ADVERTISEMENT

ನಾಳೆಯನ್ನು ಮರೆಯುತ್ತ...

ಪದ್ಮರಾಜ ದಂಡಾವತಿ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಹುಡುಗಿ ಹುಡುಗ ಜತೆಯಾಗಿ ನಡೆದು ಹೊರಟಿದ್ದಾರೆ. ಇಬ್ಬರ ನಡುವೆ ಒಂದು ಬಗೆಯ ಬೆಚ್ಚನೆಯ ಗಾಳಿ ಬೀಸುತ್ತಿದೆ. `ಮುಂದೆ ಏನು ಮಾಡುತ್ತೀ~ ಹುಡುಗಿ ಉಲಿದಳು. `40 ವರ್ಷ ಆಗುವವರೆಗೆ ಕೆಲಸ ಮಾಡುತ್ತೇನೆ. ಹಣ ಗಳಿಸುತ್ತೇನೆ. ನಂತರ ಸುಖವಾಗಿ ಅಡುಗೆ ಮಾಡಿಕೊಂಡು ಇರುತ್ತೇನೆ~ ಎಂದ ಹುಡುಗ. `ನೀನು 40 ವರ್ಷ ಬದುಕದೇ ಇದ್ದರೆ? ಇವೊತ್ತಿಗಾಗಿ ಏನು ಯೋಚನೆ ಮಾಡಿದ್ದೀ~ ಮತ್ತೆ ಅದೇ ಮೃದುವಾದ ಧ್ವನಿಯಲ್ಲಿ ಹುಡುಗಿಯ ಪ್ರಶ್ನೆ ತೇಲಿ ಬಂತು. ಹುಡುಗ ಒಂದು ಕ್ಷಣ ಬೆಚ್ಚಿ ಬಿದ್ದ. ಆ ಪ್ರಶ್ನೆಯನ್ನು ಆತ ಎಂದೂ ಎದುರಿಸಿರಲಿಲ್ಲ. ತಾನೂ ಆ ಪ್ರಶ್ನೆಯನ್ನು ಹಾಕಿಕೊಂಡಿರಲಿಲ್ಲ. ಸದ್ಯದ ಜೀವನವನ್ನು ಹೇಗೆ ಬಾಳುವುದು? ಅದಕ್ಕೆ ಅರ್ಥ ಹೇಗೆ ತುಂಬುವುದು? `ಜಿಂದಗಿ ನಾ ಮಿಲೇಗಿ ದುಬಾರಾ~ ಚಿತ್ರದ ವಸ್ತು ಸದ್ಯದ ಬದುಕು.

ನಾಳೆಯ ಜೀವನ ಇದೆಯೋ ಇಲ್ಲವೋ ಗೊತ್ತಿಲ್ಲ. ಇನ್ನೊಂದು ಜೀವನ ಇದೆ ಎಂದು ನಂಬಲೂ ಸಾಧ್ಯವಿಲ್ಲ. ಈ ಜೀವನ ಮತ್ತೆ ಬರಲಾರದು ಎಂದೇ ನಾವು ಇಂದು ಬದುಕಬೇಕು. ಇದು ಚಿತ್ರದ ಆಶಯ.

ಸಿನಿಮಾ ನೋಡದೆ ಎಷ್ಟೋ ದಿನಗಳಾಗಿತ್ತು. ಗೆಳೆಯರು ಹೇಳಿದರು ಎಂದು `ಜಿಂದಗಿ ನಹಿ ಮಿಲೇಗಿ...~ ನೋಡಲು ಹೋದೆ. ಚಿತ್ರ ಆಳವಾಗಿ ಮನಸ್ಸನ್ನು ಕಲಕಿತು.

