ADVERTISEMENT

ಪಾಪ ಮುಚ್ಚಕ್ಕೆ ಪುಣ್ಯದ ಕವರ್ ಬೇಕಲ್ಲಾ?

ಪ್ರೀತಿ ನಾಗರಾಜ
Published 1 ಜೂನ್ 2016, 19:47 IST
Last Updated 1 ಜೂನ್ 2016, 19:47 IST

ಸರಳಾರ ಜೀವನ ಎಷ್ಟು ಕ್ಲಿಷ್ಟವಾಗಿತ್ತೆಂದರೆ ಅದರ ಬಗ್ಗೆ ಹೇಳುತ್ತಿರುವಾಗ ಭಾವೋದ್ವೇಗಕ್ಕೆ ಒಳಗಾಗದೆ ಇರಲು ಸಾಧ್ಯವೇ ಇರಲಿಲ್ಲ. ಆದರೆ ಆಕೆ ಆಗಾಗ ಕಣ್ಣೀರಿನ ಜ್ವಾಲಾಮುಖಿ ಸ್ಫೋಟಿಸುತ್ತಿದ್ದರೆ ಚಿತ್ರಾ, ಸೂಸನ್ ಮತ್ತು ವಿಜಿ ಯಾವುದೋ ಮಾಟ-ಮಂತ್ರದ ಪ್ರಭಾವಕ್ಕೆ ಒಳಗಾದವರಂತೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದರು. ಅವರ ಅಳು ನಿಲ್ಲಿಸುವ ಪ್ರಯತ್ನವನ್ನು ಮಾಡುವುದೂ ಒಂದು ರೀತಿಯ ಅಸಂಬದ್ಧವೇನೋ ಎನ್ನುವಂತೆ ಇತ್ತು.

ಅನ್ಯಾಯ ಅಸಹಾಯಕತೆ ಎಲ್ಲರಿಗೂ ಒಂದಲ್ಲ ಒಂದು ರೀತಿ ಅನುಭವಕ್ಕೆ ಬಂದಿರುತ್ತದೆ. ಆದರೆ ಅನ್ಯಾಯ, ಅಕ್ರಮದ ನೆರಳಲ್ಲೇ ಜೀವನ ಮಾಡುತ್ತಾ ಪ್ರತಿರೋಧವನ್ನು ತೋರಿಸುವ ಸಾಧ್ಯತೆಯನ್ನು ಆಲೋಚಿಸುವುದೂ ದುಸ್ತರವಾಗುತ್ತದೆ. ಇರುವ ಆಯ್ಕೆಗಳಲ್ಲಿ ಕಡಿಮೆ ಹಿಂಸೆಯುಳ್ಳ ಯಾವುದೋ ಒಂದನ್ನು ಒಪ್ಪಿಕೊಳ್ಳುವುದು ಜೀವನ ಸಂಗ್ರಾಮದ ಪರಮ ಗುರಿಯಾಗುತ್ತದೆ.

ತನ್ನನ್ನು ತನ್ನ ಅಣ್ಣಂದಿರು ಲೈಂಗಿಕವಾಗಿ ಶೋಷಿಸುತ್ತಿದ್ದರು ಎನ್ನುವುದು ಅರ್ಥವಾದಾಗ ಸರಳಾಗೆ ಸಾಕಷ್ಟು ವಯಸ್ಸು ಕಳೆದಿತ್ತು. ಮುಂದೆ ಸರಳಾ ಅಪ್ಪ ಯಾವಾಗಲೋ ಒಮ್ಮೆ ಇವರ ಜೊತೆ ಇರಲಿಕ್ಕೆ ಬಂದರೂ ಅಮ್ಮ ಅವನನ್ನು ವಾಪಸು ಕಳಿಸಿಬಿಟ್ಟಳು. ಹೀಗಂತ ಸರಳಾ ಹೇಳುತ್ತಿರುವಾಗ ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎನ್ನುವಂತೆ ಸೂಸನ್ ಮಧ್ಯೆ ಬಾಯಿ ಹಾಕಿದಳು. ಬರೀ ಬಾಯಿ ಹಾಕಲಿಲ್ಲ, ಕಾಳ ನಾಗರದ ಹುತ್ತದೊಳಕ್ಕೆ ಕಡ್ಡಿ ಆಡಿಸಿಬಿಟ್ಟಳು.

‘ಯಾಕೆ? ನಿಮ್ಮ ತಂದೆ ಜೊತೇಲಿದ್ರೆ ನಿಮಗೆ ಒಳ್ಳೆಯದಾಗ್ತಿತ್ತಲ್ವಾ? ನಿಮ್ಮ ತಾಯೀನೂ ಆ ಫೀಲ್ಡ್ ಬಿಟ್ಟುಬಿಡಬೋದಿತ್ತು’. ಕಾಳಿಂಗ ಸರ್ಪ ಭುಸ್ಸೆನ್ನುವಂತೆ, ಕುಂಡಲಿನಿ ಜಾಗೃತವಾಗಿ ಶಕ್ತಿಗೆ ಬದಲಾಗಿ ಪ್ರಕೃತಿಯ ಸಿಟ್ಟೆಲ್ಲವೂ ಏಕ ವ್ಯಕ್ತಿರೂಪಕ್ಕೆ ಬಂದಂತೆ ಸರಳಾ ಕಾಣಿಸಿದರು. ಸೂಸನ್‌ಗೆ ತಾನು ಕೇಳಿದ ಪ್ರಶ್ನೆಯ ಅಸಂಬದ್ಧತೆ ಅರಿವಾಯಿತು. ಆದರೆ ಪ್ರಯೋಜನವೇನು? ಕಾಲ ಮಿಂಚಿತ್ತು. ಆ ಪ್ರಶ್ನೆ ಯಾವ ಅನಾಹುತ ಮಾಡಬಹುದಿತ್ತೋ, ಅದನ್ನು ಮೀರಿದ ವಿಕೋಪವನ್ನು ಆಗಲೇ ಸೃಷ್ಟಿ ಮಾಡಿ ಆಗಿತ್ತು.

