ADVERTISEMENT

ಹಳೆಯ ಸೇತುವೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:20 IST
Last Updated 16 ಜೂನ್ 2018, 9:20 IST

‘ನಾಳೆ ಮದುವೆಗೆ ಹೋಗುವುದೋ ಇಲ್ಲವೋ? ಏನಾದರೊಂದು ತೀರ್ಮಾನ ಮಾಡಿ. ಹೀಗೆಯೇ ಪೇಪರ್ ಓದುತ್ತಾ ಕುಳಿತರೆ ಹೇಗೆ?’ ಹೆಂಡತಿ ಏರಿದ ಧ್ವನಿಯಲ್ಲಿ ಕೇಳಿದಳು. ‘ನಾನೂ ಅದನ್ನೇ ಯೋಚನೆ ಮಾಡುತ್ತಿದ್ದೇನೆ. ಆತ ಆತ್ಮೀಯ ಗೆಳೆಯ, ಅವನ ಮಗನ ಮದುವೆಗೆ ಹೋಗದೇ ಇರಲು ಸಾಧ್ಯವೇ? ಹೋಗಲೇಬೇಕು. ಆದರೆ ಅವನ ಊರಿಗೆ ಹೋಗುವ ಮೊದಲು ಆ ಸೇತುವೆ ಯನ್ನು ದಾಟಬೇಕಲ್ಲ? ಅದರದೇ ಚಿಂತೆ ನನಗೆ. ಕಳೆದ ಬಾರಿ ಹೋದಾಗ ಆ ಸೇತುವೆಯ ಅವಸ್ಥೆಯನ್ನು ಕಂಡಿದ್ದೆಯಲ್ಲ. ಮೊದಲೇ ಅದು ಮರದ ಸೇತುವೆ. ಪಕ್ಕದ ಹಗ್ಗಗಳು ಹರಿದುಹೋಗಿದ್ದವು. ಅಲ್ಲಲ್ಲಿ ಸೇತುವೆಯ ಮರದ ಹಲಗೆಗಳು ಕೊಳೆತುಹೋಗಿ ಆಗಲೋ ಈಗಲೋ ಬಿದ್ದು ಹೋಗುವಂತಿದ್ದವು. ಈಗ ಅವು ಬಿದ್ದೇ ಹೋಗಿರಬೇಕು’ ಒಂದೇ ಸಮನೆ ಗೊಣಗುತ್ತಿದ್ದರು ಯಜಮಾನರು.

‘ಬೇರೆ ಹಾದಿ ಇಲ್ಲವೇ ಅಲ್ಲಿಗೆ ಹೋಗಲು?’ ಕೇಳಿದಳು ಪತ್ನಿ. ‘ಇನ್ನಾವ ರಸ್ತೆ ಆ ಕುಗ್ರಾಮಕ್ಕೆ? ಆ ಸೇತುವೆ ದಾಟದೇ ಊರಿಗೆ ಕಾಲಿಡುವುದೇ ಸಾಧ್ಯವಿಲ್ಲ’ ನಿಟ್ಟುಸಿರು ಬಿಟ್ಟರು ಯಜಮಾನರು.

‘ನನ್ನ ಕೈಯಿಂದಲಂತೂ ಆ ಸೇತುವೆ ದಾಟುವುದು ಆಗುವುದಿಲ್ಲ. ಮೊದಲೇ ನನ್ನ ಮೊಣಕಾಲು ಹಿಡಿದುಕೊಂಡು ಬಿಟ್ಟಿವೆ. ಆ ಮುರಿದ ಹಲಗೆಗಳ ಮೇಲೆ ಕಾಲಿಟ್ಟೆನೋ, ಆಯಿತು ನನ್ನ ಕಥೆ. ಕಾಲಾದರೂ ಮುರಿಯಬೇಕು ಇಲ್ಲವೇ ನಾನೇ ಕೆಳಗಿನ ಪ್ರವಾಹದಲ್ಲಿ ಬಿದ್ದು ಹೋಗಬೇಕು. ನನಗೇನಾದರೂ ಆದರೆ ಈ ಮನೆಯ ಗತಿ ಏನಾಗುತ್ತದೆ ಎಂದು ಯೋಚಿಸಿದ್ದೀರಾ? ಮನೆಯಲ್ಲಿ ಇಷ್ಟೊಂದು ಜನರಿಗೆ ಅನ್ನ ಬೇಯಿಸಿ ಹಾಕುವವರಾರು? ನಾನಿಲ್ಲದೇ ನಾಲ್ಕು ದಿವಸ ಈ ಮನೆ ಮನೆಯಾಗಿರುವುದಿಲ್ಲ. ಧರ್ಮಛತ್ರದಂತಾಗುತ್ತದೆ ಅಷ್ಟೇ’ ಪತ್ನಿ ತಮ್ಮ ಕಷ್ಟ ಹೇಳಿಕೊಂಡರು.

