ADVERTISEMENT

ಪ್ರೇಮ ಸುಲಭವಲ್ಲ

ಶಿವರಾಮ್
Published 3 ಡಿಸೆಂಬರ್ 2011, 19:30 IST
Last Updated 3 ಡಿಸೆಂಬರ್ 2011, 19:30 IST

ನಾನು ಸಿಟಿ ಕ್ರೈಮ್ ಬ್ರ್ಯಾಂಚ್‌ನಲ್ಲಿ ಎಸಿಪಿ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭ. ಮಕ್ಕಳು ಕಾಣೆಯಾಗಿರುವ ಕುರಿತು ಹೈಕೋರ್ಟ್‌ನ ಎದುರು ವಿಚಾರಣೆಗೆ ಅನೇಕ ಹೇಬಿಯಸ್ ಕಾರ್ಪಸ್ ಅರ್ಜಿಗಳು ಬರುತ್ತಿದ್ದವು. ಆಗ ಹೈಕೋರ್ಟ್‌ನ ನ್ಯಾಯಮೂರ್ತಿ ಆಗಿದ್ದವರು ಜಸ್ಟಿಸ್ ಗುರುರಾಜನ್. ಪೊಲೀಸರು ಆ ಹೇಬಿಯಸ್ ಕಾರ್ಪಸ್ ಅರ್ಜಿಗಳಿಗೆಲ್ಲಾ ಏಕ ರೂಪದ ಅಫಿಡವಿಟ್‌ಗಳನ್ನು ಕೊಡುತ್ತಿದ್ದರು. `ಕಾಣೆ ಯಾಗಿದ್ದಾರೆ~, `ಪತ್ತೆಯಾಗಿಲ್ಲ~, `ಸುಳಿವು ಸಿಕ್ಕಿಲ್ಲ~, `ತನಿಖೆ ಮಾಡುತ್ತೇವೆ~ ಎಂಬಂಥ ಮೇಲ್ಮಟ್ಟದ ಅಂಶಗಳೇ ಆ ಅಫಿಡವಿಟ್‌ಗಳಲ್ಲಿ ಇರುತ್ತಿದ್ದವು.

ದೊರೈರಾಜು ಎಂಬುವರು ಆಗ ರಾಜ್ಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು. ಸಮಾಜದ ಬಗ್ಗೆ ಅವರಿಗೆ ಕಳಕಳಿ ಇತ್ತು. ಹಾಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕುವ ತಂದೆ-ತಾಯಿ, ಸಹೋದರ-ಸಹೋದರಿ, ಸ್ನೇಹಿತರು, ಬಂಧುಗಳ ಮನಸ್ಸುಗಳನ್ನು ಅವರು ಸ್ಪಷ್ಟವಾಗಿ ಅರಿತಿದ್ದರು. ತಮ್ಮವರನ್ನು ಕಳೆದು ಕೊಂಡಾಗ ಅವರು ಪಡುವ ಮಾನಸಿಕ ಯಾತನೆಯ ಮುಖಗಳು ಅವರಿಗೆ ಚೆನ್ನಾಗಿ ಗೊತ್ತಿತ್ತು.

ಜಂಟಿ ಕಮಿಷನರ್ ಗೋಪಾಲ್ ಹೊಸೂರು, ಡಿಜಿ ಶ್ರೀಕುಮಾರ್ ಹಾಗೂ ನಾನು- ಮೂರೂ ಜನರನ್ನು ಒಮ್ಮೆ ದೊರೈರಾಜು ಹೈಕೋರ್ಟ್‌ಗೆ ಕರೆದರು. ಇಂಥ ಪ್ರಕರಣಗಳ ಬಗ್ಗೆ ನಮ್ಮೆಲ್ಲರ ಅಭಿಪ್ರಾಯ ಕೇಳಿದರು. ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲಿಕ್ಕಾಗಿಯೇ ಒಂದು ಪ್ರತ್ಯೇಕ ಬ್ಯೂರೋ ಮಾಡಬೇಕೆಂದು ನಾವು ಮೂವರೂ ಸಲಹೆ ಕೊಟ್ಟೆವು. ಅಪರಿಚಿತ ಅಥವಾ ವಾರಸುದಾರರಿಲ್ಲದ ಶವ ಸಿಕ್ಕಾಗ ಏನು ಮಾಡಬೇಕು, ಶವಗಳ ಬಟ್ಟೆ ಎಷ್ಟು ಮುಖ್ಯ, ಯಾವುದೇ ಶವ ಸಿಕ್ಕಾಗ ಸ್ಪಷ್ಟ ಮುಖವಿರುವ ಬಣ್ಣದ ಫೋಟೋವನ್ನೇ ಯಾಕೆ ತೆಗೆಯಬೇಕು ಮೊದಲಾದ ಮೂಲ ಸಂಗತಿಗಳ ಬಗ್ಗೆ ನಾವು ದೊರೈರಾಜು ಅವರ ಜೊತೆ ಚರ್ಚಿಸಿದೆವು.