‘ಅಪ್ಪ ನಮಗೇನು ಮಾಡುತ್ತಿದ್ದನೋ ಗೊತ್ತಿಲ್ಲ. ಆದರೆ ಅವನಿಂದ ನಮ್ಮ ಜೀವನ ಬದಲಾಗುವ ಸಾಧ್ಯತೆ ಇಲ್ಲ ಎನ್ನುವುದು ಅಮ್ಮನಂಥ ಮುಗ್ಧೆಗೂ ಗೊತ್ತಾಗಿಬಿಟ್ಟಿತ್ತು. ಇಲ್ಲಿ ಮೂರು ಜನ ಮಕ್ಕಳಿಗೆ ಜನ್ಮ ಕೊಟ್ಟ ಗಂಡಸು, ತನ್ನೂರಿಗೆ ತನ್ನ ತಾಯಿಯ ಕಾರ್ಯಕ್ಕೆಂತ ಹೋದವನು ಇನ್ನೊಂದು ಮದುವೆ  ಆಗಿಬಿಟ್ಟಿದ್ದ. ವರ್ಷಗಳು ಕಳೆದ ನಂತರ ಅವಳನ್ನು ಬಿಟ್ಟು ತಿರುಗಿ ನಮ್ಮ ಹತ್ತಿರ ಬಂದಿದ್ದ... ಇವನನ್ನು ಹೇಗೆ ನಂಬೋದು?’ ಎಂದರು ಸರಳಾ.

ಈ ಮಾತುಗಳನ್ನು ಸೂಸನ್ ಇನ್ನೂ ಜೀರ್ಣಿಸಿಕೊಳ್ಳುತ್ತಿರುವಾಗ ಸರಳಾ ಇದ್ದಕ್ಕಿದ್ದ ಹಾಗೆ ತಮ್ಮ ಕುಪ್ಪುಸದೊಳಗಿನಿಂದ ಪುಟ್ಟ ಪರ್ಸ್ ಅನ್ನು ಹೊರಕ್ಕೆ ತೆಗೆದರು. ಸೂಸನ್ ಮುಖ ಕಿವುಚಿಕೊಂಡಳು. ಸರಳಾ ಅವಳನ್ನು ನೋಡಿ ಜೋರಾಗಿ ನಕ್ಕರು.

‘ಏ! ಬಡ್ಡಿ ದುಡ್ಡು ಕಳ್ಕೊಂಡ ಸುಂದರೀ...ನಿಯತ್ತಿಂದ ದುಡಿದ ದುಡ್ಡು ಎದೇಲಿ ಬಚ್ಚಿಟ್ಕೋಬೇಕು ಕಣೇ... ಯಾರೂ ಅಷ್ಟು ಸುಲಭವಾಗಿ ಕದಿಯಕ್ಕೆ ಆಗಲ್ಲ! ಮಾರಿ ಕಣ್ಣು ಮಸಣಿ ಕಣ್ಣು ಯಾವ್ ಕಣ್ಣೂ ಬೀಳಲ್ಲ’ ಎನ್ನುತ್ತಾ ನಾಗರದಂಥ ಜಡೆಯನ್ನು ಬಿಚ್ಚುತ್ತಾ ನಕ್ಕರು.

ಕೂದಲು ಸಡಿಲಗೊಳಿಸುತ್ತಿರುವ ಹೆಣ್ಣು ಎಷ್ಟು ಸುಂದರವಾಗಿ ಕಾಣಬಹುದು ಎನ್ನುವ ಕಿಂಚಿತ್ ಕಲ್ಪನೆ ಕೂಡ ಅಲ್ಲಿದ್ದ ಮೂವರಿಗೆ ಇರಲಿಲ್ಲ. ಬಿಯರಿನ ಲೈಟಾದ ನಶೆಯೋ, ಅರೆಬರೆ ಕತ್ತಲಿನ ಪ್ರಭಾವವೋ ಅಥವಾ ಸರಳಾರ ಗಟ್ಟಿ ವ್ಯಕ್ತಿತ್ವದ ಪ್ರಭಾವವೋ – ಅಂತೂ ಸರಳಾ ಆ ಸೆಕೆಂಡಿನಲ್ಲಿ ಸಾಕ್ಷಾತ್ ದೇವ ಕನ್ಯೆಯಂತೆ ಕಂಗೊಳಿಸಿದರು. 

