ADVERTISEMENT

ರೈತರ ಸಾಲ ಮನ್ನಾ ಮಾಡಬಾರದು... ಆದರೆ...?

ಪದ್ಮರಾಜ ದಂಡಾವತಿ
Published 17 ಜೂನ್ 2017, 20:21 IST
Last Updated 17 ಜೂನ್ 2017, 20:21 IST
ಚಿತ್ರ: ಶಿಲ್ಪಾ ಕಬ್ಬಿಣಕಂತಿ
ಚಿತ್ರ: ಶಿಲ್ಪಾ ಕಬ್ಬಿಣಕಂತಿ   

ರೈತರ ಸಾಲ ಮನ್ನಾ ಮಾಡಬೇಕೇ? ಮಾಡಬಾರದೇ? ಮಾಡಿದರೆ ಏಕೆ ಮಾಡಬೇಕು ಮತ್ತು ಅದರಿಂದ ದೇಶದ ಮತ್ತು ರಾಜ್ಯದ ಆರ್ಥಿಕತೆ ಮೇಲೆ ಆಗುವ ಪರಿಣಾಮಗಳು ಏನು? ದೇಶ ಮತ್ತು ರಾಜ್ಯದ ಆರ್ಥಿಕತೆ ಮೇಲೆ ಏನಾದರೂ ಪರಿಣಾಮ ಆಗಲಿ, ರೈತರಿಗೆ ಒಳ್ಳೆಯದು ಆಗುತ್ತದೆಯೇ? ರೈತರ ಸಾಲ ಮನ್ನಾ ಮಾಡಬೇಕು ಎಂಬ ಪ್ರಶ್ನೆ ಚುನಾವಣೆ ಬರುವ ಕಾಲದಲ್ಲಿಯೇ ಏಕೆ ಹುಟ್ಟಿಕೊಳ್ಳುತ್ತದೆ? ಸಾಲ ಮನ್ನಾ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕರೇ ಏಕೆ ಧ್ವನಿ ಎತ್ತುತ್ತಾರೆ?

ಇದು ಒಂದು ದ್ವಂದ್ವ, ಬಹುಶಃ ಎಂದೂ ಬಗೆಹರಿಸಲಾಗದ ದ್ವಂದ್ವ. ರಾಜ್ಯದ ಸ್ಥಿತಿಯನ್ನೇ ತೆಗೆದುಕೊಳ್ಳುವುದಾದರೆ  ಕಳೆದ ಮೂರು ವರ್ಷಗಳಿಂದ ಇಲ್ಲಿ ಸರಿಯಾಗಿ ಮಳೆ ಆಗಿಲ್ಲ. ಬಿತ್ತಿದ ಯಾವ ಬೆಳೆಯೂ ಕೈಗೆ ಬಂದಿಲ್ಲ. ಈ ಸಾರಿಯೂ ಹೇಗೋ ಏನೋ ಎಂದು ಇನ್ನೂ ಮಳೆಗಾಲ ಆರಂಭವಾಗುವ ಮುನ್ನವೇ ಅನಿಸುತ್ತಿದೆ. ‘ಕಷ್ಟದಲ್ಲಿ ಇರುವ ರೈತನ ಸಾಲ ಮನ್ನಾ ಮಾಡಿದರೆ ಆತ ಬದುಕುತ್ತಾನೆ’ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಈ ಒತ್ತಾಯದ ಮುಂಚೂಣಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಇದ್ದಾರೆ. ಅವರ ಕಾಳಜಿ ನೈಜವಾಗಿರಬಹುದು ಅಥವಾ ಮುಂದಿನ ಚುನಾವಣೆಯ ಮೇಲೆ ಕಣ್ಣು ಇಟ್ಟುದೂ ಆಗಿರಬಹುದು.

ರಾಜ್ಯದಲ್ಲಿ ರೈತರು ಮಾಡಿರುವ ಸಾಲ ಒಂದು ಅಥವಾ ಎರಡು ಕೋಟಿ ಅಲ್ಲ. ಅದು ₹50,000 ಕೋಟಿ ಮೀರುವಷ್ಟು ಇದೆ. ಇದರಲ್ಲಿ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‌ ಸಾಲಗಳೆರಡೂ ಸೇರಿವೆ. ಅಷ್ಟು ಸಾಲ ಮನ್ನಾ ಮಾಡಿದರೆ ಇಡೀ ರಾಜ್ಯದ ಆಯವ್ಯಯವೇ ಬುಡಮೇಲಾಗಿ ಬಿಡುತ್ತದೆ ಎಂಬ ಅಂಜಿಕೆ ಹಣಕಾಸು ಖಾತೆಯನ್ನೂ ನಿರ್ವಹಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ. ಅದಕ್ಕೇ ಅವರು ಕೇಂದ್ರದ ಕಡೆಗೆ ಬೆರಳು ತೋರಿಸುತ್ತಿದ್ದರು. ಈಗ ಕೇಂದ್ರದ ಹಣಕಾಸು ಸಚಿವರೂ, ‘ಸಾಲ ಮನ್ನಾ ಮಾಡುವುದು ಏನಿದ್ದರೂ ನಿಮ್ಮ ಕರ್ಮ, ಅದಕ್ಕೆ ಅಗತ್ಯ ಸಂಪನ್ಮೂಲ ಕ್ರೋಡೀಕರಿಸಿಕೊಳ್ಳುವುದು ಕೂಡ ನಿಮ್ಮ ಹಣೆಬರಹ’ ಎಂದು ಹೇಳಿ ಕೈ ತೊಳೆದು ಕೊಂಡಿದ್ದಾರೆ.