ಹಿಂದಿಯ ಪ್ರಖ್ಯಾತ ಗೀತ ರಚನಕಾರ ಜಾವೇದ್ ಅಖ್ತರ್ ಅವರ ಮಗಳು ಝೋಯಾ ಅಖ್ತರ್ ನಿರ್ದೇಶನದ ಚಿತ್ರವಿದು. ಆಕೆಯ   ಎರಡನೇ ಚಿತ್ರ ಕೂಡ ಹೌದು. ಚಿತ್ರದಲ್ಲಿ ಅವಳ ಸೋದರ ಫರ‌್ಹಾನ್ ಅಖ್ತರ್, ಹೃತಿಕ್ ರೋಷನ್, ಅಭಯ್ ಡಿಯೊಲ್ ಮತ್ತು ಬೆಡಗಿ ಕತ್ರಿನಾ ಕೈಫ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಫರ‌್ಹಾನ್, ಹೃತಿಕ್, ಅಭಯ್ ಬಾಲ್ಯ ಸ್ನೇಹಿತರು. ದೊಡ್ಡವರಾದ ಮೇಲೆ ಮೂವರೂ ಎಲ್ಲೆಲ್ಲೊ ನೆಲೆಸಿದ್ದಾರೆ. ಶ್ರೀಮಂತನಾದ ಅಭಯ್‌ಗೆ ಇನ್ನೇನು ಮದುವೆಯಾಗಬೇಕು. ಫರ‌್ಹಾನ್ ಜಾಹೀರಾತು ಲೇಖಕ. ಸ್ಟಾಕ್ ಬ್ರೋಕರ್ ಆಗಿ ಲಂಡನ್‌ನಲ್ಲಿ ನೆಲೆಸಿರುವ ಹೃತಿಕ್‌ಗೆ ಒಂದು ಕ್ಷಣವೂ ಬಿಡುವಿಲ್ಲ. ಆ ಕಿವಿಯಲ್ಲಿ ಒಂದು ಈ ಕಿವಿಯಲ್ಲಿ ಇನ್ನೊಂದು ಮೊಬೈಲ್ ಇಟ್ಟುಕೊಂಡು ಯಾವ ಷೇರಿನಲ್ಲಿ ಎಷ್ಟು ಹಣ ತೊಡಗಿಸಬೇಕು ಎಂದು ಸಲಹೆ ಕೊಡುವುದರಲ್ಲಿಯೇ ಆತನ ದಿನ ಕಳೆದು ಹೋಗುತ್ತದೆ. ಇಂದಿನ ಕಾರ್ಪೊರೇಟ್ ಜಗತ್ತಿನ ಪ್ರತೀಕ ಆತ. ದುಡ್ಡಿನ ಮೋಹದ ಹೃತಿಕ್‌ನನ್ನು  `ಬ್ರಹ್ಮಚಾರಿ ಪಾರ್ಟಿ~ಗೆ ಒಪ್ಪಿಸಲು ಅಭಯ್, ಫರ‌್ಹಾನ್‌ಗೆ ಸಾಕು ಸಾಕಾಗಿ ಹೋಗುತ್ತದೆ. ಮೂವರೂ ಗೆಳೆಯರು ಸೇರಿಕೊಂಡು ಪಾರ್ಟಿ ಮಾಡಲು ಸ್ಪೇನ್ ರಾಜಧಾನಿ ಬಾರ್ಸಿಲೋನಾಕ್ಕೆ ಪ್ರಯಣ ಬೆಳೆಸುತ್ತಾರೆ. ಮೂವರಿಗೂ ಒಂದೊಂದು ಅಭದ್ರತೆ. ಭಯ. ಭಾವನಾತ್ಮಕ ಬಿಕ್ಕಟ್ಟುಗಳು. ತಮ್ಮನ್ನು ಕಾಡುವ `ಭೂತ~ವನ್ನು ಮೀರಿ ಹೊಸ ಉಮೇದಿನೊಡನೆ ಜೀವಿಸುವುದನ್ನು ಈ ಪ್ರವಾಸ ಅವರಿಗೆ ಕಲಿಸುತ್ತದೆ.