ADVERTISEMENT

‘ಓಹೋ! ನೀನಿಲ್ಲದಿದ್ದರೆ ಮನೆ ನಿಂತುಹೋಗುತ್ತದೆ ನೋಡು. ಇನ್ನು ನನಗೇನಾದರೂ ಆದರೆ ಮನೆ ಪರಿಸ್ಥಿತಿ ಏನಾಗುತ್ತದೆ ಗೊತ್ತೇ? ಮನೆಯ ಬಗ್ಗೆ ಸದಾ ಚಿಂತೆ ಮಾಡುವವನು ನಾನೊಬ್ಬನೇ. ಆ ದರಿದ್ರ ಸೇತುವೆ ದಾಟುವಾಗ ಹಲಗೆಯ ಮೇಲೆ ಹರಡಿರುವ ಹಾವಸೆಯ ಮೇಲೆ ಕಾಲಿಟ್ಟು ಜಾರಿ ಬಿದ್ದರೆ ತೀರಿತು. ಮನೆಯವರಿಗೆ ಒಬ್ಬರಿಗೂ ಒಂದು ಹನಿ ಕುಡಿಯಲು ನೀರೂ ಸಿಗುವುದಿಲ್ಲ, ಆಹಾರವನ್ನಂತೂ ಬಿಡು. ಮನೆಯ ಯಜಮಾನನಿಲ್ಲದ ಮನೆ ಅದೆಂಥ ಮನೆ?’ ಎಂದು ವಾದ ಮಂಡಿಸಿದರು ಯಜಮಾನರು.

ವಾದ ಪ್ರತಿವಾದಗಳು ತಾರಕಕ್ಕೇರಿದವು. ಸೇತುವೆಯನ್ನು ದಾಟುವಾಗ ಯಾವುದಾದರೂ ಅನಾಹುತವಾದರೆ ಆಗುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು. ಆದರೆ ಪರಿಹಾರ ದೊರೆಯಲಿಲ್ಲ. ಸಂಜೆ ಮನೆಗೆ ಗುಂಡಣ್ಣ ಬಂದರು. ಅವರೂ ಮದುವೆಗೆ ಹೋಗಲೆಂದೇ ಬಂದವರು. ಅವರ ಮುಂದೆಯೂ ದಂಪತಿಯ ತಕರಾರು ಮಂಡನೆಯಾಯಿತು. ಗುಂಡಣ್ಣ ನಿಧಾನದ ಮನುಷ್ಯ. ‘ಯಾಕಪ್ಪಾ ನೀವಿಷ್ಟು ತಲೆ ಕೆಡಿಸಿಕೊಂಡಿದ್ದೀರಿ? ನಾಳೆ ಎಲ್ಲರೂ ಹೋಗೋಣ. ತುಂಬ ಅಪಾಯಕಾರಿ ಸೇತುವೆ ಎಂದು ಕಂಡರೆ ಮರಳಿ ಬರೋಣ. ನಮ್ಮಂತೆಯೇ ಅನೇಕ ಮಂದಿ ಬಂದಿರುತ್ತಾರೆ. ಅವರಿಗೆಲ್ಲ ಏನಾಗುತ್ತದೆಯೋ ಅದು ನಮಗೂ ಆಗುತ್ತದೆ ನಡೆಯಿರಿ’ ಎಂದು ಸಮಾಧಾನ ಮಾಡಿದರು.

ಮರುದಿನ ಎಲ್ಲರೂ ಹೊರಟರು ಮದುವೆಗೆ. ಸೇತುವೆಯ ಜಾಗ ಹತ್ತಿರ ಬರುತ್ತಿದ್ದಂತೆ ದಂಪತಿಗೆ ಆತಂಕ ಪ್ರಾರಂಭವಾಯಿತು. ಆದರೆ ಸೇತುವೆ ಬಂದಾಗ ಆಶ್ಚರ್ಯ! ಅದು ಗುರುತೇ ಸಿಗದಷ್ಟು ಹೊಸದಾಗಿದೆ, ವಿಶಾಲವಾಗಿದೆ, ಭದ್ರವಾಗಿದೆ. ಈಗ ಮರದ ಹಲಗೆಗಳಿಲ್ಲ. ಪೂರ್ತಿ ಕಾಂಕ್ರೀಟಿನ ಬಲವಾದ ಸೇತುವೆ ನಿಂತಿದೆ. ತಾವು ವಿಷಯ ಗೊತ್ತಿಲ್ಲದೇ ತಲೆ ಕೆಡಿಸಿಕೊಂಡಿದ್ದೆವು ಎಂದು ಕೊರಗಿದರು.

ನಾವು ಕೂಡ ನಮ್ಮ ಹಳೆಯ ಅನುಭವಗಳ ಆಧಾರದ ಮೇಲೆ ಭವಿಷ್ಯತ್ತಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಹಿಂದಿನ ಸಂದರ್ಭ ಬದಲಾಗಿರಬಹುದು, ವ್ಯವಸ್ಥೆ ಬೇರೆಯಾಗಿರಬಹುದು. ನಮ್ಮ ಹಳೆಯ ನಂಬಿಕೆಗಳು, ಅನಿಸಿಕೆಗಳು ನಾವು ಮುಂದೆ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪ್ರಬಲ ಪರಿಣಾಮ ಬೀರುತ್ತವೆ. ಆಗ ನಮ್ಮ ಮನಸ್ಸನ್ನು ತೆರೆದುಕೊಂಡು ಹೊಸದಾಗಿ, ಸಕಾರಾತ್ಮಕವಾಗಿ ಚಿಂತಿಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.