ADVERTISEMENT

ಆದಾಗ್ಯೂ ನೆರೆಯ ಮಹಾರಾಷ್ಟ್ರದಲ್ಲಿ ರೈತರ ಸಾಲ ಮನ್ನಾ ಮಾಡುವ ನಿರ್ಣಯ ಹೊರಬಿದ್ದಿದೆ.  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೂ ಇದೇ ತೀರ್ಮಾನ ಪ್ರಕಟಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಇದೇ ಕಾರಣಕ್ಕಾಗಿ ರೈತರು ಅಶಾಂತರಾಗಿ ಬೀದಿಗಿಳಿದು ಹೋರಾಡಿ ಪ್ರಾಣ ಕಳೆದುಕೊಂಡಿದ್ದಾರೆ. ಇವೆಲ್ಲ ರಾಜ್ಯದ ಶಾಸಕರ ಮೇಲೂ ಪರಿಣಾಮ ಬೀರಿವೆ. ಮುಂದಿನ ಚುನಾವಣೆ ಎದುರಿಸುವುದಕ್ಕಿಂತ ಮುಂಚೆ ರಾಜ್ಯದ ರೈತರ ಸಾಲವನ್ನೂ ಮನ್ನಾ ಮಾಡಬೇಕು ಎಂದು ಆಡಳಿತ ಪಕ್ಷದ ಶಾಸಕರೇ ಕೂಗು ಹಾಕುತ್ತಿದ್ದಾರೆ. ಅದರಲ್ಲಿ ಆಶ್ಚರ್ಯ ಪಡುವಂಥದೇನೂ ಇಲ್ಲ. ವಿಧಾನಸಭೆಯಲ್ಲಿ ಸಚಿವ ರಮೇಶಕುಮಾರ್‌ ಅವರು  ಶುಕ್ರವಾರ ಇದೇ ಮಾತನ್ನು  ಪರೋಕ್ಷವಾಗಿ ಹೇಳಿದ್ದಾರೆ. 

ಚುನಾವಣೆ ಕಾಲದಲ್ಲಿ ಇಂಥ ಒಂದು ಆಮಿಷವನ್ನು ರೈತರಿಗೆ ಒಡ್ಡುವುದು ಸಾಮಾನ್ಯ.  ಸಾಲ ಮನ್ನಾ ಮಾಡಿದ್ದರ ಫಲ ಆ ಪಕ್ಷಕ್ಕೇ ಸಿಗುತ್ತದೆಯೇ? ಗೊತ್ತಿಲ್ಲ. ಅದರ ಹೊರೆಯನ್ನಂತೂ ಮುಂದೆ ಬರುವ ಸರ್ಕಾರ ಭರಿಸಬೇಕಾಗುತ್ತದೆ. ಇಂಥ ದೊಡ್ಡ  ಸಾಲಮನ್ನಾಗಳು ಆಯವ್ಯಯದ ಕೊರತೆಯನ್ನು ಬಹುದೊಡ್ಡ  ಪ್ರಮಾಣದಲ್ಲಿ ಹೆಚ್ಚಿಸುತ್ತವೆ ಮತ್ತು ಸರ್ಕಾರದ ಆರ್ಥಿಕ ಶಕ್ತಿಯನ್ನು ಕುಂದಿಸುತ್ತ ಹೋಗುತ್ತವೆ ಎಂಬುದರಲ್ಲಿ ಎರಡು ಮಾತು ಇರಲಾರದು.
ತಜ್ಞರು ಹೇಳುವ ಹಾಗೆ, ರೈತರ ಸಾಲ ಮನ್ನಾ ಮಾಡುವುದು ಕೆಟ್ಟ ರಾಜಕೀಯ ಮತ್ತು ಕೆಟ್ಟ ಆರ್ಥಿಕತೆ.