ಕಾಣೆಯಾದವರ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಬ್ಯೂರೋ ಬೇಕು ಎಂಬ ನಮ್ಮ ಮನವಿಯನ್ನು ದೊರೈರಾಜು ಹೈಕೋರ್ಟ್‌ಗೆ ದಾಟಿಸಿದರು. ಅದನ್ನು ಹೈಕೋರ್ಟ್ ಸರ್ಕಾರದ ಗಮನಕ್ಕೆ ತಂದಿತು. ಸೂಕ್ಷ್ಮ ಕೇಸುಗಳನ್ನು ಪತ್ತೆ ಮಾಡುವಲ್ಲಿ ಸಾಕಷ್ಟು ಪಳಗಿದ್ದ ಶ್ರೀಕುಮಾರ್ ಅವರಂತೂ ತುಂಬಾ ಮುಖ್ಯವಾದ ಸಲಹೆಗಳನ್ನು ಕೊಟ್ಟರು.
ಯಾವ ಸೌಕರ್ಯ ಕೊಟ್ಟರೂ ಕ್ಷೇತ್ರಕಾರ್ಯ (ಫೀಲ್ಡ್‌ವರ್ಕ್) ಮಾಡುವಾಗ ಪೊಲೀಸರು ಶ್ರದ್ಧೆ ತೋರದಿದ್ದರೆ ಏನೂ ಪ್ರಯೋಜನವಾಗುವುದಿಲ್ಲ. ಯಾರನ್ನಾದರೂ ಅಕ್ರಮವಾಗಿ ಇಟ್ಟುಕೊಂಡರೆ, ಹೇಬಿಯಸ್ ಕಾರ್ಪಸ್ ಅರ್ಜಿ ಹಾಕುವುದು ಮಾಮೂಲು. ಈಗ ಬದಲಾದ ಕಾಲಮಾನದಲ್ಲಿ ವಿದ್ಯುನ್ಮಾನ ಮಾಧ್ಯಮದ ಧಾವಂತದಿಂದಾಗಿ ಎಷ್ಟೋ ಪ್ರೇಮಪ್ರಕರಣಗಳು ಅಗತ್ಯ ಮೀರಿ ಸುದ್ದಿಯಾಗುತ್ತಿವೆ. ಕೆಲವು ಪ್ರಕರಣಗಳನ್ನು ಮಾಧ್ಯಮ ಸೃಷ್ಟಿಸಿರುವುದೂ ಸುಳ್ಳಲ್ಲ.

ಕಾನೂನಿನ ಪ್ರಕಾರ ಹದಿನೆಂಟು ವಯಸ್ಸು ದಾಟಿದ ಎಲ್ಲರಿಗೂ ವೈಯಕ್ತಿಕ ತೀರ್ಮಾನ ತೆಗೆದುಕೊಳ್ಳುವ ಹಕ್ಕಿದೆ. ಹದಿನೆಂಟು ದಾಟಿದ ಹುಡುಗಿ, ಇಪ್ಪತ್ತೊಂದು ದಾಟಿದ ಹುಡುಗ ಮದುವೆಯಾಗುವುದು ಕೂಡ ಕಾನೂನಾತ್ಮಕ. ಈ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿ, ಯುವಕನೋ ಯುವತಿಯೋ ಓಡಿಹೋದರೂ ಪೊಲೀಸರು ಏನೂ ಮಾಡುವಂತಿಲ್ಲ.

