ADVERTISEMENT

ಗುಲ್‌ ಮೊಹರ್ ಕೆಳಗೆ ಮನಸ್ಸಿನ ಚೂರುಗಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:04 IST
Last Updated 16 ಜೂನ್ 2018, 9:04 IST

ಇಪ್ಪತ್ತೆರಡರ ಈಶ್ವರಿ ಬಹಳ ನಿರ್ಲಿಪ್ತವಾಗಿ ತನ್ನ ಡೈವೋರ್ಸಿನ ಸಂಗತಿ ಹೇಳಿದ್ದಳು. ಅದೂ ಜೀವನ್ಮುಖಿಯಾಗಿದ್ದ ಸಂದರ್ಭದಲ್ಲಿ ಹೇಳಿದ ವಿಷಯ ಅದು. ಅಂದರೆ, ಹಿಂದೆ ನಡೆದದ್ದರ ಮೇಲೆ ನನ್ನ ನಿಯಂತ್ರಣವಿಲ್ಲ, ನಾಳೆ ಏನು ಜರುಗಬೇಕೋ ಅದನ್ನು ಕೈಲಾದಷ್ಟು ಮಟ್ಟಿಗೆ ನನ್ನ ಕಣ್ಣಳತೆಯಲ್ಲೇ ನಡೆಯುವಂತೆ ನೋಡಿಕೊಳ್ಳುತ್ತೇನೆ ಎನ್ನುವ ಹಾಗೆ. ನಿಜಕ್ಕೂ ಅವಳ ಜೀವಂತಿಕೆಯಿಂದ ಹುಡುಗಿಯರಿಗೆ ಬಹಳ ಹುಮ್ಮಸ್ಸು ಬಂದಿತ್ತು.

ಆದರೆ, ಇಂದುಮತಿಗೆ ಮಾತ್ರ ಇವಳಿಗೆ ಮದುವೆ ಏಕೆ ಬೇಡವಾಯಿತು ಎನ್ನುವ ವಿಷಯ ಕೊರೆಯುತ್ತಿತ್ತು. ಮನೆಯವರೆಲ್ಲ ಕಷ್ಟ ಪಟ್ಟು ಮಾಡಿದ ಮದುವೆ, ಸ್ವಲ್ಪ ಹೊಂದಿಕೊಂಡು ಹೋಗಬಹುದಿತ್ತು– ಎನ್ನುವ ಧೋರಣೆಯಿಂದಲ್ಲ. ತನ್ನಂಥದೇ ಪರಿಸ್ಥಿತಿಯಲ್ಲಿ ಈಶ್ವರಿಯೂ ಇದ್ದಳು. ಅಪ್ಪ ಎಷ್ಟು ವರ್ಷ ತಾನೇ ಜವಾಬ್ದಾರಿ ತೆಗೆದುಕೊಂಡು ಗಂಡು ಹುಡುಕಿಯಾರು? ಡೈವೋರ್ಸ್ ಆದದ್ದಾದರೂ ಏಕೆ, ಇನ್ನೊಂದು ಸಂದರ್ಭದಲ್ಲಿ ಹಿಂದೆ ನಡೆದದ್ದೇ ಮತ್ತೆ ರಿಪೀಟ್ ಆದರೆ ಮತ್ತೆ ವಿಚ್ಛೇದನ ತೆಗೆದುಕೊಳ್ತಾಳಾ? ಕಾನೂನಿನ ಪ್ರಕಾರ ಒಬ್ಬ ಮನುಷ್ಯ ಜೀವನದಲ್ಲಿ ಎಷ್ಟು ಬಾರಿ ಮದುವೆ ಆಗಬಹುದು ಮತ್ತು ಡೈವೋರ್ಸ್ ತಗೋಬಹುದು? ಹೀಗೆಲ್ಲ ಬಹಳ ಗಾಢ ಆಲೋಚನೆಯಲ್ಲಿ ಮುಳುಗಿದ್ದಳು.

ಹುಣ್ಣಿಮೆ ರಾತ್ರಿ. ಪಕ್ಕದ ರೂಮಿನಲ್ಲಿ ಈಶ್ವರಿ ಮದುವೆ ಬಗ್ಗೆ ಯೋಚಿಸುತ್ತಿದ್ದರೆ ಇತ್ತಲಿನ ರೂಮಿನ ಇಂದುಮತಿ ಡೈವೋರ್ಸ್ ಬಗ್ಗೆ ಚಿಂತಿತಳಾಗಿದ್ದಳು. ಈಶ್ವರಿಯ ಅತ್ತ ಇತ್ತಲಿನ ಹಾಸಿಗೆಗಳಲ್ಲಿ ವಿಜಿ ಮತ್ತು ರಶ್ಮಿ ಆಗಲೇ ಗೊರಕೆ ಹೊಡೆಯುತ್ತಾ ನಿದ್ದೆಯನ್ನು ಜತನದಿಂದ ಕಾಪಾಡುವ ಯತ್ನದಲ್ಲಿ ತಮ್ಮೆಲ್ಲ ಸಂಪನ್ಮೂಲಗಳನ್ನು ತೊಡಗಿಸಿಕೊಂಡು ಗಡದ್ದಾಗಿ ಕನಸಿನ ಲೋಕದಲ್ಲಿ ತೇಲಾಡುತ್ತಿದ್ದರು.

