ADVERTISEMENT

ಒಲವಿನ ಬಣ್ಣ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಮನೆ ಕಟ್ಟಿ ಮುಗಿಸಿಯಾಯ್ತೆ? ಕೊಠಡಿಗಳಿಗೆ ವಾರ್ಡ್‌ರೋಬ್‌, ಅಡುಗೆ ಮನೆಗೆ ಸೆಲ್ಫ್‌ಗಳು... ಅರೆ ಎಲ್ಲ ಕೆಲಸವೂ ಆಯ್ತೆ? ಕಾಂಪೌಂಡ್‌? ಅದನ್ನೂ ಕಟ್ಟಿಸಿದ್ದಾಯ್ತೆ! ಉಳಿದಿರುವುದೇನು? 

ಬಣ್ಣಾ... ಹೌದಲ್ಲ, ಮನೆಯ ಒಳ ಹೊರಗೆಲ್ಲಾ ಗೋಡೆಗಳಲ್ಲಿನ ಉಬ್ಬು ತಗ್ಗುಗಳಿಗೆ, ಓರೆಕೋರೆಗಳಿಗೆ ಪುಟ್ಟಿ ಮಾಡಿಸಿ ಬಣ್ಣ ಹೊಡೆಸುವುದು ಬಾಕಿ ಉಳಿದಿದೆಯಲ್ಲಾ.

ಯಾವ ಬಣ್ಣಗಳನ್ನು ಆಯ್ಕೆ ಮಾಡಿಕೊಂಡಿದ್ದೀರಿ? ಒಳಾಂಗಣಕ್ಕೆ ನಿಮ್ಮಿಷ್ಟದ ಬಣ್ಣವನ್ನೇ ಆಯ್ಕೆ ಮಾಡಿಕೊಳ್ಳಿ, ಪರವಾಗಿಲ್ಲ. ಆದರೆ, ಹೊರಗಿನ ಗೋಡೆ ವಿಚಾರಕ್ಕೆ ಬಂದಾಗ ಮಾತ್ರ ಬಣ್ಣಗಳನ್ನು ಆರಿಸಿ ಖರೀದಿಸುವುದಕ್ಕೂ ಮುನ್ನ ಒಮ್ಮೆ ನಿಮ್ಮ ಮನೆ ಇರುವ ರಸ್ತೆಯಲ್ಲಿ ಆ ತುದಿಯಿಂದ ಈ ತುದಿವರೆಗೂ ಹೆಜ್ಜೆ ಹಾಕಿ. ಎರಡೂ ಬದಿ ಸಾಲುಗಟ್ಟಿರುವ ಮನೆಗಳು ಎಂತೆಂತಹ ಬಣ್ಣಗಳನ್ನು ಹೊದ್ದ ನಿಂತಿವೆ ಎಂಬುದನ್ನೂ ಒಮ್ಮೆ ಪರಾಂಬರಿಸಿ.

ಒಂದೊಮ್ಮೆ ನಿಮ್ಮ ಮನೆಗಾಗಿ ಅದಾಗಲೇ ಆಯ್ಕೆ ಮಾಡಿದ್ದ ಬಣ್ಣವನ್ನು ಅದೇ ರಸ್ತೆಯ ಇನ್ನೊಂದು ಮನೆಯೂ ಹೊಂದಿದ್ದರೆ ನಿಮ್ಮ ಆಯ್ಕೆಯನ್ನು ಬದಲಿಸುವುದು ಒಳಿತು. ಇಲ್ಲವಾದರೆ ನಿಮ್ಮ ಮನೆಯ ಹೊರನೋಟ ‘ಭಿನ್ನ’, ‘ವೈಶಿಷ್ಟ್ಯಪೂರ್ಣ’ ಎನಿಸುವುದಿಲ್ಲ.

ನಿಮ್ಮ ಮನೆ ಬಣ್ಣದ ವಿಚಾರದಲ್ಲಿ ಇನ್ನೊಂದು ಮನೆಯ ಪಡಿಯಚ್ಚು ಆಗುವುದಕ್ಕಿಂತ ಪ್ರತ್ಯೇಕತೆ ಕಾಯ್ದುಕೊಳ್ಳುವುದು ಚೆಂದ ಅಲ್ಲವೇ? ಯೋಚಿಸಿ.

ಮರೆತಿದ್ದೆ, ಕಣ್ಣು ಕುಕ್ಕುವಂತಹ ಗಾಢವಾದ ಬಣ್ಣಗಳನ್ನು ಆಯ್ಕೆ ಮಾಡದೇ, ತಿಳಿಯಾದ ಬಣ್ಣಗಳನ್ನೇ ಬಳಸಿ. ಜತೆಗೆ ಒಂದೇ ಬಣ್ಣ ಹೊಡೆಸುವ ಬದಲು ಎರಡು ಭಿನ್ನ ಬಣ್ಣಗಳನ್ನು (ಕಾಂಟ್ರಸ್ಟ್‌) ಆಯ್ಕೆ ಮಾಡಿಕೊಂಡು ಪಟ್ಟಿ ಇರುವ ಜಾಗದಲ್ಲಿ, ಕಿಟಕಿ, ಬಾಗಿಲು ಚೌಕಟ್ಟಿನ ಸುತ್ತ, ಬಾಲ್ಕನಿ ಇರುವೆಡೆ ಪ್ರತ್ಯೇಕತೆಯ ವರ್ಣದ ಭಾವ ಮೂಡಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.