ಇವೆಲ್ಲಕ್ಕೂ ವಿಮುಖರಾದಂತೆ, ಸರಳಾ ತಮ್ಮ ಪರ್ಸಿನಿಂದ ಐವತ್ತು ರೂಪಾಯಿ ತೆಗೆದು ಕೊಡುತ್ತಾ ‘ಏ ಚಿತ್ರಾ... ನಮ್ಮ ರೋಡಿನ ಮೂಲೇಲಿ ಒಂದು ಸ್ಕೂಲ್ ಇದೆಯಲ್ಲಾ? ಅಲ್ಲಿ ಒಬ್ಬ ವಾಚ್ ಮ್ಯಾನ್ ಇದಾನೆ. ಅವನಿಗೆ ಈ ದುಡ್ಡು ಕೊಟ್ಟು ರಮ್ ತಂದುಕೊಡಬೇಕಂತ ಹೇಳು,ಬೇಗ ಹೋಗು...’ ಎಂದರು.

ಚಿತ್ರಾ ಒಂದು ನಿಮಿಷ ಗಾಬರಿಯಾದಳು.

‘ಸರಳಾ ಆಂಟೀ, ನಾನು ಹೋಗಿ ಕೇಳೋದಾ?’

‘ಬಾರ್ ಒಳ್ಗೆ ಹೋಗಿ ತಾ ಅಂತ ಹೇಳ್ತಿಲ್ಲ. ಅವನೇ ಒಳಗೆ ಹೋಗಿ ತರ್ತಾನೆ. ಅಲ್ಲೇ ನಿಂತಿರು ಅಷ್ಟೇ...’

‘ಬೇಕಾದ್ರೆ ಇನ್ನೊಂದು ಬಿಯರ್ ತರ್ತೀನಿ’

‘ಥೂ ಬಿಯರು ಮೈಯಲ್ಲಿ ಉಳ್ಕೊಳಲ್ಲ ಕಣೇ... ಸುಮ್ನೆ ಬಾತ್ರೂಮಿಗೆ ಹೋಗೋದೇ ಒಂದು ದೊಡ್ಡ ಕೆಲಸ. ಕೊಡೋ ದುಡ್ಡಿಗೆ ರಮ್ಮೇ ಒಳ್ಳೇ ಆಪ್ಷನ್ನು. ಚೀಪ್ ಅಂಡ್ ಬೆಸ್ಟ್‌. ಒಂದ್ ಸಾರಿ ತಗೋ... ನಾನು ಏನು ಹೇಳ್ತಾ ಇದೀನಿ ಅನ್ನೋದು ಅರ್ಥ ಆಗುತ್ತೆ...’ ಸರಳ ಆರ್ಥಿಕ ಲಾಭ ವಿವರಿಸಿದರು.

ಆದರೂ ಚಿತ್ರಾಗೆ ಒಂಥರಾ ಕಸಿವಿಸಿ... ಆ ವಾಚ್‌ಮ್ಯಾನ್ ಯಾರೋ ಏನೋ... ಅವನ ಹತ್ರ ಹೇಗಪ್ಪಾ ಹೋಗೋದು? ಅವನೇನು ಅಂದ್ಕೋತಾನೆ? ನಾಳೆಯಿಂದ ಕಾಟ ಕೊಡೋಕೆ ಶುರು ಮಾಡಿದ್ರೆ?

‘ಚಿತ್ರಾ... ಆ ವಾಚ್ ಮ್ಯಾನು ಐದ್ ರೂಪಾಯಿ ಎಕ್ಸ್ಟ್ರಾಕೊಟ್ರೆ ಒಂದು ರಮ್ ಬಾಟಲು ತಂದು ಕೊಡ್ತಾನೆ. ಯಾರ್ ರಮ್ ತರಿಸಿಕೊಂಡ್ರೂ, ಎಷ್ಟು ರಮ್ ತರಿಸಿಕೊಂಡ್ರೂ ಅವನು ಪ್ರತಿ ಬಾಟಲಿಗೆ ಐದೇ ರೂಪಾಯಿ ಜಾಸ್ತಿ ತಗೊಳೋದು. ಈ ಏರಿಯಾ ಹೆಂಗಸರು ಕಾರ್ ನಿಲ್ಲಿಸಿ ಅವನ ಕೈಲಿ ಏನೇನೆಲ್ಲಾ ತರಿಸಿಕೊಂಡದ್ದನ್ನು ನೋಡಿದೀನಿ... ಹೋಗು ಅವನೇನು ರೋಮಿಯೋ ಅಲ್ಲ ನಿನಗೆ ತೊಂದರೆ ಕೊಡಕೆ...’ ಸರಳಾ ಚಿತ್ರಾಗೆ ಹೇಳಿದರು.

‘ಅಯ್ಯೋ! ನನ್ನ ಮನಸ್ಸಿನಲ್ಲಿ ಇದ್ದದ್ದು ನಿಮಗೆ ಹೇಗೆ ಗೊತ್ತಾಯ್ತು ಸರಳಾ ಆಂಟೀ... ನಾನ್ ಜೋರಾಗಿ ಮಾತಾಡಿದ್ನಾ? ಅಷ್ಟೊಂದು ಟೈಟ್ ಆಗಿಬಿಟ್ಟಿದೀವಾ?’ ಚಿತ್ರ ತಬ್ಬಿಬ್ಬಾಗಿ ಸರಳ ಕೈ ಹಿಡಿದುಕೊಂಡು ದೈನ್ಯದಿಂದ ಕೇಳಿದಳು.