ಯಾರಿಗೂ ಯಾರ ಬಗ್ಗೆಯೂ ಕಾಳಜಿಯೇ ಇರೋದಿಲ್ಲವೇ? ಇರದೇ ಏನು? ಆ ವಯಸ್ಸಿನಲ್ಲಿ ತನ್ನ ಬಗ್ಗೆ ಇರುವಷ್ಟು ಕಾಳಜಿ ತನ್ನ ಜೊತೆಯವರ ಬಗ್ಗೆಯೂ ಇರುತ್ತದೆ. ಕಾಳಜಿಯ ಸ್ವರೂಪಗಳು ಮಾತ್ರ ಭಿನ್ನ ವೇಷದಲ್ಲಿ ಇರುತ್ತವೆ. ನಿದ್ದೆ ಬರದೆ ಹೊರಳಾಡಿದ ಇಂದುಮತಿ ಪಕ್ಕದ ರೂಮಿಗೆ ಹೋಗಿ ಬಾಗಿಲು ತಟ್ಟಿದಳು. ಒಳಗೆ ಮಲಗಿದ್ದ ಈಶ್ವರಿ ಸ್ವಲ್ಪ ಹೊತ್ತು ಸದ್ದು ಆಲಿಸಿದಳು. ದೆವ್ವದ ಕಾಟ ಅಲ್ಲವಷ್ಟೇ? ಅಲ್ಲಾ ಅಂತ ಖಡಾಖಂಡಿತವಾಗಿ ಹೇಗೆ ಹೇಳುವುದು? ಇಂದುಮತಿಯೂ ಒಂಥರಾ ಕಾಟ ಕೊಡುವ ಮೋಹಿನಿಯ ಹಾಗೇ ಆಡುವಾಗ?

ಕಣ್ಣು ಉಜ್ಜುತ್ತಾ ಈಶ್ವರಿ ಬಾಗಿಲು ಸ್ವಲ್ಪವೇ ಬಾಗಿಲು ತೆರೆದು ನೋಡಿದಳು. ಅವಳು ಬಾಗಿಲು ತೆರೆಯುವಾಗ ಉಂಟಾದ ಕಿಂಡಿಯಲ್ಲಿ ಇಂದುಮತಿಯೂ ಮೂತಿ ಇಟ್ಟುಕೊಂಡಿದ್ದರಿಂದ ಹೊರಗಿದ್ದದ್ದು ವ್ಯಕ್ತಿಯೋ ದೆವ್ವವೋ ಅಂತ ಸ್ಪಷ್ಟವಾಗಿ ಕಾಣದೆ ಬರೀ ಕತ್ತಲಿನ ಅವಯವಗಳು ಸರಿದಾಡಿದಂತೆ ಭಾಸವಾಗಿ ಈಶ್ವರಿ ಬೆಚ್ಚಿ ಬಿದ್ದಳು. ಕಡೆಗೆ ಇಂದೂ ಬಾಗಿಲನ್ನು ದೂಡಿಕೂಂಡು ಒಳಗೆ ಬರಬೇಕಾಯಿತು. ಒಳಗೆ ಇದ್ದ ಮೂವರಲ್ಲಿ ಪ್ರೇಮಜ್ವರದಿಂದ ಬಳಲುತ್ತಿದ್ದ ಒಬ್ಬಳು ಎದ್ದಿದ್ದಳು.

ರಿಂಕಿ ಕಾಣಲಿಲ್ಲ. ಯಥಾಪ್ರಕಾರ ಯಾರದ್ದೋ ಮನೆಯಲ್ಲೋ, ರೂಮಿನಲ್ಲೋ ಇದ್ದಳೂಂತ ಅನ್ಸುತ್ತೆ. ಅವಳು ಒಮ್ಮೊಮ್ಮೆ ಮಾತ್ರ ಹಾಸ್ಟೆಲ್ ರೂಮಿಗೆ ಬರುತ್ತಿದ್ದುದು. ಅದೂ ಪೋಸ್ಟ್ ಗೀಸ್ಟ್ ಇದ್ದರೆ ಮಾತ್ರ. ಇಲ್ಲದೇ ಹೋದರೆ ಕ್ಲಾಸಿಗೆ ರೆಗ್ಯುಲರ್ ಆಗಿ ಬರುತ್ತಿದ್ದಳು. ಪತ್ರ ಇದ್ದರೆ ಸ್ನೇಹಿತೆಯರು ಅಲ್ಲಿಗೇ ತಲುಪಿಸುತ್ತಿದ್ದರು. ಮಗಳು ಹಾಸ್ಟೆಲಿನಲ್ಲಿ ಸುಖವಾಗಿದ್ದಾಳೆಂದು ಅವಳ ತಂದೆ ತಾಯಿಯರು ಎಣಿಸಿದ್ದರು. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಸುಖವಾಗೇ ರಿಂಕಿ ಇದ್ದಳು, ಆದರೆ ಹಾಸ್ಟೆಲಿನಲ್ಲಿ ಅಲ್ಲ – ಆಗಾಗ ಹೊಸದಾಗಿ ಸಿಗುತ್ತಿದ್ದ ಸ್ನೇಹಿತರ ಜೊತೆ.

