ADVERTISEMENT

ಸುಳ್ಳು ಹೇಳಬ್ಯಾಡ್ರೋ; ಖರೆ ಯಾರ್ ಹೇಳ್ತೀರ್‍ರೋ..!

ಡಿ.ಬಿ, ನಾಗರಾಜ
Published 6 ಅಕ್ಟೋಬರ್ 2018, 20:09 IST
Last Updated 6 ಅಕ್ಟೋಬರ್ 2018, 20:09 IST

ವಿಜಯಪುರ: ‘ಸುಮ್‌ ಸುಮ್ನೇ ಸುಳ್ಳು ಹೇಳಬ್ಯಾಡ್ರೀ... ಸರ್ಕಾರಕ್ಕೆ ಮುಜುಗರ ಮಾಡಬ್ಯಾಡ್ರೀ... ನಮ್ಗ ನಾಚ್ಕಿ ಆಗತೈತಿ..! ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳನ್ನು ಕೆಡಿಪಿ ಸಭೆಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ, ಸಭಾಂಗಣದಲ್ಲಿ ಒಂದರೆಕ್ಷಣ ಮೌನ.

ಇದಕ್ಕೆ ಪ್ರತಿಯಾಗಿ ಆರೋಗ್ಯ ಸಚಿವ ಶಿವಾನಂದ ಪಾಟೀಲರು, ‘ಖರೆ ಯಾರ್‌ ಹೇಳ್ತೀರಿ. ಎದ್ದು ನಿಂತು ಬಡ ಬಡಾ (ಬೇಗ ಬೇಗ) ಹೇಳ್ರೀ’ ಎಂದು ಹುಕುಂ ಹೊರಡಿಸುತ್ತಿದ್ದಂತೆ ಸಭೆಯಲ್ಲಿ ಎಲ್ಲೆಡೆ ಮುಗುಳ್ನಗು.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅಧ್ಯಕ್ಷತೆಯಲ್ಲಿ ಈಚೆಗೆ ವಿಜಯಪುರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಸನ್ನಿವೇಶವಿದು.

ADVERTISEMENT

‘ಕೃಷ್ಣೆಯಿಂದ ಕಾಲುವೆಗೆ ನೀರು ಹರಿಸಲು ವಾರಾಬಂಧಿ ಆರಂಭಿಸಿದ್ದೀರಿ. ನಡುವೆಯೇ ನೀರು ನಿಂತಿದೆ. ಮತ್ತೆ ನೀರು ಹರಿಯುವುದು ಯಾವಾಗ? ಎಂದು ಶಾಸಕ ಕೇಳುತ್ತಿದ್ದಂತೆ; ಸಚಿವರು ‘ವಾರಾಬಂಧಿ ಆರಂಭವಾಗಿಲ್ಲ. ನಾನೇ ಐಸಿಸಿ ಚೇರ್‌ಮನ್‌. ನೀರು ಬಿಡಲು ಆದೇಶಿಸಿಲ್ಲ...’ ಎಂದರು. ಕೂಡಲೇ ಯಶವಂತರಾಯಗೌಡರು ‘ಈಗಲಾದ್ರೂ ನಿಮ್‌ ಚೇರ್‌ಮನ್ರಿಗೆ ಸತ್ಯ ಹೇಳ್ರಪ್ಪೋ...!’ ಎನ್ನುತ್ತಿದ್ದಂತೆ ಸಭಾಂಗಣದಲ್ಲಿ ನಗೆಯ ಅಲೆ.

ಆರಂಭದಿಂದ ಅಂತ್ಯದವರೆಗೂ ಸಭೆಯಲ್ಲಿ ಹಲವು ಬಾರಿ ಶಾಸಕ– ಸಚಿವರ ನಡುವೆ ಇಂಥ ಜುಗಲ್‌ಬಂದಿ ನಡೆದರೂ; ಅಧಿಕಾರಿಗಳು ಮತ್ತೆ ಮತ್ತೆ ಸುಳ್ಳು ಮಾಹಿತಿ ಕೊಡುತ್ತಿದ್ದುದಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ, ಉಪಾಧ್ಯಕ್ಷರೂ ಆಕ್ಷೇಪ ವ್ಯಕ್ತಪಡಿಸಿದರು. ‘ನಮ್ಗೂ ಹಿಂಗ ಮಾಹಿತಿ ಕೊಡ್ತಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.