ಕೆಟ್ಟ  ರಾಜಕೀಯ ಏಕೆ ಎಂದರೆ ರೈತರನ್ನು ನೆಪವಾಗಿ ಇಟ್ಟುಕೊಂಡು ಎಲ್ಲ ಪಕ್ಷಗಳು ಈ ಆಟ ಆಡುತ್ತವೆ. ಅದು ಯಾವುದೇ ಇರಲಿ, ವಿರೋಧ ಪಕ್ಷವೇ ಮೊದಲು ಈ ಕೂಗನ್ನು ಹಾಕುತ್ತದೆ. ಕೊನೆಗೆ ಆಡಳಿತ ಪಕ್ಷದವರೂ ಧ್ವನಿಗೂಡಿಸುತ್ತಾರೆ. ಅಂತಿಮವಾಗಿ ಸರ್ಕಾರ ನಡೆಸುವವರು ಒಂದು ಹೊಣೆಗೇಡಿ ತೀರ್ಮಾನ ತೆಗೆದುಕೊಂಡು ಹೊರಟು ಹೋಗುತ್ತಾರೆ. ಅದು ಏಕೆ ಹೊಣೆಗೇಡಿ ಎಂದರೆ ಇಂಥ ಮನ್ನಾಗಳಿಂದ ಒಟ್ಟಾರೆ ಆರ್ಥಿಕತೆ ಮೇಲೆ ಏನು ಪರಿಣಾಮ ಆಗುತ್ತದೆ ಎಂಬುದಕ್ಕೆ ಅವರು ಉತ್ತರದಾಯಿ ಆಗಿರುವುದಿಲ್ಲ. ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದಲ್ಲಿ ಇದ್ದವರು ಕೇವಲ ಚುನಾವಣೆ  ಮೇಲೆ ಕಣ್ಣು ಇಟ್ಟು ಇಂಥ ಕೂಗು ಹಾಕುತ್ತಾರೆ. ಅವರಿಗೆ ದೂರದೃಷ್ಟಿ ಎಂಬುದು ಇರುವುದಿಲ್ಲ. ಹಾಗೆ ನೋಡಿದರೆ  ರೈತರಿಗೆ ನಿಜವಾಗಿಯೂ ಒಳ್ಳೆಯದು ಮಾಡಬೇಕು ಎಂದು ಅವರಿಗೆ ಅನಿಸುತ್ತ ಇರುತ್ತದೆ ಎಂಬುದೂ ಅನುಮಾನಾಸ್ಪದವೇ? ಏಕೆಂದರೆ ಸಾಲ ಅಥವಾ ಬಡ್ಡಿ ಮನ್ನಾದಂಥ ಉಪಕ್ರಮಗಳೆಲ್ಲ ದೀರ್ಘಾವಧಿಯ ಪರಿಹಾರಗಳಲ್ಲ. ಕೇವಲ ತತ್‌ಕ್ಷಣದ ಪರಿಹಾರಗಳು.

‘ಈಗ ರೈತರ ಸಾಲ ಮರುಪಾವತಿ ಮಾಡಬೇಕಾಗಿದೆ. ಅವರಿಗೆ ಒಂದಿಷ್ಟು ಸಹಾಯ ಮಾಡೋಣ’ ಎಂಬ ಅಲ್ಪತೃಪ್ತಿಯ ಮಾತುಗಳನ್ನು ಬಿಟ್ಟರೆ ಕಾಲಾಂತರದಿಂದ ರೈತ ಎದುರಿಸುತ್ತಿರುವ ಸಂಕಟಗಳನ್ನು ಪರಿಹರಿಸುವ ಕ್ರಮಗಳನ್ನು  ಯಾವ ರಾಜಕಾರಣಿಯೂ ಅಥವಾ ಯಾವ ರಾಜಕೀಯ ಪಕ್ಷವೂ  ತೆಗೆದುಕೊಂಡಿಲ್ಲ.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆಂದೇ ಪ್ರತ್ಯೇಕ ₹85,000 ಕೋಟಿ ಗಾತ್ರದ  ಆಯವ್ಯಯ ಮಂಡಿಸಿದರು. ಅದರಿಂದ, ರೈತರಿಗೆ ವಿಶೇಷ ಪ್ರಯೋಜನವೇನೂ ಆದಂತೆ ಕಾಣಲಿಲ್ಲ.  ಈಗ ಅವರೇ ಹೇಳುತ್ತಿರುವ ಹಾಗೆ ರೈತರು ಸಾಲದ ಬಲೆಯಲ್ಲಿ ಸಿಲುಕಿಕೊಂಡು ವಿಲ ವಿಲ ಒದ್ದಾಡುತ್ತಿದ್ದಾರೆ. ನೇಣಿಗೆ ಕೊರಳು ಕೊಡುತ್ತಿದ್ದಾರೆ.

