡರೂ ತನ್ನ ಸವತಿಯಾಗಿ ಬಂದ ಸಿಂಹಿಣಿಯನ್ನು ದೂರ ಮಾಡುವ ಜಾಣತನದ ಮಾತು. ಅದಕ್ಕೇ ಹಿರಿಯರು ಹೇಳುತ್ತಾರೆ, ಸತ್ಯವನ್ನೇ ಹೇಳು ಆದರೆ ಅದನ್ನು ಒರಟಾಗಿ ಮನನೋಯದಂತೆ ಹೇಳು. ಆಗ ಅದು ಅಪೇಕ್ಷಿತ ಫಲವನ್ನು ನೀಡುತ್ತದೆ. ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್ ......
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.