‘ಇಲ್ಲ. ಆದರೆ ಸಾಮಾನ್ಯವಾಗಿ ಹೆಂಗಸರಿಗೆ ಇರೋ ಹೆದರಿಕೆಗಳೆಲ್ಲಾ ನನಗೆ ಗೊತ್ತಾಗಲ್ವಾ? ಆದರೆ ನನಗೆ ಚಿಕ್ಕ ಪುಟ್ಟ ಹೆದರಿಕೆಗಳು ಆಗೋದೇ ಇಲ್ಲ. ಅಭ್ಯಾಸ ಆಗೋಗಿದೆ. ಆದರೆ ಇನ್ನೊಬ್ಬ್ರು ಹೇಗೆ ಯೋಚಿಸ್ತಾರೆ ಅಂತ ಅರ್ಥವಾಗುತ್ತೆ...’

‘ಇನ್ನೊಬ್ಬರ ಯೋಚನೆ ಅರ್ಥವಾಗೋದು ಸರಿಯೇ... ಆದರೆ ಆ ವಾಚ್ ಮ್ಯಾನು ನನಗೆ ನಾಳೆಯಿಂದ ತೊಂದರೆ ಕೊಡಲ್ಲ ಅಂತ ಅಷ್ಟು ಸ್ಪಷ್ಟವಾಗಿ ಹೇಗೆ ಹೇಳ್ತೀರಿ?’

‘ಯಾರ್‍ಯಾರಿಗೋ ರಮ್ ತಂದುಕೊಡೋದು ಅವನಿಗೆ ಶೋಕಿ ಅಲ್ಲ. ಅವಶ್ಯಕತೆ. ಸ್ಕೂಲಿಗೆ ಹೋಗೋ ಮಕ್ಕಳಿದ್ದಾರೆ. ಹೆಂಡತಿ ಎಲ್ಲೋ ಮನೆ ಕೆಲಸ ಮಾಡ್ತಾಳೆ. ಇಬ್ಬರೂ ದುಡಿದರೆ ಊಟ, ಬಟ್ಟೆ, ಮಕ್ಕಳ ಫೀಸು ಎಲ್ಲಾ ಆಗುತ್ತೆ. ಅವನಿಗೆ ಬೇಕಿರೋದು ಬಾಟಲಿಗೆ ಐದು ರೂಪಾಯಿ ಮಾತ್ರವೇ. ನಂಬಿಕೆ ಉಳಿಸಿಕೊಂಡ್ರೆ ಅಂಥಾ ಸಾವಿರ ಸಾವಿರ ರೂಪಾಯಿಗಳನ್ನು ನೋಡಬಹುದು ಅಂತ ಅವನಿಗೆ ಗೊತ್ತು.

ಪಕ್ಕಾ ವ್ಯಾಪಾರಸ್ಥ ಅವನು. ನಿನ್ನ  ವಯಸ್ಸು, ಸೌಂದರ್ಯ ಯಾವುದೂ ಬೇಕಿಲ್ಲ ಅವನಿಗೆ...’ ಎಂದು ಹೇಳುತ್ತಾ ಸರಳಾ ನಗುತ್ತಿದ್ದರೆ ಮನೋವಿಜ್ಞಾನದ ಹೊಸ ಶಾಖೆಯೊಂದು ವಿಸ್ತರಿಸುತ್ತಿರುವಂತೆ ಕಾಣಿಸುತ್ತಿತ್ತು ಮೂರೂ ಹುಡುಗಿಯರಿಗೆ.

‘ನನಗೆ ಅರ್ಥ ಆಗಲಿಲ್ಲ. ಅವನ ದುಡ್ಡಿನ ಅವಶ್ಯಕತೆಗೂ ನನಗೆ ಕಾಟ ಕೊಡದೇ ಇರೋದಕ್ಕೂ ಏನು ಸಂಬಂಧ?’ ಚಿತ್ರಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಶ್ನೆ ಕೇಳಿದಳು.

‘ನೋಡು ನಿನಗೆ ರಮ್ ತಂದುಕೊಟ್ಟು ಐದು ರೂಪಾಯಿ ತಗೋತಾನಲ್ಲಾ? ಅದನ್ನ ಅವನು ಮಜಾ ಮಾಡಕ್ಕೆ ಬಳಸಲ್ಲ. ಮನೆಗೆ ತಗೊಂಡು ಹೋಗ್ತಾನೆ. ಅಬ್ಬಬ್ಬಾ ಅಂದ್ರೆ ಮನೆಗೆ ಹೋಗ್ತಾ ಪಕೋಡನೋ ಇನ್ನೇನೋ ಪಾರ್ಸಲ್ ತಗೊಂಡು ಹೋಗಬಹುದು. ಆದರೆ ಅವನ ಲಕ್ಷ್ಯದಲ್ಲಿ ಇರೋದು ಮನೇನೇ. ಅದೇ ಅವನ ಫೋಕಸ್.