ಎಲ್ಲವನ್ನೂ ಸೈನ್ ಲ್ಯಾಂಗ್ವೇಜಿನಲ್ಲೇ ಗ್ರಹಿಸಿದ ಇಂದುಮತಿ ಈಶ್ವರಿಯನ್ನು ಹೊರಗೆ ಮಾತಿಗೆ ಕರೆದಳು. ‘ಬಾ ಹೊರಗ್ ಕೂರಾಣ’ ಎಂದು ಪಿಸುಗುಟ್ಟಿದಳು.

ಈಶ್ವರಿ ಮೆಲ್ಲಗೆ ಬಾಗಿಲು ಮುಂದೆ ಮಾಡಿ ಬಂದಳು. ಕತ್ತಲ ಕಾರಿಡಾರಿನಲ್ಲಿ ಹವಾಯಿ ಚಪ್ಪಲಿಗಳ ಚಪ-ಚಪವನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳುತ್ತಾ ಇಬ್ಬರೂ ನಡೆದರು.  ಕೊಂಬೆಯಂಚಿನಲ್ಲಿ ಕೆಂಪು ಹೂಗಳನ್ನು ಬಿರಿದುಕೊಂಡಿದ್ದ ಗುಲ್‌ಮೊಹರ್ ಮರ ಇವರ ಮಾತುಗಳನ್ನೇ ಆಲಿಸುವ ಹಾಗೆ ಬಾಗಿ ನಿಂತಿತ್ತು. ಅಲ್ಲೆಲ್ಲೋ ನೆಲ ಸೀಳಿ ಹೊರಟ ಬೇರು ಕುರ್ಚಿಯ ಥರ ಕಂಡು ಚಳಿಯ ರಾತ್ರಿಯಲ್ಲಿ ಇಂದುಮತಿಗೆ ಬೆಚ್ಚನೆ ಬೇರು ಬಹಳ ಅಪ್ಯಾಯಮಾನವೆನಿಸಿತು.

ಕೂತ ತಕ್ಷಣ, ಕೈಯಲ್ಲಿ ಹಿಡ್ಕೊಳ್ಳೋಕೆ ಒಂದು ಗ್ಲಾಸ್ ಬಿಸಿ ಬಿಸಿ ಟೀ ಇದ್ದಿದ್ದರೆ ಚೆನ್ನಾಗಿತ್ತು ಎನ್ನಿಸಿ ತಮ್ಮ ಹಣೆಬರಹಕ್ಕೆ ಮರುಗಿದರು. ಪ್ರಶ್ನಾರ್ಥಕ ಚಿನ್ಹೆಯಂತೆ ಕಾಣುವ ಹಬೆ ಏಳುತ್ತಾ, ಅದನ್ನ ಆಘ್ರಾಣಿಸುತ್ತಾ, ಕೈಯಲ್ಲಿ ಹಿಡಿದ ಚಹಾದ ಕಪ್ಪಿನ ಬಿಸಿ ಹಸ್ತದಿಂದ ಶುರುವಾಗಿ ಮುಂಗೈ ಮಾರ್ಗದಲ್ಲಿ ರೋಮಾಂಚನ ಮೂಡಿಸುತ್ತಾ ಎದೆಯ ತನಕವೂ ಕರೆಂಟಿನ ಥರಾ ಹರಿಯುತ್ತಾ ಇದ್ದಿದ್ದರೆ, ಅಬ್ಬಾ! ಆ ಕ್ಷಣದ ಸಂಪೂರ್ಣತೆಗೆ ಸಾಟಿಯೇ ಇಲ್ಲ!

ಇಂದುವೇ ಬಾಯಿ ತೆರೆದಳು. ‘ಅಲ್ಲಾ ಕಣೇ, ನಮಗೆ ಒಂದ್ ಗಂಡ್ ಸಿಗೋ ದಿಕ್ಕೇ ಇಲ್ಲ. ಈ ರಿಂಕಿ ಅದೆಂಗೆ ವಾರಕ್ಕೊಬ್ಬರನ್ನ ಪಟಾಯಿಸ್ತಾಳೆ ಅಂತೀನಿ?’

‘ಅಯ್ಯೋ ಬಿಡು. ಕೆಲೋರದ್ದು ಹಂಗೇ ಹಣೆ ಬರಹ. ನಮ್ದು ನಮಗೆ, ಅವಳ್ದು ಅವಳಿಗೆ’

‘ಈಶ್ವರೀ, ಒಂದ್ ಮಾತ್ ಕೇಳ್ತೀನಿ. ಬೇಜಾರು ಮಾಡ್ಕೊಳಲ್ಲ ಅಂದ್ರೆ ಮಾತ್ರ ಉತ್ತರ ಹೇಳು’

‘ಏನೂ ಬೇಜಾರಿಲ್ಲ ಕೇಳು’ ಎಂದು ಈಶ್ವರಿ ಮುಂದೆ ಬರುವ ಪ್ರಶ್ನೆ ಯಾವ ಸ್ವರೂಪದ್ದಾಗಿರಬಹುದು ಎಂದು ಊಹಿಸಿಯೇ ಒಪ್ಪಿಗೆ ಕೊಟ್ಟಿದ್ದಳು. ಡೈವೋರ್ಸಿ ಎಂದರೆ ಒಂದೊಂದು ವಯಸ್ಸಿನ ಜನ ಒಂದೊಂದು ಥರಾ ಪ್ರತಿಕ್ರಿಯೆ ತೋರಿಸುತ್ತಾರೆ.