ಕೆಲವು ಪ್ರೇಮ ಪ್ರಕರಣಗಳು ಕುಟುಂಬಗಳನ್ನು ಜರ್ಜರಿತ ಗೊಳಿಸುತ್ತವೆ. ಜಾತಿ, ಭಾಷೆ, ಧರ್ಮದ ಭೇದ ಮೀರಲು ಪ್ರೇಮ ಪ್ರಕರಣಗಳು ಕಾರಣವಾಗುತ್ತವೆ ಎಂಬ ನಂಬಿಕೆ ಅನೇಕರಲ್ಲಿ ಇದೆ. ಆದರೆ, ಪೊಲೀಸರ ಗಮನಕ್ಕೆ ಬರುವ ಬಹುತೇಕ ಪ್ರೇಮ ಪ್ರಕರಣಗಳು ದುರಂತದಲ್ಲೇ ಕೊನೆಯಾಗುವುದನ್ನು ಕಂಡು ನಾನು ಬೇಸರಗೊಂಡಿದ್ದೇನೆ.
ಯಾವುದೋ ಬಡಾವಣೆಯಲ್ಲಿ ಪ್ರಭಾವಿಯಂತೆ ಕಾಣಿಸುವ ರೌಡಿಯನ್ನು ಪ್ರೇಮಿಸಿ ಮದುವೆ ಯಾಗುವ ಹೆಣ್ಣುಮಗಳ ಬದುಕು ಸುಖವಾಗಿ ರುವುದು ಸಾಧ್ಯವೇ ಇಲ್ಲ. ವೈಭವದಿಂದ ನಡೆಯುವ ಅಂಥ ಪ್ರೇಮವಿವಾಹ ಮುಂದೆ ಪಡೆದುಕೊಳ್ಳುವ ತಿರುವುಗಳು ಸಿನಿಮೀಯವಾಗಿರುತ್ತದೆ. ಮದುವೆ ಯಾದ ತಕ್ಷಣ ಊರೂರು ಸುತ್ತಿಸಿ, ಲಲ್ಲೆಗರೆಯುವ ಪ್ರಾಣಕಾಂತನ ಅಸಲಿ ಮುಖ ಕೆಲವೇ ದಿನಗಳಲ್ಲಿ ಅನಾವರಣಗೊಳ್ಳುತ್ತದೆ. ಆಗ ಅವನನ್ನು ಪ್ರೇಮಿಸಿದ ಹುಡುಗಿಯ ಪರಿಸ್ಥಿತಿ ದೀಪದ ಬೆಳಕು ಕಂಡು ಬೆಂಕಿಗೆ ಸಿಲುಕುವ ಹುಳುವಿನಂತಾಗುತ್ತದೆ.

ಒಂಟಿ ಮಹಿಳೆಯರ ಮನೆ ಮೇಲೆ ದಾಳಿ ಇಟ್ಟು, ಅವರನ್ನು ಕೊಂದು ಶವವನ್ನು ಸಂಭೋಗಿಸುತ್ತಿದ್ದ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಮರಣದಂಡನೆ ಶಿಕ್ಷೆಯೇನೋ ಆಯಿತು. ಅವನಿಂದ ಬಲಿಯಾದ ಒಬ್ಬ ಮಹಿಳೆಗೆ ಎರಡು-ಮೂರು ವರ್ಷದ ಮಗುವಿತ್ತು. ಆ ಮಗು ಘಟನೆಯ ಪ್ರತ್ಯಕ್ಷ ದರ್ಶಿಯೂ ಹೌದು. ಆ ಮಗುವಿನ ತಂದೆ ಯಾರೆಂಬುದು ಇದುವರೆಗೆ ಗೊತ್ತಾಗಿಲ್ಲ. ಯಾರೋ ಆ ಮಹಿಳೆಯನ್ನು ನಂಬಿಸಿ ಒಂದು ಮನೆ ಮಾಡಿ ಇಟ್ಟಿದ್ದನು. ಆ ಪ್ರಕರಣ ನಡೆದ ನಂತರ ಮಗುವಿನ ಜವಾಬ್ದಾರಿ ಹೊತ್ತೊಕೊಳ್ಳಲು ಆತ ಅಲ್ಲಿಗೆ ಬರಲೇ ಇಲ್ಲ. ಎಲ್ಲೋ ಕಾಣೆಯಾಗಿಬಿಟ್ಟ. ಆಧುನಿಕ `ಲಿವಿಂಗ್ ಟುಗೆದರ್~ ಸಂಬಂಧದ ದುರಂತ ಫಲವಿದು. ಈಗಲೂ ಆ ಮಗುವಿನ ವಾರಸುದಾರರು ಯಾರಾದರೂ ಇದ್ದಾರೆಯೇ ಎಂಬ ಹುಡುಕಾಟ ನಡೆದಿದೆ.
* * *
ಎಚ್‌ಎಎಲ್‌ನಲ್ಲಿ ಮಸ್ಲಿಂ ಯುವತಿಯೊಬ್ಬಳು ವರ್ಕ್‌ಶಾಪ್ ನಡೆಸುತ್ತಿದ್ದ ಕ್ರಿಶ್ಚಿಯನ್ ಯುವಕನನ್ನು ಪ್ರೇಮಿಸಿದಳು. ಅದು ಪ್ರಕ್ಷುಬ್ಧ ಪ್ರದೇಶವಾದ್ದರಿಂದ ಅಂತರ್ಧರ್ಮೀಯ ಮದುವೆ ಎಂದೊಡನೆ ಎಲ್ಲಿ ಕೋಮು ಗಲಭೆಗೆ ತಿರುಗುವುದೋ ಎಂಬ ಆತಂಕ ಪೊಲೀಸರಿಗೆ ಇರುತ್ತದೆ. ಮದುವೆಯಾದವರು ವಯಸ್ಕರು. ಹಾಗಾಗಿ ಅವರ ನಿರ್ಧಾರವನ್ನು ಪೊಲೀಸರು ಪ್ರಶ್ನಿಸುವಂತಿರಲಿಲ್ಲ. ಯುವತಿಯ ಸಹೋದರರು ಹಾಗೂ ತಂದೆ ತುಂಬಾ ಗಲಾಟೆ ಮಾಡಿದರೂ ಅವರ ಪ್ರೇಮಕ್ಕೆ ಜಯ ಸಿಕ್ಕಿತು.