ರೈತರ ಸಂಕಷ್ಟದ ಮೂಲ ಎಲ್ಲಿದೆ? ಹಲವರು ಹೇಳುವ ಪ್ರಕಾರ 1960–70ರ ದಶಕದ ಹಸಿರು ಕ್ರಾಂತಿಯಲ್ಲಿಯೇ ಇದೆ. ಕೃಷಿಯುತ್ಪನ್ನದಲ್ಲಿ ಸ್ವಾವಲಂಬಿಯಾಗಬೇಕು ಎಂಬ ಧಾವಂತದಲ್ಲಿ ಆಗಿನ ಸರ್ಕಾರ ಹಾಕಿಕೊಂಡ ಮಹತ್ವಾಕಾಂಕ್ಷಿ ಯೋಜನೆ ದೂರಗಾಮಿಯಾಗಿ ರೈತನಿಗೆ ಅನುಕೂಲ ಆಗಲಿಲ್ಲ. ಹಸಿರು ಕ್ರಾಂತಿ ಸಮಯದಲ್ಲಿ ಬರೀ ಭತ್ತ ಮತ್ತು ಗೋಧಿ ಬೆಳೆಯಲು ಮಾತ್ರ ಒತ್ತು ಸಿಕ್ಕಿತು. ಹುಲುಸಾಗಿ ಗೊಬ್ಬರ, ನೀರು ಹಾಕಿ ಕಡಿಮೆ ಅವಧಿಯಲ್ಲಿ ಪೀಕು ತೆಗೆದ ರೈತರು ಭೂಮಿಯ ಫಲವತ್ತತೆಯ ಮೇಲೆ ಆಗುವ ದುಷ್ಪರಿಣಾಮಗಳ ಕಡೆಗೆ ಗಮನ ಹರಿಸಲಿಲ್ಲ. ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಸಂಪೂರ್ಣವಾಗಿ ಬಿಟ್ಟು ಬಿಟ್ಟರು. ಹೆಚ್ಚು ಹೆಚ್ಚು ಗೊಬ್ಬರ ಹಾಕಿ, ಹೆಚ್ಚು ಹೆಚ್ಚು ನೀರು ಬಿಟ್ಟು ಹೆಚ್ಚು ಹೆಚ್ಚು ಭತ್ತ ಮತ್ತು ಗೋಧಿ ಬೆಳೆದರು. ಜೋಳ, ಎಣ್ಣೆ ಕಾಳು, ಬೇಳೆಕಾಳು  ಬೆಳೆಯುವುದನ್ನು ಕಡಿಮೆ ಮಾಡಿದರು. ನಿಜ, ಅವರೂ ಎಲ್ಲರ ಹಾಗೆ ಕೈಯಲ್ಲಿ ನಾಲ್ಕು ಕಾಸು ಮಾಡಿಕೊಳ್ಳಲು ಹೊರಟರು. ಆರಂಭದಲ್ಲಿ ಅವರ ಕೈಗೆ ನಾಲ್ಕು ಕಾಸು ಸಿಕ್ಕುದೂ ನಿಜ. ಕ್ರಮೇಣ ಅದು ಭ್ರಮೆಯ ದೊಡ್ಡ ಬುರುಗಾಯಿತು.

ಈಗ ಹೊಲದಲ್ಲಿ ಸಮೃದ್ಧವಾಗಿ ಪೀಕು ಬರುವುದೇ ತಡ ಬೆಲೆಗಳು ಬಿದ್ದು ಹೋಗುತ್ತವೆ. ಬೆಲೆಗಳು ಎಷ್ಟು ಬೀಳುತ್ತವೆ ಎಂದರೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರುವುದು ಕೂಡ ಆತನಿಗೆ ಲುಕ್ಸಾನು ಎನಿಸುತ್ತದೆ. ಕೋಲಾರದಲ್ಲಿ ಟೊಮೆಟೊ ಬೀದಿಗೆ ಬಂದು ಬೀಳುವುದು ಈ ಕಾರಣಕ್ಕಾಗಿ. ಹಾಸನದಲ್ಲಿ ಮೆಣಸಿನಕಾಯಿ ಹೀಗೆಯೇ ಬೀದಿಗೆ ಬಂದು ಬೀಳುತ್ತದೆ. ಹುಬ್ಬಳ್ಳಿಯಲ್ಲಿ ಈರುಳ್ಳಿ, ಬದನೆಕಾಯಿಗೆ ಇದೇ ಗತಿಯಾಗುತ್ತದೆ.