ಸಮುದ್ರದ ಆಳದಲ್ಲಿ, ಆಕಾಶದ ಎತ್ತರದಲ್ಲಿ, ಸಾವಿನ ಹಾಗೆ ಬೆನ್ನಟ್ಟಿ ಬರುವ ಗೂಳಿಯ ಓಟದಲ್ಲಿ ಮೂವರೂ ಗೆಳೆಯರು ಹೊಸ ಮನುಷ್ಯರಾಗುತ್ತಾರೆ. ಮೂವರೂ ಗೆಳೆಯರಿಗೆ ಒಂದೊಂದು ಆಸೆ. ಒಬ್ಬೊಬ್ಬ ಗೆಳೆಯನ ಆಸೆಯ ಜತೆಗೆ ಉಳಿದ ಇಬ್ಬರು ಇಷ್ಟವಿರಲಿ ಇಲ್ಲದಿರಲಿ ಸಹಕರಿಸಬೇಕು. ಅಭಯ್‌ಗೆ ಆಳದ ಸಮುದ್ರದ ಜೀವ ಸಂಪತ್ತನ್ನು ಕಣ್ಣಾರೆ ಕಾಣಬೇಕು ಎಂದು ಬಯಕೆ. ಹೃತಿಕ್‌ಗೆ ನೀರು ಎಂದರೆ  ಪ್ರಾಣ ಭಯ. ಜೀವವಾಯು ಇಲ್ಲದೆ  ಸಮುದ್ರದ ಆಳದಲ್ಲಿ ಇಳಿಯುವುದು ಹೇಗೆ? ಈಜಾಡುವುದು ಹೇಗೆ ಎಂದು ಚಿಂತೆ. ಅವನ ಕೈ ಹಿಡಿದು ಆಳದ ಸಮುದ್ರದಲ್ಲಿ ಈಜಾಡಲು ನೆರವಾಗುತ್ತಾಳೆ  ಕತ್ರೀನಾ. ಆಕೆ ಡೈವಿಂಗ್ ಶಿಕ್ಷಕಿ. ಅಂಥ ಚೆಲುವೆಯ ಅಭಯ ಇರುವುದಾದರೆ ಯಾರು ಏನು ಬೇಕಾದರೂ ಮಾಡಬಹುದೇನೋ?! ಬೆನ್ನಿಗೆ ಕಟ್ಟಿಕೊಂಡ ಪ್ರಾಣವಾಯುವಿನ ಸಿಲಿಂಡರ್‌ನಿಂದ ಆಮ್ಲಜನಕವನ್ನು ಹೇಗೆ ಒಳಗೆ  ಎಳೆದುಕೊಳ್ಳಬೇಕು ಎಂದು ಕತ್ರೀನಾ ತನ್ನ ಬಾಯಿಯಲ್ಲಿ ಕೊಳವೆ ಇಟ್ಟುಕೊಂಡು ಅದೇ ಕೊಳವೆಯನ್ನು ಹೃತಿಕ್ ಬಾಯಿಯಲ್ಲಿ ಇಟ್ಟು ಕಲಿಸುತ್ತಾಳೆ! ಸಮುದ್ರದ ಆಳದಲ್ಲಿ ಹೃತಿಕ್‌ಗೆ ದಿವ್ಯದರ್ಶನವಾಗುತ್ತದೆ. ಹೊರಗೆ ಬಂದು ಆತ ದೀರ್ಘವಾಗಿ ಉಸಿರು ಎಳೆದುಕೊಳ್ಳುತ್ತ ಮತ್ತೆ ಮತ್ತೆ ಸಮುದ್ರದ ಆಳದಲ್ಲಿ ಕಂಡ ಚಿತ್ರಗಳನ್ನು ನೆನಪಿಸಿಕೊಳ್ಳುತ್ತಾನೆ. ಆತನ ಜೀವ ಭಯ ಹೊರಟು ಹೋಗಿರುತ್ತದೆ. ಹೃದಯದಲ್ಲಿ ಸಣ್ಣನೆಯ ಚಲನೆ ಶುರುವಾಗಿರುತ್ತದೆ! ಕೆಲವು ದಿನಗಳ ಹಿಂದೆ ಜೋರ್ಡಾನ್‌ಗೆ ಹೋದಾಗ ನಮಗೂ ಇಂಥದೇ ಅನುಭವವನ್ನು ಅಲ್ಲಿನ ಸಂಘಟಕರು ವ್ಯವಸ್ಥೆ ಮಾಡಿದ್ದರು. ಆದರೆ, ನಾವು ಯಾರೂ ಆಳ ಸಮುದ್ರಕ್ಕೆ ಇಳಿದಿರಲಿಲ್ಲ. ಸಮುದ್ರದ ಮೇಲು ಮಟ್ಟದಿಂದಲೇ ವಿಶೇಷ ಕನ್ನಡಕ ಧರಿಸಿ ನೀರಿನ ಆಳವನ್ನು ನೋಡಿದ್ದೆವು. ನಮ್ಮ ಜತೆಗೆ ಇದ್ದ ಒಬ್ಬ ಯುವಕ ನೀರಿನ ಭಯದಿಂದ ಮೈ ಸೆಟೆಸಿ ಅರಚಾಡಿ  ಇನ್ನೇನು ತನ್ನ ಪ್ರಾಣ ಹೋಗಿಯೇ ಬಿಟ್ಟಿತು ಎನ್ನುವಂತೆ ಮೇಲೆ ಏರಿ ಬಂದಿದ್ದ.

