ADVERTISEMENT

ಯುದ್ಧ ಶುರು, ಆದರೆ...

ಪ್ರಕಾಶ ಶೆಟ್ಟಿ
Published 27 ಏಪ್ರಿಲ್ 2018, 19:21 IST
Last Updated 27 ಏಪ್ರಿಲ್ 2018, 19:21 IST
ಯುದ್ಧ ಶುರು, ಆದರೆ...
ಯುದ್ಧ ಶುರು, ಆದರೆ...   

ನಾವೆಲ್ಲಾ ಚುನಾವಣೆಗಳನ್ನು ಒಂದು ‘ಯುದ್ಧ’ ಎಂದೇ ಭಾವಿಸಿಕೊಂಡು ಬಂದಿದ್ದೇವೆ. ಆದರೆ ನಿಜವಾಗಲೂ ಇದನ್ನು ‘ಯುದ್ಧ’ ಎಂದು ಕರೆಯುವುದು ಸಮಂಜಸವೇ? ರಾಜ್ಯದ ವಿವಿಧ ಕ್ಷೇತ್ರಗಳಿಗೆ ಎಮ್ಮೆಲ್ಲೆಗಳನ್ನು ಆಯ್ಕೆ ಮಾಡುತ್ತಾರೆ ಎಂದ ಮಾತ್ರಕ್ಕೆ ಈ ಚುನಾವಣೆಯನ್ನು ‘ಕುರುಕ್ಷೇತ್ರ’ ಅನ್ನುವುದೇ?

ಈಗ ಇಂತಹ ವಿಚಿತ್ರ ಪ್ರಶ್ನೆ ಎದ್ದಿರುವುದಕ್ಕೆ ಕೆಲವಾರು ಕಾರಣಗಳಿವೆ ಅನ್ನಿ. ಮೊತ್ತ ಮೊದಲನೆಯದಾಗಿ ಈ ‘ಯುದ್ಧ’ದಲ್ಲಿ ಯಾವ ವೀರನೂ ಇರುವುದಿಲ್ಲ, ಶೂರನೂ ಇರುವುದಿಲ್ಲ. ನಮ್ಮ ಹಾಲಿ ಮುಖ್ಯಮಂತ್ರಿ, ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನೇ ತೆಗೆದುಕೊಳ್ಳಿ. ಅವರ ಮಾತುಗಳಲ್ಲಿ ಶೂರತ್ವವೇನೋ ಉಕ್ಕಿ ಹರಿಯುತ್ತದೆ. ಒಬ್ಬರಿಗೊಬ್ಬರು ‘…ಅವರನ್ನು ಮುಗಿಸುತ್ತೇನೆ’ ‘…ಅವರ ಅಪ್ಪನಾಣೆಗೂ ಗೆಲ್ಲೊಲ್ಲ!’ ‘… ನಮ್ಮ ಶಕ್ತಿ ಏನೂಂತ ತೋರಿಸುತ್ತೇವೆ!’ ಎಂದೆಲ್ಲಾ ಗರ್ಜಿಸುವ ಇವರಿಗೆ ಪರಸ್ಪರ, ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ‘ಧಮ್’ ಇರುವ ಯೋಚನೆ ತಪ್ಪಿಯೂ ಬರುವುದಿಲ್ಲ. ಯಾವುದೋ ಒಂದು ಕ್ಷೇತ್ರದಲ್ಲಿ ಒಬ್ಬ ಮುಖ್ಯಮಂತ್ರಿ, ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಎದುರಿಸುವ ದೃಶ್ಯವನ್ನು ಕಲ್ಪಿಸಿಕೊಳ್ಳಿ. ಓಹ್! ಅದರ ಮಜಾ ಬೇರೆ ಅಲ್ಲವೇ?

ಬೇಡ, ‘ಎನರ್ಜಿ’ ಎದುರು ‘ಸಂಗೊಳ್ಳಿ’ ಬ್ರಿಗೇಡ್ ನಿಲ್ಲುವರೇ? ಮಿಸ್ಟರ್ ‘ಉಕ್ಕಿನ ಸೇತುವೆ’ ಎದುರು ಜೈಲಿಗೆ ಹೋಗಿ ಬಂದ ಖ್ಯಾತರಲ್ಲಿ ಯಾರಿಗೂ ತೊಡೆ ತಟ್ಟಲು ಧಮ್ ಇಲ್ಲವೇ? ಹಾಗೆಯೇ ಕಾಡಿನ ಸಚಿವರ ಎದುರು ತುಳುನಾಡಿನ ‘ಪ್ರತಿಭಟನಾ’ ನಾಯಕಿ ನಿಂತಿದ್ದರೆ ಈ ಚುನಾವಣೆಗೆ ಎಂತಹ ಥ್ರಿಲ್ ಇರುತ್ತಿತ್ತಲ್ಲವೇ?!