ಹಾಗಾದರೆ ಇಷ್ಟು ವರ್ಷಗಳಲ್ಲಿ ಸುಸ್ಥಿರ ಎನಿಸುವ ಒಂದು ಕೃಷಿ ಪದ್ಧತಿಯನ್ನು ಬೆಳೆಸಲು ನಮಗೆ ಏಕೆ ಆಗಲಿಲ್ಲ? ಬೇಡಿಕೆ ಮತ್ತು ಪೂರೈಕೆ ನಡುವೆ ಒಂದು ಸಮತೋಲ ಏಕೆ ಏರ್ಪಡಲಿಲ್ಲ? ವಿತರಣೆ ಮತ್ತು ಬೆಲೆ ನಡುವೆ ನ್ಯಾಯದ ಒಂದು ತಕ್ಕಡಿ ಏಕೆ ನಿರ್ಮಾಣವಾಗಲಿಲ್ಲ? ಯಾವಾಗ ಏನು ಬೆಳೆಯಬೇಕು, ಬೆಳೆದ ಬೆಳೆಯನ್ನು ಎಲ್ಲಿ ಸಂಗ್ರಹಿಸಿ ಇಡಬೇಕು, ಭೂಮಿಯನ್ನು ಹೇಗೆ ನಿರ್ವಹಣೆ ಮಾಡಬೇಕು, ಹಿಡುವಳಿಗಳು ಎಷ್ಟು ಇರಬೇಕು ಮತ್ತು ಬೆಳೆಯುವ ಭೂಮಿಗೆ ಎಷ್ಟು ನೀರು ಬೇಕು, ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಎಂದರೆ ಎಷ್ಟು ಹಾಗೂ  ಎಲ್ಲ ಉತ್ಪನ್ನಗಳಿಗೆ ಅವರವರೇ ಬೆಲೆ ನಿಗದಿ ಮಾಡಬಹುದಾದರೆ ರೈತ ಮಾತ್ರ ಅದನ್ನು ಏಕೆ ಮಾಡಲಾರ?... ಇಂಥ ಪ್ರಶ್ನೆಗಳನ್ನು ನಮ್ಮ ಸರ್ಕಾರಗಳು ಯಾವಾಗಲಾದರೂ ಹಾಕಿಕೊಂಡು ಉತ್ತರ ಹುಡುಕಲು ಪ್ರಯತ್ನ ಮಾಡಿದ್ದು ನಮಗೆ ಗೊತ್ತಿದೆಯೇ? ಮಾಡಿದ್ದರೆ ರೈತ ಏಕೆ ಸಾಲದ ಉರುಳಲ್ಲಿ ಸಿಲುಕಿದ?

ಇನ್ನೂ ಆಶ್ಚರ್ಯ ಎಂದರೆ ರೈತನ ಉತ್ಪನ್ನಗಳ ಬೆಲೆ ಏರತೊಡಗಿದ ಕೂಡಲೇ ಸರ್ಕಾರ ಗಡಗಡ ನಡುಗತೊಡಗುತ್ತದೆ. ಉಳಿದ ಯಾವ ಉತ್ಪನ್ನಗಳ ಬೆಲೆ ಏರಿದರೂ ತನಗೆ ಏನೂ ಸಂಬಂಧವಿಲ್ಲ ಎನ್ನುವಂತೆಯೇ ಅದು ಇರುತ್ತದೆ.  ಈರುಳ್ಳಿಯ ಬೆಲೆ ಏರಿತು ಎಂದರೆ ಒಂದು ಸರ್ಕಾರ ಆಹುತಿಯಾಯಿತು ಎಂದೇ ಅರ್ಥ. ನಿಮಗೆ ನೆನಪು ಇರಬಹುದು, ದೆಹಲಿಯಲ್ಲಿ ಸುಷ್ಮಾ ಸ್ವರಾಜ್‌ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡುದು ಈರುಳ್ಳಿ ಬೆಲೆ ಏರಿಕೆಯಿಂದಲೇ! ಯುಪಿಎ–2 ಸರ್ಕಾರದಲ್ಲಿಯೂ ಈರುಳ್ಳಿ ಬೆಲೆ ಏರಿಕೆ ಆಗಿನ ಕೃಷಿ ಸಚಿವ ಶರದ್‌ ಪವಾರ್‌ ಅವರನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು. ಕಾರಿನ ಬೆಲೆ, ಕೂಲರ್‌ ಬೆಲೆ ಏರಿದ್ದರಿಂದ ಯಾವುದಾದರೂ ಸರ್ಕಾರ ಬಿದ್ದುದು ನೆನಪು ಇದೆಯೇ? ಏಕೆ ಹೀಗೆ? ರೈತನ ಉತ್ಪನ್ನಗಳ ಬೆಲೆ ಏರಬಾರದು ಎಂಬ ನಿಗೂಢ ಹುನ್ನಾರದಲ್ಲಿ ನಾವು ಎಲ್ಲರೂ ಭಾಗಿಯಾಗಿದ್ದೇವೆ ಎಂದು ಅನಿಸುವುದಿಲ್ಲವೇ? ಹಾಗಾದರೆ, ಈ ದೇಶದ ಆರ್ಥಿಕತೆಯ ಬೆನ್ನು ಮೂಳೆ ಒಕ್ಕಲುತನ ಎಂದೆಲ್ಲ ಹೇಳುವುದು ಶುದ್ಧ ಬೊಗಳೆಯೇ?