ಉಸಿರು ತೆಗೆದುಕೊಳ್ಳುವಾಗ ನನಗೂ ಬಾಯಿಯಲ್ಲಿ ನೀರು ಹೋಗಿ ಗಾಬರಿಯಾಗಿ ನಾನೂ ತಕ್ಷಣ ದೋಣಿಗೆ ಹತ್ತಿ ಬಂದಿದ್ದೆ. ಪ್ರಾಣ ಎಂದರೆ ಎಲ್ಲರಿಗೂ ಎಷ್ಟು ಪ್ರೀತಿ? ಸಾವು ಎಂದರೆ ಎಷ್ಟು ಭೀತಿ? ನಮ್ಮಿಬ್ಬರ ಜತೆಗೂ ಕೈ ಹಿಡಿದು ನೀರಿನ ಆಳ, ಸಮುದ್ರದ ಸಂಪತ್ತು ತೋರಿಸುವ ಹುಡುಗಿ ಇರಲಿಲ್ಲ!  ಅದಕ್ಕೇ ಹಾಗಾಯಿತೋ ಏನೋ?

ಹೃತಿಕ್‌ಗೆ ಆಕಾಶದಲ್ಲಿ 15,000 ಅಡಿ ಎತ್ತರದಿಂದ ಕೆಳಗೆ ಜಿಗಿಯುವ ಆಸೆ. ಫರ‌್ಹಾನ್‌ಗೆ ಅಲ್ಲಿ ಜೀವಭಯ. ಮೊದಲು ಇಬ್ಬರೂ ಗೆಳೆಯರು ವಿಮಾನದಿಂದ ಹೊರಗೆ ಜಿಗಿಯುತ್ತಾರೆ. ಫರ‌್ಹಾನ್ ನಮ್ಮ ನಿಮ್ಮ ಹಾಗೆ, `ಹೊರಗೆ ಜಿಗಿದು ಸತ್ತು ಹೋದರೆ ಏನು ಮಾಡಲಿ~ ಎಂಬ ಭಯದಲ್ಲಿ ನರಳುತ್ತಾನೆ. ಕೊನೆಗೆ ವಿಮಾನದಲ್ಲಿ ಇದ್ದ ಒಬ್ಬ ಈತನನ್ನು ಆಚೆಗೆ ತಳ್ಳುತ್ತಾನೆ. `ಸತ್ತೇ ಹೋದೆ, ಅಯ್ಯೋ~ ಎಂದು ಅರಚುತ್ತ ಫರ‌್ಹಾನ್ ವಿಮಾನದಿಂದ ಹೊರಗೆ ಬೀಳುತ್ತಾನೆ. ಗಾಳಿಯಲ್ಲಿ ತೇಲುತ್ತಾನೆ. ಉಳಿದ ಇಬ್ಬರು ಗೆಳೆಯರಿಗಿಂತ ಆತನೇ ಹೆಚ್ಚು ಸಂಭ್ರಮ ಪಡುತ್ತಾನೆ. ಆನಂದಿಸುತ್ತಾನೆ. ಮೂರನೆಯ ಸಾಹಸ. ಗೂಳಿ ಓಟ. ಆಕಾಶದಿಂದ ಜಿಗಿದರೆ ಸತ್ತು ಹೋದೇನು ಎಂದು ಗಡ ಗಡ ನಡುಗಿದ್ದ ಫರ‌್ಹಾನ್ ಉಳಿದ ಇಬ್ಬರು ಗೆಳೆಯರನ್ನು ಗೂಳಿ ಓಟದಲ್ಲಿ ಭಾಗವಹಿಸಲು ಆಹ್ವಾನಿಸುತ್ತಾನೆ. ಸಣ್ಣ ಸಂದಿಯೊಂದರಲ್ಲಿ ಅಬ್ಬರಿಸುತ್ತ ಬರುವ ಧಾಂಡಿಗ ಗೂಳಿಗಳ ದಾಳಿಯಿಂದ ತಪ್ಪಿಸಿಕೊಂಡು ಎಲ್ಲರೂ ಓಡಿ ಹೋಗಬೇಕು. ಗೂಳಿಯ ತಿವಿತಕ್ಕೆ ಸಿಕ್ಕಿ  ಅದರ ಕಾಲಿನಡಿ ಬಿದ್ದು ಸತ್ತು ಹೋದರೂ ಹೋಗಬಹುದು. ಗೂಳಿಗಿಂತ ಜೋರಾಗಿ, ಪ್ರಾಣಭಯದಿಂದ ಓಡಿ ಬದುಕಿಯೂ ಉಳಿಯಬಹುದು. ಮೂವರೂ ಗೆಳೆಯರು ಗೂಳಿಗಳ ಮುಂದೆ ಮುಂದೆ ಓಡಿ ಬದುಕಿ ಉಳಿಯುತ್ತಾರೆ. ಸಿನಿಮಾದ ಮೊದಲ ಹೆಸರು `ರನ್ನಿಂಗ್ ವಿದ್ ದ ಬುಲ್~ ಎಂದೇ ಇತ್ತಂತೆ. ನಂತರ ಅದನ್ನು `ಜಿಂದಗಿ...~ ಎಂದು ಬದಲಿಸಲಾಯಿತು. ಎರಡೂ ಒಂದೇ ಅರ್ಥ. ಮೂವರೂ ಗೆಳೆಯರಿಗೆ ಸಾವು, ಸಾವಿನಂಥ ಭೀತಿ ಒಂದೊಂದು ರೀತಿಯಲ್ಲಿ ಕಾಡುತ್ತ ಇರುತ್ತದೆ. ಅದನ್ನು ಜಯಿಸಿ ಇಂದಿನ ಬದುಕನ್ನು ಪ್ರೀತಿಸಲು ಕಲಿಯುತ್ತಾರೆ.

ಫರ‌್ಹಾನ್‌ಗೆ ತನ್ನನ್ನು ಹುಟ್ಟಿಸಿ ಬಿಟ್ಟು ಹೋದ ತಂದೆಯನ್ನು ಹುಡುಕಿ ಮತ್ತೆ ಕುಟುಂಬವನ್ನು ಒಂದು ಮಾಡುವ ಬಯಕೆಯೂ ಆಳದಲ್ಲಿ ಇರುತ್ತದೆ. ತಾಯಿಯನ್ನು ಒಂಟಿಯಾಗಿ ಬಿಟ್ಟು ಹೋದ ವ್ಯಕ್ತಿ ಫರ‌್ಹಾನ್‌ನ ಅಸ್ವಸ್ಥತೆಗೆ ಮುಖ್ಯ ಕಾರಣ. ಸ್ಪೇನ್‌ನಲ್ಲಿ ಆತ ತನ್ನ ತಂದೆಯನ್ನು ವಿಚಿತ್ರ ಸನ್ನಿವೇಶದಲ್ಲಿ ಭೇಟಿ ಮಾಡುತ್ತಾನೆ. ಆದರೆ, ಕಲಾವಿದನಾದ ತಂದೆ ಯಾವ ಜವಾಬ್ದಾರಿಯನ್ನೂ ಹೊತ್ತುಕೊಳ್ಳಲು ಸಿದ್ಧನಿರುವುದಿಲ್ಲ.