ಮೂವತ್ತು ನಲ್ವತ್ತು ದಾಟಿದ ಪ್ರಚಂಡ ಗಂಡಸ್ತನದಿಂದ ನರಳುವ ಬಹುತೇಕ ಗಂಡಸರಿಗೆ ಅದು ‘ವೇಕೆನ್ಸಿ’ ಬೋರ್ಡ್ ಥರಾ ಕಾಣಿಸುತ್ತದೆ. ಆದೇ ವಯಸ್ಸಿನ ತಂತಮ್ಮ ಸಂಸಾರದಲ್ಲಿ ಮುಳುಗಿದ ಹೆಂಗಸರಿಗೆ ಇದು ಇಬ್ಬಂದಿಯ ಪ್ರಶ್ನೆ. ಒಂದು ಹಂತದಲ್ಲಿ ‘ಯಾವ್ ಜವಾಬ್ದಾರಿಯೂ ಇಲ್ಲ, ಪುಣ್ಯಾತ್ಗಿತ್ತಿ!’ ಎನ್ನಿಸಿದರೆ, ವಿಚ್ಛೇದಿತೆ ತಮ್ಮ ಸಂಸಾರಕ್ಕೆ ಬಹಳ ಹತ್ತಿರ ಬರದಂತೆ ಎಚ್ಚರವನ್ನೂ ವಹಿಸುತ್ತಾರೆ. ಯಾಕೆ ಎನ್ನುವುದೊಂಥರ ರಟ್ಟಾದ ಗುಟ್ಟು.

ಚಿಕ್ಕ ವಯಸ್ಸಿನ ಹುಡುಗಿಯರಿಗೆ ಡೈವೋರ್ಸ್ ಆದ ಮಹಿಳೆ ಒಂಥರಾ ಸಬಲತೆಯ ಸಂಕೇತ. ನನಗೆ ಬೇಡ ಎನ್ನಿಸಿದ್ದನ್ನು ಬಿಟ್ಟು ಹೊರಬಂದು ತನ್ನ ಜೀವನ, ಭವಿಷ್ಯ ತಾನು ರೂಪಿಸಿಕೊಳ್ಳುತ್ತಿರುವ ಧೈರ್ಯವಂತೆ ಎನ್ನುವ ಭಾವನೆ. ಇಂದುಮತಿಗೆ ಈಶ್ವರಿಯ ಬಗ್ಗೆ ಇವ್ಯಾವ ಇಂಪ್ರೆಷನ್ನುಗಳೂ ಇರಲಿಲ್ಲ. ಆಕೆಗಿದ್ದದ್ದು ಬಹಳ ನಿರುಪದ್ರವಿ ಕುತೂಹಲ ಮಾತ್ರ. ಒಟ್ಟಿಗೆ ಬದುಕೋಕೆ ಆಗಲ್ಲ ಅನ್ನಿಸಿದ್ದು ಯಾಕೆ ಎನ್ನುವುದೊಂದೇ ಅವಳ ಪ್ರಶ್ನೆ.

‘ಮದುವೇಲೇ ಹತ್ತಿರ ಬರಲಿಲ್ಲ ನಾವು. ಮತ್ತೆ ಜೀವನ ನಡೆಸೋ ಮಾತೇ ಇಲ್ಲ!’

‘ಪ್ಲೀಸ್. ಒಗಟೊಗಟಾಗಿ ಮಾತಾಡಬೇಡ. ವಿವರವಾಗಿ ಹೇಳು’

ಇಬ್ಬರು ಅಕ್ಕಂದಿರ ಪ್ರೀತಿ, ಹದ್ದುಬಸ್ತಿನಲ್ಲಿ ಬೆಳೆದವಳು ಈಶ್ವರಿ. ತಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಇವಳು ಕಾಲೇಜಿನ ಮೆಟ್ಟಿಲು ಹತ್ತುವ ತನಕ ಮನೆಯಲ್ಲಿ ಅವಳ ತಾಯಿ ಅವಳನ್ನು ಅಕರಾಸ್ಥೆಯಿಂದ ‘ಈಸೂ’ ಎಂದೇ ಕರೆಯುತ್ತಿದ್ದುದು. ಇವಳಿಲ್ಲದೆ ಅವರಿಗೆ ಊಟವಿಲ್ಲ, ನಿದ್ರೆಯಿಲ್ಲ. ಎಷ್ಟೆಂದರೂ ಚಿಕ್ಕವಳಲ್ಲವೇ?. ತಂದೆ ಆಂಧ್ರ ಮೂಲದವರು. ಕೆಲಸ ಅವರನ್ನು ಮೈಸೂರಿಗೆ ತಂದಿತ್ತು. ಇಲ್ಲಿ ಬದುಕು ಕಂಡು ಇಪ್ಪತ್ತು ವರ್ಷಗಳಾಗಿದ್ದವು. ರಿಟೈರ್ ಆದ ನಂತರ ತಿರುಪತಿಗೆ ಹೋಗಿ ನೆಲೆಸುವ ಪ್ಲಾನ್ ಇತ್ತು.