ಇಂಥ ಮದುವೆಗಳು ಹುಟ್ಟುಹಾಕಬಹುದಾದ ಗಲಭೆಯ ಆತಂಕವಂತೂ ಇದ್ದೇ ಇರುತ್ತದೆ. ಯುವತಿಯ ಮನೆಯವರು ಒಳಗೊಳಗೇ ಕುದಿಯುತ್ತಿದ್ದರು. ಪ್ರೀತಿಸಿ ಮದುವೆಯಾದ ದಂಪತಿಗೆ ಮಗು ಹುಟ್ಟಿತು. ಇನ್ನು ಪರಿಸ್ಥಿತಿ ಶಾಂತವಾಗಿ, ಆ ಮಗುವನ್ನು ನೋಡಲು ಯುವತಿಯ ತಂದೆ, ಸಹೋದರರೂ ಹೋಗುತ್ತಾರೆ ಎಂದೇ ಅಲ್ಲಿದ್ದ ಎಲ್ಲರೂ ಭಾವಿಸಿದ್ದರು. ಬೆಂಗಳೂರಿನ ಬಡಾವಣೆಯಲ್ಲಿ ವರ್ಕ್‌ಶಾಪ್ ನಡೆಸಿಕೊಂಡು ಜೀವನ ನಡೆಸುತ್ತಿದ್ದ ಆ ಯುವಕನೂ ಗಲಾಟೆ ಮುಗಿದೀತೆಂದುಕೊಂಡು ಆಶಾವಾದಿಯಾಗಿದ್ದ. ಅಷ್ಟರಲ್ಲಿ ಯುವತಿಯ ತಂದೆ, ಅಣ್ಣ-ತಮ್ಮಂದಿರು ಮನೆಗೆ ನುಗ್ಗಿ ಅವನ ಮೇಲೆ ಹಲ್ಲೆ ಮಾಡಿದರು. ಗಲಾಟೆಯ ಮಧ್ಯೆ ಆ ಯುವತಿಯೂ ನುಗ್ಗಿದಳು. ಧರ್ಮ ಮೀರಿ ಮದುವೆಯಾಗಿದ್ದ ಇಬ್ಬರ ಪ್ರಾಣಪಕ್ಷಿಗಳೂ ಕೆಲವೇ ಕ್ಷಣಗಳಲ್ಲಿ ಹಾರಿಹೋದವು.