`ನನ್ನ ಯೌವನದ ದುಡುಕಿನಲ್ಲಿ ನೀನು `ಮೂಡಿ~ಬಿಟ್ಟೆ~ ಎಂಬರ್ಥದ ಮಾತುಗಳನ್ನು ಆಡಿ ಮಗನನ್ನು ಬೀಳ್ಕೊಡುತ್ತಾನೆ. ತಂದೆ `ಸದ್ಯ~ವನ್ನು ಬದುಕಲು ಕಲಿತ ಹಾಗೆಯೇ ಮಗನೂ `ಸದ್ಯ~ದ ವಾಸ್ತವವನ್ನು ಒಪ್ಪಿಕೊಳ್ಳಲು ಕಲಿಯುತ್ತಾನೆ. ಝೋಯಾ ಅಖ್ತರ್ ಒಬ್ಬ ಮಹಿಳೆಯಾದರೂ ಪುರುಷ ಬಾಂಧವ್ಯದ ಈ ಚಿತ್ರವನ್ನು ಸೊಗಸಾಗಿ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಒಂದೇ ಒಂದು ಹಾಡು ಇದೆ. ಉಳಿದ ನಾಲ್ಕು ಪದ್ಯಗಳು. ಆ ಪದ್ಯಗಳನ್ನು ಜಾವೇದ್ ಅಖ್ತರ್ ಅವರೇ ಸನ್ನಿವೇಶಕ್ಕೆ ತಕ್ಕಂತೆ ಓದಿದ್ದಾರೆ. ಹಿನ್ನೆಲೆ ಗಾಯನದ ಬದಲಿಗೆ ಕವಿತೆಗಳ ಓದನ್ನು ಇದೇ ಮೊದಲ ಬಾರಿಗೆ ಬಳಸಿಕೊಂಡುದು ಈ ಚಿತ್ರದಲ್ಲಿಯೇ ಅನಿಸುತ್ತದೆ. ಅದು ಇಡೀ ಚಿತ್ರಕ್ಕೆ ಒಂದು ಕಾವ್ಯದ ಸುಂದರ ಚೌಕಟ್ಟನ್ನು ಹಾಕಿದೆ. ಚಿತ್ರದ ಯಶಸ್ಸಿನ ಶಿಖರದಲ್ಲಿ ಈ ಕವಿತೆಗಳೇ ಎತ್ತರವಾಗಿ ಕುಳಿತುಕೊಂಡಿವೆ.

ಒಬ್ಬ ಅದ್ಭುತ ಕವಿಯಾದ ಜಾವೇದ್ ಅಷ್ಟೇ ಅದ್ಭುತವಾಗಿ ಕವಿತೆಗಳನ್ನು ವಾಚಿಸಿದ್ದಾರೆ. ಹಿಂದಿ ಭಾಷೆಯ ಮಾಧುರ್ಯವೂ ಜತೆಗೆ ಸೇರಿದೆ. ಹರ್ ಪಲ್ ಏಕ್ ನಯಾ ಮೌಸಂ ಹೈ  (ಪ್ರತಿ ಕ್ಷಣವೂ ಒಂದು ಹೊಸ ಹಂಗಾಮು), ಕ್ಯೊಂ ತು ಐಸೆ ಪಲ್ ಖೋತಾ ಹೈ (ಅಂಥ ಕ್ಷಣವನ್ನು ಏಕೆ ಸುಮ್ಮನೆ ಕಳೆದುಕೊಳ್ಳುತ್ತೀ), ದಿಲ್ ಆಖಿರ್ ತು ಕ್ಯೊಂ ರೋತಾ ಹೈ (ಹೃದಯವೇ ಏಕೆ ಕೊನೆಗೂ ನೀನು ಅಳುತ್ತ ಇರುತ್ತೀ)ನಂಥ ಸಾಲುಗಳು ಎದೆಯೊಳಗೆ ಹೊಕ್ಕು ಬಾಣದಂತೆ ತಾಕಿ ಅಲ್ಲೇ ಮುರಿದುಕೊಂಡು ಬಿದ್ದು ಬಿಡುತ್ತವೆ. ಕಾವ್ಯವೇ ಹಾಗೆ. ಅದು ಖುಷಿ ಕೊಡುತ್ತದೆ. ಅದಕ್ಕಿಂತ ಹೆಚ್ಚಿಗೆ ನೋಯಿಸುತ್ತದೆ. ನಿಜ ಅಲ್ಲವೇ? ನಮ್ಮ  ಎಲ್ಲರ ಹೃದಯ ಎಲ್ಲೋ ಆಳದಲ್ಲಿ ಅಳುತ್ತ ಇರುತ್ತದೆ. ಅದರ ಸ್ವಭಾವವೇ ಹಾಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.