ದೊಡ್ಡವಳು ಜಯಸುಧಾ. ಓದಿನಲ್ಲಿ ಬಹಳ ಮುಂದು. ಪ್ರತೀ ಬಾರಿ ತಂದೆಗೆ ಕಿರೀಟವನ್ನೇ ತರುತ್ತಿದ್ದಳು. ಎರಡನೇಯವಳು ರಾಧಿಕಾ. ಓದಿನಲ್ಲಿ ಸಾಧಾರಣವಿದ್ದರೂ ವ್ಯವಹಾರ ಚತುರೆ. ಈಶ್ವರಿ ಅವರಿಬ್ಬರೂ ಬಿಟ್ಟದ್ದನ್ನು ಧಾರಾಳವಾಗಿ ಹೊತ್ತಿದ್ದಳು. ಈ ದೊಡ್ಡ ಕಣ್ಣುಗಳ ಕೆಂಪು ಹುಡುಗಿಗೆ ಮೈ ತುಂಬಾ ಮುಗ್ಧತೆ. ಹೈಸ್ಕೂಲು ದಾಟೋವರೆಗೂ ಅಮ್ಮನ ಕೈಯಿಂದ ಉಂಡ ಕೈತುತ್ತಿನ ಪರಿಣಾಮ; ಜಗತ್ತಿನ ಸಣ್ಣತನಗಳ ಪರಿಚಯ ಆಗಲೇ ಇಲ್ಲ.

ದೊಡ್ಡಕ್ಕ ಎಂಬಿಬಿಎಸ್ ಮಾಡುತ್ತಿದ್ದಳು. ಕಾಲೇಜು ದಿನಗಳಿಂದಲೂ ಅವಳಿಗೊಬ್ಬ ಗೆಳೆಯನಿದ್ದ. ಜಯಸುಧಾ–ಪ್ರದೀಪರಾಜುವಿನ ಲವ್ ಅಫೇರು ಓರಗೆಯವರಿಗೆಲ್ಲ ಗೊತ್ತಿತ್ತು. ಶುರುವಾದಾಗ ಇಬ್ಬರೂ ಪಿಯು ಓದುತ್ತಿದ್ದ ಕ್ಲಾಸ್‌ಮೇಟ್ಸು. ಜಯಸುಧಾ ಚೆನ್ನಾಗಿ ಓದಿ ಮೆಡಿಕಲ್ ಸೇರಿದರೆ, ರಾಜು ಯಾಕೋ ಓದಿನಲ್ಲಿ ಹಿಂದೆ ಬಿದ್ದು ತಂದೆಯ ರಿಯಲ್ ಎಸ್ಟೇಟ್ ಬಿಸಿನೆಸ್ಸಿನಲ್ಲಿ ಪಾಲ್ಗೊಳ್ಳತೊಡಗಿದ. ಬಿ.ಕಾಂ ಸೇರಿದ್ದನಾದರೂ ಕ್ರಮೇಣ ಕಾಲೇಜು ನಿಂತೇ ಹೋಯಿತು.

ಇತ್ತ ಜಯಸುಧಾ ಪ್ರತೀ ವರ್ಷ ಮೆಡಿಕಲ್ಲಿನಲ್ಲಿ ಅಂಕ ಗಳಿಸುತ್ತಾ, ತನ್ನ ಗಂಭೀರವಾದ ಸಹಪಾಠಿಗಳನ್ನು ನೋಡುವಾಗಲೆಲ್ಲ ತಾನೂ-ರಾಜುವೂ ಒಟ್ಟಿಗೆ ಬದುಕಲಾಗದು ಎನ್ನಿಸತೊಡಗಿತ್ತು. ಮೆಡಿಕಲ್ ಮುಗಿಸಿ ಎಂ.ಡಿಗೆ ಹೋಗುವ ಹೊತ್ತಿಗೆ ಜಯಾ ರಾಜುವಿನಿಂದ ವಿಮುಖಳಾಗಿ ಹೊರಟಿದ್ದಳು. ಆದರೆ ರಾಜುಗೆ ಹೇಳುವ ಧೈರ್ಯ ಮಾತ್ರ ಆಗಿರಲಿಲ್ಲ.