ನಿನಗೆ ಕಾಟ ಕೊಟ್ರೆ ಅಥವಾ ಇನ್ನೊಬ್ಬರಿಗೆ ತೊಂದರೆ ಮಾಡಿದ್ರೆ, ಅವನ್ಗೆ ಎರಡು ಥರಾ ಲಾಸ್ ಆಗುತ್ತೆ. ಒಂದು ಮೇಲ್-ಸಂಪಾದನೆ ನಿಂತು ಹೋಗುತ್ತೆ. ಇನ್ನೊಂದು ಸ್ಕೂಲ್‍ನೋರು ಅವನನ್ನು ಕೆಲಸದಿಂದ ತೆಗೆದು ಹಾಕ್ತಾರೆ. ಆಗ ಸಂಪಾದನೆಯ ಮಾರ್ಗ ದುಸ್ತರವಾಗುತ್ತೆ. ಮಕ್ಕಳ ಓದಿಗೆ ತೊಂದರೆ ಆಗುತ್ತೆ. ಮಕ್ಕಳು ಗೌರ್ಮೆಂಟ್ ಸ್ಕೂಲಿನಲ್ಲಿ ಓದ್ತಾರೆ, ಮಗಳಿಗೆ ಡಾಕ್ಟರ್ ಆಗೋ ಆಸೆ ಇದೆ ಅಂತ ಅವನು ಬಹಳ ಅಭಿಮಾನದಿಂದ ಹೇಳಿಕೊಳ್ತಾ ಇದ್ದ...’

‘ಸರಿ ಬಿಡಿ ಮತ್ಯಾಕೆ ಯೋಚಿಸೋದು. ಹೋಗಿ ನಿಮಗೊಂದು, ನಮಗೆ ಒಂದು ಬಾಟಲು ತರ್ತೀನಿ... ಅವನಿಗೆ ಪಾಪ ಹತ್ ರೂಪಾಯಿ ಸಂಪಾದನೆ ಆಗ್ಲಿ’ ಚಿತ್ರಾ ಎದ್ದಳು.

‘ಅಹಹ ಅದೆಲ್ಲಾ ಬೇಡಮ್ಮ! ನಿನಗೆ ಕುಡಿಯಕ್ಕೆ ಬೇಕು ಅಂದರೆ ಮಾತ್ರ ತಾ. ಅವನಿಗೆ ಐದು ರೂಪಾಯಿ ಹೆಚ್ಚಿಗೆ ಕೊಡಬೇಕಂತ ತರಬೇಡ... ಪಾಪದ ಕೆಲಸ ಮಾಡೋಕೂ ಧಂ ಬೇಕಮ್ಮಾ... ಇನ್ನೊಬ್ರಿಗೆ ಇದರಿಂದ ಉಪಕಾರ ಆಗುತ್ತೆ ಅಂತೆಲ್ಲಾ ತಿಪ್ಪೆ ಸಾರಿಸೋದು ಬೇಡ... ಹಂಗೆ ನೋಡಿದ್ರೆ ಒಬ್ಬ ಕೊಲೆಗಾರ ಕೂಡ ತಾನು ಕೊಲೆ ಮಾಡಿದ ಮನ್‍ಷಾ ಇನ್ಯಾರಿಗೋ ತೊಂದ್ರೆ ಕೊಡ್ತಿದ್ದ ಅಂತ ಹೇಳ್ಕೋಬಹುದಲ್ಲಾ?

ಯಾರಾದ್ರೂ ಒಪ್ತಾರಾ? ಸುಮ್ನೆ ನಿನ್ ಕೆಲಸ ನೀನು ನೋಡ್ಕೋ... ಅವನನ್ನ ನೋಡೋಕೆ ದೇವ್ರಿದಾನೆ’ ಎನ್ನುತ್ತಾ ಅಲ್ಲಿದ್ದ ಮೂರು ಹುಡುಗಿಯರ ಪಕ್ಕಾ ಮಧ್ಯಮ ವರ್ಗದ ಯೋಚನಾಲಹರಿಯನ್ನು ಡೆಮಾಲಿಷ್ ಮಾಡಿದರು.

ಅಲ್ಲವೇ ಮತ್ತೆ? ಯಾರಿಗೋ ‘ಹೆಲ್ಪ್’ ಮಾಡ್ತೀವಂತ ಅಂದುಕೊಳ್ಳೋದು ನಮಗೆ ನಾವು ಮಾಡಿಕೊಳ್ಳುತ್ತಾ ಇರೋ ಮೋಸವಲ್ಲವೇನು? ಯಾವ ಭ್ರಮೆಯಲ್ಲಿ ಬದುಕುತ್ತಿದ್ದೇವೆ ನಾವು? ಭೂಮಿಯ ಮೇಲಿರುವ ಸಕಲ ಜೀವಜಂತುಗಳಿಗೂ ಸ್ವರಕ್ಷಣಾ ಕ್ರಮಗಳು ಗೊತ್ತಿವೆ.