ರಕ್ತಪಾತಕ್ಕೆ ಸಾಕ್ಷಿಯಾದ ಆ ಮಗು ಮಾತ್ರ ಬದುಕುಳಿಯಿತು. ಜಗತ್ತಿನ ಅರಿವೇ ಇಲ್ಲದ ಆ ಮಗು ಅನಾಥವಾಯಿತು. ಅದರ ಜವಾಬ್ದಾರಿಯನ್ನು ಯಾರೂ ಹೊತ್ತುಕೊಳ್ಳಲಿಲ್ಲ. ಆಗ ಮೀರ್ ಆರಿಫ್ ಅಲಿ ಎಂಬ ಇನ್ಸ್‌ಪೆಕ್ಟರ್ ಸ್ವಲ್ಪ ದಿನ ಆ ಮಗುವನ್ನು ಸಾಕಿದರು. ಆಮೇಲೆ ಅನಾಥಾಶ್ರಮಕ್ಕೆ ಒಪ್ಪಿಸಿದರು. ಪೊಲೀಸರ ಹೃದಯ ಶ್ರೀಮಂತಿಕೆ ಹಾಗೂ ಧರ್ಮಾಂಧರ ಕ್ರೌರ್ಯ ಎರಡೂ ಮುಖಗಳಿಗೆ ಈ ಪ್ರಕರಣ ಉದಾಹರಣೆಯಾಗಿದೆ.
* * *
ತಾನು ಮದುವೆಯಾಗಬೇಕಿದ್ದ ಹುಡುಗನನ್ನೇ ಕೊಲ್ಲಿಸಿದ ಶುಭಾ ಈಗಲೂ ಸುದ್ದಿಯಲ್ಲಿದ್ದಾರೆ. ವಕೀಲಿ ವೃತ್ತಿ ಅಭ್ಯಾಸ ಮಾಡುತ್ತಿದ್ದ ಈ ಹುಡುಗಿಗೆ ಸಾಫ್ಟ್‌ವೇರ್ ಎಂಜಿನಿಯರ್ ಜೊತೆ ಮದುವೆ ನಿಶ್ಚಯವಾಯಿತು. ಒಂದು ವೇಳೆ ತನಗೆ ಮದುವೆ ಇಷ್ಟವಿರದಿದ್ದರೆ ಅದನ್ನು ಧಿಕ್ಕರಿಸುವ ಹಕ್ಕು ಆಕೆಗೆ ಇತ್ತು. ಬೇರೆ ಪ್ರಿಯಕರ ಇರುವಾಗ ಅದನ್ನು ಮನೆಯವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಯತ್ನ ಮಾಡಬಹುದಿತ್ತು. ಶುಭಾ ಅದಾವುದನ್ನೂ ಮಾಡದೆ ಕೊಲೆ ಮಾಡಿಸುವ ಹಾದಿ ತುಳಿದರು.

ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿಯ ರಿಂಗ್‌ರೋಡ್‌ನಲ್ಲಿ ವಿಮಾನ ಹಾರುವುದು, ಇಳಿಯುವುದನ್ನು ತೋರಿಸುವಂತೆ ತಾನು ಮದುವೆಯಾಗಬೇಕಿದ್ದ ಹುಡುಗನನ್ನು ಪುಸಲಾ ಯಿಸಿ ಕರೆದುಕೊಂಡು ಹೋದರು. ಅಲ್ಲಿ ಪ್ರಿಯಕರನಿಂದಲೇ ಆತನ ಜೀವ ತೆಗೆಸಿದರು.
ವಿಚಾರಣೆ ನಡೆದ ನಂತರ ಈ ಪ್ರಕರಣದಲ್ಲಿ ಶುಭಾಗೆ ಜೀವಾವಧಿ ಶಿಕ್ಷೆಯಾಗಿದೆ. ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದರೂ ಆಕೆಗೆ ಜಾಮೀನು ಸಿಗಲಿಲ್ಲ. ಕೊಲೆ ಮಾಡಿ ಅದನ್ನು ಹೇಗೋ ಮುಚ್ಚಿಹಾಕಬಹುದು ಎಂಬ ತಪ್ಪು ಕಲ್ಪನೆ ವಿದ್ಯಾವಂತ ಯುವತಿಯರಲ್ಲೂ ಮೂಡು ತ್ತಿರುವುದು ಆತಂಕಕಾರಿ ವಿಷಯ. ಇದನ್ನು ಕಂಡರೆ ಪ್ರೀತಿ ಮನುಷ್ಯನನ್ನು ಎಷ್ಟು ಕ್ರೂರಿಯನ್ನಾಗಿಸುತ್ತದೆ ಎನ್ನಿಸುತ್ತದೆ. ಸಂಜೀವಿನಿ ಎನಿಸಿಕೊಂಡಿರುವ ಪ್ರೀತಿಗೆ ಹೀಗೆಲ್ಲಾ ಕಳಂಕ ತರುವವರನ್ನು ಕಂಡಾಗ ಬೇಸರವಾಗುತ್ತದೆ.
ಮುಂದಿನ ವಾರ: ಇಳಿವಯಸ್ಸಿನ ಆ ಮಹಿಳೆ ಮಗಳಿಗಾಗಿ ಕೋರ್ಟಿನಲ್ಲೇ ಅಂಗಲಾಚಿ ಕೂತದ್ದು...
ಶಿವರಾಂ ಅವರ ಮೊಬೈಲ್ ಸಂಖ್ಯೆ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.