ಅವಳ ಓದು ಮುಗೀಲಿ ಅಂತ ಸುಮ್ಮನಿದ್ದ ರಾಜು ತನ್ನ ಅಪ್ಪ-ಅಮ್ಮನ್ನ ಜಯಸುಧಾ ಮನೆಗೆ ಹೆಣ್ಣು ಕೇಳಲು ಕರೆತಂದ. ಇದೇ ಸಂದರ್ಭವೆಂದುಕೊಂಡ ಜಯಸುಧಾ ಅವರ ಮುಂದೆ ರಾಜು ತನಗೆ ಇಷ್ಟ ಆದರೂ ಅವನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಮನಮುಟ್ಟುವಂತೆ ಹೇಳಿದಳು. ಅಲ್ಲೇ ಕೂತು ಕೇಳುತ್ತಿದ್ದ ಈಶ್ವರಿಗೆ ತನ್ನ ಅಕ್ಕ ಸರಿ ಎನ್ನಿಸಿತು. ಪಿಯು ಓದುವ ಹುಡುಗಿಗೆ ತನ್ನ ಅಕ್ಕನ ಬಿಚ್ಚುಮನಸ್ಸಿನ ವರ್ತನೆಗಳು ಹಿಡಿಸದೇ ಹೋದಾವೆಯೇ?

ರಾಜುವಿನ ಅಪ್ಪ-ಅಮ್ಮ ಬಹಳ ತಾಳ್ಮೆಯಿಂದ ಕೇಳಿಸಿಕೊಂಡರು. ಜಯಸುಧಾಳ ಪ್ರತೀ ಮಾತನ್ನೂ ಒಪ್ಪಿದರು. ಆದರೆ ಅವರು ಜಯಸುಧಾ ಮತ್ತು ರಾಜು ಎಂದಿದ್ದರೂ ದಂಪತಿ ಎಂದು ಅಂದುಕೊಂಡು ಬಹಳ ವರ್ಷಗಳೇ ಕಳೆದಿದ್ದವು. ಆದ್ದರಿಂದ ಜಯಸುಧಾ ಮನಸ್ಸು ಬದಲಾಯಿಸಿಕೊಳ್ಳಬೇಕು ಎನ್ನುವುದು ಅವರ ಕೋರಿಕೆಯಾಗಿತ್ತು.

ಆದರೆ ಜಯಸುಧಾ ಇದಕ್ಕೆ ಬಿಲ್ಕುಲ್ ಒಪ್ಪಲಿಲ್ಲ. ರಾಜುವನ್ನು ಕೂರಿಸಿಕೊಂಡೇ ಮಾತನಾಡೋಣ ಎಂದು ಹೇಳಿದಳು. ‘ನನಗೆ ಇಷ್ಟವಿಲ್ಲದ ಮೇಲೆ ಮದುವೆ ಹೇಗೆ ಆಗೋದು? ಅವನೂ ಸುಖವಾಗಿರಲ್ಲ, ನಾನೂ ಸುಖವಾಗಿರಲ್ಲ’ ಎಂದು ಹೇಳಿದಳು. ಎರಡೂ ಮನೆಯಲ್ಲಿ ಮಾತುಕತೆಯಾದರೂ ವಿಷಯ ಬಗೆಹರಿಯಲಿಲ್ಲ. ಕಡೆಗೆ ಜಯಸುಧಾ ತನ್ನ ಕ್ಲಾಸ್ ಮೇಟ್ ಒಬ್ಬನನ್ನು ಮನೆಗೆ ಕರೆತಂದಳು.

ದೆಹಲಿ ಮೂಲದ ಅನಿಲ್ ಶರ್ಮಾ ಎನ್ನುವ ಹುಡುಗ. ಬಹಳ ಸ್ಥಿತಿವಂತರ ಮನೆಯವನು. ಚೆನ್ನಾಗಿ ಓದುತ್ತಿದ್ದ. ಅವನ ತಂದೆ ದೆಹಲಿಯಲ್ಲಿ ಸ್ವಂತ ಆಸ್ಪತ್ರೆ ಹೊಂದಿದ್ದರು. ಅವನೂ ಜಯಾಳನ್ನು ಬಹಳ ಹಚ್ಚಿಕೊಂಡಿದ್ದ. ಇಬ್ಬರೂ ಮದುವೆಯಾಗಿ ಅನಾಥ ಮಕ್ಕಳ ಸೇವೆಗಾಗಿ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಬೇಕೆಂದು ನಿರ್ಧಾರ ಮಾಡಿಕೊಂಡಿದ್ದರು.

ಪ್ರೀತಿ, ಮದುವೆ ಎಲ್ಲವೂ ಬದಲಾದ ವಾಸ್ತವದ ಮುಂದೆ ಹಲವು ಹೆಸರುಗಳನ್ನು ಪಡೆದುಕೊಳ್ಳಬಹುದು. ಜಯಸುಧಾ ಒಳ್ಳೆಯವಳೇ, ಕೆಟ್ಟವಳೇ ಎನ್ನುವುದು ಚರ್ಚಾರ್ಹ ವಿಷಯವಲ್ಲ. ಸ್ಕೂಲಿನಲ್ಲೋ, ಕಾಲೇಜಿನಲ್ಲೋ ಹಾರ್ಮೋನುಗಳ ಪ್ರಭಾವದಿಂದ ಶುರುವಾದ ಪ್ರೇಮ ಸಮಯದ ಪ್ರಭಾವದ ಮುಂದೆ ಬದಲಾದರೆ ಅದನ್ನು ಸ್ವೀಕರಿಸಿ ಮುಂದೆ ಹೋಗುವುದು ಇಬ್ಬರಿಗೂ ಒಳ್ಳೆಯದು. ಜಯಸುಧಾ ತನ್ನ ದಾರಿಯನ್ನು ಸರಿಯಾಗೇ ಕಂಡುಕೊಂಡಿದ್ದಳು. ರಾಜು ಮಾತ್ರ ಇದನ್ನು ತನ್ನ ‘ಅಹಂ’ ಗೆ ಬಿದ್ದ ಪೆಟ್ಟು ಎಂದುಕೊಂಡನೇನೋ.