ನಾವಿದ್ದರೂ, ಇಲ್ಲದಿದ್ದರೂ ಇನ್ನೊಬ್ಬರು ಬದುಕೇ ಬದುಕುತ್ತಾರೆ. ಒಂದು ಪಕ್ಷ ಭೂಮಿ ಮೇಲೆ ಅವರ ಟೈಮ್ ಮುಗಿದಿದ್ದರೆ ಯಾವ ಹೋಮ, ಹವನ, ಪೂಜೆ ಪುನಸ್ಕಾರಗಳಿಂದ ಆ ಸಾವನ್ನು ಮುಂದಕ್ಕೆ ಹಾಕಲು ಸಾಧ್ಯವಿದೆ? ನಮ್ಮೊಳಗಿನ ಅಹಂ ನಮ್ಮನ್ನು ಕನಿಷ್ಠ ಮಟ್ಟದಲ್ಲಿಟ್ಟುಕೊಂಡು ಯೋಚಿಸಲು ಬಿಡುವುದೇ ಇಲ್ಲ. ಆದಿ ಶಂಕರರ ಅದ್ವೈತ ಸಿದ್ಧಾಂತ ಹೇಳಿಕೊಟ್ಟ ಬೀಜ ಮಂತ್ರ ‘ಅಹಂ ಬ್ರಹ್ಮಾಸ್ಮಿ’ ಎಂದರೆ ಆತ್ಮವೇ ಪರಬ್ರಹ್ಮ ಎಂದಲ್ಲವೇ?

ಆದರೆ, ಮಹಾನ್ ಮಧ್ಯಮವರ್ಗಕ್ಕೆ ಈ ಮಾತು ಕೇಳಿಸುವ ಬಗೆಯೇ ಬೇರೆ. ‘ಅಹಂ ಬ್ರಹ್ಮಾಸ್ಮಿ’ ಎಂದರೆ ನಾನೇ ಎಲ್ಲವನ್ನೂ ನಡೆಸುವ ದೇವರು... ಅಂತ. ‘ನಮ್ಮಿಂದ ನಾಲ್ಕ್ ಜನಕ್ಕೆ ಉಪಯೋಗ ಆದ್ರೆ ಸಾಕು... ಏನೋ ಸರ್ವೀಸ್ ಮೈಂಡ್ ಇಟ್ಕೊಂಡು ಕೆಲ್ಸ ಮಾಡ್ತಿದೀವಿ’ ಅಂತ ರಾಜಕಾರಣಿಗಳು, ಸ್ಕೂಲು ಪ್ರಿನ್ಸಿಪಾಲರು, ಪ್ರೈವೇಟ್ ಆಸ್ಪತ್ರೆಯ ಆಡಳಿತಾಧಿಕಾರಿಗಳೂ, ಮಠದ ದಿವಾಣರೂ ಹೇಳುತ್ತಿದ್ದರೆ ಅವರ ಮಾತಿಗೂ ಅವರ ಸಾವಿರ-ಲಕ್ಷಗಳ ಡಿಮಾಂಡುಗಳಿಗೂ ಏನಕೇನ ಸಂಬಂಧವೂ ಇಲ್ಲ ಎಂದು ಅರ್ಥವಾಗದಿರುವಷ್ಟು ಭೋಳೆ ಜನವೇನು ನಾವು?

ನಮ್ಮ ಢೋಂಗಿ ‘ಸರ್ವಿಸ್ ಮೈಂಡ್’ ಸಮಾಜಕ್ಕೆ ಎಷ್ಟು ವಿಷ ಜಂತುಗಳನ್ನು ಬಿಡುಗಡೆ ಮಾಡಿದೆ ಎನ್ನುವುದು ನಮ್ಮ ಊಹೆಗೂ ನಿಲುಕಲು ಸಾಧ್ಯವಾಗದಷ್ಟು ಕುರುಡರೆನ್ನುವುದಂತೂ ನಿಜವೇ.

ಮನೆಗೆ ಕೆಲಸಕ್ಕೆ ಬರುವವಳಿಗೆ ತಂಗಳನ್ನು ಕೃಪೆಯಂತೆ ನೀಡುವುದೂ, ಭಿಕ್ಷೆ ಕಾಸು ಕೊಟ್ಟು ಮೂರು ಲೋಕಕ್ಕೂ ಮೀರಿದ ದಾನ ಮಾಡಿದ ಸಮಾಧಾನ ಅನುಭವಿಸುವುದು, ಕಾರಿನಲ್ಲಿನ ದೇವರಿಗೆ ಹತ್ತು ರೂಪಾಯಿಯ ಮಲ್ಲಿಗೆ ಮಾಲೆ ಕೊಂಡು ಹಾಕುತ್ತಾ ಹೂವು ಮಾರುವ ಹುಡುಗ/ಹುಡುಗಿಗೆ ಕಾಯಕಲ್ಪ ಕೊಟ್ಟವರಂತೆ ಭ್ರಮಿಸುವುದೂ, ಸರ್ಕಾರ ಬಡವರಿಗೆ ಕೊಡುತ್ತಿರುವ ಸಬ್ಸಿಡಿಗಳನ್ನು ವಿರೋಧಿಸುತ್ತಲೇ ಕಂಪನಿಯಿಂದ ‘ವೀಕೆಂಡು’ ಬಂದ ಕೂಡಲೇ ಅದ್ಯಾವುದೋ ಹಳ್ಳಿಗೋ ಸ್ಲಮ್ಮಿಗೋ ಹೋಗಿ ಸುಳ್ಳುಪಳ್ಳು ಉಪಕಾರಗಳನ್ನು ಮಾಡಿಬಂದು ಫೇಸ್ ಬುಕ್ಕಿನಲ್ಲಿ ಫೋಟೊ ಹಾಕಿಕೊಂಡು ಸಂಭ್ರಮಿಸುವ ಪೊಳ್ಳು ಜನರಲ್ಲವೇ ನಾವು?