ಮತ್ತೆ, ಇಷ್ಟೆಲ್ಲ ಕಷ್ಟದಲ್ಲಿ ಇರುವ ರೈತರ ಸಾಲ ಮನ್ನಾ ಮಾಡಬಾರದೇ? ಮಾಡಬಹುದು. ಒಂದು ಸಾರಿ ಮಾಡಬಹುದು. ಎರಡು ಸಾರಿ ಮಾಡಬಹುದು. ಮೂರು ಸಾರಿ ಮಾಡಬಹುದು. ಅದನ್ನೇ ರೂಢಿ ಮಾಡಿದರೆ? 2008ರಲ್ಲಿ ಯುಪಿಎ ಸರ್ಕಾರ ರೈತರ  ₹60,000 ಕೋಟಿ ಸಾಲ ಮನ್ನಾ ಮಾಡಿತು. ಮನಮೋಹನಸಿಂಗ್ ಅವರಂಥ ಆರ್ಥಿಕ ತಜ್ಞರು ತೆಗೆದುಕೊಂಡ ನಿರ್ಧಾರವದು. ಅದು ಇಡೀ ದೇಶಕ್ಕೆ ಅನ್ವಯಿಸಿ ತೆಗೆದುಕೊಂಡ ತೀರ್ಮಾನ. ಈಗ ನಮ್ಮ ರಾಜ್ಯದ ರೈತರು ಮಾಡಿರುವ ಸಾಲವೇ ₹50,000 ಕೋಟಿಗಿಂತ ಮಿಗಿಲು. ಆಗ ಕೇಂದ್ರ ತೆಗೆದುಕೊಂಡ ತೀರ್ಮಾನ ಒಟ್ಟು ದೇಶದ ಅರ್ಥ ವ್ಯವಸ್ಥೆ ಮೇಲೆ ಭಾರಿ ದುಷ್ಪರಿಣಾಮ ಮಾಡಿತ್ತು ಎಂದು ವಿಶ್ಲೇಷಿಸಲಾಗಿತ್ತು. ಈಗ ಅದೇ ಅಂಜಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸುತ್ತಿದ್ದಾರೆ.

ಕಾಲ ಕಳೆದಂತೆ ರೈತರ ಸಾಲದ ಹೊರೆ ಕಡಿಮೆಯೇನೂ ಆಗುತ್ತಿಲ್ಲ. ಬದಲಿಗೆ ಅಗಾಧವಾಗಿ ಬೆಳೆಯುತ್ತಿದೆ ಎಂಬ ಒಂದು ಸುಳಿವೂ ಇಲ್ಲಿ ಇದೆ. ಅದು ನಿಜ ಕೂಡ. ಸಾಲ ಮನ್ನಾಗಳು ಸಾಲಗಾರರು ಸುಸ್ತಿದಾರ ಆಗಲು ಪ್ರೇರಣೆ ನೀಡುತ್ತವೆಯೇ ಹೊರತು ಸಾಲ ಮರುಪಾವತಿ ಮಾಡಲು ಅಲ್ಲ. ಇಂದಲ್ಲ ನಾಳೆ ಸಾಲ ಮನ್ನಾ ಆಗುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಇರುವ ರೈತ ಮರುಪಾವತಿ ಮಾಡಲು ಹೋಗುವುದಿಲ್ಲ. ಕಾಲಕ್ಕೆ ತಕ್ಕಂತೆ ಸಾಲ ಮರುಪಾವತಿ ಮಾಡುವುದು ಜಾಣತನವಲ್ಲ ಎಂದು  ‘ಮನ್ನಾ ರಾಜಕೀಯ’ ಅತನಿಗೆ ಮನವರಿಕೆ ಮಾಡಿಬಿಟ್ಟಿದೆ! ರೈತರನ್ನು ಮನುಷ್ಯರಾಗಿ ನೋಡದೇ ಮತವಾಗಿ ನೋಡುತ್ತ ಬಂದಿರುವ ರಾಜಕಾರಣದ ಫಲಶ್ರುತಿ ಇದು.  ಒಟ್ಟು ಕೃಷಿ ವ್ಯವಸ್ಥೆಯಲ್ಲಿ ಇರುವ ಲೋಪಗಳನ್ನು ಕಂಡುಕೊಂಡು ಅದನ್ನು ಸರಿಪಡಿಸುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕಿತ್ತು. ಅದು ದೂರಗಾಮಿಯಾಗಿ ರೈತರಿಗೆ ಅನುಕೂಲವಾಗುತ್ತಿತ್ತು. ರಾಜಕಾರಣಿಗಳಿಗೆ ಅದೆಲ್ಲ ದೂರದ ಮತ್ತು ಕಷ್ಟದ ದಾರಿ ಎನಿಸುತ್ತದೆ. ಹತ್ತಿರದ ದಾರಿ ಎಂದರೆ ಸಾಲ ಮನ್ನಾ ಮಾಡುವುದು ಅಥವಾ ಮಾಡಬೇಕು ಎಂದು ಆಗ್ರಹಿಸುವುದು. ಚುನಾವಣೆಯಲ್ಲಿ ಹತ್ತಿರದ ದಾರಿಗಳಿಗೇ ಯಾವಾಗಲೂ ಮೊರೆ ಹೋಗುವುದು.