ಈ ಎಲ್ಲ ಕಲಸುಮೇಲೋಗರದ ಸಮಸ್ಯೆಯಲ್ಲಿ ಈಶ್ವರಿ ಬಲಿಯಾದದ್ದು ಮಾತ್ರ ವಿಚಿತ್ರ. ರಾಜು ಒಂದು ದಿನ ಜಯಾನ ಮನೆಗೆ ಬಂದು ಜಯಾಳ ತಂದೆಯ ಹತ್ತಿರ ಮಾತಾಡಿದ. ‘ನಿಮ್ಮ ಮಗಳನ್ನು ಮರೆಯಲು ನನಗೆ ಸಾಧ್ಯವೇ ಇಲ್ಲ. ಅವಳಿಲ್ಲದಿದ್ದರೆ ಈಶ್ವರಿಯನ್ನಾದರೂ ನನಗೆ ಮದುವೆ ಮಾಡಿಕೊಡಿ. ನಿಮ್ಮನ್ನ ತಂದೆ ಸಮಾನ ಎಂದುಕೊಂಡಿದ್ದೇನೆ. ನನಗೆ ಮೋಸ ಮಾಡಬೇಡಿ’ ಎಂದೆಲ್ಲ ಹೇಳಿ ಹೋದನಂತೆ. ಈಶ್ವರಿಯ ತಂದೆ ಋಣಭಾರದಲ್ಲಿ ಸಿಲುಕಿದರು. ಒಳ್ಳೆ ಹುಡುಗ. ಎಂದೂ ಗತ್ತು-ಗೈರತ್ತು ಮಾಡಿದ್ದಿಲ್ಲ. ಹೇಗೂ ಮುಂದೆ ಈಶ್ವರಿಗೆ ಮದುವೆ ಮಾಡಬೇಕು. ಅವಳಿಗೆ ಇದಕ್ಕಿಂತಾ ಒಳ್ಳೆ ಹುಡುಗ ಎಲ್ಲಿ ಸಿಕ್ಕಾನು? ಎಂದೆಲ್ಲ ಯೋಚಿಸಿ ಸೋತರು.

ಒಂದು ಚಳಿಗಾಲದ ಸಂಜೆ ಎರಡನೇ ಪಿಯುಸಿ ಪರೀಕ್ಷೆಗೆ ತಯಾರಾಗುತ್ತಿದ್ದ ಈಶ್ವರಿ ಮನೆಗೆ ಬಂದ ತಕ್ಷಣ ರಾಜುವಿನ ಸಂಬಂಧಿಕರು, ಅವನ ಅಪ್ಪ ಅಮ್ಮ ಎಲ್ಲ ಬಂದು ಅವಳಿಗೆ ಉಂಗುರ ತೊಡಿಸಿ ತಲೆ ತುಂಬ ಹೂವು ಮುಡಿಸಿ, ಸೀರೆ ಕೊಟ್ಟು ಉಡಿಯ ತುಂಬಾ ಹಣ್ಣು ಸ್ವೀಟು ಇಟ್ಟು ಹೋದರು. ಅನಿಲ್ ಜೊತೆ ಜಯಸುಧಾ ಮದುವೆ ಮುಂದಿನ ಆರೇ ತಿಂಗಳಲ್ಲಿ ಆಯಿತು. ನಂತರದ ಒಂದು ತಿಂಗಳಲ್ಲಿ ಈಶ್ವರಿಯ ಎರಡನೆ ಅಕ್ಕ ರಾಧಿಕಾ ಮದುವೆ ಚಾರ್ಟರ್ಡ್ ಅಕೌಂಟೆಂಟ್ ಒಬ್ಬನ ಜೊತೆ ಆಯಿತು. ಅದೇ ಚಪ್ಪರದಲ್ಲಿ ಈಶ್ವರಿಯ ಜೊತೆ ರಾಜುವಿನ ಮದುವೆಯೂ ಆಯಿತು. ಆಗಷ್ಟೇ ಬಿಎಸ್ಸಿ ಡಿಗ್ರಿ ಸೇರಿದ್ದಳು ಈ ಎಳೇ ಹುಡುಗಿ. ಅವಳ ತಾಯಿಗೆ ಈ ಮದುವೆ ಕೊಂಚವೂ ಇಷ್ಟವಿರಲಿಲ್ಲವಾದರೂ ತನ್ನ ಅಭಿಪ್ರಾಯ ಯಾವ ಲೆಕ್ಕಕ್ಕೂ ಇಲ್ಲವೆಂದು ಸುಮ್ಮನಾದರು.