ಉಪಕಾರ ಎನ್ನುವುದು ಆತ್ಮ ಮಾಡಬಯಸುವ ಶುದ್ಧ ಕಾರ್ಯವಲ್ಲ, ಬದಲಿಗೆ ‘ನಾನು’ ಎಂಬ ಅಸ್ತಿತ್ವಕ್ಕೆ ಅಹಂಕಾರದ ಪದರಗಳನ್ನು ಸೇರಿಸುವ ಪರಿ. ‘ಬಡವ್ರಿಗೆ ಫ್ರೀಯಾಗಿ ಏನಾದ್ರೂ ಕೊಟ್ರೆ ಸೋಮಾರಿಯಾಗಲ್ವೇನ್ರಿ? ಮೈ ಬಗ್ಸಿ ದುಡಿಯೋದೇ ಇಲ್ಲ ನನ್ ಮಕ್ಕಳು...ಇನ್ನು ಸರ್ಕಾರದೋರು ಅಕ್ಕಿ, ಹೆಂಡ ಎಲ್ಲವನ್ನೂ ನಮ್ಮ ಟ್ಯಾಕ್ಸ್ ದುಡ್ಡಿನಿಂದ ಕೊಟ್ಟು ಆ ಬಡ್ಡೀ ಮಕ್ಳನ್ನ ಕೆಲಸಕ್ಕೆ ನಾಲಾಯಕ್ ಮಾಡಿಬಿಡ್ತಾರೆ’ ಅನ್ನೋದು ಮಹಾನ್ ಮಧ್ಯಮ ವರ್ಗದ ಅದ್ಭುತ ಚಿಂತನೆ.

ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಎನ್ನುವ ಹೆಸರಿನಲ್ಲಿ ಸರ್ಕಾರಿ ಸ್ಕೂಲುಗಳಿಗೆ ದಾನ ಕೊಡುವುದೂ, ಅಲ್ಲಿಗೆ ಹೋಗಿ ಚಿಕ್ಕ ಪುಟ್ಟ ಕೆಲಸ ಮಾಡುವುದು, ಎಲ್ಲಾ ಫೋಟೊ ತೆಕ್ಕೊಂಡು ಬಂದು ಆಫೀಸಿನಲ್ಲಿ ನೇತು ಹಾಕಿಕೊಂಡು ಸಂಭ್ರಮಿಸುವ ಮಧ್ಯಮ ವರ್ಗೀಯರಿಗೆ ತಮ್ಮ ಕಚೇರಿಯ ಅಸಂಖ್ಯಾತ ಟಾಯ್ಲೆಟ್ಟುಗಳಲ್ಲಿ ಫ್ಲಶ್ ಆಗಿ ಹೋಗುತ್ತಿರುವುದು ಪಕ್ಕದ ಹಳ್ಳಿಗೆ ಸೇರಿದ ನೀರು, ಅಲ್ಲಿ ಪೈರು ಒಣಗುತ್ತಿದೆ, ಜನ ಹನಿ ನೀರಿಗೆ ಸಾಯುತ್ತಿದ್ದಾರೆ ಎನ್ನುವ ಕಿಂಚಿತ್ ಪ್ರಜ್ಞೆಯೂ ಇಲ್ಲದೆ ಸಂಬಳದ ಭ್ರಮೆಯ ದುಡ್ಡಿನಿಂದ ಹುಟ್ಟಿಕೊಂಡ ವಿಸ್ಮೃತಿ ಕಣ್ಣಲ್ಲಿನ ಪೊರೆಯಂತೆ ಬೆಳೆಯುತ್ತಿದೆ.

ಆದರೂ ನಾವು ನಂಬುವುದು, ಬಡವರು ಸೋಮಾರಿಗಳು. ಅದಕ್ಕಾಗೇ ಅವರು ಕಳ್ಳರು. ನಾವು ಮಾತ್ರ ಮೈ ಬಗ್ಗಿಸಿ ದುಡಿಯುತ್ತಿರುವ ಜಗದೋದ್ಧಾರಕರು. ನಾವು ದುಡಿಯುತ್ತಿರುವುದರಿಂದ ರಸ್ತೆಗಳಾಗಿವೆ, ಸರ್ಕಾರಗಳು ನಡೆಯುತ್ತಿವೆ, ಅನ್ನ ತಟ್ಟೆಗೆ ಬೀಳುತ್ತಿದೆ ಅಂತ.

ಹವಾ ನಿಯಂತ್ರಿತ ಆಫೀಸುಗಳ ಸುಖದಲ್ಲಿ ನರಳುವವರಿಗೆ ಬಿಸಿಲಲ್ಲಿ ಉಳುವ ರೈತ, ಮಾರುಕಟ್ಟೆಯ ಶಕ್ತಿಗಳ ಎದುರಿಗೆ ಅವನ ಅಸಹಾಯಕತೆ, ಭೂಮಿಯ ಜೊತೆಗಿನ ರೈತನ ಸಂಬಂಧ ‘ಲ್ಯಾಂಡ್ ವ್ಯಾಲ್ಯೂ’ ಮೀರಿದ್ದು ಎನ್ನುವುದು ಕೇವಲ ಸಿನಿಮಾಗಳಲ್ಲಿ ನೋಡಿ ಭಾವುಕವಾಗಿ ಮರೆತುಬಿಡುವ ವಸ್ತು.