ADVERTISEMENT

ತೂಕದ ವ್ಯಕ್ತಿಗಳು ಸುರಕ್ಷಿತ ಎದುರಾಳಿಗಳೆದುರು ಮಾತ್ರ ‘ಕತ್ತಿವರಸೆ’ಗೆ ನಿಲ್ಲುವುದು ಬಹಳ ಹಿಂದಿನಿಂದಲೂ ಬಂದ ಜಾಯಮಾನ. ನಮ್ಮ ಮಾಜಿ ಮುಖ್ಯಮಂತ್ರಿಗಳೆಲ್ಲಾ ತುಂಬಾ ಜನಪ್ರಿಯರಾಗಿದ್ದರೂ, ವಿರೋಧ ಪಕ್ಷಗಳ ‘ವೀಕ್’ ಅಭ್ಯರ್ಥಿ ಎದುರೇ ನಿಂತು ಗೆಲ್ಲುತ್ತಿದ್ದರು. ಕೆಲವೊಮ್ಮೆ ಅಂತಹ ‘ವೀಕ್’ಗಳು ಗೆದ್ದು ಬಂದದ್ದೂ ಇದೆ ಬಿಡಿ. ರಾಜಕೀಯದ ‘ದುರ್ಗಾ’ ಎಂದೇ ಖ್ಯಾತಿ ಪಡೆದಿದ್ದ ನಾಯಕಿ, ಚುನಾವಣೆ ಗೆಲ್ಲುವುದಕ್ಕೆ ಉತ್ತರ ಭಾರತದಲ್ಲಿ ಯಾವುದೇ ಸುರಕ್ಷಿತ ಕ್ಷೇತ್ರ ಸಿಗದೆ ಕೊನೆಗೆ ಬಂದದ್ದು ಚಿಕ್ಕಮಗಳೂರಿಗಲ್ಲವೇ!

ನಿಜ, ಒಂದೇ ಕ್ಷೇತ್ರದಲ್ಲಿ ವೀರಾಧಿವೀರರ ಪೈಪೋಟಿಯ ಮಾತು ಬಿಡಿ, ತಾವು ನಿಲ್ಲುವ ಮಾಮೂಲಿ ಹಾಲಿ ಕ್ಷೇತ್ರಗಳಲ್ಲೇ ಗೆದ್ದು ಬರುತ್ತೇನೆ ಎಂಬ ನಂಬಿಕೆ ಇವರಲ್ಲಿ ಎಳ್ಳಷ್ಟೂ ಇರುವುದಿಲ್ಲ! ಅದಕ್ಕಲ್ಲವೇ ಮುಖ್ಯಮಂತ್ರಿ, ಪ್ರಧಾನಿ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ನಿಲ್ಲುವುದು. ಬಿಟ್ಟರೆ ನಾಲ್ಕೈದು ಕ್ಷೇತ್ರಗಳಲ್ಲೂ ನಿಲ್ಲಬಹುದೇನೋ! ಕಳೆದ ಲೋಕಸಭೆ ಚುನಾವಣೆಯಲ್ಲಿ ಐವತ್ತಾರು ಇಂಚು ಎದೆಯ ನಾಯಕರೇ ಎರಡು ಕ್ಷೇತ್ರಗಳಲ್ಲಿ ನಿಂತಿದ್ದರು. ತಮ್ಮ ಎದುರು ಸೆಣಸಾಟಕ್ಕೆ ನಿಲ್ಲುವವರು ರಾಜಕೀಯದ ‘ಎಕ್ಸ್‌ಟ್ರಾ’ಗಳಾಗಿದ್ದರೂ  ಈ ನಾಯಕರಿಗೆ ಅದೆಂತಹ ಭಯವೋ!

ಮೊನ್ನೆ ಅನೇಕ ಮಂದಿ ಟಿಕೆಟ್ ವಂಚಿತರು ಗೊಳೋ ಎಂದು ಅಳುವುದನ್ನು ನಾವು ನೋಡಿ ಪರಮಾನಂದಪಟ್ಟಿದ್ದೇವೆ. ಚುನಾವಣೆ ಒಂದು ಯುದ್ಧವಾಗಿದ್ದರೆ ಎದೆಗುಂದದೆ ಮುನ್ನಡೆಯಬೇಕಲ್ಲವೇ? ‘ವೀರಮರಣ’ಕ್ಕೂ ತಯಾರಾಗಿರಬೇಕು. ಈ ಟಿಕೆಟ್ ವಂಚಿತರಿಗೆ ತಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ಅಷ್ಟೊಂದಿದ್ದರೆ ಪಕ್ಷೇತರರಾಗಿ ನಿಂತು ಸಾಮರ್ಥ್ಯ ತೋರಿಸುವುದಕ್ಕೆ ಯಾಕೆ ಅಂಜಿಕೆ?

