ADVERTISEMENT

‘ನಂಗೂ ನಿಮ್ ಇಂಗ್ಲಿಷ್ ಗೊತ್ತಾಗಲಿಲ್ರೀ..!’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 20:00 IST
Last Updated 24 ನವೆಂಬರ್ 2018, 20:00 IST
25-11-VaaregannuSanjay-2018
25-11-VaaregannuSanjay-2018   

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ವೈಫಲ್ಯ, ಬೆಳೆ ನಷ್ಟ ಮುಂತಾಗಿ ಬರದ ನೈಜ ಚಿತ್ರಣದ ಅಧ್ಯಯನಕ್ಕಾಗಿ ಬಂದಿದ್ದ ಕೇಂದ್ರದ ಬರ ಅಧ್ಯಯನ ತಂಡವು ಹೊನಗನಹಳ್ಳಿಯ ಜಮೀನುಗಳಿಗೆ ಭೇಟಿ ನೀಡಿತ್ತು.

ಕೇಂದ್ರದ ತಂಡದ ಮುಖ್ಯಸ್ಥರಾಗಿದ್ದವರು ಡಾ. ಮಹೇಶ್‌. ಸುಲಲಿತವಾಗಿ ಕನ್ನಡ ಮಾತನಾಡುವವರು. ರೈತರೊಟ್ಟಿಗೆ ಕನ್ನಡದಲ್ಲೇ ಸಂವಹನ ನಡೆಸಿ, ಮಾಹಿತಿ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ಕೃಷಿ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಇಂಗ್ಲಿಷ್‌ನಲ್ಲಿ ಮಾಹಿತಿಗಳನ್ನು ನೀಡಲಾರಂಭಿಸಿದರು. ಇಲಾಖೆಯ ಉಳಿದ ಅಧಿಕಾರಿಗಳು ಅವರಿಗೆ ಸಾಥ್‌ ನೀಡುತ್ತಿದ್ದರು.

ಕೇಂದ್ರದ ಅಧಿಕಾರಿಯೇ ಕನ್ನಡದಲ್ಲಿ ಮಾತನಾಡುತ್ತಿರುವಾಗ, ಸ್ಥಳೀಯರು ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಲು ಮುಂದಾಗಿದ್ದು ರೈತರಲ್ಲಿ ಆಕ್ರೋಶ ಮೂಡಿಸಿತ್ತು. ‘ನಮಗೆ ತಿಳಿಯಬಾರದು ಎಂದು ಇಂಗ್ಲಿಷ್‌ನಲ್ಲೇ ಹೇಳ್ತಿದ್ದೀರಾ’ ಎಂದು ಕೆಲವರು ಗರಂ ಆದರು.

ADVERTISEMENT

ಕೆಲವು ರೈತರು ಸಿಟ್ಟಿಗೆದ್ದು, ‘ಅಧ್ಯಯನ ತಂಡದ ಮುಖ್ಯಸ್ಥರು ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ನೀವ್ಯಾಕೆ ಅವರಿಗೆ ಇಂಗ್ಲಿಷ್‌ನಲ್ಲಿ ಹೇಳ್ತಿದ್ದೀರಿ? ಕನ್ನಡದಲ್ಲಿಯೇ ಮಾತನಾಡಿ...’ ಎಂದು ಕೃಷಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದರು.

ಸನ್ನಿವೇಶ ತುಸು ಗಂಭೀರವಾಗುತ್ತಿರುವುದನ್ನು ವಿಜಯಪುರ ಜಿಲ್ಲಾಧಿಕಾರಿ ಸಂಜಯ ಬಿ. ಶೆಟ್ಟೆಣ್ಣವರ ಬಹು ಬೇಗನೆ ಗ್ರಹಿಸಿದರು. ಕೃಷಿ ಇಲಾಖೆ ಅಧಿಕಾರಿಗಳನ್ನು ಮಧ್ಯದಲ್ಲೇ ತಡೆದು, ‘ನಂಗೂ ನಿಮ್‌ ಇಂಗ್ಲಿಷ್‌ ಗೊತ್ತಾಗಲಿಲ್ರೀ. ಕನ್ನಡದಲ್ಲೇ ಮಾತನಾಡಿ’ ಎಂದು ನಗೆ ಚಟಾಕಿಯೊಂದನ್ನು ಹಾರಿಸಿದರು. ಈ ಮಾತನ್ನು ಕೇಳಿ ನೆರೆದಿದ್ದ ರೈತರು ಮಾತ್ರವಲ್ಲ ಕೇಂದ್ರದ ಅಧಿಕಾರಿಗಳು ಸಹ ನಗೆಗಡಲ್ಲಿ ತೇಲಿದರು. ರೈತರ ಸಿಟ್ಟೂ ತಣ್ಣಗಾಯಿತು.

ಡಿ.ಬಿ. ನಾಗರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.