ಈ ಎಲ್ಲ ಭ್ರಮೆಗಳ ಮೊತ್ತ– ನೈತಿಕ ಮತ್ತು ಆರ್ಥಿಕ ಭ್ರಷ್ಟಾಚಾರ. ಎಲ್ಲಾ ಬಡವರೂ ಹೇಗೆ ಸೋಮಾರಿಗಳಲ್ಲವೋ, ಹಾಗೇ ಎಲ್ಲಾ ಶ್ರೀಮಂತರೂ ಬಿಳಿ ಹಣ ಸಂಪಾದಿಸಿದವರಲ್ಲ. ಅದಕ್ಕಾಗಿಯೇ ಹಳೇ ದೇವರುಗಳ ಹುಂಡಿಗಳು ಹಂಡೆಯಾಕಾರ ಆಗುತ್ತಿವೆ, ಹೊಸ ದೇವರುಗಳು ಹುಟ್ಟುತ್ತಿವೆ, ಹೊಸ ಹೆದರಿಕೆಗಳೂ ಮರಿ ಹಾಕುತ್ತಿವೆ. ಬೆಳಗಿನ ಹೊತ್ತು ಸಂಗೀತ ಕಾರ್ಯಕ್ರಮ, ಸಾಹಿತ್ಯ ಚರ್ಚೆ ಆಗುತ್ತಿದ್ದ ಸಮಯದಲ್ಲಿ ಟೀವಿಗಳಲ್ಲೀಗ ಭವಿಷ್ಯ ವಾಣಿಯ ಭರ್ಜರಿ ವಹಿವಾಟು. ಹುಟ್ಟು ಹಾಕುತ್ತಿರುವ ಹೆದರಿಕೆಗಳಿಂದ ಯಾರಿಗಾದರೂ ಲಾಭ ಆಗಲೇ ಬೇಕಲ್ಲ?

ಚಿತ್ರಾ ಹೊಸ ಪೀಳಿಗೆಗೆ ಸೇರಿದ ದುಡ್ಡು ಕಂಡವಳಾದ್ದರಿಂದ ಬಡತನದ ಬಗ್ಗೆ ಅವಳಿಗೆ ಒಂಥರಾ ಆರ್ಥ-ಪ್ರಧಾನ ಅಭಿಪ್ರಾಯವಿತ್ತು. ತಾನು ರಮ್ ಕುಡಿಯಲು ತೊಡಗಬೇಕು ಎನ್ನುವ ಅಂಶ ಹುಟ್ಟಿಸುತ್ತಿದ್ದ ಗಿಲ್ಟ್ ಅನ್ನು ವಾಚ್ ಮ್ಯಾನ್‌ನಿಗೆ ಕೊಡುವ ಐದು ರೂಪಾಯಿ ಮೇಲ್-ಸಂಪಾದನೆಯಲ್ಲಿ, ಅವನ ಮಕ್ಕಳ ಕಲಿಕೆಗೆ ಸಹಾಯ ಮಾಡುತ್ತಿದ್ದೇನೆ ಎನ್ನುವ  ಸಾರ್ಥಕತೆಯ ಭಾವದಲ್ಲಿ ಮುಚ್ಚಿಕೊಳ್ಳಲು ಹೆಣಗುತ್ತಿದ್ದಳು. ಅವಳು ಯಾವ ‘ಪುಣ್ಯ’ವನ್ನು ಛತ್ರಿಯಾಗಿ ಬಳಸಬೇಕಂತ ವಿಚಾರಮಾಡುತ್ತಿದ್ದಳೋ, ಆ ಭಾವನೆಯನ್ನೇ ಸರಳಾ ತಮ್ಮ ಮಾತಿನಿಂದ ಕುಟ್ಟಿ ಕ್ಷಣಮಾತ್ರದಲ್ಲಿ ಧ್ವಂಸ ಮಾಡಿಬಿಟ್ಟಿದ್ದರು.

ಮತ್ತೆ ಹೆಚ್ಚು ಮಾತಾಡದೆ ಚಿತ್ರಾ ಎರಡು ಬಾಟಲಿ ರಮ್ ತರಿಸಲೆಂದೂ, ಆ ಅಪರಾಧದ ಪಾಲನ್ನು ತಾನೊಬ್ಬಳೇ ಹೊರಲಾರದೆ ವಿಜಿಯನ್ನೂ ಜೊತೆಗೆ ಕರೆದುಕೊಂಡು ಹೋದಳು. ಇತ್ತ ಸರಳಾ, ಸೂಸನ್ ಇಬ್ಬರೇ ಉಳಿದರು. ಸೂಸನ್ ತನ್ನ ಅಭ್ಯಾಸಕ್ಕೆ ತಕ್ಕ ಹಾಗೆ ಹುಚ್ಚು ಪ್ರಶ್ನೆ ಕೇಳಿದಳು. ‘ನಿಮ್ಮಮ್ಮ ದುಡಿದದ್ದು ಪಾಪದ ದುಡ್ಡಲ್ವಾ ಆಂಟೀ?’ ಸರಳಾ ಸುಮ್ಮನೆ ಕೂತಿದ್ದರು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.