ಇಂದಿನ ಚುನಾವಣೆ ಕಣದ ಬಣ್ಣ ಎಷ್ಟು ಬದಲಾಗಿದೆ ಎಂದರೆ, ಒಬ್ಬ ಭ್ರಷ್ಟಾಚಾರಿ ಅಭ್ಯರ್ಥಿಯನ್ನು ಸೋಲಿಸಬೇಕಾದರೆ ಅದಕ್ಕಿಂತಲೂ ದೊಡ್ದ ತಿಮಿಂಗಿಲವನ್ನು ಕಣಕ್ಕಿಳಿಸಬೇಕಾಗುತ್ತದೆ. ಲೈಂಗಿಕ ಕಿರುಕುಳದ ಹಿನ್ನೆಲೆಯಿರುವ ಅಭ್ಯರ್ಥಿಯಿದ್ದರೆ ಆತನೆದುರು ಅತ್ಯಾಚಾರಿಯನ್ನೇ ಪ್ರತಿಸ್ಪರ್ಧಿಯೆಂದು ಘೋಷಿಸುವುದಕ್ಕೆ ನಾಚಿಕೆ ಪಡುವುದಿಲ್ಲ. ರೌಡಿ ಶೀಟರ್‌ಗಳನ್ನು ಕಟ್ಟಿಕೊಂಡು ತಿರುಗಾಡುವ ಅಭ್ಯರ್ಥಿಯಾಗಿದ್ದರೆ, ಉಳಿದ ಪಕ್ಷಗಳು ಹಲವಾರು ಬಾರಿ ಜೈಲಿಗೆ ಹೋಗಿ ಬಂದ ಖತರನಾಕ್ ಗ್ಯಾಂಗಿನ ಬಾಸ್‌ಗೇ  ಬಿ-ಫಾರಂ ಕೊಟ್ಟುಬಿಡುತ್ತಾರೆ. ಐನೂರು ಕೋಟಿ ಆಸ್ತಿಯಿರುವ ಕುಬೇರ ಅಭ್ಯರ್ಥಿಯನ್ನು ಸೋಲಿಸಲು ಒಂದು ಸಾವಿರ ಕೋಟಿ ಆಸ್ತಿಯಿರುವವನೇ ಲಾಯಕ್ಕು! ಮತಕಟ್ಟೆಗೆ ಹೋಗುವ ಮಹಾ ನಿರ್ಧಾರ ಮಾಡುವ ಮತದಾರರಿಗಂತೂ ಇದೊಳ್ಳೆ ಫಜೀತಿ.

ಇನ್ನು ಪಕ್ಷಾಂತರಿಗಳ ಕತೆ ಕೇಳಿ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದು, ಟಿಕೆಟ್ ಗಿಟ್ಟಿಸಿಕೊಂಡು, ಮೈಕ್ ಎದುರು ಏನೆಂದು ಅರಚುವುದು? ತಾನು ಇಪ್ಪತ್ತು- ಇಪ್ಪತ್ತೈದು ವರ್ಷಗಳಿಂದ ಇದ್ದ ಪಕ್ಷವನ್ನು ಉದ್ದೇಶಿಸಿ, ‘ಬಿಜೆಪಿ ಕೋಮು ಪಕ್ಷ. ಅವರಿಗೆ ಮತ ಹಾಕಬೇಡಿ!’ ಎಂದು ಹೇಳಿದರೆ ಜನ ನಗುವುದಿಲ್ಲವೇ? ಇಂತಹ ಪಕ್ಷಾಂತರಿಗಳಿಂದ ವೀರಾವೇಶದ ಭಾಷಣ ನಿರೀಕ್ಷಿಸುವುದು ಸಾಧ್ಯವೇ ಇಲ್ಲ.

ಎಲ್ಲಾ ಚುನಾವಣೆಗಳಂತೆ ಈ ಬಾರಿಯ ಚುನಾವಣೆಯಲ್ಲೂ ಸೋಲುವ ದುರುದ್ದೇಶದಿಂದಲೇ ಅನೇಕರು ರಣರಂಗಕ್ಕಿಳಿದಿದ್ದಾರೆ. ಮಂಡ್ಯದಲ್ಲಂತೂ ಒಬ್ಬರು ಕುರುಕ್ಷೇತ್ರಕ್ಕೆ ಇಳಿಯುವುದಕ್ಕೇ ಹಿಂಜರಿದಿದ್ದಾರೆ. ಅವರು ಬೇರಾರೂ ಅಲ್ಲ. ಅವರನ್ನು ‘ದಾನಶೂರ ಕರ್ಣ’ ಎಂದು ಕರೆಯುತ್ತಾರೆ.    

ಹೀಗಿರುವಾಗ ಈ ಚುನಾವಣೆಯನ್ನು ‘ಮಹಾಯುದ್ಧ’ ಎಂದು ಕರೆದು ವೀರಪುರುಷರಿಗೆ ದಯವಿಟ್ಟು ಅವಮಾನ ಮಾಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.