ಹಾಗಾದರೆ ರೈತರ ಸಾಲ ಮನ್ನಾ ಮಾಡಬಾರದೇ? ಮಾಡಬಾರದು ಎಂದು ಹೇಳುವವರ ಧ್ವನಿ ಈಗ ಕ್ಷೀಣವಾಗುತ್ತಿದೆ. ಅದಕ್ಕೆ ಕಾರಣವಿದೆ. ಸಿಕ್ಕ ಸಿಕ್ಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹತ್ತಿರ ಹತ್ತಿರ ಹತ್ತು ಸಾವಿರ ಕೋಟಿ ರೂಪಾಯಿ ಸಾಲ ಮಾಡಿರುವ ವಿಜಯ್‌ ಮಲ್ಯ ಹಾಯಾಗಿ ಹಾರಿ ಹೋಗಿ ಲಂಡನ್ನಿನಲ್ಲಿ ಇಳಿದಿದ್ದಾರೆ. ಅವರು ಒಬ್ಬರೇ ಮಾಡಿರುವ ಸಾಲಕ್ಕೆ ಕರ್ನಾಟಕದ ಎಲ್ಲ ರೈತರು ಸೇರಿಕೊಂಡು ಸಹಕಾರ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಸಮವಾಗಿದೆ! ಮಲ್ಯ ವಾಪಸು ಭಾರತಕ್ಕೆ ಬಂದು ಸಾಲ ಮರುಪಾವತಿ ಮಾಡುತ್ತಾರೆ ಎಂದು ಯಾರಿಗೂ ಭರವಸೆ ಇಲ್ಲ. ಕೇಂದ್ರ ಹಣಕಾಸು ಸಚಿವರು, ರೈತರ ಸಾಲ ಮನ್ನಾ ಮಾಡಿದರೆ ನೀವೇ ಅದರ ಹೊರೆ ಹೊತ್ತುಕೊಳ್ಳಬೇಕು ಎಂದು ರಾಜ್ಯಗಳಿಗೆ ತಾಕೀತು ಮಾಡುತ್ತಾರೆ. ಮಲ್ಯ ಮಾಡಿರುವ ಸಾಲಕ್ಕೆ ಅವರು ಯಾರನ್ನು ಹೊಣೆ ಮಾಡುತ್ತಾರೆ?

ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರ ಪ್ರಕಾರ, ‘ರೈತರ ಸಾಲ ಮನ್ನಾ ಮಾಡುವುದು ಕೆಟ್ಟ ರಾಜಕೀಯ ಮತ್ತು ಕೆಟ್ಟ ಆರ್ಥಿಕತೆ’ ಎನ್ನುವುದಾದರೆ ಮಲ್ಯ ಅವರಂಥ ಉದ್ಯಮಿಗಳ ಸಾಲದ ವಿಚಾರ ಏನು?  ಉಕ್ಕು, ವಿದ್ಯುತ್ತು, ಜವಳಿ ಮತ್ತು ಮೂಲಸೌಕರ್ಯಗಳ ನಿರ್ಮಾಣದಲ್ಲಿ ತೊಡಗಿರುವ ಬೃಹತ್‌ ಉದ್ಯಮಿಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಸಾಲವೇ ಅಲ್ಲವೇ ಮರುಪಾವತಿ ಆಗದೇ ‘ಕೆಟ್ಟ ಸಾಲ’ ಎಂದು ಹೆಸರು ಮಾಡಿರುವುದು?

ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ತೀರಾ ಈಚಿನ ಅಧ್ಯಕ್ಷರಾಗಿದ್ದ ಕೆ.ವಿ.ಥಾಮಸ್‌ ಅವರು ಕೊಟ್ಟ  ವರದಿ ಪ್ರಕಾರ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ಬಾಕಿ ಸಾಲದ (ಎನ್‌ಪಿಎ) ಮೊತ್ತ ₹ 6.8 ಲಕ್ಷ ಕೋಟಿ! ಅದರಲ್ಲಿ ಶೇಕಡ 70ರಷ್ಟು ಸುಸ್ತಿ ಸಾಲ ಭಾರಿ ಉದ್ಯಮಿಗಳದು. ರೈತರು ಉಳಿಸಿಕೊಂಡಿರುವ ಸಾಲ ಶೇಕಡ 1ರಷ್ಟು ಮಾತ್ರ. ರೈತರ ಸಾಲಕ್ಕೆ ಅವರ ಹೊಲವನ್ನು, ಮನೆಯನ್ನು, ಪಾತ್ರೆಪಗಡೆಗಳನ್ನು ಜಪ್ತಿ ಮಾಡುವ  ಬ್ಯಾಂಕುಗಳು ಮಲ್ಯ ಅವರಂಥ ಉದ್ಯಮಿಗಳ ಆಸ್ತಿ ಜಪ್ತಿ ಮಾಡಲು ನ್ಯಾಯಾಲಯದ ಅನುಮತಿಗೆ ಎಡತಾಕುತ್ತವೆ.

ಈ ವಿಪರ್ಯಾಸ ಇಲ್ಲಿಗೇ ನಿಲ್ಲುವುದಿಲ್ಲ. ಬ್ಯಾಂಕುಗಳ ಸಾಲ ಉಳಿಸಿಕೊಂಡ ಉದ್ಯಮಿಗಳು ಅನೇಕ ಸಾರಿ ಕಾನೂನು ರೂಪಿಸುವ ಸಂಸದರೂ ಆಗಿರುತ್ತಾರೆ. ಮತ್ತು ಚುನಾವಣೆ ಸಮಯದಲ್ಲಿ ಎಲ್ಲ ಪಕ್ಷಗಳಿಗೆ ಹಣ ಕೊಡುವ ಧನವಂತರೂ ಆಗಿರುತ್ತಾರೆ. ರೈತರ ಉತ್ಪನ್ನಗಳನ್ನು ಖರೀದಿಸಿ ಅದರ ಮೌಲ್ಯವರ್ಧನೆ ಮಾಡಿ ಲಾಭ ಮಾಡಿಕೊಳ್ಳುವವರೂ  ಆಗಿರುತ್ತಾರೆ.

ರಾಷ್ಟ್ರೀಯ ಅಪರಾಧ ಅಂಕಿ ಅಂಶ ಬ್ಯುರೊದ ದಾಖಲೆ ಪ್ರಕಾರ ದೇಶದಲ್ಲಿ, 2015ನೇ ವರ್ಷದಲ್ಲಿ, 12,602 ರೈತರು ಮತ್ತು ಕೃಷಿ ಕೂಲಿಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಮಹಾರಾಷ್ಟ್ರದವರು. ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ರೈತರು ಕರ್ನಾಟಕದಲ್ಲಿ ನೇಣಿಗೆ ಕೊರಳು ಕೊಟ್ಟಿದ್ದಾರೆ. ಬಾಕಿ ಸಾಲ ಉಳಿಸಿಕೊಂಡ ಒಬ್ಬ ಉದ್ಯಮಿಯಾದರೂ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ನಾವು ಕೇಳಿದ್ದೇವೆಯೇ? ವರದಿ ಮಾಡಿದ್ದೇವೆಯೇ?

ಮತ್ತೆ ಅದೇ ಪ್ರಶ್ನೆ ಎದುರು ನಿಲ್ಲುತ್ತದೆ. ರೈತರ ಸಾಲ ಮನ್ನಾ ಮಾಡಬೇಕೇ? ಮಾಡಬಾರದೇ? ಇದು ಒಂದು ದ್ವಂದ್ವ. ಒಂದು ಉತ್ತರವಿಲ್ಲದ ಪ್ರಶ್ನೆ.  ರೈತರ ಸಾಲ ಮನ್ನಾ ಮಾಡಿದರೂ ಆತ ಬದುಕುವುದಿಲ್ಲ. ಅಂಥ ಒಂದು ಕೆಟ್ಟ ವ್ಯವಸ್ಥೆಯನ್ನು ನಾವು ನಿರ್ಮಾಣ ಮಾಡಿದ್ದೇವೆ. ದುರಂತ ಎಂದರೆ ಅದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.