ರಾಜು ಈಶ್ವರಿಯನ್ನು ಚೆನ್ನಾಗಿಯೇ ನೋಡಿಕೊಂಡ. ಅವಳು ಕೇಳಿದ್ದು, ಕೇಳದ್ದು, ಬಯಸಿದ್ದು, ಬೇಡದ್ದು ಎಲ್ಲವೂ ಅವಳಿಗೆ ಸಿಗುತ್ತಿತ್ತು. ಅವಳ ಓದು ಮುಂದುವರೆಸಲೂ ಪರ್ಮಿಶನ್ ಕೊಟ್ಟ. ಆದರೆ ಜಯಸುಧಾಳನ್ನು ಮರೆಯಲು ಅವನಿಂದ ಆಗಲೇ ಇಲ್ಲ. ಅಲ್ಲದೆ ಜಯಾನ ಜೊತೆ ಅವನ ಲವ್ ಅಫೇರ್ ನಡೆಯುತ್ತಿರುವಾಗ ಈಶ್ವರಿ ಚೀಟಿ ಗೀಟಿ ಮುಟ್ಟಿಸಲು ಸಹಾಯ ಮಾಡುತ್ತಿದ್ದಳು. ಆದ್ದರಿಂದ ಅವಳ ಬಗ್ಗೆ ‘ತಂಗಿ’ ಎನ್ನುವ ಭಾವನೆ ಬಲವಾಗಿಯೇ ಬೆಳೆದಿತ್ತು.

ತಂಗಿ ಎಂದುಕೊಂಡವಳು ಇದ್ದಕ್ಕಿದ್ದಂತೆ ಹೆಂಡತಿಯಾದರೆ? ಒಂದು ವರ್ಷ ಕಳೆದ ಮೇಲೆ ಈಶ್ವರಿಯನ್ನು ಟ್ರಿಪ್ ಅಂತ ಹೊರಗೆ ಕರೆದೊಯ್ದು ಹೇಳಿದ. ‘ಅಕ್ಕನ್ನ ಮರೆಯೋಕೆ ನಿನ್ನ ಮದುವೆ ಆದೆ. ಆದರೆ ನಿನ್ನನ್ನ ಹೆಂಡತಿ ಅಂತ ಒಪ್ಪೋಕೆ ಆಗ್ತಿಲ್ಲ. ನಿನ್ನ ಬಗ್ಗೆ ನನಗೆ ರೊಮಾಂಟಿಕ್ ಭಾವನೆಗಳೇ ಹುಟ್ಟುತ್ತಿಲ್ಲ. ಹೀಗಾದರೆ ನಾವು ಒಟ್ಟಿಗಿರುವುದು ಕಷ್ಟ. ನನ್ನಿಂದ ತಪ್ಪಾಯಿತು. ದಯವಿಟ್ಟು ನೀನು ಬಿಡುಗಡೆ ಹೊಂದಿ ನಿನ್ನ ಜೀವನ ಚೆನ್ನಾಗಿ ರೂಪಿಸಿಕೋ’.

ಈಶ್ವರಿಗೆ ಮದುವೆ ಆದದ್ದು ಹೇಗೆ ತಿಳಿಯಲಿಲ್ಲವೋ ಡೈವೋರ್ಸ್ ಆದದ್ದೂ ತನ್ನ ವಾಸ್ತವವನ್ನು ಮೀರಿದ ಘಟನೆಯಂತೆ ನಡೆಯಿತು. ಮಗಳ ಜೀವನ ಹಾಳಾಯಿತು ಅಂತ ಅವಳ ತಾಯಿ ಕೊರಗಿ ಸತ್ತರು. ಈಶ್ವರಿ ಕಲ್ಲಾದಳು.

‘ಹಾಳಾಗಿ ಹೋಗ್ಲಿ ಬಿಡು. ಕೈ ಮೀರಿದರೆ ಏನ್ ಮಾಡೋಕಾಗುತ್ತೆ? ಡೈವೋರ್ಸ್ ಆದಾಗ ಪರಿಹಾರ ಏನಾದರೂ ತಗೊಂಡ್ಯಾ?’ ಇಂದುಮತಿಯ ನಿರ್ವಿಕಾರ ಪ್ರಶ್ನೆ. ಈಶ್ವರಿ ವಿಷಾದದ ನಗೆ ನಕ್ಕಳು.

‘ನಾನೇನೂ ಕೇಳಲಿಲ್ಲ. ಅವನೇ ನನ್ನ ಜೀವನಕ್ಕೆ ಸ್ವಲ್ಪ ದುಡ್ಡು ಕೊಟ್ಟ. ಇನ್ನು ಸ್ವಲ್ಪ ದುಡ್ಡು ಅಕ್ಕಂದಿರು ಕೊಟ್ಟರು. ಈಗ ನನ್ನ ಹತ್ರ ದುಡ್ಡಿದೆ. ಭವಿಷ್ಯವೇ ಸರಿಯಾಗಿ ಕಾಣ್ತಿಲ್ಲ’ ಎಂದಳು ಈಶ್ವರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.